

ಕೋಲಾರ:- ಪ್ರಸಕ್ತ ಸಾಲಿನ ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿಗೆ ಕೋಲಾರ ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ, ಪತ್ರಕರ್ತ, ಸಾಮಾಜಿಕ ಚಿಂತಕ, ಸಿ.ಎಂ.ಮುನಿಯಪ್ಪ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಅವರನ್ನು ಡಿಐಜಿಪಿ ಡಿ.ದೇವರಾಜ್ ಮತ್ತು ಹಲವು ದಲಿತ ಮುಖಂಡರು ಸನ್ಮಾನಿಸಿದರು.
ರಾಜ್ಯ ಸರಕಾರವು ಕೊಡ ಮಾಡುವ ಈ ಪ್ರಶಸ್ತಿಗೆ ಸಿ.ಎಂ.ಮುನಿಯಪ್ಪ ಸೇರಿದಂತೆ ಐದು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಹಾಗೂ 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ, ಇಂತಹ ಗೌರವಕ್ಕೆ ಕೋಲಾರದ ಸಿ.ಎಂ.ಮುನಿಯಪ್ಪ ಅವರ ಆಯ್ಕೆ ಸಂತಸ ತಂದಿದೆ ಎಂದು ದೇವರಾಜ್ ತಿಳಿಸಿದರು.
ಅವಿಭಜಿತ ಕೋಲಾರ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಪ್ರಮುಖ ದಲಿತ ಹೋರಾಟಗಳು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ವಿರುದ್ಧ, ಕೊಲೆ ಅತ್ಯಾಚಾರದಂತ ಬರ್ಬರ ಕೃತ್ಯಗಳ ವಿರುದ್ಧ ಸಮುದಾಯವನ್ನು ಸಂಘಟಿಸಿ ರೂಪಿಸುವುದರೊಂದಿಗೆ, ದಲಿತ ವಲಯದಲ್ಲಿ ಎಚ್ಚರ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಅವರಿಗೆ ಈ ಮಹತ್ವದ ಗೌರವ ಸಿಕ್ಕಿರುವುದು ಜಿಲ್ಲೆಯ ಹೆಮ್ಮೆ ಎಂದರು.
ದಲಿತರ ಶೈಕ್ಷಣಿಕ ಉನ್ನತಿ, ಸರಕಾರಿ ಸವಲತ್ತುಗಳನ್ನು ಸಮುದಾಯಕ್ಕೆ ತಲುಪಿಸುವ ನೂರಾರು ಪ್ರಯತ್ನಗಳ ಮೂಲಕ ದಲಿತ ಸಮುದಾಯದ ಸ್ವಾವಲಂಬಿ ಹಾಗೂ ಆತ್ಮಗೌರವ ಬದುಕಿಗಾಗಿ ವೈಯಕ್ತಿಕ ಬದುಕನ್ನು ಮುಡಿಪಾಗಿಟ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮುನಿಯಪ್ಪ ಅವರ ಆಯ್ಕೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಮುಖಂಡ ಕುರ್ಕಿ ರಾಜೇಶ್ವರಿ ಮಾತನಾಡಿ, ಅಂಬೇಡ್ಕರ್ ಆಶಯಗಳ ಹಾದಿಯಲ್ಲಿಯೇ ಹೋರಾಟವನ್ನೇ ಬದುಕಾಗಿಸಿಕೊಂಡಿರುವ ಸಿ.ಎಂ.ಮುನಿಯಪ್ಪರಿಗೆ ರಾಜ್ಯ ಸರಕಾರ 2026 ನೇ ಡಾ.ಅಂಬೇಡ್ಕರ್ ಪ್ರಶಸ್ತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ದಲಿತ ಮುಖಂಡರಾದ ವರದೇನಹಳ್ಳಿ ವೆಂಕಟೇಶ್, ವಕ್ಕಲೇರಿ ರಾಜಪ್ಪ, ಸಿ.ವಿ.ನಾಗರಾಜ್, ಅಮ್ಮೇರಹಳ್ಳಿ ಚಲಪತಿ, ನರಸಿಂಹಮೂರ್ತಿ ಮತ್ತಿತರರಿದ್ದರು.

