

8ನೇ ಜನೌಷಧಿ ಸಪ್ತಾಹದ ಅಂಗವಾಗಿ ಮಾರ್ಚ 7ರಂದು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಇವರು ಬೆಂಗಳೂರಿನಲ್ಲಿ ಏರ್ಪಡಿಸಿರುವ ವಿಶೇಷ ಕಾರ್ಯಕ್ರಮದಲ್ಲಿ 2025-26ರಲ್ಲಿ ಅತೀ ಉನ್ನತ ವ್ಯವಹಾರ ನಡೆಸಿದ ಐದು ಜನೌಷಧಿ ಕೇಂದ್ರಗಳನ್ನು ಗುರುತಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1800 ಜನೌಷಧಿ ಕೇಂದ್ರದಲ್ಲಿ ಕುಂದಾಪುರ ರೆಡ್ ಕ್ರಾಸ್ ನಡೆಸುತ್ತಿರುವ ಜನೌಷಧಿ ಕೇಂದ್ರವು ಅತ್ಯುತ್ತಮ ವ್ಯವಹಾರ ನಡೆಸುವ ಕೇಂದ್ರವಾಗಿ ಹೊರಹೊಮ್ಮಿದೆ. ಉಳಿದ ನಾಲ್ಕು ಕೇಂದ್ರಗಳು ಜಿಲ್ಲಾ ಪ್ರಧಾನ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕುಂದಾಪುರ ಜನೌಷಧಿ ಕೇಂದ್ರವು ಮಾತ್ರ ತಾಲೂಕಿನ ನಗರದಲ್ಲಿ ಇದ್ದು ಪ್ರಶಸ್ತಿಗೆ ಪಾತ್ರರಾಗಿರುವುದು ನಿಜಕ್ಕೂ ಶ್ಲಾಘನೀಯ.
ಮಾಜಿ ಉಪ ಮುಖ್ಯಮಂತ್ರಿ ಶ್ರೀ ಆರ್ ಅಶೋಕ ಮುಖ್ಯ ಅತಿಥಿಯಾಗಿ ಆಗಮಿಸಿ ಪುರಸ್ಕೃತರಿಗೆ ಪ್ರಶಸ್ತಿಯೊಂದಿಗೆ ಗೌರವಿಸಿ, ಅಭಿನಂದಿಸಿದರು.
ಗೌರವ ಪ್ರಶಸ್ತಿ ಸ್ವೀಕರಿಸಿದ ಕುಂದಾಪುರ ತಾಲೂಕು ರೆಡ್ ಕ್ರಾಸ ಘಟಕದ ಸಭಾಪತಿ ಎಸ್ ಜಯಕರ ಶೆಟ್ಟಿ ಮಾತನಾಡಿ, 2017 ರಿಂದ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಜನೌಷಧಿ ಕೇಂದ್ರವು ಸುಮಾರು ಒಂದು ಲಕ್ಷಕ್ಕೂ ಅಧಿಕ ರೋಗಿಗಳಿಗೆ ಗುಣಮಟ್ಟದ ಔಷಧಿ ಕಡಿಮೆ ದರದಲ್ಲಿ ದೊರಕುವ ಸೌಲಭ್ಯ ಕಲ್ಪಿಸಿದೆ. ಆಡಳಿತ ಮಂಡಳಿಯ ನಿಸ್ವಾರ್ಥ ಸ್ವಯಂಪ್ರೇರಿತ ಸೇವೆಯೇ ಈ ಉನ್ನತಿಗೆ ಕಾರಣ ಎಂದು ಬಣ್ಣಿಸಿದರು. ಮುಂದಿನ ವರ್ಷದಲ್ಲಿ ಇದಕ್ಕಿಂತ ಹೆಚ್ಚಿನ ವ್ಯವಹಾರದ ಗುರಿ ಇಟ್ಟುಕೊಂಡು, ಇದರಿಂದ ಬಂದ ಆದಾಯದಲ್ಲಿ ಈಗ ನಡೆಸುತ್ತಾ ಬಂದಿರುವ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮುಂದುವರಿಸುವ ಗುರಿ ಹೊಂದಿದ್ದೇವೆ ಹಾಗೂ ಅದಕ್ಕೆ ಎಲ್ಲರ ಸಹಕಾರವನ್ನು ಕೋರಿದರು.


