

ಶ್ರೀನಿವಾಸಪುರ: ರೈತರ ಸಮಸ್ಯೆ ನಿವಾರಣೆಗೆ ಪದಾಧಿಕಾರಿಗಳು ಸಾಂಘಿಕ ಹೋರಾಟ ನಡೆಸಬೇಕು. ಭ್ರಷ್ಟಾಚಾರ ಮತ್ತು ನೇಪಥ್ಯದಲ್ಲಿರುವ ಅಕ್ರಮಗಳ ವಿರುದ್ಧ ಸಂಘಟಿತವಾಗಿ ನಿಲ್ಲುವ ಕಾಲ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಕರೆ ನೀಡಿದರು.
ಪಟ್ಟಣದ ರೈತ ಸಂಘ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ರೈತರು ನೀರು, ಬೆಳೆನಾಶ, ಬೆಲೆ ಸ್ಥಿರೀಕರಣ ಸೇರಿದಂತೆ ಅನೇಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆಂದು ಹೇಳಿದರು. ರೈತಪರ ಕಾಳಜಿಯಿಂದ ಮಾತ್ರ ಸಂಘಟನೆ ಬಲವಾಗುತ್ತದೆ. ಹೊಸ ಪದಾಧಿಕಾರಿಗಳು ಜನರೊಂದಿಗೆ ನೇರ ಸಂಪರ್ಕ ಬೆಳೆಸಿ, ಸಮಸ್ಯೆಗಳಿಗೆ ನಿಗದಿತ ಪರಿಹಾರ ಕಂಡುಹಿಡಿಯುವ ಕಾರ್ಯಯೋಜನೆ ರೂಪಿಸಬೇಕು ಎಂದು ಅವರು ಒತ್ತಿಹೇಳಿದರು.
ಸಭೆಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಕಳೆದ ೯ ವರ್ಷಗಳಲ್ಲಿ ರೈತ ಸಂಘವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಅವಕಾಶ ನನಗೆ ಲಭಿಸಿತು. ಪದಾಧಿಕಾರಿಗಳು ಮತ್ತು ರೈತರ ಸಹಕಾರದಿಂದ ಅನೇಕ ಹೋರಾಟಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇವೆ. ಹೊಸ ಪದಾಧಿಕಾರಿಗಳು ಸಂಘ ನಡೆದು ಬಂದ ಹಾದಿಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಹೊಸ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ ಮಾತನಾಡಿ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ನನಗೆ ಬಲವಾಗಿದೆ. ರೈತರ ಹಿತಾಸಕ್ತಿಗೆ ನೂತನ ತಂಡದೊಂದಿಗೆ ಸಮಗ್ರ ಹೋರಾಟ ನಡೆಸಲು ಸಜ್ಜಾಗಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಹೊಸ ಪದಾಧಿಕಾರಿಗಳ ಪಟ್ಟಿ
ಕಾರ್ನಾಟಕ್ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕಕ್ಕೆ ಆಯ್ಕೆಯಾದವರು
ಎನ್. ವೀರಪ್ಪರೆಡ್ಡಿ – ಗೌರವಾಧ್ಯಕ್ಷ , ಬಿ. ನಾರಾಯಣಸ್ವಾಮಿ – ಅಧ್ಯಕ್ಷ , ಸಿ.ವಿ. ದೇವರಾಜಗೌಡ – ಕಾರ್ಯಾಧ್ಯಕ್ಷ , ಅಸ್ಲಾಂಪಾಷ – ಪ್ರಧಾನ ಕಾರ್ಯದರ್ಶಿ , ಸಿ.ಬಿ. ಮೋಹನ್ – ಉಪಾಧ್ಯಕ್ಷ , ರಮೇಶ್ ಸೋಮಿಯಾಜಲಹಳ್ಳಿ – ಉಪಾಧ್ಯಕ್ಷ , ನಟರಾಜ್ – ಖಜಾಂಚಿ
ಚಲಪತಿ, ನಾರಾಯಣಪ್ಪ – ಕಾರ್ಯದರ್ಶಿಗಳು, ಸಿ.ಎಸ್. ಗೋಪಾಲ್ – ಸಂಘಟನಾ ಕಾರ್ಯದರ್ಶಿ , ಜಿ.ಆರ್. ಶಿವಕುಮಾರ್ – ಹಸಿರು ಸೇನೆ ಸಂಚಾಲಕರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತ ಸಂಘ–ಹಸಿರು ಸೇನೆಯ ಉಪಾಧ್ಯಕ್ಷ ಬೈರಾರೆಡ್ಡಿ, ಖಜಾಂಚಿ ಶ್ರೀನಾಥ್ ಹಾಗೂ ಚಿರುವನಹಳ್ಳಿ ಕೆ.ರೆಡ್ಡಪ್ಪ ಉಪಸ್ಥಿತರಿದ್ದರು.

