

ಶ್ರೀನಿವಾಸಪುರ: ತಾಲ್ಲೂಕಿನ ಪ್ರಮುಖ ಹೆದ್ದಾರಿಗಳಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಜನರ ಜೀವಕ್ಕೆ ಅಪಾಯ ಉಂಟಾಗುತ್ತಿರುವುದಾಗಿ ಕರ್ನಾಟಕ ಜನಪರ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣಗಳ ಬಗ್ಗೆ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವೇದಿಕೆ ದೂರಿತಾಗಿದೆ.
ಇಂದು ಕರ್ತವ್ಯಕ್ಕೆ ತಕ್ಕ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ತಕ್ಷಣ ಸುರುಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗಡುವು ನೀಡಲಾಯಿತು.
ವಿಶೇಷವಾಗಿ, ಕಡಪ ಬೆಂಗಳೂರು ಹೆದ್ದಾರಿ ಅಪಘಾತಗಳ ಹಾಟ್ಸ್ಪಾಟ್ ಆಗಿ ಪರಿಣಮಿಸಿದ್ದು, ರಸ್ತೆ ಅಪಾಯ ಸೂಚಕ ಫಲಕಗಳ ಕೊರತೆಯಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಲಕ್ಷ್ಮೀಪುರ ಕ್ರಾಸ್ನಿಂದ ಚಿಂತಾಮಣಿ ಮಾಡಿಕೆರೆ ಕ್ರಾಸ್ವರೆಗೆ ಕೆಲವು ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಅಡ್ಡಾದಿಡ್ಡಿಯಾಗಿ ನಿರ್ಮಾಣಗೊಂಡಿರುವುದು ಸಂಚಾರಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
ಕರ್ನಾಟಕ ಜನಪರ ವೇದಿಕೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ವೈ. ಬಿ. ಅವರು ಸಮಸ್ಯೆ ಸ್ಪಷ್ಟವಾಗಿದೆ. ಅಧಿಕಾರಿಗಳಿಗೆ ಇದು ಕಾಣುತ್ತಿಲ್ಲವೇ ? ಕಣ್ಣೆದುರೇ ಜನ ಸಾಯುತ್ತಿದ್ದರೂ ಸುಮ್ಮನಿರುವುದು ನಿರ್ಲಕ್ಷ್ಯವಲ್ಲದೆ ಬೇರೇನು ? ಎಂದು ತೀವ್ರ ಪ್ರಶ್ನಿಸಿದರು. ಅವರು, ಅಧಿಕಾರಿಗಳು ಜವಾಬ್ದಾರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಿರುವುದಾಗಿ ಎಚ್ಚರಿಕೆ ನೀಡಿದರು.
ಮಂಜುನಾಥ್ ಅವರು ಎಲ್ಲ ಅಕ್ರಮ ಕಟ್ಟಡಗಳನ್ನು ತಕ್ಷಣ ಮತ್ತು ಸಂಪೂರ್ಣವಾಗಿ ತೆರವುಗೊಳಿಸುವುದು, ಅಪಘಾತ ಹೆಚ್ಚಿರುವ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳು ಮತ್ತು ವೇಗದ ಮಿತಿ ಫಲಕಗಳನ್ನು ಅಳವಡಿಸುವುದು ಅಗತ್ಯವೆಂದು ಒತ್ತಾಯಿಸಿದರು.
ಈ ವೇಳೆ ಸುರೇಶ್, ಸ್ವಾಮಿ ಎಚ್.ಎಂ., ಅರುಣ್ ಕುಮಾರ್, ಚಿರಂಜೀವಿ ಸೇರಿದಂತೆ ಹಲವು ಹೋರಾಟಗಾರರು ಉಪಸ್ಥಿತರಿದ್ದರು.

