

ಉಪ್ಪಿನಂಗಡಿ/ಸಕಲೇಶಪುರ: ಕೆಎಸ್ಆರ್ಟಿಸಿ ರಾಜಹಂಸ ಬಸ್ ಮತ್ತು ಕಾರಿನ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಘಾಟ್ನ ಗುಂಡ್ಯ ಸಮೀಪ ಶುಕ್ರವಾರ ಸಂಜೆ ನಡೆದಿದೆ.
ಧರ್ಮಸ್ಥಳದಿಂದ ತಿರುಪತಿಗೆ ಹೋಗುತ್ತಿದ್ದ ರಾಜಹಂಸ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರನ್ನು ಶಿಶಿಲ ನಿವಾಸಿ ಚಂದ್ರಶೇಖರ್ (57) ಹಾಗೂ ಉಜಿರೆ ನಿವಾಸಿಗಳಾದ ಶ್ರೀಧರ್ ಗೌಡ (61) ಮತ್ತು ಜನಾರ್ದನ ಗೌಡ (58) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನೊರ್ವ ಉಜಿರೆಯ ಸುರೇಶ (58) ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯಂತೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸಕಲೇಶಪುರಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.ಘಟನೆಯ ಮಾಹಿತಿ ತಿಳಿದು ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶಿರಾಡಿ ಘಾಟ್ನಲ್ಲಿ ವಾಹನಗಳ ಹೆಚ್ಚಿದ ಸಂಚಾರದ ನಡುವೆ ಈ ಅಪಘಾತ ಸಂಭವಿಸಿದ್ದು, ಕೆಲವು ಸಮಯ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಯಿತು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ಮೂಡಿಗೆರೆ: ನಿಯಂತ್ರಣ ತಪ್ಪಿ 60 ಅಡಿ ಪ್ರಪಾತಕ್ಕೆ ಬಿದ್ದ 12 ಚಕ್ರದ ಲಾರಿ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ರಸ್ತೆ ತಿರುವಿನಲ್ಲಿ 600 ಅಡಿ ಆಳಕ್ಕೆ ಲಾರಿಯೊಂದು ಉರುಳಿದ್ದು, ಕ್ಯಾಬಿನ್ನಲ್ಲಿ ಸಿಲುಕಿದ್ದ ಚಾಲಕನನ್ನು ಸಿನಿಮಾ ಶೈಲಿಯಲ್ಲಿ ಸಾಹಸಮಯವಾಗಿ ಸಾರ್ವಜನಿಕರು ಹಾಗೂ ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಕೆಳಗೂರು ಟೀ ಎಸ್ಟೇಟ್ ಬಳಿ ಇಂದು ಬೆಳ್ಳಂ ಬೆಳಗ್ಗೆ ಭೀಕರ ಲಾರಿ ಅಪಘಾತ ಸಂಭವಿಸಿದ್ದು, ಸಾವಿನ ದವಡೆಯಿಂದ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ. ದೊಡ್ಡ ಬಳ್ಳಾಪುರದಿಂದ ಹಿರೇಬೈಲು ಗ್ರಾಮಕ್ಕೆ ಸಿಮೆಂಟ್ ಸಾಗಿಸುತ್ತಿದ್ದ 12 ಚಕ್ರದ ಲಾರಿಯು ರಸ್ತೆಯ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 600 ಅಡಿ ಆಳದ ಪ್ರಪಾತಕ್ಕೆ ಉರುಳಿದೆ.
ಈ ವೇಳೆ ಲಾರಿಯು ಎಸ್ಟೇಟ್ ಕಾರ್ಮಿಕರ ಲೈನ್ ಮನೆಗಳ ಅಂಗಳಕ್ಕೆ ಬಂದು ಬಿದ್ದಿದೆ. ಇನ್ನೊಂದು ಪಲ್ಟಿಯಾಗಿದ್ದಲ್ಲಿ ದೊಡ್ಡ ಮಟ್ಟದ ಸಾವು – ನೋವು ಸಂಭವಿಸುವ ಸಾಧ್ಯತೆಯಿತ್ತು. ಅಪಘಾತದ ತೀವ್ರತೆಗೆ ಲಾರಿಯ ಕ್ಯಾಬಿನ್ ಸಂಪೂರ್ಣ ಜಜ್ಜಲ್ಪಟ್ಟಿದ್ದು, ಅದರೊಳಗೆ ಸಿಲುಕಿಕೊಂಡಿದ್ದ ಚಾಲಕ ಸುಮಾರು ಎರಡು ಗಂಟೆಗಳ ಕಾಲ ಹೊರಬರಲಾಗದೇ ನರಕಯಾತನೆ ಅನುಭವಿಸಿದ್ದಾರೆ.

