

ಬೆಂಗಳೂರು : ರಾಜ್ಯ ಸರ್ಕಾರವು ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳ ಹಿಂಬರಹದ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ. ಸರ್ಕಾರಿ ಆದೇಶ ಸಂಖ್ಯೆ: ಆಕುಕ 215 ಸಿಜಿಇ 2025, ದಿನಾಂಕ 08.10.2025ರಂತೆ, ಯಶಸ್ವಿನಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿರುವ ABArK ಯೋಜನೆಯ ಲಾಭಾರ್ಥಿಗಳಿಗೆ ಯಶಸ್ವಿನಿ ಯೋಜನೆಯಲ್ಲೇ ಪ್ರಯೋಜನ ಪಡೆಯಲು ಸೂಕ್ತ ಹಿಂಬರಹವನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಹೊರಡಿಸಿದ ಆದೇಶದ ಪ್ರಕಾರ, ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚದ ಹಿಂಬರಹವನ್ನು ಖಾಸಗಿ SAST ರೆಫರಲ್ ನೀಡುವ ಹಂತದಲ್ಲೇ ಸಿಗಲಿದೆ. ಸರ್ಕಾರದ ಆಸ್ಪತ್ರೆಗಳು ವ್ಯಾಪಕವಾಗಿ ಲಭ್ಯವಿರುವುದರಿಂದ ಯಶಸ್ವಿನಿ ಯೋಜನೆಯ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳ ಬಳಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ, ಇವರಿಗೆ ABArK ಯೋಜನೆಯಡಿಯಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಕಾಶವನ್ನು ಮುಂದುವರಿಸಲಾಗಿದೆ.
ರಾಜ್ಯ ಆರೋಗ್ಯ ಏಜೆನ್ಸಿ (SAST) ಈ ಫಲಾನುಭವಿಗಳ ಮಾಹಿತಿಯನ್ನು ಸಹಕಾರ ಇಲಾಖೆಯೊಂದಿಗೆ ಹಂಚಿಕೊಳ್ಳಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ABArK ದರದಲ್ಲಿ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ.
ಹಿಂದಿನ ಸಾಲಿನಲ್ಲಿ 3.07 ಲಕ್ಷ ಯಶಸ್ವಿನಿ ಫಲಾನುಭವಿಗಳಿಗೆ ABArK ಯೋಜನೆಯಡಿ ಒಟ್ಟು ರೂ.130.22 ಕೋಟಿ ಮೊತ್ತವನ್ನು ಪಾವತಿಸಲಾಗಿದೆ. ಈ ಮೊತ್ತವನ್ನು ಸಹಕಾರ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮರುಪಾವತಿಸಲು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸ ವ್ಯವಸ್ಥೆಯನ್ನು ತಕ್ಷಣದಿಂದಲೇ ಜಾರಿಗೆ ತರಲು SAST ಗೆ ಸೂಚನೆ ನೀಡಲಾಗಿದೆ. ಜೊತೆಗೆ, ಈ ಆದೇಶವನ್ನು ಅನುಷ್ಠಾನಗೊಳಿಸುವ ವೇಳೆ ಎದುರಾಗುವ ಯಾವುದೇ ಅಡಚಣೆಗಳು ಅಥವಾ ಸಲಹೆಗಳನ್ನು ತಕ್ಷಣ ಸರ್ಕಾರದ ಗಮನಕ್ಕೆ ತರಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

