

ಗಂಗೊಳ್ಳಿ : ಇಲ್ಲಿನ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ರೋನಕ್ ಅತ್ಯುತ್ತಮ ಕ್ರೀಡಾಪಟು ವಾಗಿದ್ದು, ತಾನು ಕಲಿತ ಶಾಲೆಗೂ, ತನ್ನ ಕುಟುಂಬಕ್ಕೂ ಗಂಗೊಳ್ಳಿ ಗ್ರಾಮಕ್ಕೂ ಕೀರ್ತಿ ತಂದಿರುತ್ತಾನೆ. ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗಾಂಧಿ ಮೈದಾನ ಕುಂದಾಪುರದಲ್ಲಿ ನಡೆದ ವಲಯ ಮಟ್ಟದ ಕ್ರೀಡಾ ಕೂಟದ ಚಕ್ರ ಎಸೆತ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನೂ, ವಿದ್ಯಾರಣ್ಯ ಶಾಲೆ ಯಡಾಡಿ -ಮತ್ಯಾಡಿಯಲ್ಲಿ ಜರುಗಿದ ತಾಲೂಕು ಮಟ್ಟದ ಕ್ರೀಡಾಕೂಟದ ಚಕ್ರ ಎಸೆತದಲ್ಲಿ ಚಿನ್ನದ ಪದಕವನ್ನೂ ಹಾಗೂ ಹ್ಯಾಮರ್ ಎಸೆತದಲ್ಲಿ ಬೆಳ್ಳಿಯ ಪದಕವನ್ನೂ, ಕೆಪಿಎಸ್ ಕೊಕ್ಕರ್ಣಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದ ಚಕ್ರ ಎಸೆತದಲ್ಲಿ ಚಿನ್ನದ ಪದಕವನ್ನು ಪಡೆದು,ಇದೇ 2026 -ನವಂಬರ್ 2 ಮತ್ತು 3ನೇ ತಾರೀಖಿನಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾನೆ. ಈ ಕ್ರೀಡಾ ಸಾಧಕನಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಣಯಕುಮಾರ್ ಶೆಟ್ಟಿಯವರು ಮಾರ್ಗದರ್ಶನ ನೀಡಿರುತ್ತಾರೆ. ಈತನು ಗಂಗೊಳ್ಳಿಯ ರಾಘವೇಂದ್ರ ಖಾರ್ವಿ ಮತ್ತು ಮಾಲತಿಯವರ ಹೆಮ್ಮೆಯ ಪುತ್ರನಾಗಿರುತ್ತಾನೆ.
ಅಮೋಘ ಸಾಧನೆ ಮಾಡಿದ ಶಾಲೆಯ ಅಚ್ಚುಮೆಚ್ಚಿನ ಸಾಧಕ ವಿದ್ಯಾರ್ಥಿಗೆ ಸ್ಟೆಲ್ಲಾ ಮಾರಿಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಭಯಶಾಲಾ ಮುಖ್ಯೋಪಾಧ್ಯಾಯಿ ನಿಯರಾದ ಭ.ವಿಜಯ , ಭ. ಕ್ರೇಸೆನ್ಸ ,ಭ.ಗ್ರೇಸಿ , ಭ.ಸನೀಶಾ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

