

ಮಂಗಳೂರು: ಇಲ್ಲಿನ ಕುಲಶೇಖರದಲ್ಲಿ 37 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸಹಕಾರಿ ಸಂಘ (ನಿ)ದ 36ನೇ ವಾರ್ಷಿಕ ಮಹಾಸಭೆಯು ಕೂರ್ಡೆಲ್ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷರಾದ ಶ್ರೀಯುತ ಜೋಸ್ಸಿ ಸಿಕ್ವೇರಾರವರು ಅಧ್ಯಕ್ಷತೆ ವಹಿಸಿ ಮಾತನಾಡಿ, 2025-26ರಲ್ಲಿ ಸದಸ್ಯರ ಸಂಖ್ಯೆ 5021 ಆಗಿದ್ದು, ಸದಸ್ಯತ್ವದ ಷೇರುಬಂಡವಾಳ 87 ಲಕ್ಷ ಆಗಿರುತ್ತದೆ. 2024-25ರಲ್ಲಿ ಸಂಸ್ಥೆಯ ವಹಿವಾಟು 219 ಕೋಟಿ ಇದ್ದು, ಪ್ರಸ್ತುತ 2025-26ರಲ್ಲಿ 311 ಕೋಟಿಗೆ ತಲುಪಿ ಸುಮಾರು 92 ಕೋಟಿ ವಹಿವಾಟು ಹೆಚ್ಚಳವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಇಬ್ಬರು ಮಹಿಳಾ ಸದಸ್ಯರಾದ ಶ್ರೀಮತಿ ಐರಿನ್ ಲೀನಾ ಸಿಕ್ವೇರಾರವರಿಗೆ ಅತ್ಯುತ್ತಮ ರಾಜ್ಯ ಶಿಕ್ಷಕಿ ಪ್ರಶಸ್ತಿ ಹಾಗೂ ಶ್ರೀಮತಿ ಫೇವಿ ಜೆಸಿಂತಾ ಮಿರಾಂದರವರಿಗೆ ಉತ್ತಮ ಜಿಲ್ಲಾ ಶಿಕ್ಷಕಿ ಪ್ರಶಸ್ತಿ ಬಂದಿದ್ದು, ಅವರನ್ನು ಸನ್ಮಾನಿಸಲಾಯಿತು.
ಸಂಘದ ತೀರಾ ಅನಾರೋಗ್ಯ ಪೀಡಿತ 8 ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ರೂ.1 ಲಕ್ಷ 80 ಸಾವಿರ ಸಹಾಯಧನ ಹಾಗೂ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವ ಧನ ನೀಡಲಾಯಿತು.
2024-25ನೇ ಸಾಲಿನ ಮಹಾಸಭೆಯ ವರದಿಯನ್ನು ನಿರ್ದೇಶಕರಾದ ಡೋನಾಲ್ಡ್ ಬಂಟ್ವಾಳ್ ವಾಚಿಸಿದರು. 2025-26ನೇ ಸಾಲಿನ ವಾರ್ಷಿಕ ಆಡಳಿತ ವರದಿಯನ್ನು ನಿರ್ದೇಶಕಿ ಶ್ರೀಮತಿ ಆಲಿಸ್ ಲೋಬೋ ಅಂಗೀಕರಿಸಿದರು.
ನಿರ್ದೇಶಕರಾದ ಶ್ರೀ ರೋಹನ್ ಜೋಸೆಫ್ ಡಿಸಿಲ್ವಾರವರು ಉಪಸ್ಥಿತರಿದ್ದು, ನಿರ್ದೇಶಕ ಶ್ರೀ ರೋಮನ್ ಬಾಸಿಲ್ ಲೋಬೋರವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಫ್ರಾನ್ಸಿಸ್ ಪ್ರವೀಣ್ ಕ್ರಾಸ್ತರವರು ವಂದಿಸಿದರು.

