

ಸ್ಯಾನ್ ಫ್ರಾನ್ಸಿಸ್ಕೋ: ನೀವು ನಾಯಿಗಳನ್ನು ವಾಕಿಂಗ್ ಕರೆದೊಯ್ಯುವ ಕೆಲಸದ ಬಗ್ಗೆ ಕೇಳಿರುತ್ತೀರಿ, ಆದರೆ ರೋಬೋಟ್ ನಾಯಿಗಳನ್ನು ವಾಕಿಂಗ್ ಕರೆದೊಯ್ಯುವ ಕೆಲಸಕ್ಕೆ ಭಾರಿ ಸಂಬಳ ನೀಡುವ ಆಫರ್ ಬಗ್ಗೆ ಕೇಳಿದ್ದೀರಾ? ಹೌದು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ‘ಡೈಮೆನ್ಷನಲ್’ (Dimensional) ಎಂಬ ರೊಬೊಟಿಕ್ಸ್ ಸ್ಟಾರ್ಟ್ಅಪ್ ಸಂಸ್ಥೆಯು ಇಂತಹದ್ದೊಂದು ವಿಶಿಷ್ಟ ಉದ್ಯೋಗದ ಆಫರ್ ನೀಡಿ ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿದೆ.
ರೋಬೋಟ್ ನಾಯಿಗಳನ್ನು ವಾಕಿಂಗ್ ಕರೆದೊಯ್ಯುವ ಈ ಕೆಲಸಕ್ಕೆ ಕಂಪನಿಯು ಗಂಟೆಗೆ 20 ಡಾಲರ್ (ಸುಮಾರು ₹1,900) ಸಂಬಳ ನೀಡುವುದಾಗಿ ಘೋಷಿಸಿದೆ.
ಕೆಲಸದ ಉದ್ದೇಶ ಮತ್ತು ತರಬೇತಿ:
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರೋಬೋಟ್ಗಳು ನಗರದ ರಸ್ತೆಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಸ್ವತಂತ್ರವಾಗಿ ಸಂಚರಿಸುವುದನ್ನು ಕಲಿಯುವಂತೆ ಮಾಡಲು ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಮನುಷ್ಯರು ಈ ನಾಲ್ಕು ಕಾಲಿನ ರೋಬೋಟ್ ನಾಯಿಗಳನ್ನು ಮುನ್ನಡೆಸುತ್ತಿರುವಾಗ, ರೋಬೋಟ್ನಲ್ಲಿರುವ ಅತ್ಯಾಧುನಿಕ ಕ್ಯಾಮೆರಾಗಳು ಮತ್ತು ಸೆನ್ಸರ್ಗಳು ಸುತ್ತಮುತ್ತಲಿನ ಪರಿಸರದ ನೈಜ ಡೇಟಾವನ್ನು ಸಂಗ್ರಹಿಸುತ್ತವೆ. ಈ ಕೆಲಸಕ್ಕೆ ಯಾವುದೇ ರೊಬೊಟಿಕ್ಸ್ ಕ್ಷೇತ್ರದ ಮುನ್ಅನುಭವದ ಅಗತ್ಯವಿಲ್ಲ ಮತ್ತು ಕಂಪನಿಯೇ ಸಂಬಳದೊಂದಿಗೆ ತರಬೇತಿಯನ್ನು ನೀಡುತ್ತದೆ.
ಕೆಲಸದ ಅವಧಿ ಮತ್ತು ಸವಾಲುಗಳು:
ಒಂದು ಶಿಫ್ಟ್ ಸಾಮಾನ್ಯವಾಗಿ 4 ರಿಂದ 6 ಗಂಟೆಗಳವರೆಗೆ ಇರುತ್ತದೆ. ಆದರೆ, ಈ ಆಕರ್ಷಕ ಸಂಬಳದ ಕೆಲಸದಲ್ಲಿ ಒಂದು ಸಣ್ಣ ಟ್ವಿಸ್ಟ್ ಕೂಡ ಇದೆ. ಈ ರೋಬೋಟ್ ನಾಯಿಗಳು ಸುಮಾರು 15 ಕೆಜಿ ತೂಕವಿರುತ್ತವೆ. ಒಂದು ವೇಳೆ ವಾಕಿಂಗ್ ಮಾಡುವಾಗ ತಾಂತ್ರಿಕ ದೋಷದಿಂದ ರೋಬೋಟ್ ಆಫ್ ಆದ್ರೆ ಅಥವಾ ಅತಿಯಾಗಿ ಕಾಯ್ದುಹೋದ್ರೆ (Overheat), ಕೆಲಸಗಾರರು ಅದನ್ನು ತಮ್ಮ ಕೈಯಲ್ಲೇ ಹೊತ್ತುಕೊಂಡು ಕಚೇರಿಗೆ ಮರಳಿ ತರಬೇಕಾಗುತ್ತದೆ!
ಸ್ಯಾನ್ ಫ್ರಾನ್ಸಿಸ್ಕೋದ ಸ್ಥಳೀಯ ಫೇಸ್ಬುಕ್ ಗ್ರೂಪ್ನಲ್ಲಿ ಪೋಸ್ಟ್ ಮಾಡಲಾಗಿದ್ದ ಈ ವಿಶಿಷ್ಟ ಉದ್ಯೋಗದ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಭಾರಿ ಜನಾಕರ್ಷಣೆ ಪಡೆದಿದೆ.

