

ಕೋಲಾರ : ಡಿಸೆಂಬರ್ 12. ದೀರ್ಘಕಾಲದವರೆಗೆ ಹಕ್ಕುಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮೂಲ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಉದ್ದೇಶದಿಂದ ವಿಶೇಷ ಶಿಬಿರವನ್ನು ಇಂದು (12.12.2025, ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ಕೋಲಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಐ.ಎ.ಎಸ್. ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದರು.
ಪತ್ರಿಕಾ ಪ್ರಕಟಣೆಯಲ್ಲಿ, ಹತ್ತು ವರ್ಷಗಳಿಗೂ ಅಧಿಕಾವಧಿಯಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳು, ಹಕ್ಕುಪಡೆಯದ ಠೇವಣಿಗಳು, ವಿಮಾ ಹಣ ಮತ್ತು ಷೇರುಗಳನ್ನು ಖಾತೆದಾರರು ಅಥವಾ ಅವರ ವಾರಸುದಾರರು ಮರುಪಡೆಯಲು ಶಿಬಿರ ಮಹತ್ವದ ವೇದಿಕೆ ಆಗಲಿದೆ ಎಂದು ತಿಳಿಸಲಾಗಿದೆ. ಬೇಕಾದ ದಾಖಲೆಗಳೊಂದಿಗೆ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದರೆ ಅಗತ್ಯ ಮಾರ್ಗದರ್ಶನ ಹಾಗೂ ಸಲಹೆಗಳನ್ನು ತಜ್ಞರಿಂದಲೇ ಪಡೆಯಬಹುದು.
ಶಿಬಿರ 31 ಡಿಸೆಂಬರ್ವರೆಗೆ ಮುಂದುವರಿಕೆ
ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮಾರ್ಗಸೂಚಿಯಂತೆ ರಾಜ್ಯದಾದ್ಯಂತ ಬ್ಯಾಂಕಿಂಗ್, ವಿಮಾ ಹಾಗೂ ಇತರ ಹಣಕಾಸು ವಲಯಗಳ ವಿವಿಧ ಶಾಖೆಗಳಲ್ಲಿ ಈ ಶಿಬಿರಗಳು 31.12.2025ರವರೆಗೆ ನಡೆಯಲಿವೆ. ನಿಷ್ಕ್ರಿಯ ಖಾತೆಗಳ ಮಾಹಿತಿ ಹುಡುಕಲು ಮತ್ತು ಹಕ್ಕಿನ ಮೊತ್ತವನ್ನು ಮರುಪಡೆಯಲು ಇದು ಅತ್ಯಂತ ಸೂಕ್ತ ಸಮಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
UDGAM ಪೋರ್ಟಲ್ ಮೂಲಕ ಮಾಹಿತಿಗೆ ಸುಲಭ ಪ್ರವೇಶ
ಹತ್ತು ವರ್ಷಕ್ಕಿಂತ ಹಳೆಯದಾದ ನಿಷ್ಕ್ರಿಯ ಖಾತೆಗಳಲ್ಲಿನ ಹಣವನ್ನು ಆರ್ಬಿಐಯ ಡಿಪಾಸಿಟರ್ ಎಜುಕೇಷನ್ ಅಂಡ್ ಅವೇರ್ನೆಸ್ (DEA) ನಿಧಿಗೆ ವರ್ಗಾಯಿಸಲಾಗುತ್ತದೆ. ಖಾತೆಗಳು ಮತ್ತು ಠೇವಣಿಗಳ ವಿವರಗಳನ್ನು ಪರಿಶೀಲಿಸಲು ಸಾರ್ವಜನಿಕರು ಆರ್ಬಿಐನ UDGAM ಪೋರ್ಟಲ್ (https://udgam.rbi.org.in) ಅನ್ನು ಬಳಸಬಹುದಾಗಿದೆ.

