

ಶ್ರೀನಿವಾಸಪುರ: ಪಾಕೇಟ್ ಮತ್ತು ಪತ್ರ ತಲುಪಿಸುವಲ್ಲಿ ಪರಿಣತಿ ಪಡೆದಿರುವ ದಿ ಪ್ರೊಫೆಷನಲ್ ಕೊರಿಯರ್ ಸಂಸ್ಥೆ, ಈಗ ಕಾಲಚಕ್ರದ ಬದಲಾವಣೆಗೆ ಅನುಗುಣವಾಗಿ ಪಾರ್ಸಲ್ ಹಾಗೂ ಕಾರ್ಗೋ ಸೇವೆಗಳತ್ತ ಸುವ್ಯವಸ್ಥಿತ ಹೆಜ್ಜೆ ಇಡುತ್ತಿದೆ ಎಂದು ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಮನೋಜ್ ಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಕಿಟ್ ಕಂಪ್ಯೂಟರ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ದಿ ಪ್ರೊಫೆಷನಲ್ ಕೊರಿಯರ್ ಭಾರತದಲ್ಲಿ ಅತಿದೊಡ್ಡ ಕೊರಿಯರ್ ಮತ್ತು ಕಾರ್ಗೋ ಸಂಸ್ಥೆಗಳಲ್ಲಿ ಒಂದು. ಇದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದುಬಾರಿಯಲ್ಲದ, ವಿಶ್ವಾಸಾರ್ಹ ಸೇವೆಗಳನ್ನು ಸಾಮಾನ್ಯ ಜನರಿಂದ ಹಿಡಿದು ಬಹುರಾಷ್ಟ್ರೀಯ ಸಂಸ್ಥೆಗಳ ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಹೇಳಿದರು.
ಹೈಟೆಕ್ ಹಬ್ಗಳು, ವಿಸ್ತಾರವಾದ ಶೇಖರಣಾ ಗೋದಾಮುಗಳು, ಸುಸಜ್ಜಿತ ಸಾರಿಗೆ ಜಾಲ ಹಾಗೂ ತಂತ್ರಜ್ಞಾನ ಆಧಾರಿತ ಟ್ರಾಕಿಂಗ್ ವ್ಯವಸ್ಥೆಯ ಮೂಲಕ ಸಂಸ್ಥೆಯು ತ್ವರಿತ ಹಾಗೂ ಸಮರ್ಥ ವಿತರಣಾ ಸೇವೆ ನೀಡುತ್ತಿದೆ. ಗ್ರಾಹಕರಿಗೆ ಅವರ ಸರಕುಗಳು ಎಲ್ಲ ಹಂತದಲ್ಲೂ ಎಲ್ಲಿ ಇರುವವು ಎಂಬ ಮಾಹಿತಿಯನ್ನು ಮೊಬೈಲ್ ಮೂಲಕ ತಕ್ಷಣದಲ್ಲಿ ಪಡೆಯುವ ವ್ಯವಸ್ಥೆಯೂ ಇದೆ.
ಸರ್ಕಾರಿ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಶೈಕ್ಷಣಿಕ, ಹಣಕಾಸು ಸಂಸ್ಥೆಗಳಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ನಮ್ಮ ಸಂಸ್ಥೆ ಪ್ರತಿಷ್ಠೆ ಗಳಿಸಿದೆ. ಗ್ರಾಮೀಣ ಭಾಗಗಳಿಗೂ ಸೇವೆ ವಿಸ್ತರಿಸುವ ದೃಷ್ಟಿಯಿಂದ ಸಂಸ್ಥೆಯು ತನ್ನ ಜಾಲವನ್ನು ಗಟ್ಟಿಗೊಳಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ತುಮಕೂರು ಜಿಲ್ಲಾ ಸಂಯೋಜಕ ಕೊರಟಗೆರೆ ಶ್ರೀನಿವಾಸಮೂರ್ತಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕ ಶ್ರೀನಿವಾಸಮೂರ್ತಿ, ಹಿರಿಯ ವ್ಯವಸ್ಥಾಪಕ ಕಾಮೇಶ್ವರ್ ರಾವ್, ವಿವೇಕ್, ರಾಜು ಹಾಗೂ ಇತರರು ಉಪಸ್ಥಿತರಿದ್ದರು.

