

ಕುಂದಾಪುರ; ‘ಗರಿಷ್ಠ ಅಂಕ ಗಳಿಸಿದವರು ಮಾತ್ರ ಸಾಧನೆ ಮಾಡಬಲ್ಲರು ಎಂಬ ಅನಿಸಿಕೆ ಸರಿಯಲ್ಲ. ಕಡಿಮೆ ಅಂಕ ಗಳಿಸಿದವರೂ ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶವಿದೆ. ಕಡಿಮೆ ಅಂಕ ಗಳಿಸಿದರೂ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಉದಾಹರಣೆಗಳು ಬಹಷ್ಠಿವೆ. ಪೋಷಕರು ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ವಿಷಯದಲ್ಲಿ ಮುನ್ನಡೆಯಲು ಮುಕ್ತ ಅವಕಾಶ ನೀಡಬೇಕು. ಸಾಧನೆ ಮಾಡಲು ಬಹಳಷ್ಟು ಕ್ಷೇತ್ರಗಳಿವೆ. ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಲೇ ಬೇಕು. ಅವರನ್ನು ಗುರುತಿಸಿ ಗೌರವಿಸಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ. ಬದುಕಿನಲ್ಲಿ ಎಲ್ಲರೂ ಏನಾದರೂ ಸಾಧನೆ ಮಾಡಬೇಕು.’ ಎಂದು ಕಾನ್ಪಿಡೆಂಟ್ ಡೆಂಟಲ್ ಇಕ್ವಿಪ್ಮೆಂಟ್ ಪ್ರೈ ಲಿ. ನ ಆಡಳಿತ ನಿರ್ದೇಶಕರಾದ ಡಾ| ಸುಭಾಶ್ಚಂದ್ರ ಶೆಟ್ಟಿಯವರು ಹೇಳಿದರು.
ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ಕುಂದಾಪುರದ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಣೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗಿಳಿಯಾರು ಕುಶಲ ಹೆಗ್ಡೆಯವರು ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತಿಕೆ ಉಳ್ಳವರು. ಅವರ ಹೆಸರಲ್ಲಿ ನಡೆಯುತ್ತಿರುವ ದತ್ತಿ ಸಂಸ್ಥೆ ಅತ್ಯಪೂರ್ವ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದೆ. ಸಾಧಕರನ್ನು ಗೌರವಿಸುತ್ತಿದೆ. ನಮ್ಮ ಕಾನ್ಫಿಡೆಂಟ್ ಡೆಂಟಲ್ ಇಕ್ವಿಪ್ಮೆಂಟ್ ಪ್ರೈ. ಲಿ. ವತಿಯಿಂದ ಈ ಟ್ರಸ್ಟ್ ಚಟುವಟಿಕೆಗೆ ನಿರಂತರ ಬೆಂಬಲ ನೀಡುತ್ತೇವೆ.” ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಬೆಂಗಳೂರು, ಜನರಲ್ ಮೆನೇಜರ್ ಡಾ| ದೀಪಕ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ‘ಗುರಿ ಸಾಧಿಸಬೇಕೆಂಬ ಆಸಕ್ತಿ, ಹಟ ಇದ್ದರೆ ಯಾವುದೇ ಸಮಸ್ಯೆ ಇದ್ದರೂ ಎದುರಿಸಿ ಗೆಲ್ಲಲು ಸಾಧ್ಯವಿದೆ.’ ಎಂದು ಪೊಲೀಸ್ ಅಧಿಕಾರಿ ಎನ್. ಅಂಬಿಕಾ ಅವರ ಉದಾಹರಣೆ ನೀಡಿದರು. ಚಿಕ್ಕ ಪ್ರಾಯದಲ್ಲೇ ಮದುವೆಯಾಗಿ ಗಂಡನ ಮನೆ ಸೇರಿದಾಕೆ ಐಪಿಎಸ್ ಅಧಿಕಾರಿಯಾಗಬೇಕೆಂಬ ತೀವ್ರ ಆಸಕ್ತಿಯೊಂದಿಗೆ ಎಸ್. ಎಸ್. ಎಲ್. ಸಿ., ಪಿ. ಯು. ಸಿ. ಪದವಿ ಎಲ್ಲವನ್ನು ಖಾಸಗಿಯಾಗಿ ಪರೀಕ್ಷೆ ಕಟ್ಟಿ ತೇರ್ಗಡೆ ಹೊಂದಿ ನಂತರ ಐಪಿಎಸ್ ಪರೀಕ್ಷೆಯಲ್ಲೂ ತೇರ್ಗಡೆ ಪಡೆದು ಮುಂಬೈಯಲ್ಲಿ ಪೊಲೀಸ್ ಅಧಿಕಾರಿಯಾಗುತ್ತಾರೆ. ಇಂತಹ ಕನಸು ಕಂಡು ವಿದ್ಯಾರ್ಥಿಗಳು ಗುರಿ ಸಾಧನೆ ಮಾಡಬೇಕು ಎಂದು ಅವರು ತಿಳಿಸಿದರು. ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ನ ಚಟುವಟಿಕೆಯನ್ನು ಅವರು ಕೊಂಡಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಜಿಲ್ಲಾ ಗವರ್ನರ್ ಸಿಎ ದೇವಾನಂದ್, ‘ದಿ. ಕುಶಲ ಹೆಗ್ಡೆಯವರೊಂದಿಗೆ ಇದ್ದ ಒಡನಾಟ ಸ್ಮರಿಸಿದರು. ಜೀವನದಲ್ಲಿ ನಾನು ಎಲ್ಲವನ್ನೂ ಕಲಿತೆ, ನನಗೆಲ್ಲ ತಿಳಿದಿದೆ ಅಂದುಕೊಂಡರೆ ಬದುಕು ಮುಗಿಯಿತು. ನಿರಂತರವಾಗಿ ಜ್ಞಾನ ಪಡೆಯುತ್ತಾ ಹೋದವರು ಕ್ರಿಯಾಶೀಲನಾಗಿರುತ್ತಾರೆ. ಗಿಳಿಯಾರು ಕುಶಲ ಹೆಗ್ಡೆಯವರು ಎಲ್ಲಾ ಕ್ಷೇತ್ರಗಳಲ್ಲಿ ಇದ್ದು, ನಿರಂತರವಾಗಿ ತಾನು ಇನ್ನಷ್ಟು ಕಲಿಯಲು ಇದೆ ಎಂದು ತಿಳಿದುಕೊಂಡವರು ಇದು ಜೀವನದ ಪಾಠ. ವಿದ್ಯಾರ್ಥಿಗಳು ಸಜ್ಜನಿಕೆಯಿಂದ ಅತಿಥಿಗಳ ಕಿವಿ ಮಾತುಗಳನ್ನು ಸ್ವೀಕರಿಸಿ ಪ್ರೇರಣೆ ಪಡೆಯಬೇಕು” ಎಂದರು.
ಪದವಿ ಪೂರ್ವ ಕಾಲೇಜು ಹಾಗೂ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕುಂದಾಪುರ ಭಾರತೀಯ ರೆಡ್ ಕ್ರಾಸ್ ಘಟಕ, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಯಶಸ್ವಿ ಕಲಾ ವೃಂದ ಕೊಮೆ, ತೆಕ್ಕಟ್ಟೆ ಸಂಘಟನೆಗಳ ಸೇವಾ ಸಾಧನೆ ಪರಿಗಣಿಸಿ ಗೌರವಿಸಲಾಯಿತು. ರೆಡ್ ಕ್ರಾಸ್ ಕುಂದಾಪುರದ ಸಭಾಪತಿ ಜಯಕರ ಶೆಟ್ಟಿ, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್ ಹಾಗೂ ಯಶಸ್ವಿ ಕಲಾ ವೃಂದ ಕೊಮೆ ತೆಕ್ಕಟ್ಟೆ ಸಂಚಾಲಕ ವೆಂಕಟೇಶ ವೈದ್ಯ ಸನ್ಮಾನ ಸ್ವೀಕರಿಸಿದರು.
ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಗೆ ಟ್ರಸ್ಟ್ನಿಂದ ನೀಡಿದ ದೇಣಿಗೆಯನ್ನು ಖಜಾಂಚಿ ಕೆ. ಆರ್. ನಾಯ್ಕ್ ಸ್ವೀಕರಿಸಿದರು.
ಎಸ್. ಎಸ್. ಎಲ್. ಸಿ. ಹಾಗೂ ದ್ವಿತೀಯ ಪಿ. ಯು. ಸಿ. ಯಲ್ಲಿ ಶೇಕಡಾ 95%ಕ್ಕಿಂತ ಹೆಚ್ಚು ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಯಿತು. ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ನ ವಿಶ್ವಸ್ಥರಾದ ಉದಯ ಹೆಗ್ಡೆ ಸ್ವಾಗತಿಸಿದರು. ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ನ ವಿಶ್ವಸ್ಥರಾದ ಜಿ. ಸಂತೋಷ ಕುಮಾರ್ ಶೆಟ್ಟಿ, ಕೆ. ನಾರಾಯಣ ಹಾಗೂ ಹಂದಕುಂದ ಸೋಮಶೇಖರ ಶೆಟ್ಟಿ ಸಹಾಯ ಧನ ಪಡೆಯುವ ವಿದ್ಯಾರ್ಥಿಗಳ ವಿವರಣೆ ನೀಡಿದರು.
ವಿಶ್ವಸ್ಥರಾದ ಕಿಶೋರ್ ಹೆಗ್ಡೆ, ಸ್ವರೂಪ್ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಪೈಪೋಟಿ ಮಾಡುವುದಲ್ಲ, ಬೇರೆ ದೇಶದಲ್ಲಿರುವ ಪ್ರತಿಭಾವಂತರೊಂದಿಗೆ ಪೈಪೋಟಿ ನಡೆಸುವ ಕನಸು ಕಾಣಬೇಕು. ಅವಕಾಶಗಳು ವಿಫುಲವಾಗಿವೆ. ದೊಡ್ಡ ಕನಸುಗಳನ್ನು ಕಾಣಬೇಕು. ಸಾಧನೆ ಮಾಡಿದ ಮೇಲೆ ಸಮಾಜಕ್ಕಾಗಿ ಏನಾದರೂ ಮಾಡಬೇಕು. -ಡಾ| ದೀಪಕ್ ಶೆಟ್ಟಿ .





