

ಶ್ರೀನಿವಾಸಪುರ, ಜೂನ್ 24: “ಆರ್ಯವೈಶ್ಯ ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ವಾಸವಿ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ನಾವು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಈ ಬಾರಿ ಆದರೂ ಸರ್ಕಾರ ಇದಕ್ಕೆ ಸ್ಪಂದಿಸಬೇಕೆಂದು ನಿರೀಕ್ಷಿಸುತ್ತೇವೆ,” ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಕುಮಾರ್ ಹೇಳಿದರು.
ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕನ್ಯಕಾಪರಮೇಶ್ವರಿ ದೇವಾಲಯದ ೩೪ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಮೇಲುಕ್ವೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
ರಾಜ್ಯದಾದ್ಯಂತ ಸಮುದಾಯಕ್ಕೆ ಸೇರಿದ ೨೫೬ ಕಲ್ಯಾಣ ಮಂಟಪಗಳು, ೧೦೨ ಶಾಲೆಗಳು ಹಾಗೂ ೮೦ ಸಹಕಾರ ಬ್ಯಾಂಕ್ಗಳಿವೆ ಎಂಬುದಾಗಿ ವಿವರಿಸಿದ ಅವರು, “ವಿಧವಾ ವೇತನ ರೂ.೧,೫೦೦ನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ ೧೨೦೦ ಲ್ಯಾಪ್ಟಾಪ್ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ,” ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಉದ್ಧೇಶಿಸಿ ಮಾತನಾಡಿದ ಅವರು, “ನಿಮ್ಮ ಶಿಕ್ಷಣದ ಮೂಲಕ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಸಮುದಾಯದ ಅಭಿವೃದ್ಧಿಗೆ ಕಾಲಕೊಡಿರಿ,” ಎಂದು ಸಲಹೆ ನೀಡಿದರು.
ಅಧ್ಯಕ್ಷ ವೈ.ಆರ್. ಶಿವಪ್ರಕಾಶ್ ಮಾತನಾಡಿ, “ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯಕ್ಕಾಗಿ ಹಲವಾರು ಕನಸುಗಳನ್ನು ಹೊತ್ತಿದ್ದಾರೆ. ಮಕ್ಕಳು ತಮ್ಮ ಹಿತಕ್ಕಾಗಿ ಆ ಕನಸುಗಳನ್ನು ನನಸಾಗಿಸಲು ಶ್ರಮಿಸಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರ್ಯಾಪಿಡೋ ಸರ್ವಿಸಸ್ ಸಂಸ್ಥಾಪಕ ಎಸ್.ಆರ್. ರಿಷಿಕೇಶ್, ಯುಪಿಎಸ್ಸಿ ಪರೀಕ್ಷೆಯಲ್ಲಿ ಶ್ರೇಷ್ಠ ಸ್ಥಾನ ಪಡೆದ ಡಾ. ಮಾದವಿ ಆರ್., ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಉತ್ತೀರ್ಣ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಹಾಮಂಡಳಿ ಕಾರ್ಯಕಾರಿ ಸಮಿತಿಯ ಎಸ್.ಆರ್. ಅಮರನಾಥ್, ಎಂ.ಆರ್. ಆನಂದ್, ಶ್ರೀನಿವಾಸಪುರ ಆರ್ಯವೈಶ್ಯ ದೇವಾಲಯದ ಅಧ್ಯಕ್ಷ ವೈ.ಆರ್. ನಾಗೇಂದ್ರಬಾಬು, ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳ, ಯುವಜನ ಸಂಘದ ಅಧ್ಯಕ್ಷ ಪೃಥ್ವಿ ಹಾಗೂ ಸಮುದಾಯದ ಹಲವಾರು ಗಣ್ಯರು ಉಪಸ್ಥಿತರಿದ್ದರು.


