

ಶ್ರೀನಿವಾಸಪುರ: ಆಧುನಿಕ ಶಿಕ್ಷಣ ಪದ್ಧತಿಗೆ ತಕ್ಕಂತೆ ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತಿರುವ ತರಬೇತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶಾಲೆಗಳಲ್ಲಿ ಬೋಧನಾ ವಿಧಾನವನ್ನು ಸುಧಾರಿಸಿ, ಮಕ್ಕಳ ಸಮಗ್ರ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಬಿ.ಸಿ. ಮುನಿಲಕ್ಷ್ಮಯ್ಯ ಕರೆ ನೀಡಿದರು.
ಶ್ರೀನಿವಾಸಪುರ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪಿಎಬಿ ಅನುಮೋದಿತ ಸೇವಾ ನಿರತ ಶಿಕ್ಷಕರ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುನಿಲಕ್ಷ್ಮಯ್ಯ, ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಸಿ. ವಸಂತ ಮಾತನಾಡಿ ಶಿಕ್ಷಣ ನಿಂತ ನೀರಲ್ಲ; ಕಾಲದ ಬದಲಾವಣೆಗೆ ಅನುಗುಣವಾಗಿ ಇದು ನಿರಂತರವಾಗಿ ರೂಪಾಂತರಗೊಳ್ಳುತ್ತದೆ. ಶಿಕ್ಷಕರ ಬೋಧನಾ ಕೌಶಲ್ಯ ಹೆಚ್ಚಿಸಲು ಓದು ಕರ್ನಾಟಕ, ಗಣಿತಗಣಕ, ಮರುಸಿಂಚನ, ವೃತ್ತಿ ಮಾರ್ಗದರ್ಶನ ಸೇರಿದಂತೆ ಹಲವಾರು ತರಬೇತಿಗಳನ್ನು ಇಲಾಖೆ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಸ್. ರೆಡ್ಡೆಪ್ಪ, ಪ್ರಧಾನ ಕಾರ್ಯದರ್ಶಿ ಕೆ. ರಘುನಾಥ್ ರೆಡ್ಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್, ಸದಸ್ಯರು ಬಿ.ವಿ. ಅನಿತಾ, ಡಿ.ವಿ. ವೆಂಕಟರಾಮರೆಡ್ಡಿ, ಇಸಿಓಗಳಾದ ಸುಬ್ರಮಣಿ, ವೆಂಕಟರಮಣಪ್ಪ, ಬಿಆರ್ಪಿಗಳಾದ ವೆಂಕಟಾಚಲಪತಿ, ಮಧುಕುಮಾರ್, ಪ್ರಧಾನ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್, ಚನ್ನಪ್ಪ, ಡಿ.ಪಿ. ಶಿವರಾಘವರೆಡ್ಡಿ ಹಾಗೂ ತರಬೇತಿನಿರತ ಶಿಕ್ಷಕರು ಭಾಗವಹಿಸಿದ್ದರು.

