

ಶ್ರೀನಿವಾಸಪುರ : ಪ್ರತಿ ವರ್ಷ ಅವರೇಕಾಯಿ ಋತುಮಾನ ಆರಂಭವಾಗುವ ಮೊದಲೇ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ವ್ಯಾಪಾರ ವಹಿವಾಟು ಸಾರ್ವಜನಿಕ ಸ್ಥಳದಲ್ಲಿ ನಡೆಯುವಾಗ ಟ್ರಾಪಿಕ್ ಸಮಸ್ಯೆ ಜೊತೆಗೆ ಹರಾಜು ಪಕ್ರಿಯೆ ಮೂರೇ ನಿಮಿಷದಲ್ಲಿ ಮುಗಿಸಿ 100 ರೂ ಬೆಲೆ ಇದ್ದರೆ 50 ರೂ ಗೆ ಮಾರಾಟ ಮಾಡಿ ವ್ಯಾಪಾರಸ್ಥರ ಜೊತೆ ಮಂಡಿ ಮಾಲೀಕರು ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ಕೃಷಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಪರವಾನಗಿ ಪಡೆದ ಮಂಡಿ ಮಾಲೀಕರು ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರತಿ ವರ್ಷ ಪಟ್ಟಣದಲ್ಲಿ ಅವರೇಕಾಯಿ ವಹಿವಾಟನ್ನು ನಡೆಸುವ ಮುಖಾಂತರ ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಶುಲ್ಕಕ್ಕೆ ಕತ್ತರಿ ಹಾಕುತ್ತಿದ್ದರು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಾಪತ್ತೆ ಆಗಿದ್ದಾರೆಂದು ಆರೋಪ ಮಾಡಿದರು.
4 ತಿಂಗಳು ಬೆವರು ಸುರಿಸಿ ಬಿಸಿಲು ಗಾಳಿ ಮಳೆ ಎನ್ನದೆ ಕಷ್ಟ ಪಟ್ಟು ರೋಗಗಳು ಹುಳುಗಳ ಹಾವಳಿಯಿಂದ ರಕ್ಷಣೆ ಮಾಡಿಕೊಂಡಿರುವ ಅವರೇಕಾಯಿ ರೈತರಿಗೆ ಸೂಕ್ತವಾದ ಮಾರುಕಟ್ಟೆಯನ್ನು ಒದಗಿಸುವಲ್ಲಿ ತಾಲ್ಲೂಕು ಆಡಳಿತ ಕೃಷಿ ಉತ್ಪನ್ನ ಹಾಗೂ ನಗರಸಭೆ ಅಧಿಕಾರಿಗಳು ವಿಪಲವಾಗಿದ್ದಾರೆಂದು ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಒಂದು ತಿಂಗಳಲ್ಲಿ ಪ್ರಾರಂಭವಾಗುವ ಅವರೆಕಾಯಿ ವಹಿವಾಟನ್ನು ಪಟ್ಟಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಿ ಇಲ್ಲವೇ ಸೂಕ್ತವಾದ ಜಾಗವನ್ನು ಗುರುತಿಸಿ ಹರಾಜಿನಲ್ಲಿ ರೈತರಿಗೆ ಆಗುತ್ತಿರುವ ಮೋಸವನ್ನು ತಪ್ಪಿಸುವ ಜೊತೆಗೆ ಟ್ರಾಪಿಕ್ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ತಾಲ್ಲೂಕಾಡಳಿತವನ್ನು ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ತರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಒಂದು ತಿಂಗಳೊಳಗೆ ಅವರೇಕಾಯಿ ಸುಗ್ಗಿ ಪ್ರಾರಂಭವಾಗುತ್ತಿದ್ದು, ಪ್ರತಿದಿನ ನೂರಾರು ಟನ್ ಅವರೆಕಾಯಿ ತುಂಬಿಕೊಂಡು ಬರುವ ಟ್ರಾಕ್ಟರ್, ಟೆಂಪೆÇೀ ಮತ್ತಿತರ ವಾಹನಗಳಿಂದ ಅಧಿಕ ಟ್ರಾಫಿಕ್ ಸಂಚಾರ ಹೆಚ್ಚಾಗಿ ತುರ್ತು ಪರಿಸ್ಥಿತಿಯಲ್ಲಿ ಬರುವ ಆಂಬ್ಯುಲೆನ್ಸ್ ಮತ್ತಿತರ ವಾಹನಗಳಿಗೆ ಅವರೆಕಾಯಿ ವ್ಯಾಪಾರಸ್ಥರಿಂದ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ರೈತರ ಅಭಿವೃದ್ಧಿಗಾಗಿ ಹಾಗೂ ರೈತರು ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳದೆ ಮಂಡಿ ಮಾಲೀಕರು ರೈತರಿಗೆ ವಂಚನೆ ಮಾಡಲು ನಗರದಲ್ಲಿ ವಹಿವಾಟು ನಡೆಸಿ ತೂಕ ಹಾಗೂ ಬೆಲೆಯಲ್ಲೂ ಮೋಸ ಮಾಡಿ ಕಾನೂನು ಬಾಹಿರ 10ರೂಪಾಯಿ ಮೀಟರ್ ಬಡ್ಡಿ ದಂಧೆಯಂತೆ ಕಮೀಷನ್ ಕೊಳ್ಳೆ ಹೊಡೆಯುತ್ತಿದ್ದಾರೆಂದು ಆರೋಪ ಮಾಡಿದರು.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಮಾವು ಹಾಗೂ ಟೊಮೇಟೊ ಅವಕ ಮಾರುಕಟ್ಟೆಗೆ ಬರುತ್ತಿದ್ದು, ಮುಂಜಾಗೃತವಾಗಿ ಮಾವು, ಟೊಮೇಟೊ ಬೆಳೆಗಾರರಿಗೆ ಹಾಗೂ ದಲ್ಲಾಳರಿಗೆ ತೊಂದರೆಯಾಗದ ರೀತಿ ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗುಣಮಟ್ಟದ ಊಟ ದೊರೆಯುವಂತೆ ಜಾಗೃತಿ ವಹಿಸಿ ಅವರೇಕಾಯಿ ವಹಿವಾಟಿಗೆ ಸೂಕ್ತ ಸ್ಥಳ ಗುರುತಿಸಿ ಇಲ್ಲವೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಇಲ್ಲವಾದರೆ ನ್ಯಾಯಕ್ಕಾಗಿ ಅವರೇಕಾಯಿ ಜಾನುವಾರುಗಳ ಸಮೇತ ಇಂದ್ರ ಭವನ್ ವೃತ್ತದಲ್ಲಿ ಸಂತೆ ನಡೆಸುವ ಮೂಲಕ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಪತ್ರಿಕಾ ಹೇಳಿಕೆ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವ, ವೆಂಕಟ್, ಶೇಷಾದ್ರಿ, ಸಹದೇವಣ್ಣ, ಷೇಕ್ ಷಫೀಉಲ್ಲಾ, ವೆಂಕಟೇಶ್, ಯಾರಂಘಟ್ಟ ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಶ್ರೀಕಾಂತ್ ಮುಂತಾದವರು ಇದ್ದರು.

