

ಹಂಗಾರಕಟ್ಟೆ; ಕಥೆ, ಕವನಗಳು ಅನುಭವ ಜನ್ಯವಾಗಿದ್ದು, ಪ್ರತಿಯೊಬ್ಬರು ಪಾಲ್ಗೊಳಿಸುವ ಒಂದು ಪ್ರಕ್ರಿಯೆಯಾಗಿದ್ದು, ಎಲ್ಲಾ ಪ್ರದರ್ಶನ ಪ್ರಕಾರಗಳು ಕಥೆ ಹೇಳುವುದರ ವಿಸ್ತರಣೆಯಾಗಿದೆ ಮತ್ತು ವ್ಯಕ್ತಿಯ ಭಾವನೆಗಳನ್ನು ಸಮರ್ಪಕವಾಗಿ ಹಂಚಿಕೊಳ್ಳುವುದು ಈ ಕಥೆ ಹೇಳುವುದರಿಂದ ಹೆಚ್ಚು ಪ್ರಭಾವ ಬೀರುತ್ತದೆ. ಕಥೆ ಹೇಳುವ ಮತ್ತು ಕೇಳುಗರ ಮಧ್ಯೆ ವಿಶಿಷ್ಟ ಸಂವಹನ ಹಾಗೂ ಬಾಂಧವ್ಯ ಬಾರೀ ಬೇಗ ಹುಟ್ಟಿಕೊಳ್ಳುತ್ತದೆ ಎಂದು ನಾಗರಾಜ ಪಟಗಾರ್, ಅಧ್ಯಕ್ಷರು ಗ್ರಾಮ ಪಂಚಾಯತ್ ಮರವಂತೆ ಇವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ಕಥೆ ಕವನ ರಚನಾ ಕಾರ್ಯಗಾರ 2025 ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ವೆಂಕಟರಮಣ ಖಾರ್ವಿ, ಅಧ್ಯಕ್ಷರು, ಶ್ರೀರಾಮ ಕನ್ನಡ ಖಾರ್ವಿ ಸೇವಾ ಸಮಿತಿ ಮರವಂತೆ ಮಾತನಾಡಿ, ಮಕ್ಕಳಲ್ಲಿ ವಿವಿಧ ಭಾವನೆಯು ಅನುಭವಕ್ಕೆ ಬಂದು ಹೊಸ ಸಾಧ್ಯತೆಗೆ ಹೆಚ್ಚು ಒತ್ತು ನೀಡುತ್ತದೆ ಮತ್ತು ಮಕ್ಕಳಲ್ಲಿ ಮೌಲ್ಯಗಳನ್ನು ಅಳವಡಿಸಲು ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎಂದರು. ಅಲ್ಲದೇ, ಕಥೆ ಹೇಳುವುದು ಈ ಭೂಮಂಡಲದಲ್ಲಿರುವ ಅತ್ಯಂತ ಮೌಖಿಕ ಪರಂಪರೆಯ ಅಪಾರ ಜ್ಞಾನ ಭಂಡಾರವಾಗಿದ್ದು, ಸಮಾಜದಲ್ಲಿರುವ ಅನೇಕ ಅಸಮಾನತೆಯನ್ನು ಪ್ರತಿನಿಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಸುಮನ ಹೇರ್ಳೆ ಇವರು ಮಾತನಾಡಿ ನಾವೆಲ್ಲರೂ ಬೇರೆ ಬೇರೆ ಸನ್ನಿವೇಶದಲ್ಲಿ ನಮ್ಮ ಭಾವನೆಯನ್ನು ವ್ಯಕ್ತಪಡಿಸುವುದರ ಜೊತೆಗೆ ಹೇಳುವ ಮತ್ತು ಕೇಳುವ ಪ್ರಕ್ರಿಯೆ ನಿರಂತರವಾಗಿದ್ದು ಈ ಭೂಮಂಡಲದಲ್ಲಿ ಇನ್ನು ಜೀವಂತವಾಗಿ ಉಳಿದ ಏಕಮಾತ್ರ ಪ್ರಕಾರವೇ ಕಥೆ ಹೇಳುವುದು ಎಂದು ವಿವರಿಸಿ ಮಕ್ಕಳಿಗೆ ಬೇರೆ ಬೇರೆ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕಥೆ ಕವನ ರಚನೆ ಮಾಡಲು ಪ್ರೇರಣೆ ನೀಡಿದರು. ಮಕ್ಕಳು ಸುಮಾರು 40ಕ್ಕೂ ಹೆಚ್ಚು ಕವನ ರಚಿಸಿದರು.
ಸಭಾಧ್ಯಕ್ಷತೆಯನ್ನು ನಿರ್ವಹಿಸಿದ ಸುಜಾತಾ ಮರವಂತೆ ಮಾತನಾಡಿ ಇಂತಹ ವಿಶಿಷ್ಟ ಕಾರ್ಯಾಗಾರವು ನಿರಂತರ ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆ ಸಿಗುತ್ತದೆ. ಅದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಮಯ್ಯ ಸ್ವಾಗತಿಸಿದರು. ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಮೇಶ ವಕ್ವಾಡಿ ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು. ದಿವ್ಯ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 85 ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.

