

ಬೈಂದೂರು ; ಉಡುಪಿ ಜಿಲ್ಲಾ ಜನವಾದಿ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಬೈಂದೂರು, ಸೋಮೇಶ್ವರ, ದೊಂಬೆ, ಕರಾವಳಿ ಮಾರ್ಗವಾಗಿ ಶಿರೂರಿಗೆ ಸರಕಾರಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಸಂಚರಿಸುವಂತೆ ವ್ಯವಸ್ಥೆ ಮಾಡಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆ, ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ನವಂಬರ್ 03 ರಂದು ಶಿರೂರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.
ಸಂಚಾಲಕಿ ನಾಗರತ್ನ ನಾಡ ರವರು ಮಾತನಾಡಿ ಈ ಹಿಂದೆ ಜುಲೈ 29 ರಂದು ಸ್ಥಳೀಯ ನಾಗರೀಕರೊಂದಿಗೆ ಹೋರಾಟ ನಡೆಸಿ ಮನವಿ ನೀಡಿದರೂ ಸಾರಿಗೆ ಪ್ರಾಧಿಕಾರವು ಇದುವರೆಗೆ ಸಂಚಾರ ವ್ಯವಸ್ಥೆಗೆ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಶೀಲಾವತಿಯವರು ಬೈಂದೂರು ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶವಾದ ದೊಂಬೆ, ಕರಾವಳಿ, ಶಿರೂರು, ಆಲಂದೂರು, ಗಂಗನಾಡು,ಕಾಲ್ತೋಡು, ಗೋಳಿಹೊಳೆ, ಕೊಲ್ಲೂರು ಮಾರ್ಗವಾಗಿ ಶೀಘ್ರವಾಗಿ ಸಾರಿಗೆ ಬಸ್ ಸಂಚಾರ ಆರಂಭಿಸಲು ಹಾಗೂ ಹೆಚ್ಚುವರಿ ಬಸ್ ಗಾಗಿ ಒತ್ತಾಯಿಸಿದರು.
ಬಳಿಕ ಮನವಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ, ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯವರ ಮುಖಾಂತರ ಸಲ್ಲಿಸಲಾಯಿತು.
ಹೋರಾಟದಲ್ಲಿ ಪದ್ಮಾವತಿ ಕರಾವಳಿ, ಶಾಂತಾ ಉಪ್ಪುಂದ, ಮಾಲತಿ, ಮೊದಲಾದವರಿದ್ದರು.
ಪದ್ಮಾವತಿ ಶಿರೂರು ಸ್ವಾಗತಿಸಿ ವಂದಿಸಿದರು.

