

ಬೆಂಗಳೂರು : ಕೆಎಸ್ಆರ್ಟಿಸಿ ನಿಗಮದ ಸಿಬ್ಬಂದಿಗಳ ಮಕ್ಕಳು ಉನ್ನತ ವಿದ್ಯಾಭ್ಯಾಸದಲ್ಲಿ ಅಪೂರ್ವ ಸಾಧನೆ ಮಾಡಿ ಚಿನ್ನದ ಪದಕಗಳನ್ನು ಪಡೆದಿರುವುದು ತಿಳಿದ ತಕ್ಷಣ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ನಿಗಮದ ಕೇಂದ್ರ ಕಚೇರಿಗೆ ಆಹ್ವಾನಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಈ ಮೂಲಕ ಮುಂದಿನ ಸಾಧನೆಗಳಿಗೆ ಆತ್ಮವಿಶ್ವಾಸ ಮತ್ತು ಹುರುಪು ತುಂಬಿದರು.
ಇಂದು ನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಗಮದ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಕ್ಕಳು ಉನ್ನತ ಶಿಕ್ಷಣದಲ್ಲಿ ಶ್ರೇಷ್ಠ ಸಾಧನೆ ಮಾಡಿ ಚಿನ್ನದ ಪದಕ ಪಡೆದ 6 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂಸ್ಥೆಯ ವತಿಯಿಂದ ತಲಾ ರೂ.5,000 ಗೌರವಧನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಇದರ ಜೊತೆಗೆ ಸಚಿವ ರಾಮಲಿಂಗಾರೆಡ್ಡಿ ಅವರು ವೈಯಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲಾ ರೂ.20,000 ನಗದು ಬಹುಮಾನ ನೀಡಿ ಸನ್ಮಾನಿಸಿದರು.
ಸನ್ಮಾನಿತ ವಿದ್ಯಾರ್ಥಿಗಳ ವಿವರಗಳು ಹೀಗಿವೆ:
ಕೆಂಗೇರಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುನಿರಾಜಪ್ಪ ಅವರ ಪುತ್ರಿ ಡಾ. ಗಗನ ಎಂ., ಎಂಬಿಬಿಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಪುತ್ತೂರು ವಿಭಾಗದ ಚಾಲಕ-ನಿರ್ವಾಹಕರಾಗಿರುವ ರೇಣುಕಾಚಾರ್ಯ ಅವರ ಪುತ್ರಿ ಕು. ವಿಸ್ಮಯ ಟಿ.ಆರ್., ಎಂ.ಟೆಕ್ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ ಮಾಡಿ ಚಿನ್ನದ ಪದಕ ಗಳಿಸಿದ್ದಾರೆ.
ಚಿಕ್ಕಬಳ್ಳಾಪುರ ವಿಭಾಗದ ಸಂಚಾರ ನಿಯಂತ್ರಕ ಮಹಬೂಬ್ ಸಾಬ್ ಹೆಚ್. ಅವರ ಪುತ್ರಿ ಕು. ರೂಫಿಯಾ ಕೆ.ಎಂ., ಎಂಎಸ್ಸಿ ಪರೀಕ್ಷೆಯಲ್ಲಿ 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗದ 6ನೇ ಘಟಕದಲ್ಲಿ ಚಾಲಕ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿರುವ ಪದ್ದವ್ವ ಗಣಿ ಅವರ ಪುತ್ರ ಕು. ಸತೀಶ್ ಕುಮಾರ್ ದೊಡ್ಡಮನಿ, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (ಡ್ರಾಮಾ) ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಮೈಸೂರು ನಗರ ವಿಭಾಗದ ನಂಜನಗೂಡು ಘಟಕದ ಚಾಲಕ-ನಿರ್ವಾಹಕ ಅಕ್ರಂ ಪಾಷ ಅವರ ಪುತ್ರಿ ಡಾ. ಸಾನಿಯಾ ಬಿ.ಬಿ., ಬಿಎಡಿಎಸ್ ಪರೀಕ್ಷೆಯಲ್ಲಿ 7 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಪಡೆದು ಗಮನಸೆಳೆದಿದ್ದಾರೆ.
ಮೈಸೂರು ಗ್ರಾಮಾಂತರ ವಿಭಾಗದ ನಿರ್ವಾಹಕ ತಾಯಬ್ ಅಹ್ಮದ್ ಅವರ ಪುತ್ರಿ ಕು. ಟಿ. ಹರ್ಮೀನ್, ಬಿಎಸ್ಸಿ ಪರೀಕ್ಷೆಯಲ್ಲಿ 6 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೂಲ ಮಂತ್ರಗಳು ಎಂದು ಹೇಳಿದರು.
ವಿಜ್ಞಾನ, ತಂತ್ರಜ್ಞಾನ, ಕಲೆ, ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರವಾಗಿರಲಿ, ಆಸಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ಶ್ರೇಷ್ಠತೆ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಚಾಲನಾ ಹಾಗೂ ತಾಂತ್ರಿಕ ಸಿಬ್ಬಂದಿಗಳು ಸಾರ್ವಜನಿಕ ಸೇವೆಗೆ ತಮ್ಮ ಜೀವನದ ಬಹುಪಾಲು ಸಮಯವನ್ನು ಮೀಸಲಿಡುತ್ತಾರೆ.
ಕುಟುಂಬಕ್ಕೆ ಸಮಯ ಕೊಡಲು ಕಷ್ಟಸಾಧ್ಯವಾದರೂ, ಪೋಷಕರ ಶ್ರಮವನ್ನು ಅರ್ಥ ಮಾಡಿಕೊಂಡು ಮಕ್ಕಳು ಉತ್ತಮ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿ ಚಿನ್ನದ ಪದಕಗಳ ಮೂಲಕ ಕುಟುಂಬಕ್ಕೂ ನಿಗಮಕ್ಕೂ ಗೌರವ ತಂದಿರುವುದು ಶ್ಲಾಘನೀಯ ಎಂದು ಹೇಳಿದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಿದ ಎಲ್ಲಾ ಪೋಷಕರಿಗೂ ಅವರು ಅಭಿನಂದನೆ ಸಲ್ಲಿಸಿದರು.
ನಿಮ್ಮ ಜ್ಞಾನವನ್ನು ವೈಯಕ್ತಿಕ ಲಾಭಕ್ಕೆ ಮಾತ್ರವಲ್ಲದೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಿದಾಗ ಯಶಸ್ಸು ಖಂಡಿತ ನಿಮ್ಮದಾಗುತ್ತದೆ. ನಿಮ್ಮ ಭವಿಷ್ಯ ಪ್ರಕಾಶಮಾನವಾಗಲಿ ಎಂದು ಸಚಿವರು ಹಾರೈಸಿದರು.
ಈ ಸಂದರ್ಭದಲ್ಲಿ ನಿಗಮದಲ್ಲಿನ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಸಾರಿಗೆ ವಿದ್ಯಾಚೇತನ ಯೋಜನೆ’ಯ ಕುರಿತು ಮಾಹಿತಿ ನೀಡಲಾಗಿದ್ದು, ಈ ಯೋಜನೆಯಡಿ ಇದುವರೆಗೂ 5,450 ವಿದ್ಯಾರ್ಥಿಗಳಿಗೆ ಒಟ್ಟು ರೂ.2.76 ಕೋಟಿ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂ.ಮ.ಸಾ. ಸಂಸ್ಥೆಯ ಅಧ್ಯಕ್ಷ ವಿ.ಎಸ್. ಆರಾಧ್ಯ, ಕರಾರಸಾ ನಿಗಮದ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ (ಭಾಆಸೇ), ನಿರ್ದೇಶಕಿ ಡಾ. ನಂದಿನಿದೇವಿ ಕೆ. (ಸಿ ಮತ್ತು ಜಾ) ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

