

ಶ್ರೀನಿವಾಸಪುರ : ಪಟ್ಟಣದ ಅವರೆಕಾಯಿ ಮಾರುಕಟ್ಟೆ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದ ನಡುವೆ, ಕಾಂಗ್ರೆಸ್ ಮುಖಂಡ ಬಿ.ಎಲ್. ಪ್ರಕಾಶ್ ಸುದ್ದಿಗೋಷ್ಠಿ ನಡೆಸಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು.
ಕಳೆದ ೪೦–೫೦ ವರ್ಷಗಳಿಂದ ರೈತರು ಇದೇ ಸ್ಥಳದಲ್ಲಿ ಅವರೆಕಾಯಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವು ಮುಖಂಡರು ಹಾಗೂ ಸಂಘಟನೆಗಳು ಮಾರುಕಟ್ಟೆಗೆ ಬಂದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದಿದ್ದರೆ ಹೋರಾಟ ನಡೆಸುವುದಾಗಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮಾರುಕಟ್ಟೆಯನ್ನು ಬೇರೆಡೆಗೆ ವರ್ಗಾಯಿಸಿದರೆ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಯಾಗಲಿದೆ. ದಯವಿಟ್ಟು ಸ್ಥಳಾಂತರ ಮಾಡಬಾರದು ಎಂದು ಕೆಲ ರೈತರು ಇದೇ ವೇಳೆ ಮನವಿ ಸಲ್ಲಿಸಿದರು. ಸಾರ್ವಜನಿಕರಿಗೆ ಸಂಚಾರದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವ್ಯಾಪಾರ ನಡೆಸಲು ತಾವು ಸಿದ್ಧರಿದ್ದೇವೆ ಎಂದು ರೈತರು ತಿಳಿಸಿದರು.
ಒಟ್ಟಾರೆಯಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹಿಸುತ್ತಿರುವ ಸಂಘಟನೆಗಳು ಮತ್ತು ತಮ್ಮ ಜೀವನೋಪಾಯದ ಹಿತ ಕಾಯಲು ಮುಂದಾಗಿರುವ ರೈತರು—ಈ ಇಬ್ಬರ ನಡುವಿನ ಸಂಘರ್ಷ ಇದೀಗ ಜಿಲ್ಲಾಡಳಿತದ ಅಂಗಳಕ್ಕೆ ಬಂದು ತಲುಪಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಅಕ್ಬರ್ ಶರೀಫ್, ಸರ್ದಾರ್, ಮುನಾವರ್, ಜಾವೀದ್, ಸಿ.ಆರ್.ಟಿ. ವೆಂಕಟರಾಮರೆಡ್ಡಿ, ರಘು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

