

ಕೋಲಾರ: ಕೋಲಾರದಲ್ಲಿ ಶನಿವಾರ ವಾಸವಿ ದೇವಾಲಯಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ, ವಾಸವಿ ಗೀತೆ ರಚನೆಕಾರರಾದ ಮುಳಗಾಗಿಲಿನ ವಾಸವಿ ಸಹೋದರರನ್ನು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಸನ್ಮಾನಿಸಿದರು.
ಗಮನ ಸೆಳೆದ ವಾಸವಿ ಗೀತೆ: ಗೀತೆ ರಚಿಸಿದ ವಾಸವಿ ಸಹೋದರರಿಗೆ ಸನ್ಮಾನ ಆರ್ಯವೈಶ್ಯ ಸಮುದಾಯ ಸಮಾಜದ ಎಲ್ಲ ರಂಗಗಳಲ್ಲೂ ಮುಂದೆ ಬರಬೇಕು. ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದು ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಹೇಳಿದರು.
ಕೋಲಾರದ ವಾಸವಿ ದೇವಾಲಯಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ವಾಸಗಿ ಗೀತೆ ರಚನೆ ಮೂಲಕ ಸಮುದಾಯದ ಮನೆ ಮಾತಾಗಿರುವ ಮುಳಗಾಗಿಲಿನ ವಾಸವಿ ಸಹೋದರನ್ನು ಸನ್ಮಾನಿಸಿ ಮಾತನಾಡಿದರು.
ಸಮುದಾಯದಲ್ಲಿ ಕಲೆ, ಸಾಹಿತ್ಯ, ಸಂಗೀತ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಅದು ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅಂಥ ಸಾಧಕರನ್ನು ಗುರುತಿಸಿ ಗೌರವಿಸಬೇಕಾದ ಹೊಣೆ ಸಮುದಾಯದ ಮೇಲಿದೆ.
ಸಮುದಾಯಕ್ಕೆ ಹೆಸರು ತಂದುಕೊಟ್ಟ ಪ್ರತಿಭಾವಂತರಿಗೆ ಕೈಲಾದ ನೆರವು ನೀಡಿ ಪ್ರೋತ್ಸಾಹಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಾಸವಿ ಅಮ್ಮನವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕುಂಭಾಭಿಷೇಕ ನೆರವೇರಿಸಲಾಯಿತು. ವಾಸವಿ ಬ್ರರ್ಸ್ ತಾವು ರಚಿಸಿದ ವಾಸವಿ ಗೀತೆಯನ್ನು ಸುಶ್ಯಾವ್ಯವಾಗಿ ಹಾಡಿದರು. ಭಕ್ತಾದಿಗಳು ಧ್ವನಿಗೂಡಿಸಿದರು.
ವಾಸವಿ ಅಂದರವಾಡು ಗ್ರೂಪ್ನ ಸದಸ್ಯರು ಗೀತಗಾಯನ ನಡೆಸಿಕೊಟ್ಟರು. ತಂಡದ ಸದಸ್ಯರನ್ನು ಸನ್ಮಾನಿಸಿ ಪಾರಿತೊಷಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದ ಮಹಿಳೆಯರಿಗೆ ಮಡಿಲು ತುಂಬಲಾಯಿತು.
ಸಮುದಾಯದ ಕೆ.ಆರ್.ಪದ್ಮ, ಸಿ.ವಿ.ಶ್ರೀನಿವಾಸ ಶೆಟ್ಟಿ, ರಾಣಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಸತೀಶ್, ಕಾರ್ಯಕಾರಿ ಮಂಡಳಿ ಸದಸ್ಯರು, ನಿರ್ದೇಶಕರು, ವಾಸವಿ ಮಹಿಳಾ ಮಂಡಳಿ ಸದಸ್ಯರು ಇದ್ದರು.

