

ಶ್ರೀನಿವಾಸಪುರ : ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸುಮಾರು ೫೦ ರಿಂದ ೬೦ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅವುಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಆರು ತಿಂಗಳೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ.
ಪಟ್ಟಣಾಭಿವೃದ್ಧಿಗಾಗಿ ಹೆಚ್ಚುವರಿಯಾಗಿ ೩೦ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ. ಪಟ್ಟಣದ ನಾಲ್ಕು ರಾಜಕಾಲುವೆಗಳ ದುರಸ್ಥಿಗೆ ಒಂದೂವರೆ ಕೋಟಿ ರೂ. ಮೀಸಲಿರಿಸಲಾಗಿದ್ದು, ಚರಂಡಿ ಶುದ್ಧೀಕರಣ ಮತ್ತು ದುರಸ್ಥಿಗೂ ಕ್ರಮ ಕೈಗೊಳ್ಳಲಾಗಿದೆ.
ನನ್ನ ಎಲ್ಲ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಅಧಿಕಾರಿಗಳಿಂದ ಸಂಪೂರ್ಣ ಸಹಕಾರ ಅಗತ್ಯ, ಎಂದು ಶಾಸಕರು ಹೇಳಿದರು.
ಶನಿವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರಾದ್ಯಾಂತ ಅಭಿವೃದ್ಧಿ ಕಾರ್ಯಗಳನ್ನು ಪಕ್ಷಾತೀತವಾಗಿ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಪ್ರಸ್ತಾಪಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಗೆ ಕ್ರಮ ಆರಂಭವಾಗಿದೆ. ಎಸ್ಸಿ, ಎಸ್ಟಿ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪನೆಗಾಗಿ ಯೋಜನೆಗಳು ರೂಪಗೊಂಡಿವೆ, ಎಂದು ಶಾಸಕರು ಹೇಳಿದರು.
ಅವರು ಮುಂದುವರಿದು, ಈಗಾಗಲೇ ಕ್ಷೇತ್ರಾದ್ಯಾಂತ ೪೦೦ ಹೈಮಾಕ್ಸ್ ಲೈಟ್ಗಳು ಅಳವಡಿಸಲಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಉಚಿತವಾಗಿ ೩೦೦ ಕೊಳವೆಬಾವಿಗಳು ಕೊರೆಯಲಾಗಿದೆ,” ಎಂದು ವಿವರಿಸಿದರು.
ಶ್ರೀನಿವಾಸಪುರ ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಸಂತೋಷದ ವಿಚಾರವಾಗಿದ್ದು, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯ. ಶಿಕ್ಷಕರ ಮತ್ತು ಪೋಷಕರ ಸಹಕಾರದಿಂದ ಇದು ಸಾಧ್ಯವಾಗಿದೆ, ಎಂದು ಶಾಸಕರು ಪ್ರಶಂಸಿಸಿದರು.
ತಹಶೀಲ್ದಾರ್ ಜಿ.ಎನ್. ಸುದೀಂದ್ರ ಮಾತನಾಡಿ, ಭಾಷೆ, ನುಡಿ, ಜಲ ಮತ್ತು ನೆಲ ಉಳಿಸಿಕೊಂಡರೆ ಬದುಕು ಉಳಿಯುತ್ತದೆ. ಕನ್ನಡವು ಪ್ರಾಚೀನ ಭಾಷೆ, ಅದನ್ನು ರಾಜ್ಯದ ಗಡಿಭಾಗಗಳಲ್ಲಿಯೂ ಕಾಪಾಡುವುದು ನಮ್ಮ ಕರ್ತವ್ಯ. ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ, ಎಂದರು.
ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ನಾಡು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಒಂದು ರಂಗಮಂದಿರ ನಿರ್ಮಾಣ ಅಗತ್ಯವಿದೆ. ಪುರಸಭೆ ಸ್ಥಳವನ್ನು ಒದಗಿಸಲು ಸಿದ್ಧವಾಗಿದೆ, ಎಂದು ಶಾಸಕರ ಗಮನಕ್ಕೆ ತಂದರು.
ಅವರು ಕಾರ್ಯಕ್ರಮದ ಆಯೋಜಕರಿಗೆ, ವಿದ್ಯಾರ್ಥಿಗಳು ಬಿಸಿಲಿನಲ್ಲಿ ಕುಳಿತುಕೊಳ್ಳದಂತೆ ಸೂಕ್ತ ವ್ಯವಸ್ಥೆ ಮಾಡಬೇಕು, ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಹಾಡು ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಸುನಿತಾ, ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಇಒ ಕೆ. ಸರ್ವೇಶ್, ಬಿಇಒ ಬಿ.ಸಿ. ಮುನಿಲಕ್ಷ್ಮಯ್ಯ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಮಹ್ಮದ್ ಗೊರವನಕೊಳ್ಳ, ಅಬಕಾರಿ ಇಲಾಖೆ ನಿರೀಕ್ಷಕಿ ಪುಷ್ಪ, ಪಿಡಬ್ಲ್ಯುಡಿ ಎಇಇ ಮಂಜುನಾಥ್, ವಾಟರ್ಬೋರ್ಡ್ ಎಇಇ ಸತೀಶ್ ರೆಡ್ಡಿ, ಬಿಆರ್ಸಿ ಕೆ. ವಸಂತ, ಟಿಪಿಒ ವೆಂಕಟಸ್ವಾಮಿ, ಪುರಸಭೆ ಸದಸ್ಯರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಈ ವೇಳೆ ಎಸ್ಎಫ್ಎಸ್ ಶಾಲೆಯ ವಿದ್ಯಾರ್ಥಿಗಳು ನೀಡಿದ ಅತ್ಯುತ್ತಮ ಸಾಂಸ್ಕೃತಿಕ ಪ್ರದರ್ಶನಕ್ಕೆ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಪ್ರಥಮ ಬಹುಮಾನ ನೀಡಿ ಅಭಿನಂದಿಸಿದರು.


