

ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ‘ಗುರುಪೂರ್ಣಿಮಾ ಮಹೋತ್ಸವ’ ಹಾಗೂ ಸಾಧಕರಿಗೆ ‘ಗುರುವಂದನಾ’ ಕಾರ್ಯಕ್ರಮವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತುಳಸಿ ಎಜುಕೇಶನ್ ಟ್ರಸ್ಟ್ನ ಮುಖ್ಯಸ್ಥರಾದ ಶ್ರೀ ಕೃಷ್ಣ ರಾಯ ಶಾನುಬಾಗ್ ಅವರು, “ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕು ನೀಡುವ ಗುರುಗಳು ಸಮಾಜದ ನಿಜವಾದ ದಾರಿದೀಪ. ಗುರು ಹಿರಿಯರನ್ನು ಗೌರವಿಸುವ ಹಾಗೂ ಅವರ ಮಾರ್ಗದರ್ಶನದಲ್ಲಿ ನಡೆಯುವ ಸಂಸ್ಕಾರವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಪಡುವಾಲ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಚ್. ಪ್ರಭಾಕರ್ ಶೆಟ್ಟಿ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿರುವ ಸಂಗೀತ ವಿದ್ವಾನ್ ಶ್ರೀ ಸತೀಶ್ ಅವರನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಫಲ-ಪುಷ್ಪ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಎಚ್. ಪ್ರಭಾಕರ್ ಶೆಟ್ಟಿ ಅವರು, ತಮ್ಮ ಶೈಕ್ಷಣಿಕ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಮೌಲ್ಯ ಮತ್ತು ಮಾರ್ಗದರ್ಶನ ನೀಡುವವರು ಗುರುಗಳು. ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ವಿಶೇಷ ಮನ್ನಣೆಯಿದೆ. ಇಂದಿನ ಯುವಜನತೆ ಜ್ಞಾನ ಪರಂಪರೆಯನ್ನು ಹೊಂದಿದ ಈ ನಾಡನ್ನು ತೊರೆದು ಬೇರೆ ದೇಶಕ್ಕೆ ಜ್ಞಾನರ್ಜನೆಗೆ ಹೋಗುತ್ತಿರುವುದು ವಿಪರ್ಯಾಸ. ಮಕ್ಕಳಿಗೆ ಗುರುಗಳ ಆಶೀರ್ವಾದ ಬೇಕು ಎಂದು ತಿಳಿಸಿದರು. ಮತ್ತೊಬ್ಬ ಅತಿಥಿ ಸಂಗೀತ ವಿದ್ವಾನ್ ಶ್ರೀ ಸತೀಶ್ ಭಟ್ ಮಾಳಕಪ್ಪ ಅವರು ಮಾತನಾಡಿ ಗುರುವಿನ ಮೇಲೆ ಶ್ರದ್ಧಾ ಭಕ್ತಿ ಇರಬೇಕು. ಹರ ಮುನಿದರೂ, ಗುರು ಕಾಯ್ವ ಎನ್ನುವಂತೆ ಗುರುವಿನ ಮೇಲೆ ನಂಬಿಕೆಯಿಡಿ ಎಂಬ ವಿಚಾರವನ್ನು ಮಕ್ಕಳಿಗೆ ಮನದಟ್ಟು ಮಾಡಿಸಿದರು.
ವೇದಿಕೆಯಲ್ಲಿ ತುಳಸಿ ವಿದ್ಯಾ ಮಂದಿರ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ರೇಷ್ಮ ಪ್ರದೀಪ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಗುರುವಿನ ಮಾರ್ಗದರ್ಶನವಿಲ್ಲದ ಜೀವನ ಅಪೂರ್ಣ ಎನ್ನುತ್ತಾ ಗುರುಗಳ ತ್ಯಾಗ, ಸೇವೆ ಮತ್ತು ಮಾರ್ಗದರ್ಶನವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕಿಯರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳು ವೇದ ವ್ಯಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗುರುಕಾಣಿಕೆಯನ್ನು ಅರ್ಪಿಸಿ ನಮಿಸಿದರು. ಗುರುಗೀತೆ ಹಾಗೂ ಗುರುಸ್ತುತಿಯನ್ನು ಹಾಡುವ ಮೂಲಕ ಗುರುವೃಂದದವರಿಗೆ ವಿಶೇಷ ಗೌರವವನ್ನು ವಿದ್ಯಾರ್ಥಿಗಳು ಸಲ್ಲಿಸಿದರು. ಕಾರ್ಯಕ್ರಮವನ್ನು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಮಾನ್ವಿ ಆಚಾರ್ಯ ನೆರವೇರಿಸಿಕೊಟ್ಟರು. ವಿದ್ಯಾರ್ಥಿನಿ ಅನ್ವಿತಾ ಸ್ವಾಗತಿಸಿ, ವಿದ್ಯಾರ್ಥಿ ಶ್ರವಂತ್ ವಂದನಾರ್ಪಣೆ ಸಲ್ಲಿಸಿದರು.


