


ಶ್ರೀನಿವಾಸಪುರ : ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆ ಹಾಗೂ ಹೊಸ ಟೌನ್ಶಿಪ್ಗಳ ಹೆಸರಿನಲ್ಲಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸಿದೆ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಎಂದರು.
ಪಟ್ಟಣದ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಗೆ ಒಳಪಡುವ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂಬತ್ತು ಕಂದಾಯ ಗ್ರಾಮಗಳ ಸುಮಾರು 9,640 ಎಕರೆ ಅತ್ಯಂತ ಫಲವತ್ತಾದ ನೀರಾವರಿ ಕೃಷಿ ಭೂಮಿಯನ್ನು ‘ಗ್ರೇಟರ್ ಬೆಂಗಳೂರು’ ಹಾಗೂ ಹೊಸ ಟೌನ್ಶಿಪ್ ಹೆಸರಿನಲ್ಲಿ ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕಳೆದ ಏಪ್ರಿಲ್ 2026 ರಲ್ಲಿಯೇ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತಿರುವ ಈ ದಮನಕಾರಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಈ ಧರಣಿಗೆ ಕರ್ನಾಟಕ ಪ್ರಾಂತ ರೈತ ಸಂಘವು ಪೂರ್ಣ ಬೆಂಬಲ ಘೋಷಿಸಿದ್ದು, ಮುಂಬರುವ ದಿನಗಳಲ್ಲಿ ಇದನ್ನು ರಾಜ್ಯ ಮಟ್ಟದ ಬೃಹತ್ ಜನಹೋರಾಟವಾಗಿ ರೂಪಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಎಚ್ಚರಿಸಿದ್ದಾರೆ.
ಮೇ 29ರಂದು ಬಿಡದಿಯಲ್ಲಿ ಬೃಹತ್ ಸಮಾವೇಶ
ಈ ಬೃಹತ್ ಪ್ರತಿಭಟನೆಯ ಅಂಗವಾಗಿ ಮುಂಬರುವ ಮೇ 29ನೇ ತಾರೀಖಿನಂದು ಬಿಡದಿಯಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮೈಸೂರು ಹಾಗೂ ಮಂಡ್ಯ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳ ಸಾವಿರಾರು ರೈತರು ಮತ್ತು ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಜಿಲ್ಲಾ ಅಧ್ಯಕ್ಷ ಎನ್.ಎನ್. ಶ್ರೀರಾಮ್ ಮಾತನಾಡಿ ಜಿಲ್ಲೆಯಿಂದ ಸಹಸ್ರಾರು ರೈತರ ಈ ಸಮಾವೇಶದಲ್ಲಿ ಭಾಗವಹಿಸಿಲಿದ್ದಾರೆಂದು ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್, ಜಿಲ್ಲಾ ಜಂಟಿ ಕಾರ್ಯದರ್ಶಿ ಜಿ.ಮಂಜುಳ, ಜಿಲ್ಲಾ ಪದಾಧಿಕಾರಿ ಶಿವರಾಜ್ಕುಮಾರ್ ಇದ್ದರು.

