

ಕುಂದಾಪುರ; ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಜನೌಷಧಿ ಕೇಂದ್ರವು ಮಾರ್ಚ್ ಒಂದರಿಂದ ಮಾರ್ಚ ಏಳರ ತನಕ 8ನೇ ಜನೌಷಧಿ ಸಪ್ತಾಹವನ್ನು ಕೇಂದ್ರದ ಸೂಚನೆಯಂತೆ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಉಡುಪಿ ಜಿಲ್ಲೆಯ ಪ್ರಪ್ರಥಮ ಜನೌಷಧಿ ಕೇಂದ್ರವಾದ ಈ ಸಂಸ್ಥೆ ರಾಜ್ಯದಲ್ಲಿ ನಾಲ್ಕನೆಯ ಅತೀ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಸಪ್ತಾಹದ ಸಂದರ್ಭದಲ್ಲಿ ಮಾರ್ಚ್ 2ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಇದರ ಉದ್ಘಾಟನೆಯ ಸಲುವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯ ಎಲಬು ಮತ್ತು ಮೂಳೆ ತಜ್ಞ ಡಾ. ಅರವಿಂದ್ ದೀಪ ಬೆಳಗಿಸಿ, ಜನ ಉಪಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೆಡ್ ಕ್ರಾಸನ ಜನೌಷಧಿ ಕೇಂದ್ರವನ್ನು ಶ್ಲಾಘಿಸಿದರು. ಕಡಿಮೆ ದರದಲ್ಲಿ ಗುಣಮಟ್ಟದ ಎಲ್ಲಾ ತರಹದ ಔಷಧಗಳನ್ನು ಜನರಿಗೆ ವಿತರಿಸುವ ಕಾರ್ಯ ಮಾಡುತ್ತಾ ಬಂದಿರುವ ಸಂಸ್ಥೆಗೆ ಹಾಗೂ ಜನೌಷಧಿ ಸಪ್ತಾಹಕ್ಕೂ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಪ್ರಾಂತ್ಯದ ಮಾರ್ಕೆಟಿಂಗ್ ಆಫೀಸರ್ ಶಿವಕುಮಾರ ಜನೌಷಧಿ ಕೇಂದ್ರದ ಧ್ಯೇಯೋದ್ದೇಶಗಳನ್ನು ಜನರಿಗೆ ವಿವರಿಸಿದರು. ಕುಂದಾಪುರ ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ರೆಡ್ ಕ್ರಾಸನ ಆಡಳಿತ ಮಂಡಳಿಯ ಸದಸ್ಯರಾದ ವೈ ಸೀತಾರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ ಡಿ ಕೋಸ್ಟ, ಖಜಾಂಜಿ ಶಿವರಾಮ ಶೆಟ್ಟಿ, ಬಯೋಲಿನ್ ಲೆಬೋರೇಟರಿಯ ಸೋಮನಾಥ್, ಜನೌಷಧಿ ಕೇಂದ್ರದ ಚಂದ್ರಶೇಖರ, ರಕ್ತನಿಧಿ ಕೇಂದ್ರ ಹಾಗೂ ಜನೌಷಧಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಬ್ಲಡ್ ಶುಗರ್, ಬ್ಲಡ್ ಪ್ರೇಶರ್, ಥೈರಾಯ್ಡ್ ಪರೀಕ್ಷೆಗಳನ್ನು 170ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಮಾಡಲಾಯಿತು. ಪ್ರತಿ ದಿನ 350 ರಿಂದ 400 ಮಂದಿ ಜನೌಷಧಿ ಕೇಂದ್ರಕ್ಕೆ ಭೇಟಿ ಕೊಡುತ್ತಿದ್ದು, ಹಿರಿಯ ಅರ್ಹ ನಾಗರಿಕರಿಗೆ ಉಚಿತವಾಗಿ ಪ್ರೋಟನ್ ಪೌಡರ್, ಡಯಪರ್ ನೀಡಲಾಯಿತು. ಎಲ್ಲರಿಗೂ ಸಿಹಿ ಹಂಚಲಾಯಿತು.

