

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕದ 2024-25ರ ಸಾಲಿನ 16ನೇ ವಾರ್ಷಿಕ ಮಹಾಸಭೆಯು 24-09-2025ರಂದು ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರ, ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದಲ್ಲಿ ಶ್ರೀಮತಿ ರಶ್ಮಿ ಎಸ್ ಆರ್, ಕುಂದಾಪುರ ಉಪವಿಭಾಗಾಧಿಕಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಘಟಕದ ಸಭಾಪತಿ ಬಸ್ರೂರು ಶ್ರೀ ರಾಜೀವ ಶೆಟ್ಟಿಯವರು ವೀಕ್ಷಕರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ರಕ್ತ ನಿಧಿ ಕೇಂದ್ರದ ಸಿಬ್ಬಂದಿಯವರ ಪ್ರಾರ್ಥನೆಯ ಮೂಲಕ ಮಹಾಸಭೆ ಪ್ರಾರಂಭವಾಯಿತು. ಉಪ ಸಭಾಪತಿ ಡಾ. ಉಮೇಶ ಪುತ್ರನ್ ಆಗಮಿಸಿದ ಅತಿಥಿಗಳನ್ನು, ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಭಾಷಣದಲ್ಲಿ ರೆಡ್ ಕ್ರಾಸ್ ಕುಂದಾಪುರ ತಾಲೂಕು ಘಟಕ ಸಾಧಿಸಿದ ಕೆಲವು ಮೈಲುಗಲ್ಲುಗಳ ಬಗ್ಗೆ ವಿವರ ನೀಡಿದರು ಹಾಗೂ ಕನಸಿನ ಯೋಜನೆಯಾದ ” ರೆಡ್ ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್” ಕುರಿತು ಪ್ರಸ್ತಾಪಿಸಿದರು. ಈ ವರ್ಷ ಸೇರ್ಪಡೆಯಾದ ಪೋಷಕ ಹಾಗೂ ಉಪ ಪೋಷಕ ಸದಸ್ಯರನ್ನು ಗುರುತಿಸಲಾಯಿತು.
ಗೌರವ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಪುರಾಣಿಕ 2024-25ರ ವಾರ್ಷಿಕ ಆಡಳಿತಾತ್ಮಕ ವರದಿ ಮಂಡಿಸಿ, ಅನುಮೋದನೆ ಪಡೆದರು. ಗೌರವ ಖಜಾಂಜಿ ಶ್ರೀ ಶಿವರಾಮ ಶೆಟ್ಟಿಯವರು 2024-25ರ ಸಾಲಿನ ಲೆಕ್ಕ ಪರಿಶೋಧನಾ ವರದಿ ಮಂಡಿಸಿ, ಅನುಮೋದನೆ ಪಡೆದರು. ಮತ್ತು 2025-26 ರ ಬಜೆಟ್ ಮಂಡಿಸಿ, ಅನುಮೋದನೆ ಪಡೆದರು. ರೆಡ್ ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಘಟಕದಿಂದ ಪಡೆದುಕೊಳ್ಳುವ ಸಾಲಕ್ಕೆ, ಜಾಗವನ್ನು ಭಧ್ರತೆಗಾಗಿ ಒತ್ತೆ ಇಡುವ ಪ್ರಕ್ರಿಯೆಗೆ ಅನುಮೋದನೆ ಪಡೆಯಲಾಯಿತು.
2025-2028ರ ಸಾಲಿನ ಕಾರ್ಯಕಾರಿ ಸಮಿತಿಗೆ ಹನ್ನೊಂದು ಸದಸ್ಯರ ಆಯ್ಕೆ ಪ್ರಕ್ರಿಯೆ ಒಮ್ಮತದಿಂದ ನಡೆಯಿತು. 2025-2028ರ ಸಾಲಿಗೆ ಲೆಕ್ಕ ಪರಿಶೋಧಕರಾಗಿ ಸಿ.ಎ. ಶಾಂತಾರಾಮ ನಾಯಕರ ನೇಮಕ ಸಭೆಯಲ್ಲಿ ಆಯಿತು.
ವೀಕ್ಷಕರಾಗಿ ಕಾರ್ಯ ನಿರ್ವಹಿಸಿ, ಮುಖ್ಯ ಅತಿಥಿ ನೆಲೆಯಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಘಟಕದ ಸಭಾಪತಿ ಬಸ್ರೂರು ಶ್ರೀ ರಾಜೀವ ಶೆಟ್ಟಿಯವರು ಸ್ಪೂರ್ತಿದಾಯಕವಾಗಿ ಮಾತನಾಡುತ್ತಾ, ಎಲ್ಲಾ ಸದಸ್ಯರನ್ನು ಹುರಿದುಂಬಿಸಿದರು. ಕುಂದಾಪುರ ತಾಲೂಕು ಘಟಕದ ಕಾರ್ಯದಕ್ಷತೆಯನ್ನು, ಒಗ್ಗಟ್ಟಿನ ಸೇವಾ ಮನೋಭಾವವನ್ನು ಕೊಂಡಾಡಿದರು. ರೆಡ್ ಕ್ರಾಸ್ ಹೋಮ್ ಯೋಜನೆಗೆ ರಾಜ್ಯ ಘಟಕದಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷರಾದ, ಕುಂದಾಪುರ ಉಪವಿಭಾಗಾಧಿಕಾರಿ ಶ್ರೀಮತಿ ರಶ್ಮಿ ಎಸ್ ಆರ್ ಮಾತನಾಡುತ್ತಾ, ಈಗ ಇರುವ ಆಡಳಿತ ಮಂಡಳಿಯ ಸೇವಾ ಸಮರ್ಪಣಾ ಮನೋಭಾವ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಇವರ ಉತ್ತಮ ಯೋಜನೆಯ ಜೊತೆ ತಾನು ಸದಾ ಇದ್ದೇನೆ ಹಾಗೂ ತನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಸಭೆಯನ್ನು ಉದ್ದೇಶಿಸಿ ತಿಳಿಸಿದರು.
ಗೌರವ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಪುರಾಣಿಕ ಆಗಮಿಸಿದ ಅತಿಥಿ ಗಣ್ಯರಿಗೆ, ಪೋಷಕ, ಉಪ ಪೋಷಕ, ಆಜೀವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆ ಕೊನೆಗೊಂಡಿತು.
ಚುನಾಯಿತ ಕಾರ್ಯಕಾರಿ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಸಭಾಪತಿಯಾಗಿ ಶ್ರೀ ಎಸ್ ಜಯಕರ ಶೆಟ್ಟಿ, ಉಪ ಸಭಾಪತಿಯಾಗಿ ಡಾ. ಉಮೇಶ ಪುತ್ರನ್, ಗೌರವ ಕಾರ್ಯದರ್ಶಿಯಾಗಿ ಶ್ರೀ ಸತ್ಯನಾರಾಯಣ ಪುರಾಣಿಕ ಹಾಗೂ ಗೌರವ ಖಜಾಂಜಿಯಾಗಿ ಶ್ರೀ ಶಿವರಾಮ ಶೆಟ್ಟಿ ನೇಮಕಗೊಂಡರು

