

ಶ್ರೀನಿವಾಸಪುರ, ಜುಲೈ 29: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶ್ರೀನಿವಾಸಪುರ ಪಟ್ಟಣದ ಗಫಾರ್ ಖಾನ್ ಮೊಹಲ್ಲಾ, ಚಿಂತಾಮಣಿ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಸೋಮವಾರ ವಿಶೇಷ ದಾಖಲಾತಿ ಆಂದೋಲನ ಹಾಗೂ ಅರಿವು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೈಲಾರಪ್ಪ ವಹಿಸಿದ್ದರು. ಅವರು ಮಾತನಾಡಿ, ವಿದ್ಯಾಭ್ಯಾಸವು ಮಗುಗಳ ಭವಿಷ್ಯ ರೂಪಿಸುವ ಶಕ್ತಿಶಾಲಿ ಅಸ್ತ್ರವಾಗಿದೆ. ನಾಳೆಯ ಸಮಾಜವನ್ನು ಕಟ್ಟುವ ಪ್ರಜ್ಞಾವಂತ ನಾಗರಿಕರು ಇಂದು ಶಿಕ್ಷಣ ಪಡೆಯುತ್ತಿರುವ ಮಕ್ಕಳೇ ಎಂದು ಅಭಿಪ್ರಾಯಪಟ್ಟರು.
ಮೌಲಾನಾ ಆಜಾದ್ ಮಾದರಿ ಶಾಲೆಯ ಸೌಲಭ್ಯಗಳ ವಿವರ ನೀಡಿದ ಅವರು, ಈ ಶಾಲೆ ಆಂಗ್ಲ ಮಾಧ್ಯಮದ ಉಚಿತ ಶಿಕ್ಷಣ ನೀಡುವ ಮಾದರಿ ಸರ್ಕಾರಿ ಶಾಲೆಯಾಗಿದ್ದು, ರಾಜ್ಯ ಸರ್ಕಾರದಿಂದ ಪಠ್ಯಪುಸ್ತಕ, ಉಚಿತ ಮಧ್ಯಾಹ್ನ ಊಟ, ಯೂನಿಫಾರ್ಮ್, ಲೇಖನ ಸಾಮಗ್ರಿ, ನೋಟ್ಬುಕ್ಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರೀ-ಮ್ಯಾಟ್ರಿಕ್, ಪೋಸ್ಟ್ ಮ್ಯಾಟ್ರಿಕ್ ವಿದ್ಯಾರ್ಥಿವೇತನ, Merit-cum-Means Scholarship, ವಿದ್ಯಾಶ್ರೀ ಯೋಜನೆಗಳ ಜೊತೆಗೆ ಸಾಮೂಹಿಕ ಮದುವೆ ಯೋಜನೆ ಅಡಿಯಲ್ಲಿ ಪ್ರತೀ ಜೋಡಿಗೆ ₹50,000 ಸಹಾಯಧನ ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸಿ ಅವರ ಭವಿಷ್ಯವನ್ನು ಭದ್ರಗೊಳಿಸಬೇಕು ಎಂದು ಕರೆ ನೀಡಿದರು.
ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕಿ ಸೀರಿನ್ ತಾಜ್ ಅವರು ಮಾತನಾಡಿ, ಕೆಎಂಡಿಸಿ ವತಿಯಿಂದ ನೀಡಲಾಗುತ್ತಿರುವ ARIVU ಶಿಕ್ಷಣ ಸಾಲ, ಶ್ರಮಶಕ್ತಿ, ಸ್ವಾವಲಂಬಿ ಸಾರಥಿ, ಸಮುದಾಯ ಆಧಾರಿತ ತರಬೇತಿ, ವಿದೇಶಿ ಶಿಕ್ಷಣ ಸಾಲ, ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಅವರು, ವಿದ್ಯಾವಂತ ಮಹಿಳೆಯೊಬ್ಬಳೇ ಕುಟುಂಬದ ಬೆನ್ನೆಲುಬಾಗುತ್ತಾಳೆ. ಮಕ್ಕಳು ಮೊಬೈಲ್ನಿಂದ ದೂರವಿದ್ದು ಪಾಠಗಳಲ್ಲಿ ಗಮನಹರಿಸಿ ಶಿಸ್ತು, ನೈತಿಕತೆ ಹಾಗೂ ಗುರಿಯೊಂದಿಗೆ ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಜಾಮಿಯಾ ಮಸೀದಿ ಅಧ್ಯಕ್ಷ ಜಾಹಿದ್ ಅನ್ಸಾರಿ ಅವರು ಮಾತನಾಡಿ, ಇಸ್ಲಾಂ ಧರ್ಮವು ವಿದ್ಯಾಭ್ಯಾಸಕ್ಕೆ ಮಹತ್ವ ನೀಡಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಬೇಕು. ಐಎಎಸ್, ಕೆಎಎಸ್, ವೈದ್ಯರು, ಇಂಜಿನಿಯರ್ಗಳಾದ ಅನೇಕರು ಸರ್ಕಾರಿ ಶಾಲೆಗಳಲ್ಲೇ ಓದಿದ್ದಾರೆ ಎಂದು ಹೇಳಿದರು.
ಉರ್ದು ಇಸಿಓ ಮೊಹಮ್ಮದ್ ಸಾಧಿಕ್, ಸಿಆರ್ಪಿ ಆರಿಫ್ ಪಾಷಾ ಅವರು ಶಿಕ್ಷಣದ ಮಹತ್ವವನ್ನು ತಿಳಿಸಿ, ಪೋಷಕರು ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಲ್ಗೊಂಡ ಪೋಷಕರು ಶಾಲೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ದಾಖಲಾತಿಗೆ ಹೆಚ್ಚಿನ ಆಸಕ್ತಿ ತೋರಿದರು.
ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 550ಕ್ಕೂ ಹೆಚ್ಚು ಅಂಕ ಪಡೆದ ಹಳೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಹಾಗೂ ಎಂಪಿ ಫ್ರೂಟ್ಸ್ ಮಂಡಿ ಮಾಲಿಕ ಅಬ್ದುಲ್ ಮಜೀದ್ ಉರ್ಫ್ ಆಫಿಸರ್ ಪಾಷಾ , ಪುರಸಭೆ ಸದಸ್ಯ ಸರ್ದಾರ್, ಪ್ರಧಾನ ಮಂತ್ರಿಯ 15 ಅಂಶಗಳ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್, ಉರ್ದು ಸಿಆರ್ಪಿ ನಾಸಿಮಾ ಬೇಗಮ್, ಮೌಲಾನಾ ಆಜಾದ್ ಶಾಲೆಯ ಮುಖ್ಯ ಶಿಕ್ಷಕಿ ಅರುಣ, ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಶಕೀಲಾ ಬೇಗಮ್ , ವಕೀಲ ಇಶ್ರತ್ ಫಾತಿಮಾ, ಸಮಾಜ ಸೇವಕರು ಜಾವಿದ್, ಕೆಎಂಡಿಸಿ ಸಿಬ್ಬಂದಿ ಸಲೀಂ , ಮುಬಾರಕ್ ಪಾಷಾ , ಇಮ್ರಾನ್ ಖಾನ್ ಸೇರಿದಂತೆ ಶಿಕ್ಷಕರು, ಸಮುದಾಯದ ಹಿರಿಯರು ಹಾಗೂ ಪೋಷಕರು ಭಾಗವಹಿಸಿದ್ದರು.



