

ಶ್ರೀನಿವಾಸಪುರ : ಮಕ್ಕಳಿಗೆ ತಂದೆ-ತಾಯಿಯೆಷ್ಟು ಮುಖ್ಯವೋ, ಅಜ್ಜಿ-ತಾತಂದಿರೂ ಅಷ್ಟೇ ಮುಖ್ಯ ಎಂದು ಫಾದರ್ ಫ್ರಾನ್ಸಿಸ್ ಎಕ್ಕ ಅಭಿಪ್ರಾಯಪಟ್ಟರು. ಪಟ್ಟಣದ ಎಸ್ಎಫ್ಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಮಕ್ಕಳು ಅಜ್ಜಿ-ತಾತಂದಿರೊಂದಿಗೆ ಬೆಳೆದಾಗ ಅವರ ಅನುಭವ ಮತ್ತು ಬದುಕಿನ ಕಥೆಗಳು ಮಕ್ಕಳ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಆ ಅನುಭವಗಳು ಮಕ್ಕಳ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ. ಅಜ್ಜಿ-ತಾತ ನೀಡುವ ನೀತಿಕಥೆಗಳು ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುತ್ತವೆ, ಎಂದು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಎಸ್ಎಫ್ಎಸ್ ಸಂಸ್ಥೆಗಳ ಸಿ.ಸಿ.ಒ. ಶ್ರೀ ಶ್ಯಾಮ್ ಅವರು ಮಾತನಾಡಿ, ಈ ದಿನಾಚರಣೆ ಮಕ್ಕಳಿಗೆ ಹಿರಿಯರ ಪ್ರೀತಿಗೆ ಮೌಲ್ಯ ನೀಡಲು ಮತ್ತು ಭವಿಷ್ಯದಲ್ಲಿ ಅವರಿಗೆ ಗೌರವ ನೀಡುವ ಗುಣವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಭಾವಗೀತೆ ಸೇರಿದಂತೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿಭಾಯಿಸಲಾಯಿತು. ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು ಈ ಸಂದರ್ಭ ಉಪಸ್ಥಿತರಿದ್ದರು.


