

ರಾಯಚೂರು : ರಾಯಚೂರಿನ ಸಹಾರ ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಣ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ರಾಯಚೂರು ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯಗಳು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಹಿನ್ನೆಲೆಯಲ್ಲಿ, ಉನ್ನತ ಮಟ್ಟದ ಶಿಕ್ಷಣ ಸ್ಥಾಪಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದು ಅಭಿಪ್ರಾಯಪಟ್ಟರು. ಅವರು ಮುಂದುವರೆದು, ಮುಸ್ಲಿಮರು ತಮ್ಮ ಶಕ್ತಿ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು.

ದೇಶದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅವರು ಯೂನಿವರ್ಸಿಟಿ ಗ್ರಾಂಟ್ ಕಮಿಷನ್ (ಯುಜಿಸಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿ ಅನೇಕ ಪ್ರಮುಖ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಕೊಡುಗೆ ದೇಶದ ಶೈಕ್ಷಣಿಕ ಅಭಿವೃದ್ಧಿಗೆ ಅಪಾರವಾಗಿದೆ ಎಂದು ನೆನಪಿಸಿದರು. ಸೆಪ್ಟೆಂಬರ್ 11 ರಂದು ಅಬ್ದುಲ್ ಕಲಾಂ ಆಝಾದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ ಎಂದು ವಿವರಿಸಿದ ನಸೀರ್ ಅಹ್ಮದ್, ಅವರ ಜೀವನ ನಮಗೆಲ್ಲಾ ಸ್ಪೂರ್ತಿ. ಜಿಲ್ಲೆಯ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿಯೂ ಅವರ ಜನ್ಮದಿನಾಚರಣೆ ನಡೆಸಿ, ಯುವ ಪೀಳಿಗೆಗೆ ದಾರಿದೀಪವಾಗಬೇಕು
ಎಂದು ಸಲಹೆ ನೀಡಿದರು.
ಇದೇ ವೇಳೆ, ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ವಿಷಾದ ವ್ಯಕ್ತಪಡಿಸಿದ ಅವರು, ಪಠ್ಯ ವಿದ್ಯೆಯ ಜೊತೆಗೆ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ಒತ್ತಿಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸೌಹಾರ್ದ ಸಮಿತಿ ಕರ್ನಾಟಕದ ಪದಾಧಿಕಾರಿಗಳು ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ವಿಶೇಷ ಕಾಯ್ದೆ ತರಬೇಕೆಂದು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಗಣ್ಯರು, ಸಮಾಜ ಸೇವಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

