

ಶ್ರೀನಿವಾಸಪುರ: ತಾಲೂಕಿನ ಕಶೆಟ್ಟಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕಿ ವರಲಕ್ಷ್ಮಿಮ್ಮ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಪೋಷಕರು ಶುಕ್ರವಾರ ಎರಡನೇ ದಿನವೂ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯಿಂದಲೇ ಶಾಲೆಗೆ ಬೀಗ ಜಡಿದು ಶಿಕ್ಷಕಿ ವರಲಕ್ಷ್ಮಿಯನ್ನು ಹಿಂತಿರುಗಿಸಲು ಆಗ್ರಹಿಸಿದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶ್ರಮಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದ ಶಿಕ್ಷಕಿ ವರಲಕ್ಷ್ಮಿಯವರನ್ನು ಇದೇ ಶಾಲೆಯಲ್ಲಿ ಮುಂದುವರೆಸಬೇಕು ಎಂಬ ಒಕ್ಕೊರಲಿನ ಬೇಡಿಕೆಯನ್ನು ಪೋಷಕರು ಮುಂದಿರಿಸಿದರು.
ಸ್ಥಳಕ್ಕೆ ಆಗಮಿಸಿದ ಬಿಇಒ ಬಿ.ಸಿ. ಮುನಿಲಕ್ಷ್ಮಯ್ಯ ಪೋಷಕರ ಬೇಡಿಕೆಯನ್ನು ಆಲಿಸಿ, ಶಿಕ್ಷಕಿ ವರಲಕ್ಷ್ಮಿಯವರನ್ನು ಇದೇ ಶಾಲೆಯಲ್ಲಿ ಮುಂದುವರೆಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಪೋಷಕರು ಮಕ್ಕಳನ್ನು ಪುನಃ ತರಗತಿಗಳಿಗೆ ಕಳುಹಿಸಿದರು.
ಈ ಸಂದರ್ಭದಲ್ಲಿ ಇಸಿಒ ವೆಂಕಟರಮಣಪ್ಪ, ಅಡ್ಡಗಲ್ ಸಿಆರ್ಪಿ ವೇಣುಗೋಪಾಲ್, ಎಸ್ಡಿಎಂಸಿ ಅಧ್ಯಕ್ಷ ನವೀನ್, ಮುಖಂಡ ರಾಮಚಂದ್ರಾರೆಡ್ಡಿ ಸೇರಿದಂತೆ ಗ್ರಾಮಸ್ಥರು, ಪೋಷಕರು ಹಾಜರಿದ್ದರು.

