

ಶ್ರೀನಿವಾಸಪುರ : ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಸೋಮವಾರ ಹಾಲು ಉತ್ಪಾದಕರಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಯಲ್ಲೂರು ಕ್ಷೇತ್ರದ ನಿರ್ದೇಶಕರಾದ ಎನ್. ಹನುಮೇಶ್ ಅವರು ಮಾತನಾಡಿ, “ಎಲ್ಲಾ ಹಾಲು ಉತ್ಪಾದಕರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಿಮಾ ಪರಿಹಾರ ಪಡೆದ ಫಲಾನುಭವಿಗಳು ಇನ್ನು ಮುಂದೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘಗಳ ಬೆಳವಣಿಗೆಗೆ ಸಹಕಾರ ನೀಡಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೃತಪಟ್ಟ ರಾಸುಗಳ ವಿಮಾ ಪರಿಹಾರದಂತೆ ಒಟ್ಟು ₹3,90,000 ಮೊತ್ತದ 7 ಚೆಕ್ಗಳನ್ನು ಯಲ್ಲೂರು ಕ್ಷೇತ್ರದ ನಿರ್ದೇಶಕರಾದ ಎನ್. ಹನುಮೇಶ್ ಹಾಗೂ ಅಡ್ಡಗಲ್ ಕ್ಷೇತ್ರದ ನಿರ್ದೇಶಕರಾದ ಕೆ.ಕೆ. ಮಂಜುನಾಥ ರವರು ವಿತರಿಸಿದರು.
ಮತ್ತೆ ಮಾತನಾಡಿದ ನಿರ್ದೇಶಕ ಕೆ.ಕೆ. ಮಂಜುನಾಥ, “ಈ ವರ್ಷಕ್ಕೆ ಈಗಾಗಲೇ ಎರಡು ಬಾರಿ ವಿಮೆ ನೋಂದಣಿಯನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ ಮೂರು ಬಾರಿ ರಾಸು ವಿಮೆ ನೋಂದಣಿ ಮಾಡಿಸಬೇಕೆಂದು ಆಡಳಿತ ಮಂಡಳಿಯಲ್ಲಿ ಚರ್ಚಿಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ವ್ಯವಸ್ಥಾಪಕರಾದ ಕೆ.ಎಂ. ಮುನಿರಾಜು ಮಾತನಾಡಿ, “ಒಕ್ಕೂಟದ ವತಿಯಿಂದ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಸಂಘಗಳಲ್ಲಿ ಪ್ಯಾಟ್ ಮತ್ತು ಎಸ್ಎನ್ಎಫ್ ಆಧಾರದ ಮೇಲೆ ಯಂತ್ರಗಳ ಬಳಕೆಯಿಂದ ಹಾಲಿನ ಗುಣಮಟ್ಟವನ್ನು ವಿಜ್ಞಾನಾಧಾರಿತವಾಗಿ ಪರೀಕ್ಷಿಸಿ, ರೈತರಿಗೆ ಸಮರ್ಪಕ ದರ ನೀಡಲಾಗುತ್ತಿದೆ. ಇದು ರೈತರ ನಂಬಿಕೆಯನ್ನು ಗೆಲ್ಲುವಂತಾಗಿದ್ದು, ಖಾಸಗಿ ಡೇರಿಗಳ ಪ್ರಭಾವ ಕಡಿಮೆ ಮಾಡುವತ್ತ ಒಕ್ಕೂಟ ಗಂಭೀರವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ವಿಸ್ತರಣಾಧಿಕಾರಿಗಳಾದ ಕೆ.ಎಂ. ಮುನಿಸ್ವಾಮಿರೆಡ್ಡಿ, ಎನ್. ಶಂಕರ್, ಪಿ.ಕೆ. ನರಸಿಂಹರಾಜು, ಎಸ್. ವಿನಾಯಕ, ಅಣ್ಣಪ್ಪ ತಡಕೋಡ, ಗೋಪಾಲ ಕೃಷ್ಣ, ಕೆ.ಪಿ. ಶ್ವೇತಾ ಹಾಗೂ ಶಿಬಿರದ ಸಿಬ್ಬಂದಿಯವರು, ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

