

ಬೆಂಗಳೂರು : ಬೀದರ ಜಿಲ್ಲೆಯ ಬಸವನನಾಡಿನಲ್ಲಿ ಇದೇ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ ಖಂಡ್ರೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಬೆಂಗಳೂರಿನ ಸಿಎಂ ನಿವಾಸದಲ್ಲಿ ಭೇಟಿ ಮಾಡಿ ಆಹ್ವಾನ ಪತ್ರವನ್ನು ಸಲ್ಲಿಸಿದರು.
ಬೀದರ ನಗರವು ಬಸವಣ್ಣನವರ ನಾಡು ಮತ್ತು ಸೂಫಿ ಸಂತರ ನೆಲೆಬೀಡು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಇಂತಹ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ನಡುವೆ ಸಮ್ಮೇಳನವನ್ನು ಆಯೋಜಿಸಿರುವುದು ವಿಶೇಷ ಮಹತ್ವ ಪಡೆದಿದೆ.
ರಾಜ್ಯದ ವಿವಿಧ ಭಾಗಗಳಿಂದ ಪತ್ರಕರ್ತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಮಾಧ್ಯಮ ಕ್ಷೇತ್ರದ ಸವಾಲುಗಳು, ಅವಕಾಶಗಳು ಹಾಗೂ ಭವಿಷ್ಯದ ದಿಕ್ಕು ಕುರಿತು ಚರ್ಚೆಗಳು ನಡೆಯಲಿವೆ.
ಸಮ್ಮೇಳನದ ಯಶಸ್ಸಿಗಾಗಿ ಅಗತ್ಯ ಸಿದ್ಧತೆಗಳನ್ನು ಸಂಘದ ಪದಾಧಿಕಾರಿಗಳು ಕೈಗೊಂಡಿದ್ದು, ಮುಖ್ಯಮಂತ್ರಿ ಸಮ್ಮೇಳನವನ್ನು ಉದ್ಘಾಟಿಸುವ ನಿರೀಕ್ಷೆಯಿದೆ.

