

ಶಿಕ್ಷಣ ಮುಖ್ಯವೋ ? ಉದ್ಯೋಗ ಮುಖ್ಯವೋ ? ಎಂಬುದು ಈ ಪ್ರಸಕ್ತ ವಿದ್ಯಮಾನದಲ್ಲಿ ಪ್ರತಿಯೊಬ್ಬರನ್ನು ಕಾಡುತ್ತದೆ. ಅದರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ದ್ವಂದ್ವಕ್ಕೆ ತಳ್ಳುತ್ತದೆ. ಹೆಚ್ಚು ಓದು ಒಂದೊಳ್ಳೆ ಕೆಲಸ ಸಿಗುತ್ತದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾದರೆ ಉನ್ನತ ಶಿಕ್ಷಣ ಪಡೆದರೂ ಉತ್ತಮ ಕೆಲಸ ಸಿಗುತ್ತದೆಯೇ ? ಎಂಬ ಪ್ರಶ್ನೆಗೆ ವಿದ್ಯಾರ್ಥಿಯ ಗುರಿ ಆಸಕ್ತಿ ಕೌಶಲ್ಯದ ಮೇಲೆ ನಿರ್ಧಾರವಾಗುತ್ತದೆ ಎಂದು ರೊ| ಶ್ರೀ ನಾಗರಾಜ ಶೆಟ್ಟಿ, ಅಧ್ಯಕ್ಷರು, ರೋಟರಿ ಕ್ಲಬ್ ಕುಂದಾಪುರ ಇವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಕ್ಲಬ್ ಕುಂದಾಪುರ ಸರೋಜಿನಿ ಮಧುಸೂದನ ಕುಶೆ ಸರ್ಕಾರಿ ಪ್ರೌಢಶಾಲೆ ವಡೇರಹೋಬಳಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ 2026 ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ರೊ| ಸರ್ವೋದಯ ಪೂಜಾರಿ, ಕಾರ್ಯದರ್ಶಿ, ರೋಟರಿ ಕ್ಲಬ್ ಕುಂದಾಪುರ ಇವರು ಮಾತನಾಡಿ ಇತ್ತೀಚಿನ ವಿದ್ಯಮಾನಗಳಲ್ಲಿ ಉದ್ಯೋಗ ದೊರಕಿಸದ ಶಿಕ್ಷಣ ಅದು ಶಿಕ್ಷಣವೇ ಅಲ್ಲ ಎಂಬ ಮನೋಭಾವ ಬಹುತೇಕರಲ್ಲಿದೆ. ಆದರೆ ಅದು ತಪ್ಪು. ಉದ್ಯೋಗ ಎನ್ನುವುದು ಶಿಕ್ಷಣದ ಉಪ ಉತ್ಪನ್ನದಂತೆ. ಆದರೆ ಅದು ನಮ್ಮ ಜೀವನ ಶೈಲಿ, ಜೀವನ ಕ್ರಮ, ಚಿಂತನೆ, ನಮ್ಮನ್ನು ನಾವು ನಾಗರೀಕರನ್ನಾಗಿಸುವುದು ಮತ್ತು ಸಭ್ಯರನ್ನಾಗಿ ಮಾಡುವುದು, ಎಲ್ಲವೂ ನಮಗೆ ಸಿಗುವುದು ಶಿಕ್ಷಣದಿಂದ ಎಂಬ ಅಭಿಪ್ರಾಯಪಟ್ಟರು. ಅವರು ಮಾತನಾಡಿ ಯಾವುದೇ ವೃತ್ತಿ ನಾವು ಆಯ್ಕೆ ಮಾಡಿದರೂ ಅದರಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತನವನ್ನು ಅಳವಡಿಸಬೇಕು. ಅದರಲ್ಲಿ ಬದುಕು ಕಟ್ಟಿಕೊಂಡ ಮೇಲೆ ಪ್ರಾಮಾಣಿಕವಾಗಿ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶ್ವೇತಾ ಶ್ರೀನಿಧಿ ಮಾತನಾಡಿ ಆಯ್ಕೆಯೇ ಬದುಕಿನ ಸೋಪಾನ ಆಗುತ್ತದೆ ಮತ್ತು ನಮ್ಮ ಗುರಿ ದೃಢವಾಗಿರಬೇಕೆಂದರು. ತದನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ವೃತ್ತಿಯಲ್ಲಿ ಪಾರಂಪರಿಕ ವೃತ್ತಿ ಮತ್ತು ಆಧುನಿಕ ವೃತ್ತಿ ಎಂಬ ಪರಿಬೇಧವನ್ನು ಉತ್ಕೃಷ್ಟವಾದ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಭಾಧ್ಯಕ್ಷತೆಯನ್ನು ಶ್ರೀ ಬಾಲಚಂದ್ರ ಹೆಬ್ಬಾರ್ ಇವರು ನಿರ್ವಹಿಸಿ ವೃತ್ತಿ ಶಿಕ್ಷಣ ಬೇರೆ ಕೌಶಲ ಶಿಕ್ಷಣ ಬೇರೆ ಎಂದು ಗಾಂಧೀಜಿ ಹೇಳುತ್ತಿದ್ದರು. ಶಾಲಾ ಹಂತದಲ್ಲಿಯೇ ವರ್ಕ್ ಎಜುಕೇಶನ್ ಪ್ರಾರಂಭಿಸುವ ಅಗತ್ಯ ಇದೆ. ಅಲ್ಲದೇ ಕೃತಕ ಬುದ್ಧಿಮತ್ತೆಯಿಂದ ಇನ್ನಷ್ಟು ಉದ್ಯೋಗ ಕಡಿತಗೊಳ್ಳುತ್ತದೆ ಎಂದು ಎಚ್ಚರಿಸಿದರು. ಒಟ್ಟಿನಲ್ಲಿ ಬದುಕನ್ನು ಸಾಗಿಸಲು ಯಾವ ಉದ್ಯೋಗ ಆಯ್ಕೆ ಮಾಡಿದರೂ ನಮ್ಮ ದಕ್ಷತೆ, ಮಾತು, ಪ್ರಾಮಾಣಿಕತನ ಕಾರ್ಯಕ್ಷಮತೆ ಬೇಕು ಎಂದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಇದರ ಸದಸ್ಯರಾದ ಮನೋಜ ನಾಯರಿ ಹಾಗೂ ಕೃಷ್ಣಾನಂದ ಶ್ಯಾನುಭೋಗ್, ಅಧ್ಯಕ್ಷರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಸ್ಥಿತರಿದ್ದರು. ಸಹ ಶಿಕ್ಷಕ ನಾರಾಯಣ ರಾಜು ದೇವಾಡಿಗ ಸ್ವಾಗತಿಸಿ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಕಾರ್ಯದರ್ಶಿ ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯ ಉಡುಪಿ ನಿರೂಪಿಸಿ ಸುಧಾ ಭಟ್ ಅಮಾಸೆಬೈಲು ವಂದಿಸಿದರು. ಸುಮಾರು 115 ವಿದ್ಯಾರ್ಥಿಗಳು ಈ ವೃತ್ತಿ ಮಾರ್ಗದರ್ಶನದಿಂದ ಪ್ರಯೋಜನ ಪಡೆದರು.

