

ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮದ ಭಾವನೆಯನ್ನು ಮೂಡಿಸುವ ಹಾಗೂ ತಂದೆ ತಾಯಿಯ ಮೌಲ್ಯವನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಮಾತಾ ಪಿತೃ ವಂದನಾ ಹಾಗೂ ಭಾರತ ಮಾತಾ ಪೂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಗಣೇಶ್ ನಾಯಕ್, ಶಿಕ್ಷಕರು ಶಿರಿಯಾರ ಇವರು ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಖಂಡ ಭಾರತದ ನಕಾಶೆಗೆ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಇವರು ತಾಯಿ ದೇವತಾ ಸ್ವರೂಪಿ, ತಂದೆ ಆಕಾಶ. ಇಂತಹ ತಂದೆತಾಯಿಯರಿಗೆ ಮಕ್ಕಳು ಪ್ರತಿನಿತ್ಯ ನಮಸ್ಕರಿಸಿ ಅವರ ಆರ್ಶೀವಾದವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ತುಳಸಿ ಎಜ್ಯುಕೇಶನ್ ಟ್ರಸ್ಟ್ ನ ಮುಖ್ಯಸ್ಥ ರಾದ ಶ್ರೀಯುತ ಕೃಷ್ಣರಾಯ ಶಾನುಭಾಗ್ ರವರು ಮಾತನಾಡಿ ಭಗವಂತ ಅವತರಿಸಿದ ಪುಣ್ಯಭೂಮಿ ಇದು. ಇಡೀ ಪ್ರಪಂಚಕ್ಕೆ ಮಾರ್ಗದರ್ಶನ ನೀಡುವ ದೇಶ ನಮ್ಮದು. ಅಂತಹ ಭಾರತ ಮಾತೆಗೆ ದೀಪಗಳ ಮೂಲಕ ನಮಿಸುವ ಭಾಗ್ಯ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಅಖಂಡ ಭಾರತದ ನಕಾಶೆಯ ಅಂಚಿನಲ್ಲಿ ಹಣತೆಗಳನ್ನು ಇಟ್ಟು ಪೋಷಕರು ಬೆಳಗಿಸಿದ ಜ್ಯೋತಿಯಿಂದ ಅಖಂಡ ಭಾರತ ನಕ್ಷೆ ಪ್ರಜ್ವಲಿಸಿತು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ರೇಷ್ಮ ಪ್ರದೀಪ್ ಉಪಸ್ಥಿತರಿದ್ದರು. ಶಿಕ್ಷಕಿ ಅಬಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ , ಸಹಶಿಕ್ಷಕಿ ಶ್ರೀಮತಿ ಶಿಲ್ಪಾ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ರೂಪ ವಂದಿಸಿದರು.

ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಭೋದಕ – ಭೋದಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

