

ಶ್ರೀನಿವಾಸಪುರ : ತಾಲೂಕಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಏಕದಿನ ಶೈಕ್ಷಣಿಕ ಹಾಗೂ ಪರಿಸರ ಜಾಗೃತಿ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು.
ಯದರೂರು ಗ್ರಾಮದ ಸರ್ಕಾರಿ ಉರ್ದು ಹೆಚ್.ಪಿ.ಎಸ್., ಚಿಂತಮಕನಪಳ್ಳಿ ಗ್ರಾಮದ ಸರ್ಕಾರಿ ಉರ್ದು ಎಲ್.ಪಿ.ಎಸ್. ಹಾಗೂ ಎಸ್. ವಡಿಗೇಪಳ್ಳಿ ಗ್ರಾಮದ ಸರ್ಕಾರಿ ಉರ್ದು ಎಲ್.ಪಿ.ಎಸ್. ಶಾಲೆಗಳ ವಿದ್ಯಾರ್ಥಿಗಳು ಪ್ರವಾಸದಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತಾಗಿ ಪ್ರಾಯೋಗಿಕ ಅರಿವು ಪಡೆದರು.
ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮ ಹಾಗೂ ಪರಿಸರ ಜಾಗೃತಿ ಬೆಳೆಸುವುದು ಆಗಿತ್ತು. ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಜಲ ಸಂಪನ್ಮೂಲಗಳ ಸಂರಕ್ಷಣೆ, ಸ್ವಚ್ಛತಾ ಅಭ್ಯಾಸಗಳ ಅಗತ್ಯತೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ಸಸ್ಯ ಸಂರಕ್ಷಣೆಯ ಮಹತ್ವ ಕುರಿತು ವಿವರಿಸಲಾಯಿತು. ಪ್ರಕೃತಿ ಸೌಂದರ್ಯಮಯ ಸ್ಥಳಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಮರ ನೆಡುವಿಕೆ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ವಿದ್ಯಾರ್ಥಿಗಳು ಪ್ರವಾಸವನ್ನು ಹರ್ಷದಿಂದ ಅನುಭವಿಸಿದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಪರಿಸರದ ಬಗ್ಗೆ ಜವಾಬ್ದಾರಿ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶಬಾನಾ ತಾಜ್, ಅರ್ಷಿಯಾ ಸುಲ್ತಾನಾ, ಹಸೀನಾ ಬೇಗಂ ಹಾಗೂ ಸಂಪತ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.



































































































































