

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಐದು ವರ್ಷದ ಅವಧಿ ಫೆಬ್ರವರಿ 2026ರಲ್ಲಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯದ ಕಾರಣಕ್ಕೆ ಅವುಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 41 ಮತ್ತು 42ರಂತೆ ಹಾಗೂ ಪ್ರಕರಣ 8(1)(ಬಿ)(ii)ರಡಿ ನೀಡಲಾದ ಅಧಿಕಾರವನ್ನು ಚಲಾಯಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಈ ಆದೇಶ ಜಾರಿಗೊಳಿಸಿದೆ.
ಫೆಬ್ರವರಿ 8ರಿಂದ 19ರವರೆಗೆ ಹಂತ ಹಂತವಾಗಿ ಅವಧಿ ಪೂರ್ಣಗೊಳ್ಳಲಿರುವ ಗ್ರಾಮ ಪಂಚಾಯಿತಿಗಳ ಆಡಳಿತ ನಿರಂತರತೆಯನ್ನು ಕಾಪಾಡುವ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನಿಯೋಜಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಅಡ್ಡಗಲ್, ಕೂರಿಗೇಪಲ್ಲಿ ;
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯರಂವಾರಿಪಲ್ಲಿ, ಮಾಸ್ತೇನಹಳ್ಳಿ, ಹೊದಲಿ ;
ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ದಳಸನೂರು, ರೋಣೂರು, ಆರಿಕುಂಟಿ ;
ಪಂ.ರಾ.ಇಂ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮೀಸಾಗರ, ಪುಲಗೂರುಕೋಟೆ, ಚಲ್ಡಿಗಾನಹಳ್ಳಿ ;
ತಹಶೀಲ್ದಾರ್ ಗೌನಿಪಲ್ಲಿ, ನಂಬಿಹಳ್ಳಿ;
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಯಲ್ಲೂರು, ಮುದಿಮಡಗು, ಸೋಮಯಾಜಲಪಲ್ಲಿ, ರಾಯಲ್ಪಾಡು ;
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೊಳತೂರು, ಕೋಡಿಪಲ್ಲಿ ;
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುತ್ತಕಪಲ್ಲಿ, ಬೈರಾಗಾನಹಳ್ಳಿ ;
ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಉಪ ವಿಭಾಗ, ಶ್ರೀನಿವಾಸಪುರ ನೆಲವಂಕಿ , ಜೆ.ತಿಮ್ಮಸಂದ್ರ ;
ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಶ್ರೀನಿವಾಸಪುರ ಲಕ್ಷ್ಮೀಪುರ , ತಾಡಿಗೋಳ್ ,
ಸೇರಿದಂತೆ ಒಟ್ಟು 25 ಗ್ರಾಮ ಪಂಚಾಯಿತಿಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.
ಸರ್ಕಾರದ 19 ಜೂನ್ 2020ರ ಸುತ್ತೋಲೆ ಪ್ರಕಾರ, ಆಡಳಿತಾಧಿಕಾರಿಗಳು ಗ್ರಾಮ ಪಂಚಾಯಿತಿಯ ಎಲ್ಲಾ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರಗಳನ್ನು ಚಲಾಯಿಸಲಿದ್ದಾರೆ. ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸುವುದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಜಂಟಿಯಾಗಿ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವುದು, ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ, ನೌಕರರಿಗೆ ವೇತನ ಪಾವತಿ ಸೇರಿದಂತೆ ವಿವಿಧ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.
ಇದೇ ವೇಳೆ, ಸರ್ಕಾರದ 12 ಮಾರ್ಚ್ 2018ರ ಸುತ್ತೋಲೆ ಪ್ರಕಾರ ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಹೊಸ ನೇಮಕಾತಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಆದೇಶ ತಕ್ಷಣದಿಂದ ಜಾರಿಗೆ ಬಂದು, ಮುಂದಿನ ಸರ್ಕಾರದ ಆದೇಶದವರೆಗೆ ಜಾರಿಯಲ್ಲಿರಲಿದೆ. ಚುನಾವಣೆ ನಡೆಯುವವರೆಗೆ ಗ್ರಾಮ ಪಂಚಾಯಿತಿಗಳ ಆಡಳಿತ ಸುಸೂತ್ರವಾಗಿ ಮುಂದುವರಿಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

