

ಶ್ರೀನಿವಾಸಪುರ : ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ (ಕೆಪಿಎಸ್) ಉನ್ನತೀಕರಿಸುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಸಂಬಂಧದ ಆದೇಶ ಪ್ರತಿಯನ್ನು ಮಾಜಿ ವಿಧಾನಸಭಾ ಸ್ಪೀಕರ್ ಹಾಗೂ ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರು ಎಪಿಜೆ ಅಬ್ದುಲ್ ಕಲಾಂ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಮಜೀದ್ ಉರ್ ಅಪ್ಸರ್ ಪಾಷಾ ಅವರಿಗೆ ಹಸ್ತಾಂತರಿಸಿದರು.
ಶಾಲಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಆರ್. ರಮೇಶ್ ಕುಮಾರ್, ಉತ್ತಮ ಶಿಕ್ಷಣವೇ ವ್ಯಕ್ತಿಯ ಭವಿಷ್ಯ ರೂಪಿಸುವ ಪ್ರಮುಖ ಅಸ್ತ್ರ. ವಿದ್ಯಾರ್ಥಿಗಳು ಶ್ರಮ, ಶಿಸ್ತಿನಿಂದ ಅಧ್ಯಯನ ಮಾಡಿ ತಮ್ಮ ಪೋಷಕರಿಗೂ, ಶಿಕ್ಷಕರಿಗೂ ಹಾಗೂ ಶಾಲೆಗೆ ಕೀರ್ತಿ ತರುವಂತೆ ಬೆಳೆಯಬೇಕು. ಉನ್ನತ ಶಿಕ್ಷಣ ಪಡೆದು ಕುಟುಂಬದ ಗೌರವವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಬದುಕಿನ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ಸಮಾಜದಲ್ಲಿ ಗೌರವಾನ್ವಿತ ನಾಗರಿಕರಾಗಿ ರೂಪುಗೊಳ್ಳುವುದೇ ವಿದ್ಯಾರ್ಥಿಗಳ ಧ್ಯೇಯವಾಗಿರಬೇಕು ಎಂದು ಸಲಹೆ ನೀಡಿದರು. ಶಿಕ್ಷಕರ ಪಾತ್ರದ ಮಹತ್ವವನ್ನು ವಿವರಿಸಿ, ಶಿಕ್ಷಕರು ಕೇವಲ ಪಾಠ ಬೋಧಕರಲ್ಲ ಮಕ್ಕಳ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು. ಜವಾಬ್ದಾರಿಯುತ ಹಾಗೂ ಸಜ್ಜನ ನಾಗರಿಕರನ್ನು ರೂಪಿಸುವ ಹೊಣೆಗಾರಿಕೆ ಅವರ ಮೇಲಿದೆ, ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣಗೊಂಡಿರುವುದರಿಂದ ಶಾಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ತರಗತಿ ಕೊಠಡಿಗಳು, ಸುಧಾರಿತ ಶೈಕ್ಷಣಿಕ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಬಲವಾಗಲಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಸಮಗ್ರ ಹಾಗೂ ಸ್ಪರ್ಧಾತ್ಮಕ ಶಿಕ್ಷಣದ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.



