ಭಂಡಾರ್ಕಾರ್ಸ್:ಅಂತಿಮ ಪದವಿ ವಿದ್ಯಾರ್ಥಿಗಳಿಗೆ “ಸೀನಿಯರ್ಸ್ ಡೇ” ಕರಾಟೆ ಪಟುಗಳಿಗೆ ಸನ್ಮಾನ

ಕುಂದಾಪುರ: ಆಗಸ್ಟ್ 27ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ “ಸೀನಿಯರ್ಸ್ ಡೇ” ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆಯಲ್ಲಿ ಕಂಚಿನ ಪದಕ ಪಡೆದ ವಿದ್ಯಾರ್ಥಿ ಅಜಯ್ ದೇವಾಡಿಗ ಅವರನ್ನು ಕುಂದಾಪುರ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಲಾಯಿತು.
ಅವರೊಂದಿಗೆ ಭಾಗವಹಿಸಿದ ಪವನ್ ಪೂಜಾರಿ, ಚೇತನ್, ಭರತ್, ತರಬೇತುದಾರ ಕೀರ್ತಿಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಛಾತ್ರ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲಲಿತಾದೇವಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಮಹಿಳಾ ವೇದಿಕೆ ಸಂಯೋಜಕರಾದ ಡಾ.ಯಶವಂತಿ ಕೆ., ವಾಣಿಜ್ಯ ವಿಭಾಗದ ಮುಖ್ಯಸ್ಥ ಅರುಣ್ ಎ.ಎಸ್, ಕಂಪ್ಯೂಟರ್ ಸೈನ್ಸ್ ವಿಭಾಗ ಉಪನ್ಯಾಸಕ ಕೃಷ್ಣ, ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಅರ್ಚನಾ ಅರವಿಂದ್ ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಂದ ಚೆಂಡೆ ವಾದನ ಸಾಹಿತಿ ಮನರಂಜನಾ ಕಾರ್ಯಕ್ರಮ ನಡೆಯಿತು.


ಶ್ರೀನಿವಾಸಪುರ ತಾಲ್ಲೂಕಿನ ಹಿರಿಯ ದಲಿತ ಮುಖಂಡ ಶ್ರೀನಿವಾಸನ್ 61 ನೇ ರವರ ಹುಟ್ಟು ಹಬ್ಬ

ಶ್ರೀನಿವಾಸಪುರ: ತಾಲ್ಲೂಕಿನ ಹಿರಿಯ ದಲಿತ ಮುಖಂಡ ದೃವ ನೇತಾರ ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷ ಎಂ. ಶ್ರೀನಿವಾಸನ್ 61 ನೇ ರವರ ಹುಟ್ಟು ಹಬ್ಬವನ್ನು ವಿದಾನ ಪರಿಷತ್ ಸದಸ್ಯ ಎಂ.ಎಲ್. ಅನೀಲ್ ಕುಮಾರ್ ಹಾದಿಯಾಗಿ ಸ್ಥಳಿಯ ದಲಿತ ಸಂಘಟನೆ ಮುಖಂಡರು ಸಂಘ ಸಂಸ್ಥೆಗಳ ಪದಾದಿಕಾರಿಗಳು ಚುನಾಯಿತ ಪ್ರತಿನಿಧಿಗಳು ಸರ್ಕಾರಿ ನೌಕರರು ಹಾಗು ಎಂ. ಶ್ರೀನಿವಾಸನ್ ಯುವ ಬಳಗದಿಂದ ಸಂಬ್ರಮವಾಗಿ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಶುಭಾಷಯಗಳನ್ನು ತಿಳಿಸಿದ್ದಾರೆ.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಎಂ. ಶ್ರೀನಿವಾಸನ್ ಅಭಿಮಾನಿಗಳ ಯುವ ಬಳಗದಿಂದ ಹುಟ್ಟು ಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದರ ಪ್ರಯುಕ್ತ ಕಾರ್ಯಕ್ರಮದ ಕೇಂದ್ರ ಬಿಂದುವಾದ ಶ್ರೀನಿವಾಸನ್ ರನ್ನು ಆತ್ಮೀಯವಾಗಿ ವೇದಿಕೆಗೆ ಬರಮಾಡಿಕೊಂಡು ಕೇಕ್ ಕತ್ತರಿಸಿ ಗೌರವಿಸಿ ಸಂಬ್ರಮ ಸಡಗರದಿಂದ ಹಬ್ಬವನ್ನು ಆಚರಿಸಿ ಮುಂದಿನ ಭವಿಷ್ಯದಲ್ಲಿ ಆಯಸ್ಸು ಆರೋಗ್ಯ ವೃದ್ದಿಯಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕೆಂದು ಶುಭ ಕೋರಿ ಎಲ್ಲಾ ಗಣ್ಯರು ಶುಭಾಷಯಗಳನ್ನು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷ ಆರ್.ಜಿ ನರಸಿಂಹಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ ಮಂಜುನಾಥ್, ರಾಯಲ್ಪಾಡು ಬ್ಲಾಕ್ ಕಾಂಗ್ರೇಸ್ ಮಾಜಿ ಅದ್ಯಕ್ಷ ಸಂಜಯ್‍ರೆಡ್ಡಿ, ದಲಿತ ಮುಖಂಡರಾದ ಉಪ್ಪರಪಲ್ಲಿ ತಿಮ್ಮಯ್ಯ, ರಾಮಾಂಜನಮ್ಮ, ಆವಲಕುಪ್ಪ ಹನುಮಂತಪ್ಪ, ಕೊರ್ನಹಳ್ಳಿ ಟಿ. ನಾರಾಯಣಸ್ವಾಮಿ, ಡಿಪಿಎಸ್ ವೆಂಕಟೇಶ್, ಕಲ್ಲೂರು ವೆಂಕಟೇಶ್, ಯುವ ಕಾಂಗ್ರೇಸ್ ಮುಖಂಡರು, ಪುರಭಾಸದಸ್ಯರಾದ ಉನಿಕಿಲಿ ನಾಗರಾಜ್, ಬಾಸ್ಕರ್, ನೀಲಾವತಿ ಶ್ರೀನಿವಾಸ್, ಮಾಜಿ ಸದಸ್ಯ ಶಂಕರ್, ಅಗ್ರಹಾರ ಮಣಿ, ಆರ್.ವಿ.ಆರ್. ವೆಂಕಟರವಣ, ನರಸಿಂಹ(ಬದ್ರಿ) ಅನೇಕರು ಬಾಗವಹಿಸಿದ್ದರು.

ರಾಜ್ಯದ ಶೇ.60 ಶಿಕ್ಷಕರಲ್ಲಿ ಆರೋಗ್ಯ ಸಮಸ್ಯೆ ಸಮೀಕ್ಷೆ ವರದಿ ಆತಂಕಕಾರಿ: ಶಿಕ್ಷಕರನ್ನು ಅನ್ಯಕಾರ್ಯಗಳಿಗೆ ಬಳಸದಂತೆ ಸುತ್ತೋಲೆಹೊರಡಿಸಿ-ಡಾ.ವೈಎಎನ್

ಕೋಲಾರ:- ರಾಜ್ಯದ ಶೇ.60 ಶಿಕ್ಷಕರು ರಕ್ತದೊತ್ತಡ,ಮಧುಮೇಹ ಮತ್ತಿತರ ಕಾಯಿಲೆಗಳಿಗೆ ತುತ್ತಾಗಿರುವ ಕುರಿತ ಸಮೀಕ್ಷಾ ವರದಿ ಆತಂಕಕಾರಿಯಾಗಿದ್ದು, ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಹೊರತುಪಡಿಸಿ ಅನ್ಯಕಾರ್ಯಗಳಿಗೆ ಬಳಸಿಕೊಳ್ಳದೇ ಒತ್ತಡಮುಕ್ತರಾಗಿಸಲು ಕೂಡಲೇ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಹಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು ನೀಡಿದ ಅಭಿನಂದನೆ ಸ್ವೀಕರಿಸಿ, ಶಿಕ್ಷಕರು,ಉಪನ್ಯಾಸಕರಿಂದ ಕುಂದುಕೊರತೆ ಆಲಿಸಿ ಅವರು ಮಾತನಾಡುತ್ತಿದ್ದರು.
ಸಮೀಕ್ಷೆ ನೀಡಿರುವ ವರದಿಯ ಅರ್ಥ ಶಿಕ್ಷಕರು ಒತ್ತಡದಲ್ಲಿದ್ದಾರೆ ಎಂಬುದೇ ಆಗಿದೆ, ಇವರನ್ನು ಜನಗಣತಿ, ಜಾತಿ ಗಣತಿ,ಮತದಾರರ ಪಟ್ಟಿ ಪರಿಷ್ಕರಣೆ, ಆಧಾರ್‍ಲಿಂಕ್ ಮತ್ತಿತರ ಕಾರ್ಯಗಳಿಗೆ ನಿಯೋಜಿಸುವ ಮೂಲಕ ಒತ್ತಡಕ್ಕೆ ಸಿಲುಕುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಶಿಕ್ಷಕರು ಒತ್ತಡದಲ್ಲಿದ್ದರೆ ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರವೇ ಬಳಸಿಕೊಳ್ಳುವಂತಾಗಬೇಕು ಈ ಸಂಬಂಧ ಶಿಕ್ಷಣ ಸಚಿವರ ಗಮನ ಸೆಳೆಯುವುದಾಗಿ ತಿಳಿಸಿದರು.

94-95ರವರೆಗೂ ಅನುದಾನ ನೀಡಿ


ಕನ್ನಡ ಶಾಲೆ ಉಳಿಸುವ ಅಭಿಯಾನದಡಿ ಹೋರಾಟ ನಡೆಯುತ್ತಿದೆ, ಈ ಹಿನ್ನಲೆಯಲ್ಲಿ 1994-95ರ ನಂತರ ಪ್ರಾರಂಭಗೊಂಡಿರುವ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆರೋಗ್ಯದ ದೃಷ್ಟಿಯಿಂದ ಸರ್ಕಾರಿ,ಖಾಸಗಿ,ಅನುದಾನಿತ ಎಲ್ಲಾ ಶಿಕ್ಷಕರಿಗೆ ಆಯುಷ್ಮಾನ್‍ಭಾರತ್ ಆರೋಗ್ಯ ಕಾರ್ಡ್ ಒದಗಿಸಬೇಕು, ಉಚಿತ ಆರೋಗ್ಯ ತಪಾಸಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.


ಶಿಕ್ಷಕರ ಸಮಸ್ಯೆಗೆತಾರ್ಕಿಕ ಅಂತ್ಯ ಸಿಗಲಿ


ಈ ಬಾರಿಯ ಸದನ ಸೆ.12 ರಿಂದ ಆರಂಭಗೊಳ್ಳುತ್ತಿದ್ದು, ಈ ಸದನದಲ್ಲಿ ನೂತನ ಪಿಂಚಣಿ ಪದ್ದತಿ ತೆಗೆದು ಹಳೆ ಪಿಂಚಣಿ ಪದ್ದತಿ ಜಾರಿ, ವರ್ಗಾವಣೆ ಕಾಯಿದೆಯಲ್ಲಿನ ಲೋಪದೋಷ ನಿವಾರಣೆ, ಬಡ್ತಿ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರು, ಪ್ರೌಢಶಾಲಾ ವೃತ್ತಿ ಶಿಕ್ಷಕರಸಮಸ್ಯೆಗಳು, ಪಿಯುಸಿ ಉಪನ್ಯಾಸಕರ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ನೇತೃತ್ವದಲ್ಲಿ ಎಲ್ಲಾ ಪದವೀಧರ, ಶಿಕ್ಷಕರ ಕ್ಷೇತ್ರದ ಎಂಎಲ್‍ಸಿಗಳ ಸಭೆ ಕರೆದು ಈ ಎಲ್ಲಾ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಆಗ್ರಹಿಸಿದರು.
ಈ ವರ್ಷದ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಮಾರ್ಚ್ ವೇಳೆಗೆ 7ನೇ ವೇತನ ಆಯೋಗದ ವರದಿ ಜಾರಿ, ಕೇಂದ್ರ ಸಮಾನ ವೇತನ ನೀಡುವ ಮೂಲಕ ಶಿಕ್ಷಕರು,ನೌಕರರ ಹಿತ ಕಾಯಲು ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಡ ಹಾಕುವುದಾಗಿ ತಿಳಿಸಿದರು.
ಖಾಸಗಿ ಶಾಲಾ,ಕಾಲೇಜುಗಳ ಮಾನ್ಯತೆ ನವೀಕರಣ ಕಗ್ಗಂಟಾಗಿದ್ದು, ಈ ಸಂಬಂಧ ನೇಮಿಸಿದ್ದ ಸಂಕನೂರು ಸಮಿತಿ
ಶಿಫಾರಸ್ಸುಗಳನ್ನು ಯಥಾವತ್ ಜಾರಿಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.


ಖಾಲಿಹುದ್ದೆಗಳಿಗೆ ಏಕಗವಾಕ್ಷಿ ಪದ್ದತಿ


ಅನುದಾನಿತ ಶಾಲೆಗಳಲ್ಲಿ 2020ರ ತನಕ ಖಾಲಿ ಹುದ್ದೆ ತುಂಬಲು ಅನುಮತಿ ನೀಡಿ ಅನುಮೋದಿಸಲು ಏಕಗವಾಕ್ಷಿ ಪದ್ದತಿ ಜಾರಿಗೆ ತರಬೇಕು, ಅಲೆದಾಟ,ವಿಳಂಬ ತಪ್ಪಿಸಬೇಕು ಎಂದರು.
ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಿಸುವ ಮೂಲಕ ಪಿಯು ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ಶಿಸ್ತು ಮೂಡಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರಿಗೆ ಪ್ರತಿ ತಿಂಗಳ 1ನೇ ತಾರೀಖು ವೇತನ ಬಟವಾಡೆಯಾಗಬೇಕು, ಅನುದಾನದ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ ಕೂಡಲೇ ಮಂಜೂರು ಮಾಡಿಸುವೆ ಎಂದು ಬಿಇಒ ಅವರಿಗೆ ದೂರವಾಣಿ ಮೂಲಕ ತಾಕೀತು ಮಾಡಿದರು.
ಶಿಕ್ಷಕರ ಸಂಘಗಳು ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡುವಂತೆ ಸೂಚಿಸಿದ ಅವರು, ಸದನದಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ವಕೀಲ ಎಂ.ಪಿ.ನಾರಾಯಣಸ್ವಾಮಿ, ನಗರಸಭೆ ಸದಸ್ಯ ಮುರಳಿಗೌಡ, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಉದಯಕುಮಾರ್, ಪಿಯು ಡಿಸಿ ರಾಮಚಂದ್ರಪ್ಪ, ಉಪನ್ಯಾಸಕ ಚಂದ್ರಪ್ಪ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ,ಖಾಸಗಿ ಶಾಲೆಗಳ ಎಸ್.ಮುನಿಯಪ್ಪ, ಬಡ್ತಿ ಶಿಕ್ಷಕರ ಸಂಘದ ಮುನಿಯಪ್ಪ,ಶ್ರೀನಿವಾಸಗೌಡ, ಚೆಂಗಲರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೆಯುಡಬ್ಲ್ಯೂಜೆಗೆ ಭೇಟಿ ನೀಡಿದ್ದ ಇಂದಿರಾ ಗಾಂಧಿ- ಆಕಾಶವಾಣಿಯ ಮಧುರ ಧ್ವನಿ ನಾಗಮಣಿ ಎಸ್ ರಾವ್‌ಗೆ ಕೆಯುಡಬ್ಲ್ಯುಜೆ ಗೌರವ

ಬೆಂಗಳೂರು: “ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್” ಎಂಬ ಅಚ್ಚಕನ್ನಡದ ಧ್ವನಿಯನ್ನು ಹಳೆ ತಲೆಮಾರಿನ ಯಾರೂ ಮರೆತಿಲ್ಲ. ಮಧುರ ನುಡಿಯ ವಾರ್ತಾವಾಚಕಿ ನಾಗಮಣಿ ಎಸ್ ರಾವ್ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದ್ದು ಅವಿಸ್ಮರಣೀಯ ಕ್ಷಣ.

ಪತ್ರಕರ್ತೆಯಾಗಿ, ಲೇಕಕಿಯಾಗಿ,ಆಕಾಶವಾಣಿಯ ಸುದ್ದಿ ವಿಭಾಗದ ಮುಖ್ಯಸ್ಥೆಯಾಗಿ ರಾಜ್ಯ ಹಾಗೂ ದೇಶದ ಗಣ್ಯರಿಂದ ಶಹಬ್ಬಾಸ್‌ಗಿರಿ ಪಡೆದ 88ರ ಹರೆಯದ ನಾಗಮಣಿ ಎಸ್ ರಾವ್ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದ ಸಂಭ್ರಮ ಕೆಯುಡಬ್ಲ್ಯುಜೆಯದ್ದು.

ಪ್ರಶಸ್ತಿಗಳ ಸರಮಾಲೆ


ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ವಿಶ್ವ ಮಹಿಳೆ, ಕನ್ನಡ ಸಾರಥಿ,ಮುಂತಾದ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಸರಕಾರದ ಪ್ರತಿಷ್ಠಿತ , ಟಿಎಸ್ಸಾರ್, ಆರ್ಯಭಟ, ಕೆಂಪೇಗೌಡ, ಡಿ.ವಿ.ಜಿ ಸದ್ಭಾವನಾ,ಕರ್ನಾಟಕ ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳಿಗೆ ಬಾಜನರಾದ ಅಪರೂಪದ ಸಾಧಕಿ ಕರ್ನಾಟಕದ ಹೆಮ್ಮೆಯ ಸು ಪುತ್ರಿಯಾದ ನಾಗಮಣಿಯವರು ಸುದ್ದಿ ಮನೆಯ ಕಣ್ಮಣಿಯಾಗಿದ್ದಾರೆ.

“ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್” ಎಂದು ನಮ್ಮ ಒತ್ತಾಯದ ಮೇರೆಗೆ ಪುನರುಚ್ಚರಿಸಿದಾಗ ಮತ್ತದೇ ಮಧುರ ಕಂಠ ಪ್ರತಿದ್ವನಿಸಿದ ಹಿತಾನುಭವ ಮರೆಯಲಾಗದ್ದು. ಸಂಜೆ ಭೇಟಿಯಲ್ಲಿ ಅವರ ಬದುಕು, ಬರಹದ ಹೆಜ್ಜೆಗುರುತನ್ನು ನಮ್ಮೊಂದಿಗೆ ಹಂಚಿಕೊಂಡರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘ (ಕೆಯುಡಬ್ಲ್ಯುಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರ ಮನೆಯಲ್ಲಿ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್ ಅವರನ್ನು ಪದ್ಮನಾಭ ನಗರ ನಿವಾಸದಲ್ಲಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತ್ವದಲ್ಲಿ ಅಭಿನಂದಿಸಿ, ಗೌರವಿಸಲಾಯಿತು.

ಈ ಕುರಿತು ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, “ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಸಾಧಕರನ್ನು ಗುರುತಿಸಿ ಅವರನ್ನೆಲ್ಲಾ ಒಂದೇ ವೇದಿಕೆಗೆ ಅಹ್ವಾನಿಸಿ ಗೌರವಾರ್ಪಣೆ ಸಲ್ಲಿಸುವ ಬದಲಾಗಿ ಅವರ ಮನೆಗೇ ತೆರಳಿ ಸನ್ಮಾಸಲಾಗುತ್ತಿದೆ. ಅದರಂತೆ, ಮೂವತ್ತಮೂರು ವರ್ಷಗಳ ಸುದೀರ್ಘ ಅವಧಿ ಸೇವೆ ಸಲ್ಲಿಸಿದ ಹಿರಿಯರಾದ ನಾಗಮಣಿ ಎಸ್ ರಾವ್ ಅವರಂತಹ ಸಾಧಕಿ ಮನೆಗೆ ಹೋಗಿ ಗೌರವಿಸುವುದರಿಂದ ಕೆಯುಡಬ್ಲ್ಯುಜೆ ಗೌರವ ಘನತೆ ಹೆಚ್ಚಾಗುತ್ತದೆ,” ಎಂದು ಅಭಿಪ್ರಾಯ ಪಟ್ಟರು.

ತಮ್ಮಇಳಿ ವಯಸ್ಸಿಲ್ಲಿ ಲವಲವಿಕೆಯಿಂದ ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸುವ ಅವರನ್ನು ಅಭಿನಂದಿಸಿದ ಸಾರ್ಥಕತೆಯಿಂದ ದೇವರು ನಾಗಮಣಿ ಮೇಡಂ ಅವರಿಗೆ ದೇವರು ಆಯುರಾರೋಗ್ಯ ನೀಡಿ ಹೆಚ್ಚುಕಾಲ ಸಮಾಜ ಮುಖಿಯಾಗಿ ಕೆಲಸ ಮಾಡುವಂತೆ ಅನುಗ್ರಹಿಸಲಿ ಎಂದು ಕೆಯುಡಬ್ಲ್ಯುಜೆ ಆಶಿಸುತ್ತದೆ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ನಾಗಮಣಿ ಎಸ್. ರಾವ್, “ನನ್ನ ವೃತ್ತಿ ಜೀವನದಲ್ಲಿ ಸಾರ್ಥಕತೆಯ ಖುಷಿಕಂಡಿದ್ದೇನೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯರನ್ನು ಗುರುತಿಸಿ ಅದರಲ್ಲೂ ಮನೆ ಬಾಗಿಲಿಗೇ ತೆರಳಿ ಅಭಿನಂದಿಸುತ್ತಿರುವುದು ಶ್ಲಾಘನೀಯ. ಇಂತಹ ಉತ್ತಮ ಕಾರ್ಯ ನಿರಂತರವಾಗಿ ಮುಂದುವರಿಯಲಿ,” ಎಂದು ಹಾರೈಸಿದರು.

ನೆನಪಿನ ಬುತ್ತಿಯಿಂದ


1965ರಲ್ಲಿ ಕೇಂದ್ರ ವಾರ್ತಾ ಸಚಿವೆಯಾಗಿದ್ದ ಇಂದಿರಾ ಗಾಂಧಿಯವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಹಳೆಯ ಕಲ್ಲಿನ ಕಟ್ಟಡಕ್ಕೆ ಭೇಟಿ ನೀಡಿದಾಗ, ಅಲ್ಲಿದ್ದ ಏಕೈಕ ಮಹಿಳೆ ನಾಗಮಣಿಯವರೇ ಹೂವಿನ ಹಾರ ಹಾಕಿ ಸ್ವಾಗತಿಸಿದ್ದನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿದ್ದನ್ನು ನೆನೆದರು.

ಎರಡನೇ ಬಾರಿ ಬೆಂಗಳೂರಿಗೆ ಆಗಮಿಸಿದ್ದ ವಾರ್ತಾ ಸಚಿವೆ ಇಂದಿರಾಗಾಂಧಿಯವರು ಅಂದು ಹಲವಾರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಸಮಯದಲ್ಲಿ ನಾಗಮಣಿಯವರೂ ಪರ್ತಕರ್ತೆಯಾಗಿ ಅವರೊಂದಿಗೆ ಸುತ್ತಾಡಿದ್ದರು. ನಂತರ ಇಂದಿರಾಗಾಂಧಿ ಅವರು ಊಟ ಮಾಡುವ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಕಾರ್ಯಕ್ರಮಗಳಲ್ಲಿ ಓಡಾಡಿ ಸಾಕಾಯಿತೇ ಎಂದು ಆತ್ಮೀಯವಾಗಿ ಮಾತಾಡಿಸಿದ್ದನ್ನು ನಾಗಮಣಿ ಅವರು ಮೆಲುಕು ಹಾಕಿದರು.

ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಮಾತನಾಡಿ, ನಾಗಮಣಿ ಮೇಡಂ ವಿಜ್ಞಾನ , ಕ್ರೀಡಾ ಕಾರ್ಯಕ್ರಮ ,ಸಾಹಿತ್ಯ ಸಮ್ಮೇಳನ,ಕವಿಗೋಷ್ಟಿ,ವಿಧಾನ ಸಭೆ, ವಿಧಾನ ಪರಿಷತ್ ಕಲಾಪಗಳು ಮಾತ್ರವಲ್ಲದೆ ಅಂದು ನಡೆಯುತ್ತಿದ್ದ ಯುದ್ಧದ ಸುದ್ದಿಯನ್ನು ಬಿತ್ತರಿಸುವ ಜೊತೆಗೆ ದೇಶದ ಹಲವು ಗಣ್ಯರ ಸಂದರ್ಶನವನ್ನು ನಡೆಸಿರುವ ಬಗ್ಗೆ ಉಲ್ಲೇಖಿಸಿದರು.

ಆಕಾಶವಾಣಿ ಯ ಹಿರಿಯ ಉದ್ಘೋಷಕಿ ಸುಮತಿ ಮಾತನಾಡಿ, ನಾಗಮಣಿ ಯವರ ಸಮಾ ಮುಖಿ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿ,ರಾಜ್ಯ ಪತ್ರಕರ್ತರ ಸಂಘವು ಹಿರಿಯ ಸಾಧಕ -ಸಾಧಕಿಯರನ್ನು ಗುರುತಿಸಿ ಸನ್ಮಾನಿಸುವ ಸತ್ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘ ವನ್ನು ಅಭಿನಂದಿಸಿದರು.

ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್ ಮತ್ತು ಕಿರಣ್ ಮೆಯಿ ನಾಗಮ‌ಣಿ ಎಸ್ ರಾವ್ ಅವರ ಒಡನಾಟದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ವಂದಿಸಿದರು.
ರಾಜ್ಯ ಸಮಿತಿ ಸದಸ್ಯರಾದ ವಾಸುದೇವ ಹೊಳ್ಳ , ದೇವರಾಜ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ಮತ್ತು ಸಂಘದ ಸದಸ್ಯರಾ ಪ್ರಶಾಂತ್, ಅಜಿತ್ ಹಾಜರಿದ್ದರು.

ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಲಿದೆ

ಕುಂದಾಪುರ: ಆಗಸ್ಟ್ 28ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್ ಘಟಕ, ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯ, ದೆಹಲಿ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ” ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ” ಕುರಿತು ಜಾಗೃತಿ ಕಾರ್ಯಕ್ರಮ ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ ನಡೆಯಲಿದೆ. ಮಣಿಪಾಲದ ಎಂ.ಐ.ಟಿಯ ಸಹಪ್ರಾಧ್ಯಾಪಕ ಡಾ. ಅನಿಶ್ ಕುಮಾರ್ ವಾರಿಯರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರಿ ಮಳೆಯಿಂದ ಚೆಲುವನಹಳ್ಳಿಯಲ್ಲಿ ಕೋಳಿಗಳ ಮಾರಣಹೋಮ : ನಷ್ಟಕ್ಕೀಡಾದ ರೈತನಿಗೆ ಸೂಕ್ತ ಪರಿಹಾರಕ್ಕೆ-ಸಿಎಂಆರ್ ಶ್ರೀನಾಥ್ ಆಗ್ರಹ

ಕೋಲಾರ:- ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಯಿಂದ 500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಮತ್ತು ರೈತರಿಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು,ಸೂಕ್ತ ಪರಿಹಾರ ಒದಗಿಸಬೇಕು ಎಂದು ಜೆಡಿಎಸ್ ಮುಖಂಡ ಹಾಗೂ ಸಮಾಜಸೇವಕ ಸಿಎಂಆರ್ ಶ್ರೀನಾಥ್ ಆಗ್ರಹಿಸಿದರು.
ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿರುವ ಚೆಲುವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಮಳೆ ನೀರು ನುಗ್ಗಿ 8500 ಕೋಳಿಗಳ ಮಾರಣಹೋಮವಾಗಿ ಕಣ್ಣೀರುಡುತ್ತಿದ್ದ ರೈತನಿಗೆ ಸಾಂತ್ವಾನ ಹೇಳಿದರಲ್ಲದೇ ಗ್ರಾಮದಲ್ಲಿ ಆಗಿರುವ ಬೆಳೆ ಹಾನಿ ವೀಕ್ಷಿಸಿದರು.
ಇಷ್ಟೊಂದು ಅಪಾರ ಹಾನಿಗೆ ರಾಜಕಾಲುವೆ ಒತ್ತುವರಿಯೇ ಕಾರಣವಾಗಿದ್ದು, ಜಿಲ್ಲಾಡಳಿತ ಕೂಡಲೇ ಸರ್ವೇ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಆಗಬಹುದಾದ ಮತ್ತಷ್ಟು ಹಾನಿಯನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಹಾನಿ ತಡೆಯುವ ಕಾರ್ಯದಲ್ಲಿ ರೈತರು ಜವಾಬ್ದಾರಿಯಿಂದ ವರ್ತಿಸಬೇಕು, ಇದು ನಿಮ್ಮದೇ ಗ್ರಾಮವಾಗಿದೆ, ರಾಜಕಾಲುವೆ,ಕೆರೆ ಒತ್ತುವರಿ ಮಾಡಿದ್ದರೆ ತಾವಾಗಿಯೇ ತೆರವುಗೊಳಿಸಿ ಇಂತಹ ಹಾನಿ ತಪ್ಪಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹಾನಿ ತಡೆಯಲು ಕೃಷಿಗೆ ನೀರು ನೀಡಿ


ಕೆಸಿ ವ್ಯಾಲಿಯಿಂದ ಕೆರೆಗಳು ಭರ್ತಿಯಾಗಿವೆ, ಇದರ ಜತೆಗೆ ಅಪಾರ ಪ್ರಮಾಣದಲ್ಲಿ ಮಳೆಯೂ ಬೀಳುತ್ತಿರುವುದರಿಂದ ನೀರಿನ ಹರಿವು ಹೆಚ್ಚಿದೆ ಎಂದ ಅವರು, ಕೆಸಿ ವ್ಯಾಲಿಯಿಂದ ತುಂಬಿರುವ ಕೆರೆಗಳಲ್ಲಿ ಮಳೆ ನೀರು ಸೇರಿಕೊಂಡಿದ್ದು, ರೈತರು ಕೃಷಿಗೆ ಈ ನೀರನ್ನು ಬಳಸಿಕೊಳ್ಳಲು ತೂಬು ತೆರೆಯುವುದರಿಂದ ಮಳೆ ವ್ಯರ್ಥವಾಗಿ ಸಮುದ್ರಕ್ಕೆ ಹೋಗುವುದನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಡಳಿತ ಬೆಳೆ ಹಾನಿಯ ಕುರಿತು ವೈಜ್ಞಾನಿವಾಗಿ ನಷ್ಟದ ಸಮೀಕ್ಷೆ ನಡೆಸಬೇಕು, ರೈತರಿಗೆ ಒಂದಿಷ್ಟು ಪುಡಿಗಾಸು ನೀಡಿ ಕೈತೊಳೆದುಕೊಳ್ಳುವ ಮನಸ್ಥಿತಿಯಿಂದ ಹೊರಬರಬೇಕು, ಆಗಿರುವ ನಷ್ಟಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಹಾನಿಗೆ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ರಾಜಕಾಲುವೆ ಸರಿಪಡಿಸಲು ನರೇಗಾ ಕಾಮಗಾರಿಯನ್ನು ಬಳಸಿಕೊಳ್ಳಬೇಕು, ಸ್ವಯಂಪ್ರೇರಿತರಾಗಿ ರೈತರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಕೂಡಲೇ ಬಿಟ್ಟುಕೊಡಬೇಕು ಎಂದರು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಸುಧಾಕರ್, ಗ್ರಾ.ಪಂ ಅಧ್ಯಕ್ಷ ರಾಜಣ್ಣ, ಸದಸ್ಯ ಎ.ಎಸ್.ನಂಜುಂಡಗೌಡ ಮತ್ತಿತರರಿದ್ದರು.

ಸಾಲ ಮರುಪಾವತಿಯಲ್ಲಿ ಪ್ರಾಮಾಣಿಕತೆ ತೋರಿದರೆ ಮಾತ್ರ ನೆರವು ನೀಡಿಕೆ ಪುರುಷ ಸ್ವಸಹಾಯ ಸಂಘಗಳಿಗೆ ಬ್ಯಾಲಹಳ್ಳಿ ಗೋವಿಂದಗೌಡ ಕಿವಿಮಾತು

ಕೋಲಾರ : – ಪುರುಷ ಸ್ವಸಹಾಯ ಸಂಘಗಳ ಸದಸ್ಯರು ಸಾಲ ಮರುಪಾವತಿಯಲ್ಲಿ ಮಹಿಳೆಯರಂತೆ ಪ್ರಾಮಾಣಿಕತೆ ತೋರಿದರೆ ಮತ್ತಷ್ಟು ಸಾಲ ಸೌಲಭ್ಯ ಒದಗಿಸಲು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಸಿದ್ಧವಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಿವಿಮಾತು ಹೇಳಿದರು . ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಗರದ ಅಂತರಗಂಗೆ ಪುರುಷ ಸ್ವಸಹಾಯ ಸಂಘಕ್ಕೆ ಭದ್ರತೆ ರಹಿತ ೫ ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು . ಅವಿಭಜಿತ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಭದ್ರತೆ ರಹಿತ ಸಾಲ ಸೌಲಭ್ಯ ಕಲ್ಪಿಸಿದೆ , ಸಾಲ ಮರುಪಾವತಿಯಲ್ಲೂ ಮಹಿಳೆಯರು ಶೇ .೧೦೦ ಸಾಧನೆಯಾಗುತ್ತಿದ್ದು , ಬ್ಯಾಂಕಿಗೆ ಬೆನ್ನೆಲುಬಾಗಿದ್ದಾರೆ , ಇದೇ ಮಾದರಿಯಲ್ಲಿ ಪುರುಷರು ಸಾಲ ಮರುಪಾವತಿಯಲ್ಲಿ ಬದ್ಧತೆ ತೋರಿದರೆ ನಿಮಗೂ ಸಾಲ ಒದಗಿಸಲು ಸಿದ್ಧ ಎಂದು ತಿಳಿಸಿದರು . ಭದ್ರತೆ ಇಲ್ಲದೇ ಮಹಿಳೆಯರಿಗೆ ಸಾಲ ನೀಡಲು ಮುಂದಾದಾಗ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರು , ಮಹಿಳೆಯರು ಸಾಲ ಮರುಪಾವತಿಸುವರೇ , ಬ್ಯಾಂಕಿನ ಗತಿಯೇನು ಎಂದೆಲ್ಲಾ ಪ್ರಶ್ನಿಸಿದ್ದರು ಎಂದು ಸ್ಮರಿಸಿದ ಅವರು , ಇದೀಗ ಮಹಿಳೆಯರೇ ಸಮರ್ಪಕ ಸಾಲ ವಾರುಪಾವತಿ , ಉಳಿತಾಯದ ಹಣ ಠೇವಣಿ ಇಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಎಂದು ತಿಳಿಸಿದರು .
ಪುರುಷರು ಸ್ವಸಹಾಯ ಸಂಘ ರಚಿಸಿಕೊಂಡು ಸ್ವಾವಲಂಬಿ ಬದುಕಿನ ಸಂಕಲ್ಪದೊಂದಿಗೆ ಸಾಲಕ್ಕೆ ಮುಂದಾದರೆ ನಿಯಮಾನುಸಾರ ಬ್ಯಾಂಕ್ ಸಾಲ ವಿತರಿಸಲು ಸಿದ್ಧವಿದೆ ಎಂದ ಅವರು , ಸಕಾಲಕ್ಕೆ ಸಾಲ ಮರುಪಾವತಿಸಿ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು . ಕೋಲಾರ ಡಿಸಿಸಿ ಬ್ಯಾಂಕ್ ಬಡವರು , ರೈತರು , ಮಹಿಳೆಯರ ಬದುಕು ಹಸನಾಗಿಸುವ ಬದ್ಧತೆ ಹೊಂದಿದೆ , ಸಂಘ ರಚಿಸಿಕೊಂಡು ಉಳಿತಾಯದ ಹಣವಿಡುವ ಎಲ್ಲಾ ಸಂಘಗಳಿಗೂ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ , ಎಂದಿಗೂ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು . ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ , ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಲಕ್ಷಾಂತರ ತಾಯಂದಿರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಮೀಟರ್ ಬಡ್ಡಿ ದಂಧೆಗೆ ಜಿಲ್ಲೆಯಲ್ಲಿ ಕಡಿವಾಣ ಬಿದ್ದಿದೆ ಎಂದ ಅವರು , ದಿವಾಳಿಯಾಗಿದ್ದ ಬ್ಯಾಂಕಿಗೆ ಅಧ್ಯಕ್ಷರೆಂದು ಗೋವಿಂದಗೌಡರನ್ನು ಟೀಕಿಸುತ್ತಿದ್ದ ಕಾಲವಿತ್ತು ಆದರೆ ಇದೀಗ ಬ್ಯಾಂಕನ್ನು ಇಷ್ಟೊಂದು ಉನ್ನತಮಟ್ಟಕ್ಕೆ ತಂದ ಕೀರ್ತಿಗೂ ಅವರು ಭಾಜನರಾಗಿದ್ದಾರೆ ಎ ೦ ದರು . ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ , ಡಿಸಿಸಿ ಬ್ಯಾಂಕನ್ನು ಜನತೆ ಮರೆತೇ ಹೋಗಿದ್ದರು ಆದರೆ ಗೋವಿಂದಗೌಡರು ಅಧ್ಯಕ್ಷರಾದ ನಂತರ ಇಂದು ಎರಡೂ ಜಿಲ್ಲೆಗಳಲ್ಲೂ ಡಿಸಿಸಿ ಬ್ಯಾಂಕ್‌ ಮನೆಮಾತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು .
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ
ಕೆ.ಎಸ್‌.ಗಣೇಶ್ , ಸಹಕಾರ ರಂಗದಿಂದ ಮಾತ್ರ ಕಟ್ಟಕಡೆಯ ಬಡವನಿಗೂ ಸಾಲ ಸಿಗಲು ಸಾಧ್ಯ ಎಂಬುದನ್ನು ಗೋವಿಂದಗೌಡರು ಸಾಧಿಸಿ ತೋರಿಸಿದ್ದಾರೆ , ಮನೆ , ಜಮೀನು ಇಲ್ಲದವರೂ ಇಂದು ಸಾಲ ಪಡೆದು ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು . ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ , ಹಿರಿಯ ಪತ್ರಕರ್ತ ಅಬ್ಬಣಿ ಶಂಕರ್ , ಪತ್ರಕರ್ತರಾದ ಜಗದೀಶ್ , ಆಸೀಪ್ , ಶಿವ , ಬಾಲು , ದೀಪಕ್ , ಸುದರ್ಶನ್ , ಶ್ರೀನಿವಾಸ್ , ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು .

ಆದಿಜಾಂಬವ ಸಮುದಾಯದ ಬೇಡಿಕೆ ಈಡೇರಿಕೆ ಸಂಬಂಧ ಮುಖ್ಯಮಂತ್ರಿಗಳ ಭೇಟಿ- ಕೆ.ಎಚ್.ಮುನಿಯಪ್ಪ ಸ್ಪಷ್ಟನೆ

ಕೋಲಾರ : – ರಾಜ್ಯ ಆರೋಗ್ಯ ಸಚಿವ ಸುಧಾಕರ್‌ ಜತೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು , ಬಿಜೆಪಿ ಸೇರಲಿದ್ದಾರೆ ಎಂದು ಹರಡಿರುವ ವದಂತಿಗಳನ್ನು ಖಂಡಿಸಿ ಸ್ಪಷ್ಟನೆ ನೀಡಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಇದನ್ನು ತಳ್ಳಿ ಹಾಕಿದ್ದು , ತಾವು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ . ಆದಿ ಜಾಂಬವ ಸಮುದಾಯದ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸಿಎಂರನ್ನು ಭೇಟಿಯಾಗಿದ್ದಾಗಿ ಸ್ಪಷ್ಟಪಡಿಸಿದ ಅವರು , ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಈ ಸಮುದಾಯದ ಜನರ ಬೇಡಿಕೆಗಳ ಕುರಿತು ಸಿಎಂ ಗಮನಕ್ಕೆ ತರಲು ಹೋಗಿದೆ ಎಂದು ತಿಳಿಸಿದ್ದಾರೆ . ಅದರಂತೆ ಜಿಲ್ಲೆಯ ಆವಣಿ ಪುಣ್ಯಕ್ಷೇತ್ರದಲ್ಲಿ ಆದಿಜಾಂಬವಸ್ವಾಮಿ ದೇವಾಲಯ , ಮಾತಂಗಮುನಿ ಅರುಂಧತಿ ಮಾತೆಯ ಸಮುದಾಯ ಭವನಕ್ಕೆ ೫ ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಮುಳಬಾಗಿಲು ತಾಲ್ಲೂಕಿನ ಕೆಲವು ಸಮುದಾಯದ ಮುಖಂಡರೊಂದಿಗೆ ಸಿಎಂ ಭೇಟಿಯಾಗಿ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ .
ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿ ಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ವರಕೊಂಡದ ಆದಿಜಾಂಬವ ಮಹಾ ಗುರು ಸಂಸ್ಥಾನಮಠಂ ಟ್ರಸ್ಟ್‌ಗೆ ಗ್ರಾಮದ ಸರ್ವೇ ನಂ . ೨೫೦ ರಲ್ಲಿ ೧೮.೩೦ ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡುವಂತೆ ಕೋರಿದ್ದು , ಅಲ್ಲಿನ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿರುವ ಹಿನ್ನಲೆಯಲ್ಲಿ ಸಚಿವ ಸುಧಾಕರ್‌ರೊಂದಿಗೆ ಕೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಮೀನು ಮಂಜೂರಾತಿಗೆ ಮನವಿ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ . ಆದರೆ ಈ ಭೇಟಿಯನ್ನು ಕೆಲವರು ನಾನು ಬಿಜೆಪಿಗೆ ಸೇರಲು ಹೋಗಿದ್ದೆ ಎಂದು ವದಂತಿ ಹಬ್ಬಿಸಿರುವ ಕುರಿತು ವಿಷಾದ ವ್ಯಕ್ತಪಡಿಸಿದ ಅವರು , ತಾವು ನಿಷ್ಟಾವಂತ ಕಾಂಗ್ರೆಸ್ಸಿಗನಾಗಿದ್ದು , ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಆಲೋಚನೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
.

ರಿ. ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ರಾಜ್ಯ ಸಮ್ಮೇಳನಕ್ಕೆ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ರಾಜ್ಯ ಸಮ್ಮೇಳನಕ್ಕೆ ತೆರಳಿದರು

ಶ್ರೀನಿವಾಸಪುರ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬೃಹತ್ ಕಾರ್ಯಕರ್ತರ ರಾಜ್ಯ ಸಮ್ಮೇಳನವು ಬೆಂಗಳೂರು ಗ್ರಾಮಾಂತರದ ಶ್ರೀ ಚನ್ನ ಬೈರೇಗೌಡ ಕ್ರೀಡಾಂಗಣ, ಹೊಸಕೋಟೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಶ್ರೀನಿವಾಸಪುರ ತಾಲ್ಲೂಕು ಆರ್.ಪಿ.ಐ. ಮತ್ತು ಎಸ್.ಎಸ್.ಡಿ. ಸಂಘಟನೆಯ ಮುಖಂಡರಾದ ಒಳಗೇರನಹಳ್ಳಿ ರಾಮಾಂಜನಮ್ಮ, ಚಲ್ದಿಗಾನಹಳ್ಳಿ ಈರಪ್ಪ, ಮಲ್ಲಗಾನಹಳ್ಳಿ ಪಾಪಣ್ಣ, ನೇತೃತ್ವದಲ್ಲಿ ತಾಲ್ಲೂಕಿನ ಅನೇಕ ಕಾರ್ಯಕರ್ತರು ಸಂಘಟಿತರಾಗಿ ಪಟ್ಟಣದ ತಾಲ್ಲೂಕು ಕಚೇರಿ ಮುಂಬಾಗ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆಯನ್ನು ಸಲ್ಲಿಸಿ ರಾಜ್ಯ ಸಮ್ಮೇಳನಕ್ಕೆ ತೆರಳಿದರು. ಈ ವೇಳೆಯಲ್ಲಿ ಉಪ್ಪರಪಲ್ಲಿ ತಿಮ್ಮಯ್ಯ, ಆರ್.ಪಿ.ಐ. ಮುಖಂಡ ಬಸನಪಲ್ಲಿ ಬಿ.ಐ. ನರಸಿಂಹಯ್ಯ, ರೆಡ್ಡೆಪ್ಪ, ಅನೇಕ  ಕಾರ್ಯಕರ್ತರು ಹಾಜರಿದ್ದರು.