


ಶ್ರೀನಿವಾಸಪುರ, ಜೂ.16: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶೇರು ಸಂಗ್ರಹಣಾ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಪತ್ರಕರ್ತರಿಂದ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಪತ್ರಕರ್ತರ ಆರ್ಥಿಕ ಭದ್ರತೆ, ಸಾಮಾಜಿಕ ಕಲ್ಯಾಣ ಮತ್ತು ವೃತ್ತಿ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾದ ಈ ಅಭಿಯಾನದಲ್ಲಿ ಅನೇಕ ಪತ್ರಕರ್ತರು ಶೇರುದಾರರಾಗಿ ನೋಂದಣಿ ಮಾಡಿಕೊಂಡು ಸಂಘದ ಸದಸ್ಯತ್ವ ಪಡೆದರು. ಸಂಘದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್, ಪತ್ರಕರ್ತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಘವು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು. ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ತುರ್ತು ಆರ್ಥಿಕ ನೆರವು, ಉಳಿತಾಯ ಯೋಜನೆಗಳು ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಸದಸ್ಯರು ಯಶಸ್ವಿನಿ ಆರೋಗ್ಯ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಪತ್ರಕರ್ತರಿಗೆ ನಿವೇಶನ ಹಂಚಿಕೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಮನವಿ ಸಲ್ಲಿಸಲಾಗುತ್ತಿದ್ದು, ಈ ಕುರಿತು ಸಂಘವು ಸಕ್ರಿಯ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ಉಪಾಧ್ಯಕ್ಷ ಅಬ್ಬನಿ ಶಂಕರ್ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಶೇರುದಾರರಾಗಿ ಸೇರ್ಪಡೆಯಾದರೆ ಸಂಘದ ಆರ್ಥಿಕ ಸಾಮರ್ಥ್ಯ ಹೆಚ್ಚಳವಾಗಲಿದ್ದು, ಸದಸ್ಯರಿಗಾಗಿ ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿರ್ದೇಶಕರಾದ ರಾಜೇಂದ್ರ ಸಿಂಹ, ರವಿ ಹಾಗೂ ಶಾಮ್ಗಾರ್ ಮಾತನಾಡಿ, ಜಿಲ್ಲೆಯ ಎಲ್ಲ ಪತ್ರಕರ್ತರು ಸಹಕಾರ ಸಂಘದ ಸದಸ್ಯತ್ವ ಪಡೆದು ಯಶಸ್ವಿನಿ ಆರೋಗ್ಯ ಯೋಜನೆ, ಸಾಲ ಸೌಲಭ್ಯ ಹಾಗೂ ಇತರ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯಮನೂರ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ, ಖಜಾಂಚಿ ಲಕ್ಷ್ಮಣ ಬಾಬು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ. ಉಪೇಂದ್ರ, ಸಹಕಾರ ಸಂಘದ ನಿರ್ದೇಶಕರಾದ ಶಬ್ಬೀರ್ ಅಹ್ಮದ್ ಹಾಗೂ ಸಿ.ವಿ. ನಾಗರಾಜ್, ಹಿರಿಯ ಪತ್ರಕರ್ತರಾದ ಚೌಡರೆಡ್ಡಿ, ಕೆ.ವಿ. ನಾಗರಾಜ್, ಚೌಡಪ್ಪ, ವೇಣುಗೋಪಾಲ್ ಸೇರಿದಂತೆ ಸ್ಥಳೀಯ ಪತ್ರಕರ್ತರು, ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಭಿಯಾನಕ್ಕೆ ದೊರೆತಿರುವ ಉತ್ತಮ ಸ್ಪಂದನೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿಯೂ ಸದಸ್ಯತ್ವ ಹಾಗೂ ಶೇರು ಸಂಗ್ರಹಣಾ ಅಭಿಯಾನಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

