ಆದಿಜಾಂಬವ ಸಮುದಾಯದ ಬೇಡಿಕೆ ಈಡೇರಿಕೆ ಸಂಬಂಧ ಮುಖ್ಯಮಂತ್ರಿಗಳ ಭೇಟಿ- ಕೆ.ಎಚ್.ಮುನಿಯಪ್ಪ ಸ್ಪಷ್ಟನೆ

ಕೋಲಾರ : – ರಾಜ್ಯ ಆರೋಗ್ಯ ಸಚಿವ ಸುಧಾಕರ್‌ ಜತೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು , ಬಿಜೆಪಿ ಸೇರಲಿದ್ದಾರೆ ಎಂದು ಹರಡಿರುವ ವದಂತಿಗಳನ್ನು ಖಂಡಿಸಿ ಸ್ಪಷ್ಟನೆ ನೀಡಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಇದನ್ನು ತಳ್ಳಿ ಹಾಕಿದ್ದು , ತಾವು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ . ಆದಿ ಜಾಂಬವ ಸಮುದಾಯದ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸಿಎಂರನ್ನು ಭೇಟಿಯಾಗಿದ್ದಾಗಿ ಸ್ಪಷ್ಟಪಡಿಸಿದ ಅವರು , ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಈ ಸಮುದಾಯದ ಜನರ ಬೇಡಿಕೆಗಳ ಕುರಿತು ಸಿಎಂ ಗಮನಕ್ಕೆ ತರಲು ಹೋಗಿದೆ ಎಂದು ತಿಳಿಸಿದ್ದಾರೆ . ಅದರಂತೆ ಜಿಲ್ಲೆಯ ಆವಣಿ ಪುಣ್ಯಕ್ಷೇತ್ರದಲ್ಲಿ ಆದಿಜಾಂಬವಸ್ವಾಮಿ ದೇವಾಲಯ , ಮಾತಂಗಮುನಿ ಅರುಂಧತಿ ಮಾತೆಯ ಸಮುದಾಯ ಭವನಕ್ಕೆ ೫ ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಮುಳಬಾಗಿಲು ತಾಲ್ಲೂಕಿನ ಕೆಲವು ಸಮುದಾಯದ ಮುಖಂಡರೊಂದಿಗೆ ಸಿಎಂ ಭೇಟಿಯಾಗಿ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ .
ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿ ಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ವರಕೊಂಡದ ಆದಿಜಾಂಬವ ಮಹಾ ಗುರು ಸಂಸ್ಥಾನಮಠಂ ಟ್ರಸ್ಟ್‌ಗೆ ಗ್ರಾಮದ ಸರ್ವೇ ನಂ . ೨೫೦ ರಲ್ಲಿ ೧೮.೩೦ ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡುವಂತೆ ಕೋರಿದ್ದು , ಅಲ್ಲಿನ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿರುವ ಹಿನ್ನಲೆಯಲ್ಲಿ ಸಚಿವ ಸುಧಾಕರ್‌ರೊಂದಿಗೆ ಕೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಮೀನು ಮಂಜೂರಾತಿಗೆ ಮನವಿ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ . ಆದರೆ ಈ ಭೇಟಿಯನ್ನು ಕೆಲವರು ನಾನು ಬಿಜೆಪಿಗೆ ಸೇರಲು ಹೋಗಿದ್ದೆ ಎಂದು ವದಂತಿ ಹಬ್ಬಿಸಿರುವ ಕುರಿತು ವಿಷಾದ ವ್ಯಕ್ತಪಡಿಸಿದ ಅವರು , ತಾವು ನಿಷ್ಟಾವಂತ ಕಾಂಗ್ರೆಸ್ಸಿಗನಾಗಿದ್ದು , ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಆಲೋಚನೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
.

ರಿ. ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ರಾಜ್ಯ ಸಮ್ಮೇಳನಕ್ಕೆ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ರಾಜ್ಯ ಸಮ್ಮೇಳನಕ್ಕೆ ತೆರಳಿದರು

ಶ್ರೀನಿವಾಸಪುರ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬೃಹತ್ ಕಾರ್ಯಕರ್ತರ ರಾಜ್ಯ ಸಮ್ಮೇಳನವು ಬೆಂಗಳೂರು ಗ್ರಾಮಾಂತರದ ಶ್ರೀ ಚನ್ನ ಬೈರೇಗೌಡ ಕ್ರೀಡಾಂಗಣ, ಹೊಸಕೋಟೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಶ್ರೀನಿವಾಸಪುರ ತಾಲ್ಲೂಕು ಆರ್.ಪಿ.ಐ. ಮತ್ತು ಎಸ್.ಎಸ್.ಡಿ. ಸಂಘಟನೆಯ ಮುಖಂಡರಾದ ಒಳಗೇರನಹಳ್ಳಿ ರಾಮಾಂಜನಮ್ಮ, ಚಲ್ದಿಗಾನಹಳ್ಳಿ ಈರಪ್ಪ, ಮಲ್ಲಗಾನಹಳ್ಳಿ ಪಾಪಣ್ಣ, ನೇತೃತ್ವದಲ್ಲಿ ತಾಲ್ಲೂಕಿನ ಅನೇಕ ಕಾರ್ಯಕರ್ತರು ಸಂಘಟಿತರಾಗಿ ಪಟ್ಟಣದ ತಾಲ್ಲೂಕು ಕಚೇರಿ ಮುಂಬಾಗ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆಯನ್ನು ಸಲ್ಲಿಸಿ ರಾಜ್ಯ ಸಮ್ಮೇಳನಕ್ಕೆ ತೆರಳಿದರು. ಈ ವೇಳೆಯಲ್ಲಿ ಉಪ್ಪರಪಲ್ಲಿ ತಿಮ್ಮಯ್ಯ, ಆರ್.ಪಿ.ಐ. ಮುಖಂಡ ಬಸನಪಲ್ಲಿ ಬಿ.ಐ. ನರಸಿಂಹಯ್ಯ, ರೆಡ್ಡೆಪ್ಪ, ಅನೇಕ  ಕಾರ್ಯಕರ್ತರು ಹಾಜರಿದ್ದರು.

ಶ್ರೀನಿವಾಸಪುರ: ಆವಲಕುಪ್ಪ ಗ್ರಾಮದಲ್ಲಿ ವಾಸ್ತು ದೋಷ ನಿವಾರಿಸಲು ಚಕ್ರ ಸ್ಥಾಪನೆ

ಶ್ರೀನಿವಾಸಪುರ: ಆವಲಕುಪ್ಪ ಗ್ರಾಮದಲ್ಲಿ ವಾಸ್ತು ದೋಷ ನಿವಾರಿಸಲು ಚಕ್ರ ಸ್ಥಾಪನೆ, ಕಳಶಗಳ ಪೂಜೆ,ಅಷ್ಟಬಂದನ, ಅಗ್ನಿಕುಂಡ, ಹೋಮ, ಮುಂತಾದ ಪೂಜಾ ಕಾರ್ಯಕ್ರಮಗಳನ್ನು ಗ್ರಾಮದ ಜನತೆಯ ಕಲ್ಯಾಣಾರ್ಥಕ್ಕಾಗಿ ರಾಯಲ್ಪಾಡಿನ ವಾಸ್ತುದೋಷ ನಿವಾರಣಾ ಪರಿಣಿತರಾದ ವಿಶ್ವನಾಥ ಶಾಸ್ತ್ರಿ ತಂಡದವರು ನಡೆಸಿಕೊಟ್ಟಿದ್ದರು. ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಗೆ ಒಳಪಡುವ ಆವಲಕುಪ್ಪ ಗ್ರಾಮದಲ್ಲಿ 2-3 ವರ್ಷಗಳಿಂದ ಅನೇಕ ಪ್ರಾಣನಷ್ಟಗಳು ಸಂಭವಿಸಿದ್ದು ಈ ಅನಾಹುತವನ್ನು ತಪ್ಪಿಸಲು ಗ್ರಾಮಸ್ಥರೆಲ್ಲಾ ಒಂದಾಗಿ ಪರಿಹಾರ ಕಂಡುಕೊಳ್ಳಲು ರಾಯಲ್ಪಾಡ್‍ನ ಸುಪ್ರಸಿದ್ದ ವಾಸ್ತುದೋಷ ಪರಿಣಿತರಾದ ಶ್ರೀ ವೆಲ್ಲಾಲ ಸತ್ಯನಾರಾಯಣಸ್ವಾಮಿ ಇವರ ಸಲಹೆ ಮಾರ್ಗ ದರ್ಶನದಲ್ಲಿ ಗ್ರಾಮದ ಸುತ್ತಲು ಅಷ್ಟ ಬಂದನ ಏರ್ಪಡಿಸಿ ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ಏಕಕಾಲದಲ್ಲಿ ಪೂಜಾಕಾರ್ಯಕ್ರಮಗಳನ್ನು ನೆರವೇರಿಸಿ ಸಾಂಪ್ರದಾಯದಂತೆ ಗ್ರಾಮದ ಮಹಾದ್ವಾರದಲ್ಲಿ ಪೂರ್ವಿಕರ ಅಡಿಪಾಯದಂತೆ ಮದ್ಯದಲ್ಲಿ ಚಕ್ರ ಸ್ಥಾಪನೆ, ಕಳಶಗಳಪೂe,É ಅಗ್ನಿಕುಂಡ, ಹೋಮ, ಗೋಪೂಜೆ ಇನ್ನಿತರ ಪೂಜಾಕಾರ್ಯಕ್ರಮಗಳನ್ನು ಸುಸೂತ್ರವಾಗಿ ನೆರವೇರಿಸಿ 48 ದಿನಗಳ ಕಾಲ ಗ್ರಾಮದಲ್ಲಿ ಶ್ರದ್ದೆ ನಿಷ್ಠೆ ಭಕ್ತಿಯಿಂದ ಪೂಜಾಕಾರ್ಯಕ್ರಮಗಳನ್ನು ನೆರವೇರಿಸಿದಾಗ ಎಲ್ಲಾ ಪೂಜಾಕಾರ್ಯಕ್ರಮಗಳ ಫಲ ಲಭಿಸಿ ಗ್ರಾಮದಲ್ಲಿ ಶಾಂತಿ ಆರೋಗ್ಯ, ಆಯಸ್ಸು ವೃದಿಯಾಗಿ ನಿಮಗೆ ಗ್ರಾಮ ದೇವರುಗಳ ರಕ್ಷಣೆ ಆಶೀರ್ವಾದ ಲಭಿಸುತ್ತದೆ ಎಂದು ವಿಶ್ವನಾಥ್ ಶಾಸ್ತ್ರಿಯವರು ತಿಳಿಸಿದ್ದಾರೆ.

   ಈ ಪೂಜಾ ಕಾರ್ಯಕ್ರಮಗಳಲ್ಲಿ ಹೊದಲಿ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಗೀತಾ ರಾಮಚಂದ್ರ, ರಾಯಲ್ಪಾಡ್‍ನ ಸಿಮೆಂಟ್ ನಾರಾಯಣಸ್ವಾಮಿ, ಸದಸ್ಯ ಗೋವಿಂದರೆಡ್ಡಿ, ಮಾಜಿ ಗ್ರಾ.ಪಂ ಸದಸ್ಯರಾದ ಮುನಿಯಪ್ಪ,ಮುನಿರತ್ನಂ, ಗ್ರಾಮದ ಪ್ರಮುಖರಾದ ಬಿ.ನಾರಾಯಣಸ್ವಾಮಿ, ಮುನಿರೆಡ್ಡಿ, ವಿ. ಬೈರೆಡ್ಡಿ, ವಿ. ನಾರಾಯಣಸ್ವಾಮಿ, ಹನುಮಂತಪ್ಪ, ಎನ್. ಮಂಜುನಾಥರೆಡ್ಡಿ, ಮುರಳಿ,ನರಸಿಂಹ, ಇನ್ನೂ ಅನೇಕ ಗ್ರಾಮಸ್ಥರು ಬಾಗವಹಿಸಿದ್ದರು.

ಶ್ರೀನಿವಾಸಪುರ:ಮಾವಿನಲ್ಲಿ ಸಮಗ್ರ ಬೆಳೆ ನಿರ್ವಹಣೆ – ಹೊರಾಂಗಣಾ ತರಬೇತಿ ಕಾರ್ಯಕ್ರಮ

ಶ್ರೀನಿವಾಸಪುರ: ರೋಗನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕರವಾಗಿ ಬೆಳೆದು ಅಧಿಕ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಕಾಲದಲ್ಲಿ ಸವರುವಿಕೆ ಮತ್ತು ಸಮತೋಲನ ಪೋಷಕಾಂಶಗಳನ್ನು ಒದಗಿಸುವುದು ಅವಶ್ಯ . ಆದರೆ ಕೆಲವೇ ರೈತರು ಲಘು ಪೋಷಕಾಂಶಗಳ ಮಹತ್ವವನ್ನರಿತು ಬಳಸುತ್ತಿದ್ದಾರೆ . ಆದ್ದರಿಂದ ಗುಣಮಟ್ಟದ ಬೆಳೆ ಹಾಗೂ ಹೆಚ್ಚಿನ ಇಳುವರಿಗಾಗಿ ಸವರುವಿಕೆ ಮಾಡುವುದು ಅವಶ್ಯವಾಗಿದೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಅಂಗವಾಗಿ ಮಾವು ಬೆಳೆಯ ಎಲೆಗಳಿಗೆ ಸಿಂಪಡಿಸಬಹುದಾದ ಮಾವು ಸ್ಪೆಷಲ್ ಅತ್ಯಂತ ಉಪಯುಕ್ತವಾಗಿದೆ . ಈ ನಿಟ್ಟಿನಲ್ಲಿ ವಿಸ್ತರಣ ಶಿಕ್ಷಣ ಘಟಕ ( ಕೋಲಾರ ) , ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ರವರ ವತಿಯಿಂದ ಮಾವಿನಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಹೊರಾಂಗಣಾ ತರಬೇತಿ ಕಾರ್ಯಕ್ರಮವನ್ನು ಶ್ರೀನಿವಾಸಪುರ ತಾಲೂಕಿನ ಬೂರುಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು . ತೋಟಗಾರಿಕೆ ವಿಜ್ಞಾನಿಗಳಾದಂತಹ ಶ್ರೀಮತಿ ಸಿಂಧು , ಕೆ . ರವರು ಮಾವಿನಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳು . ಮಾವಿನ ಮರ ಸವರುವಿಕೆ ಹಾಗೂ ಲಘುಪೋಷಕಾಂಶಗಳ ಮಿಶ್ರಣವಾದ ಮಾವು ಸ್ಪೆಷಲ್ ಕುರಿತು ಮಾಹಿತಿ ನೀಡಿದರು . ಡಾ . ದೀಅಪ್ . ಎಸ್ . ವಿಜ್ಞಾನಿಗಳು ( ಕೃಷಿ ವಿಸ್ತರಣಾ ) ರವರು ಮಾವಿನಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಿದರು ಮತ್ತು ಮಾವಿನಲ್ಲಿ ಸವರುವಿಕೆ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು . ಈ ಕಾರ್ಯಕ್ರಮದಲ್ಲಿ 25 ಜನ ರೈತರು ಪಾಲ್ಗೊಂಡಿದ್ದರು . ಮಾವಿನಲ್ಲಿ ರೆಂಬೆಗಳು ಒತ್ತೊತ್ತಾಗಿ ಬೆಳೆದಾಗ ಅವುಗಳಲ್ಲಿ ಕೆಲವೊಂದು ರೆಂಬೆಗಳನ್ನು ಕತ್ತರಿಸಿ ವಿರಳಗೊಳಿಸಿದರೆ ಸೂರ್ಯನ ಬೆಳಕು ಒಳಭಾಗದಲ್ಲಿ ಬೀಳುವಂತಾಗಿ ಒಳಭಾಗದಲ್ಲೂ ಕಾಯಿಕಚ್ಚುತ್ತವೆ . ಇದರಿಂದ ಇಳುವರಿ ಹಾಗೂ ಹಣ್ಣಿನ ಗುಣಮಟ್ಟ ಹೆಚ್ಚಾಗುತ್ತವೆ . ಗಿಡಗಳಿಗೆ 5-6 ವರ್ಷವಾದಾಗ ಮೊದಲ ವರ್ಷ ಮಧ್ಯದ ಒಂದೆರೆಡು ರೆಂಬೆಗಳನ್ನು ತೆಗೆದು ತೆರೆವು ಮಾಡಬೇಕು . ನಂತರದ ವರ್ಷಗಳಲ್ಲಿ ಇತರ ರೆಂಬೆಗಳನ್ನು ವಿರಳಗೊಳಿಸಲು ಕತ್ತರಿಸಬೇಕು . ಕತ್ತರಿಸಿದ ಭಾಗಗಳಿಗೆ ಶಿಲೀಂಧ್ರ ನಾಶಕ + ಕೀಟನಾಶಕದ ಮುಲಾಮನ್ನು ಲೇಪಿಸುವುದು ಅವಶ್ಯ . ಹಣ್ಣಿನ ಕೊಯ್ದು ಆದನಂತರ ಜುಲೈ- ಆಗಸ್ಟ್ ತಿಂಗಳುಗಳು ಕತ್ತರಿಸಲು ಸೂಕ್ತ ಸಮಯ .

ಕುಂದಾಪುರ: ಸರ್ವಿಸ್ ರಸ್ತೆಯ ಪಕ್ಕದಲ್ಲಿಯೇ ಮರಣ ಮೋರಿ ಸಾರ್ವಜನಿಕ ಜೀವದೊಂದಿಗೆ ನವಯುಗ್ ಚೆಲ್ಲಾಟ

ಕುಂದಾಪುರ : ಚತುಷ್ಪದ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಂದಾಪುರ ದ ವಡೆರಹೋಬಳಿಯ ಸರ್ವೀಸ್ ರಸ್ತೆಯ ಇಕ್ಕೇಡೆ ಗಳಲ್ಲಿ ಮಳೆ ನೀರು ನೆರೆ ಯಂತೆ ನಿಲ್ಲುವಂತೆ ಮಾಡಿದ ನವಯುಗ್ ಸಂಸ್ಥೆಯು ಇದೀಗ ಅದೇ ಸ್ಥಳದಲ್ಲಿ ಮತ್ತೊಂದು ಅವಾಂತ್ರವನ್ನು ಸ್ರಷ್ಟಿಸಿ ಸಾರ್ವಜನಿಕರ,ವಾಹನ ಸವಾರರ ಪ್ರಾಣದೊಂದಿಗೆ ಚೆಲ್ಲಾಟ ವಾಡುತ್ತಿದೆ.
ಕಳೆದ ಸುಮಾರು ಎರಡು-ಮೂರು ವಾರಗಳ ಹಿಂದೆ ಸುರಿದ ಭಾರಿ ಮಳೆಯು ವಡೆರಹೋಬಳಿಯ ಸರ್ವಿಸ್ ರಸ್ತೆಗಳನ್ನು ಸಂಪೂರ್ಣವಾಗಿ ಮುಳುಗಿಸಿ ಸಂಚಾರವನ್ನು ದುಸ್ತರಗೊಳಿಸಿತ್ತು. ಸಾರ್ವಜನಿಕರ ಭಾರಿ ಆಕ್ರೋಷದಿಂದ ಎಚ್ಚತ್ತು ಕೊಂಡ ನವಯುಗ್ ಸಂಸ್ಥೆಯ ಅಧಿಕಾರಿಗಳು ರಸ್ತೆಗಳನ್ನು ಆವರಿಸಿಕೊಂಡಿದ್ದ ನೀರನ್ನು ಮತ್ತೆ ಅವೈಜ್ಞಾನಿಕ ರೀತಿಯಲ್ಲಿ ಹೊರ ಹಾಕುವ ಕಾಯಕವನ್ನು ಆರಂಭಿಸಿದ್ದರು. ಅದರಂತೆ ಮೂರುಕೈ ಬಳಿಯ ಅನತಿ ದೂರದಿಂದ ಸುಮಾರು 60 ಅಡಿ ದೂರದ ತನಕ ಜೆಸಿಬಿಯನ್ನು ಬಳಸಿ ಸರ್ವಿಸ್ ರಸ್ತೆಯ ಎಡಭಾಗವನ್ನು 4-5ಅಡಿ ಆಳದ ತನಕ ಅಗೆದು ಅದರ ಮೂಲಕ ನೀರು ಹೊರಗೆ ಹರಿದು ಹೋಗುವಂತೆ ಮಾಡಲು ಯತ್ನಿಸಲಾಗಿತ್ತು. ಆದರೆ ಸರ್ವಿಸ್ ರಸ್ತೆಯನ್ನು ಆವರಿಸಿದ ನೀರು ಅಗೆದು ಹಾಕಿದ ಆಳದ ಮೋರಿ ಸೇರಿ ಹಳ್ಳದಂತಾಯಿತೇ ವಿನಹ: ನೀರಂತೂ ಹರಿದು ಹೋಗಲೇ ಇಲ್ಲ , ತಾವೇ ತೋಡಿದ ಹಳ್ಳದ ತುಂಬಾ ಕೆರೆಯಂತೆ ತುಂಬಿ ಹೋದ ನೀರನ್ನು ಪಂಪ್ ಸೆಟ್ ಗಳನ್ನು ಬಳಸಿ ಒಂದಷ್ಟು ಹೊರ ಹಾಕಿದ ನವಯುಗ್ ಅಧಿಕಾರಿಗಳು ಅದರಲ್ಲೂ ಯಶಸ್ಸು ಸಿಗದಾಗ ಅಪಾಯಕ್ಕೆ ಆಹ್ವಾನ ನೀಡುವ ನೀರು ತುಂಬಿರುವ ಮೋರಿಯನ್ನು ಹಾಗೆ ಬಿಟ್ಟು ಸ್ಥಳದಿಂದ ಮೆಲ್ಲಗೆ ಜಾಗ ಖಾಲಿ ಮಾಡಿದ್ದಾರೆ. ಇದೀಗ ಹಲವು ದಿನಗಳು ಉರುಳಿ ಹೋದರೂ ನವಯುಗ್ ಕಂಪೆನಿ ಅಧಿಕಾರಿಗಳ ಪತ್ತೆಯೇ ಇಲ್ಲದಂತಾಗಿದೆ. ರಸ್ತೆಯ ಪಕ್ಕ.ಅವರು ಅಗೆದು ಹಾಕಿ ಹೋಗಿರುವ ಆಳದ ಮೋರಿಯಲ್ಲಿ ಇದೀಗ ನೀರು ತುಂಬಿ ಕೊಂಡಿದ್ದು ಸಣ್ಣ ಚರಂಡಿ ಭಾವಿಸಿ ಪಾದಚಾರಿಗಳು,ವಾಹನ ಸವಾರರು ಎಡ ಭಾಗಕ್ಕೆ ಸರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.. ಸುಖಾಸುಮ್ಮನೆ ಎಂಬಂತೆ ನಗರದ ನಡುವೆಯೇ ಅಪಾಯಕಾರಿ ಹಳ್ಳವನ್ನು ಅಗೆದು, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ಬಗ್ಗೆ ಸ್ಥಳೀಯರು ಹಲವು ಬಾರಿ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯಕ್ಕೆ ನೀರು ತುಂಬಿ ಕೊಂಡಿರುವ ಅಪಾಯಕಾರಿ ಮೋರಿ ಮಾತ್ರ ಪ್ರಾಣ ಬಲಿಗಾಗಿ ಕಾದು ಕುಂತಿದೆ ಎಂದು ಸ್ಥಳೀಯರು ಭೀತಿ ವ್ಯಕ್ತ ಪಡಿಸುತಲಿದ್ದಾರೆ.ಅನಾಹುತ ಸಂಭವಿಸಿದ ನಂತರ ಸಂತಾಪ, ಪರಿಹಾರದ ಬಗ್ಗೆ ಮಾತನಾಡುವ ಅಧಿಕಾರಿಗಳು,ಸಚಿವರು , ಪುಢಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲೆಗೆ 25 ರ ರಜತ ಸಂಭ್ರಮ: ಅಭಿವೃಧ್ಧಿಗೊಂಡರೂ, ಇನ್ನಷ್ಟು ಅಭಿವೃಧ್ಧಿ ಕಾರ್ಯ ಆಗಬೇಕಾಗಿದೆ

ಲೇಖನ : ರಾಕೇಶ್ ಶೆಟ್ಟಿ ವಕ್ವಾಡಿ

ದಕ್ಷಿಣ ಕನ್ನಡದಿಂದ ವಿಂಗಡಣೆಗೊಂಡು ಉಡುಪಿ ಜಿಲ್ಲೆಯಾಗಿ ಇಂದಿಗೆ 25 ರ ರಜತ ಸಂಭ್ರಮದಲ್ಲಿ ನಾವೆಲ್ಲರೂ ಇದ್ದೆವೆ ಈ ಜಿಲ್ಲೆ ಸಾಕಷ್ಟು ಅಭಿವೃಧ್ಧಿಗೊಂಡರು ಕೆಲವೊಂದಿಷ್ಟು ಅಭಿವೃಧ್ಧಿ ಕಾರ್ಯ ಆಗಬೇಕಾಗಿದೆ. ಈ ಜಿಲ್ಲೆಗೆ ಒಂದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ತಾಲೂಕು ಆಸ್ಪತ್ರೆ ಮೆಲ್ದರ್ಜೆಗೆ ಏರಿಸಬೇಕು. ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಕಡಲತಡಿಯ ಬೀಚ್ ಮತ್ತು ದೇವಸ್ಥಾನಗಳನ್ನು ಅಭಿವೃಧ್ಧಿ ಪಡಿಸಬೇಕು. ಕರಾವಳಿಯ ಯಕ್ಷಗಾನ, ನಾಟಕ ಮತ್ತು ಸಾಹಿತ್ಯಗಳನ್ನು ಬಲ ಪಡಿಸುವ ಸಲುವಾಗಿ ಯಕ್ಷಗಾನ ಮತ್ತು ರಂಗ ತರಬೇತಿ ಕೇಂದ್ರಗಳನ್ನು ತೆರೆಯುವಂತಾದಾಗ ಮಾತ್ರ ಉಡುಪಿ ಜಿಲ್ಲೆ ಮುಂದಿನ 25 ವರ್ಷಗಳಲ್ಲಿ ಮತ್ತುಷ್ಟು ಅಭಿವೃಧ್ಧಿಗೊಂಡು ಇನ್ನಿತರ ಜಿಲ್ಲೆಗೆ ಸಟೆದು ನಿಲ್ಲುವಂತಾಗುತ್ತದೆ.

ರಾಕೇಶ್ ಶೆಟ್ಟಿ ವಕ್ವಾಡಿ, ಅಧ್ಯಕ್ಷರು, ರೋಟರ್ಯಾಕ್ಟ ಕ್ಲಬ್ ಕೋಟೆಶ್ವರ

ಶ್ರೀನಿವಾಸಪುರ:ತಾಲ್ಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನ

ಶ್ರೀನಿವಾಸಪುರದ ಅಂಬೇಡ್ಕರ್ ವಸತಿ ಶಾಲೆ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಟಿ.ವಿ.ವೆಂಕಟೇಶಪ್ಪ, ತರಬೇತುದಾರ ವಿ.ನಾರಾಯಣಸ್ವಾಮಿ, ಶಿಕ್ಷಕರಾದ ಕೆ.ಎನ್.ವೆಂಕಟರವಣ, ರಘುನಾಥ್, ನಾಗರಾಜ್, ಲಕ್ಷ್ಮಯ್ಯಗೌಡ, ಚಿಕ್ಕರೆಡ್ಡಪ್ಪ, ಮನೋಜ್, ಪ್ರತಿಮಾ ಇದ್ದರು.

ಶ್ರೀನಿವಾಸಪುರ:ಶೇ.40 ಕಮೀಷನ್ ಆಪಾದನೆ ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತ-ಡಾ. ಕೆ.ಎನ್.ವೇಣುಗೋಪಾಲ್

ಶ್ರೀನಿವಾಸಪುರ: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಮಾಡಿರುವ ಶೇ.40 ಕಮೀಷನ್ ಆಪಾದನೆ ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪಣ್ಣ ಕಮೀಷನ್ ಆಪಾದನೆ ಮಾಡುವ ಮುನ್ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸರ್ಕಾರ ಕಮೀಷನ್ ಪಡೆಯುತ್ತಿರುವುದು ನಿಜವೇ ಆಗಿದ್ದಲ್ಲಿ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಹೇಳಿದರು.
ಸಚಿವ ಮುನಿರತ್ನ ಅವರು ಈಚೆಗೆ ಕೋಲಾರದಲ್ಲಿ ಕಳಪೆ ಕಾಮಗಾರಿ ಪರಿಣಾಮವಾಗಿ ಹಾಳಾಗಿರುವ ರಸ್ತೆಗಳನ್ನು ಕಂಡು ಬೇಸರ ವ್ಯಕ್ತಪಡಿಸಿದ್ದರು. ರಸ್ತೆಗಳ ಗುಣಮಟ್ಟ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ರಸ್ತೆಗಳ ಕೋರ್ ಕಟ್ ಮಾಡಿ ಗುಣಮಟ್ಟ ಪರಿಶೀಲಿಸಲು ಕೈಗೊಂಡ ನಿರ್ಧಾರದಿಂದ ಹೆದರಿದ ಗುತ್ತಿಗೆದಾರರು, ಪ್ರತಿ ಪಕ್ಷದ ನಾಯಕರೊಂದಿಗೆ ಕೈಜೋಡಿಸಿ ಸರ್ಕಾರದ ವಿರುದ್ಧ ಆಧಾರವಿಲ್ಲದ ಆಪಾದನೆ ಮಾಡಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಜನಪರ ಯೋಜನೆಗಳು, ಜನರ ಮೆಚ್ಚುಗೆಗೆ ಪಾತ್ರವಾಗಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನಾನುರಾಗಿ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯತೆ ಸಹಿಸದ ಪ್ರತಿ ಪಕ್ಷಗಳು ವಿನಾಕಾರಣ ಟೀಕಿಸುವುದರಲ್ಲಿ ನಿರತವಾಗಿವೆ. ರಾಜೀವ್ ಗಾಂಧಿ ಅವರು, ಸರ್ಕಾರ ಬಿಡುಗಡೆ ಮಾಡುವ ಹಣದ ಪೈಕಿ ಶೇ.85 ರಷ್ಟು ಹಣ ಸೋರಿಕೆಯಾಗುತ್ತಿದೆ ಮತ್ತು ಶೇ.15 ರಷ್ಟು ಹಣ ಮಾತ್ರ ಅಭಿವೃದ್ಧಿ ಚಟುವಟಿಕೆಗೆ ಬಳಕೆಯಾಗುತ್ತಿದೆ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಇದನ್ನು ಕಾಂಗ್ರೆಸ್ ಮುಖಂಡರು ಗಮನಿಸಬೇಕು ಎಂದು ಹೇಳಿದರು.
ಸೆ.8 ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವತಿಯಿಂದ ಜನೋತ್ಸವ ಆಚರಿಸಲಾಗುವುದು. ಉತ್ಸವದಲ್ಲಿ ಜಿಲ್ಲೆಯಿಂದ 50 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಕೃಷ್ಣಮೂರ್ತಿ, ಸುರೇಶ್ ನಾರಾಯಣ್ ಕುಟ್ಟಿ, ವೆಂಕಟೇಗೌಡ, ಬಾಲಾಜಿ, ನಾಗರಾಜ್, ಎಂ.ಲಕ್ಷ್ಮಣಗೌಡ, ಎಸ್.ವಿ.ಚಲಪತಿ, ಆರ್.ಎನ್.ಚಂದ್ರಶೇಖರ್, ವಿ.ನಿಶಾಂತ್, ಷಫಿವುಲ್ಲಾ, ರಾಮಾಂಜಿ, ರಮೇಶ್, ಜಯಣ್ಣ, ರೆಡ್ಡಪ್ಪ, ಬಂಗವಾದಿ ನಾಗರಾಜ್, ಸುರೇಶ್ ನಾಯಕ್ ಇದ್ದರು.

ಜನರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು:ಡಾ. ವೈ.ವಿ.ವೆಂಕಟಾಚಲ

ಶ್ರೀನಿವಾಸಪುರ: ಜನರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.. ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ತಾಲ್ಲೂಕು ಆಮ್ ಆದ್ಮಿ ಪಕ್ಷದ ಮುಖಂಡ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ತಾಲ್ಲೂಕಿನ ರೋಜೇನಹಳ್ಳಿ ಸಂತೆ ಮೈದಾನದಲ್ಲಿ ಬುಧವಾರ ಆಮ್ ಆದ್ಮಿ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ತಾಲ್ಲೂಕಿನ ಎಲ್ಲ ಸಂತೆಯಲ್ಲೂ ಆಮ್ ಆದ್ಮಿ ಪಕ್ಷದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನ ವೈಯಕ್ತಿಕ ಆರೋಗ್ಯ ಕುರಿತು ಗಮನ ಹರಿಸುತ್ತಿಲ್ಲ. ಹಾಗಾಗಿ ರಕ್ತದೊತ್ತಡ ಹಾಗೂ ಮಧುಮೇಹ ಅವರ ಅರಿವಿಗೆ ಬರುತ್ತಿಲ್ಲ. ಅದು ತೀವ್ರ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಸಂತೆಗಳಲ್ಲಿ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ನಡೆಯುವ ಪ್ರತಿ ಸಂತೆಯಲ್ಲೂ ಪ್ರತಿ ವಾರ ವೆಂಕಟೇಶ್ವರ ನರ್ಸಿಂಗ್ ಹೋಂ ಸಿಬ್ಬಂದಿ ವತಿಯಿಂದ ಆರೋಗ್ಯ ತಪಾಸಣೆ ನಡೆಸಲಾಗುವುದು. ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆರೋಗ್ಯ ತಪಾಸಣೆ ನಡೆಸಲಾಗುವುದು. ಮಧ್ಯಾಹ್ನ 4 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಾನು ಶಿಬಿರದಲ್ಲಿ ಭಾಗವಹಿಸಿ ಅಗತ್ಯ ಸೇವೆ ನೀಡುತ್ತೇನೆ ಎಂದು ಹೇಳಿದರು.
ಶೇ.60 ರಷ್ಟು ಜನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಬಹುತೇಕ ಗ್ರಾಮೀಣರು ಪ್ರತಿ ವಾರ ಸಂತೆಗೆ ಬರುವುದರಿಂದ ತಪಾಸಣೆ ಸುಲಭವಾಗುತ್ತದೆ. ಇರುವ ಕಾಯಿಲೆಗೆ ಸಂಬಂಧಿಸಿದಂತೆ ತಿಳಿಸಲಾಗುವುದು. ಎಲ್ಲಿ ತೋರಿಸಿಕೊಳ್ಳಬೇಕು ಎಂಬ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ರೋಜೇನಹಳ್ಳಿ ಸಂತೆ ಮೈದಾನದಲ್ಲಿ ನಡೆಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ, 250 ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.