ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸಿಗೆ ಅಡ್ಡದಾರಿ ಯಾವುದೂ ಇಲ್ಲ ಕಠಿಣ ಪರಿಶ್ರಮ , ಶ್ರದ್ಧೆ ಇದ್ದರೆ ಸಾಕು – ಸಿಇಒ ಯುಕೇಶ್ ಕುಮಾರ್

ಕೋಲಾರ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಯಾವುದೇ ಅಡ್ಡದಾರಿ ಯಾಗಲಿ , ಟಿಪ್ಸ್ ಆಗಲಿ ಇಲ್ಲ . ಕಠಿಣ ಪರಿಶ್ರಮ ಹಾಕಿ , ಶ್ರದ್ದೇ , ತ್ಯಾಗ ಮನೋಭಾವ ದಿಂದ ಸಿದ್ಧತೆ ನಡೆಸಿದರೆ ಮಾತ್ರ ಉತ್ತೀರ್ಣರಾಗಿ ನಾಗರಿಕ ಸೇವಾ ಅಧಿಕಾರಿಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ತಿಳಿಸಿದರು.

ನಗರದಲ್ಲಿ ಡಿಎಂಆರ್‌ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಆರಂಭಿಸಿರುವ ಯುಪಿಎಸ್‌ಸಿ – ಕೆಪಿಎಸ್‌ಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಮೊದಲ ಬ್ಯಾಚ್‌ನ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಐದು ರ್ವಗಳಲ್ಲಿನ ಪ್ರಶ್ನೆ ಪತ್ರಿಕೆ ಹಾಗೂ ಅಗ್ರಬ್ಯಾಂಕ್ ಪಡೆದವರು ಬರೆದ ಉತ್ತರ ಪತ್ರಿಕೆಗಳನ್ನು ಓದಬೇಕು. ಜತೆಗೆ ತರಬೇತಿ ವೇಳೆ ಯಾವುದೇ ಅನುಮಾನ ಬಂದಾಗ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಬೇಕು. ಆನ್‌ಲೈನ್‌ನಲ್ಲೂ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾನು ಕೂಡ ನಿಮ್ಮಂತೆ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೆ . 2012 ರಲ್ಲಿ ಉತ್ತೀರ್ಣನಾಗಿ ಐಎಎಸ್ ಅಧಿಕಾರಿಯಾದೆ . ಪ್ರತಿ ವರ್ಷ 12 ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಾರೆ. ಯುಪಿಎಸ್‌ಸಿ ಪರೀಕ್ಷೆ ಎಂಬುದು ಮ್ಯಾರಥಾನ್ ಓಟವಿದ್ದಂತೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ , ಸದುದ್ದೇಶದಿಂದ , ನಿಸ್ವಾರ್ಥ ಸೇವೆಗಾಗಿ ಡಿಎಂಆರ್ ಸಂಸ್ಥೆ ಆರಂಭಿ ಸಲಾಗಿದೆ. ಯಾವುದೇ ಲಾಭದ ಉದ್ದೇಶ ಇಲ್ಲ ಎಂದು ಹೇಳಿದರು. ದೂರದ ನಗರಗಳಿಗೆ ತರಬೇತಿಗೆ ಹೋಗಲು ಸಾಧ್ಯವಾಗದ ಅಭ್ಯರ್ಥಿಗಳಿಗಾಗಿ ಈ ಸಂಸ್ಥೆ ಆರಂಭಿಸಲಾಗಿದೆ .

ಒದಗಿಸಿರುವ ಸೌಲಭ್ಯ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿ . ಮೊದಲ ಬ್ಯಾಚ್‌ನವರು ಕೋಲಾರ ಹಾಗೂ ನಮಗೆ ಹೆಮ್ಮೆ ತರಬೇಕು.

ಆಗ ಸಂಸ್ಥೆ ಆರಂಭಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಮೊದಲ ಬ್ಯಾಚ್‌ನಲ್ಲಿ 70 ವಿದ್ಯಾರ್ಥಿಗಳು ಇದ್ದಾರೆ . ಪ್ರತಿ ವಾರಾಂತ್ಯ ಶನಿವಾರ ಹಾಗೂ ಭಾನುವಾರ ತರಗತಿಗಳು ನಡೆಯಲಿವೆ . ಮೂರು ತಿಂಗಳು ತರಬೇತಿ ಇರಲಿದೆ ಎಂದು ಮಾಹಿತಿ ನೀಡಿದರು .

ಪಾಠ ಮಾಡಿದ ಎಸ್ಪಿ :

ಪೊಲೀಸ್ ಅಧಿಕಾರಿಯಾಗುವ ಮುನ್ನ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಎಸ್ಪಿ ಡಿ.ದೇವರಾಜ್ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಂಬಂಧ ಅಭ್ಯರ್ಥಿಗಳಿಗೆ ಪಾಠ ಮಾಡಿದರು. ಸಂವಿಧಾನ , ವಿಜ್ಞಾನ ಸೇರಿದಂತೆ ಹಲವು ವಿಷಯಗಳಲ್ಲಿ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳ ಸಂಬಂಧ ಮಾಹಿತಿ ನೀಡಿದರು . ಪ್ರಶ್ನೆ ಕೇಳುತ್ತಾ ಸಂವಾದ ನಡೆಸಿದರು. ಬಣ್ಣದ ಪೆನ್ ಹಿಡಿದು ಬೋರ್ಡ್ ಮೇಲೆ ಬರೆದು ತೋರಿಸಿದರು .

ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣಿಕರ್‌ ಇದ್ದರು .

ಕೋಲಾರ ಜಿಲ್ಲಾ ಕಸಾಪದಿಂದ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟ ಕಮ್ಮಟಾರ್ಥಿಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ಸಿಗಲಿ – ನಾಗಸುಬ್ರಹ್ಮಣ್ಯ

ಕೋಲಾರ : ಕಾವ್ಯ ಕಮ್ಮಟ ಶಿಬಿರದ ಪ್ರಯೋಜನ ಪಡೆದು ಕಮ್ಮಟಾರ್ಥಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕವಿತೆಗಳ ಕೊಡುಗೆ ನೀಡಬೇಕೆಂದು ಕೋಟಗಲ್ಲಿನ ಚಿತ್ರಬಂಧ ಕವಿ ನಾಗಸುಬ್ರಹ್ಮಣ್ಯ ಹೇಳಿದರು.

ತಾಲೂಕಿನ ಚೊಕ್ಕಹಳ್ಳಿ ಚಿನ್ಮಯ ಸಾಂಧೀಪನಿ ಆಶ್ರಮದ ಪದವಿ ಪೂರ್ವ ಕಾಲೇ ಜಿನ ನಳಂದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಎರಡು ದಿನಗಳ ಕಾವ್ಯ ಸಂಭವ ವಿಸ್ಮಯ ಕಾವ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಮ್ಮಟ ಕುರಿತಂತೆ ಮುಖನುಡಿ ಆಡಿದ ಕಸಾಪ ಗೌರವಾಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ , ಆಧುನಿಕ , ನವೋದಯ ಸಾಹಿತ್ಯ ಪುನರ್ ಸ್ಥಾಪನೆ ಮತ್ತು ಗುಣಮಟ್ಟದ ಕಾವ್ಯ ರಚನೆಯಾಗಬೇಕು ಎಂಬ ದೂರದೃಷ್ಟಿ ಚಿಂತನೆಯಿಂದ ಕಸಾಪ ಎರಡು ದಿನಗಳ ವಸತಿ ಸಹಿತ ಕಮ್ಮಟವನ್ನು ಆಯೋಜಿಸಿದೆ.

ಈ ಕಮ್ಮಟದಲ್ಲಿ ಕಾವ್ಯ ಕಟ್ಟುವಿಕೆ , ಭಾಷೆ ಬಳಕೆ , ವಾಚನ ಯೋಗ್ಯ ಶ್ರವಣ ಯೋಗ್ಯ ಬರಹ ಮೂಡಲಿ ಎಂಬ ಕಾರಣದಿಂದ ಪರಸ್ಪರ ಗ್ರಹಿಕೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆಯೆಂದು ವಿವರಿಸಿದರು.

ಕಮ್ಮಟದ ನೊಗ ಹೊತ್ತ ಕವಿ ಅನುವಾದಕ ಸ.ರಘುನಾಥ್ ಮಾತನಾಡಿ , ಕಾವ್ಯ ಸಂಭವದ ಕಮ್ಮಟವೂ ಸೇರಿದಂತೆ ಇಂತಹ ಯಾವುದೇ ಕಮ್ಮಟ ಕವಿಯನ್ನು ರೂಪಿಸದು , ಕವಿತೆ ಮೂಲಕ ಆಗಬೇಕಿರುವುದನ್ನು ಕವಿಯೇದರ್ಶಿಸುವತ್ತ ತೋರು ಬೆರಳನ್ನು ಚಾಚಲು ಮಾತ್ರವೇ ಸಾಧ್ಯವಿದೆ.

ಕಮ್ಮಟಾರ್ಥಿಗಳು ಬೆರಳನ್ನು ನೋಡದೆ ಬೆರಳ ತುತ್ತ ತುದಿಯನ್ನು ನೋಡ ಬೇಕಿದೆ . ಹಾಗೆ ನೋಡಿದಾಗ ಒಂದು ಬಿಂದು ವಿನಿಂದ ಹೊರಡುವ ಕಿರಣವನ್ನು ಕಾಣಬೇಕಿದೆ , ಆ ಕಿರಣವನ್ನು ಬೆಳಕು ಮಾಡಿ ಕೊಂಡರೆ ಅದರಲ್ಲಿ ಕಾವ್ಯದೆದೆ ಕಂಡೀತು ಎಂದರು.

ಸೂಕ್ಷ್ಮ ಅತಿಥೇಯ ನುಡಿಗಳನ್ನಾಡಿದ ಚಿನ್ಮಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್‌.ಸಿ.ಮಂಜುನಾಥ್ ಮಾತನಾಡಿ , ಕವಿ ಕೆಲವು ವಿಚಾರಗಳಿಗೆ ಮಾತ್ರವೇ ಸೀಮಿತವಾಗಿರದೆ ಎಲ್ಲವನ್ನು ಎಲ್ಲರನ್ನೂ ಸ್ವೀಕರಿಸುವ ಮುಕ್ತ ಮನ ಸಿನ ಗುಣವನ್ನು ಹೊಂದಿರಬೇಕು , ಸಂಶೋಧನಾ ಮನಸ್ಥಿತಿಯಲ್ಲಿ ಕಾವ್ಯರಚನೆಯಾಗಲಿ , ಶ್ರವಣ ಮನನದ ನಂತರ ಕಾವ್ಯ ರಚನೆ ಮಾಡಿದರೆ ಉತ್ತಮವಾಗಿರುತ್ತದೆ. ಮಹಾಭಾರತದಲ್ಲಿ ಎಲ್ಲಾ ವರ್ಗದಸಾಹಿತ್ಯ ಪ್ರಾಕಾರಗಳಿವೆಯೆಂದರು.

ಚಿನ್ಮಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ , ರಾಧಾಮಣಿ , ಅರುಂಧತಿ , ಜಯಶ್ರೀಯವರಿಂದ ನಾಡಗೀತೆ ಗಾಯನ , ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ಸ್ವಾಗತಿಸಿ , ಕೋಶಾಧ್ಯಕ್ಷ ವಿನಯ್ ಗಂಗಾಪುರ ಕಸಾಪ ಅಧ್ಯಕ್ಷ ಎನ್.ಬಿ. ಗೋಪಾಲಗೌಡರ ಸಂದೇಶವನ್ನು ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಶಂಕರೇಗೌಡ ವಂದಿಸಿದರು . ವಿವಿಧ ಗೋಷ್ಠಿಗಳ ಕಮ್ಮಟದಲ್ಲಿ ಭಾಗವಹಿಸಲು ಐವತ್ತು ಮಂದಿ ನೋಂದಣಿ ಮಾಡಿಸಿ ಪಾಲ್ಗೊಂಡಿದ್ದರು.

ಎಚ್.ಎ.ಪುರುಷೋತ್ತಮ್‌ರಾವ್ , ಪರ ಮೇಶ್ವರ್ , ಸಿ.ಎ.ರ ಮೇಶ್ ಇತರರು ಹಾಜರಿದ್ದರು .

92 ವಯಸ್ಸಿನ ಆದರ್ಶ ಶಿಕ್ಷಕರಾದ ಸುಬ್ರಾಯ ಉಡುಪರಿಗೆ ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಸನ್ಮಾನ

ಶಿಕ್ಷಕರ ದಿನಾಚರಣೆಯ ಪ್ರಯುಕ್ತ 92 ವಯಸ್ಸಿನ ಆದರ್ಶ ಶಿಕ್ಷಕರಾದ, ಸ್ವತಃ ತಾವೇ ಜಪ್ತಿ ಗ್ರಾಮದಲ್ಲಿ ಶ್ರೀ ರಾಮಚಂದ್ರ ವಿದ್ಯಾಲಯವನ್ನು ಸ್ಥಾಪಿಸಿ, ಬೆಳೆಸಿದ ಶ್ರೀ ಸುಬ್ರಾಯ ಉಡುಪ ಬಳ್ಕೂರು ಇವರನ್ನು ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ಕೆ.ಪಿ.ಭಟ್ ಹಾಗೂ ಮನೋಹರ ಪಿ ಉಪಸ್ಥಿತರಿದ್ದರು.

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಕಿರಿಯ ರೆಡ್ ಕ್ರಾಸ್ ಘಟಕ ಉದ್ಘಾಟನೆ


ಕುಂದಾಪುರ:ರೆಡ್ ಕ್ರಾಸ್ ಒಂದು ಸಮಾಜಸೇವೆ ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳು ರೆಡ್ ಕ್ರಾಸ್ ನಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಕುಂದಾಪುರ ರೆಡ್ ಕ್ರಾಸ್ ಚೇರ್ಮನ್ ಜಯಕರ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಕಿರಿಯ ರೆಡ್ ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಿರಿಯ ರೆಡ್ ಕ್ರಾಸ್ ಘಟಕದ ಅಧ್ಯಕ್ಷೆ ಕು.ಅರ್ಚನಾ ಸೇರಿದಂತೆ ಒಟ್ಟು 52 ವಿದ್ಯಾರ್ಥಿಗಳು ರೆಡ್ ಕ್ರಾಸ್ ಪ್ರತಿಜ್ಞೆ ಸ್ವೀಕರಿಸಿದರು.ಕುಂದಾಪುರ ಜೂನಿಯರ್ ರೆಡ್ ಕ್ರಾಸ್ ಸಂಯೋಜಕ ದಿನಕರ ಆರ್ . ಶೆಟ್ಟಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಡಾ.ಸೋನಿ ಡಿ’ಕೋಸ್ತಾ ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ರೆಡ್ ಕ್ರಾಸ್ ಸಂಸ್ಥೆಯಿಂದ ಶಾಲೆಗೆ ಪ್ರಥ ಮ ಚಿಕಿತ್ಸಾ ಕಿಟ್, ವಿದ್ಯಾರ್ಥಿ ಗಳಿಗೆ ಮಾಸ್ಕ್ ವಿತರಿಸಿದರು.ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ ಸ್ವಾಗತಿಸಿದರು.ಚಂದ್ರಶೇಖರ್ ಬೀಜಾಡಿ ವಂದಿಸಿದರು.ರೆಡ್ ಕ್ರಾಸ್ ಸಂಯೋಜಕ ಶಿಕ್ಷಕಿ ಸಿಸ್ಟರ್ ಚೇತನಾ ಕಾರ್ಯ ಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು “ನಾನು ಸೇವೆ ಮಾಡುವೆ” ಎಂಬ ಕಿರುನಾಟಕ ಪ್ರದರ್ಶಿಸಿದರು

ಕುಂದಾಪುರ ರೋಜರಿ ಕ್ರೆ.ಕೋ.ಆ.ಸೊಸೈಟಿಯ ಉದ್ಯೋಗಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಗಾರ

ಕುಂದಾಪುರ, ಸೆ.9:  ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಎಂಟು ಶಾಖೆಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗಾಗಿ ಕೌಶಲ್ಯ ಅಭಿವೃದ್ಧಿ,  ದಕ್ಷತೆ, ಹಾಗೂ ಗ್ರಾಹಕರ ಸಂಬಂಧ ಕಾರ್ಯಾಗಾರ ನಡೆಯಿತು. ಹೋಟೆಲ್ ಶಿವಪ್ರಸಾದ್ ಗ್ರಾಂಡ್ ನ ಸಭಾಂಗಣದಲ್ಲಿ ನಡೆದ ಈ ಕಾರ್ಯಗಾರವನ್ನು ಸಂಸ್ಥೆಯ ಮಾರ್ಗದರ್ಶಕರಾದ ಅತೀ ವಂದನೀಯ ಸ್ಟ್ಯಾನಿ ತಾವ್ರೋ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.  ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ರೋಟೇರಿಯನ್ ಪಿ. ಡಿ. ಜಿ. ಅಭಿನಂದನ್ ಶೆಟ್ಟಿ, ಹೋಟೆಲ್ ಉದ್ಯಮಿ, ಕುಂದಾಪುರ. ವಾಸುದೇವ ಕಾರಂತ್,  ಸಿಂಡಿಕೇಟ್ ಬ್ಯಾಂಕ್  ನಿವ್ರತ್ತ ಸೀನಿಯರ್ ಮ್ಯಾನೇಜರ್,  ಟಿ. ಬಿ. ಶೆಟ್ಟಿ  ಹಿರಿಯ ವಕೀಲರು ಕುಂದಾಪುರ,  ಪ್ರಭು ಕೆನಡಿ ಪಿರೇರಾ ಉದ್ಯಮಿ, ಆಗಮಿಸಿ ಸಂಸ್ಥೆಯ ಬೆಳವಣಿಗೆಗೆ  ಗ್ರಾಹಕರ ಜೊತೆ ಸಂಬಂಧ, ಕಾನೂನು ಮಾಹಿತಿ,  ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಉದ್ಯೋಗಿಗಳಿಗಾಗಿ ಉಪಯುಕ್ತ ಆಗಿದ್ದ  ಈ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ  ಜಾನ್ಸನ್ ಡಿ ಅಲ್ಮೇಡಾ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷ  ಕಿರಣ್ ಮೇಲ್ವಿನ್ ಲೋಬೊ,  ನಿರ್ದೇಶಕರಾದ  ಫಿಲಿಪ್ ಡಿ ಕೋಸ್ತ,  ಒಜ್ಲಿನ್ ರೇಬೆಲ್ಲೊ ಹಾಗೂ ಇನ್ನಿತರ ನಿರ್ದೇಶಕರು ಭಾಗವಹಿಸಿದ್ದರು.

ಕೋಲಾರ ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡಿ ಜನರ ಪ್ರಾಣ ರಕ್ಷಣೆ ಮಾಡಿ-ರೈತಸಂಘ

ಕೋಲಾರ; ಸೆ.10: ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡಿ ಜನ ಸಾಮಾನ್ಯರ ಅಮೂಲ್ಯ ಪ್ರಾಣ ರಕ್ಷಣೆ ಮಾಡುವಂತೆ ರೈತಸಂಘದಿಂದ ಹದಗೆಟ್ಟಿರುವ ಕೋಲಾರಮ್ಮನ ಕೆರೆ ಪಕ್ಕದ ರಸ್ತೆಯಲ್ಲಿ ಜನಪ್ರತಿನಿಧಿಗಳಿಗೆ ಹೂವಿನ ಅಭಿಷೇಕದ ಮೂಲಕ ಹೋರಾಟ ಮಾಡಿ ಲೋಕೋಪಯೋಗಿ ಇಂಜಿನಿಯರ್‍ಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೋಲಾರ ಜಿಲ್ಲೆಯ ರಸ್ತೆಗಳನ್ನು ಸಿಂಗಪೂರ್ ರಸ್ತೆಗಳನ್ನಾಗಿ ಮಾಡಿರುವ ಜನಪ್ರತಿನಿಧಿಗಳ ಮುಖವಾಡ ಧರಿಸಿ ಟೇಪ್ ಕಟ್ ಮಾಡುವ ಮೂಲಕ ಜಿಲ್ಲೆಯ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿರುವ ರಾಜಕಾರಣಿಗಳ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಠಿಗೆ ರೈತ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಂದಿದ್ದರೂ ಸ್ಥಳೀಯವಾಗಿ ವಾಸ್ತವ ಹೂಡಿ ಸಮಸ್ಯೆ ಬಗೆಹರಿಸಬೇಕಾದ ಉಸ್ತುವಾರಿ ಸಚಿವರು ಜನರ ಬದುಕಿನ ಮೇಲೆ ಜನೋತ್ಸವ ಕಾರ್ಯಕ್ರಮ ಮಾಡುವ ಮುಖಾಂತರ ಬಿಜೆಪಿ ಸರ್ಕಾರ ಜನ ವಿರೋಧಿ ಸರ್ಕಾರ ಎಂದು ಸಾಭೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಕಿದ ಬಣ್ಣ ಮಳೆ ನೀರಿನಲ್ಲಿ ಕಳಚಿ ಹೋಗುತ್ತದೆ ಎಂಬ ಗಾಧೆ ಮಾತಿನಂತೆ ಜಿಲ್ಲಾದ್ಯಂತ ರಾಜ್ಯ, ರಾಷ್ಟ್ರೀಯ ಗ್ರಾಮೀಣ ಪ್ರದೇಶದ ರಸ್ತೆಗಳ ಕಳಪೆ ಕಾಮಗಾರಿಯ ಬಣ್ಣ ಸಹ ಮಳೆಗಾಲದಲ್ಲಿ ಬಯಲಿಗೆ ಬರುವುದಕ್ಕೆ ಉದಾಹರಣೆಯಾಗಿದೆ.
ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಹಿಡಿದು ಹಿರಿಯ ಅಧಿಕಾರಿಗಳ ನಿವಾಸಕ್ಕೆ ಕೂಗಳತೆಯಲ್ಲಿರುವ ಕೋಲಾರಮ್ಮನ ಕೆರೆ ಪಕ್ಕದ ರಸ್ತೆಯ ಅವ್ಯವಸ್ಥೆ ಕಣ್ಣ ಮುಂದೆ ಇದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಂತೆ ಕೋಮಾ ಸ್ಥಿತಿಯಲ್ಲಿರುವ ರೋಗಿಯಂತಾಗಿದ್ದಾರೆ. ಹೃದಯ ಭಾಗದ ರಸ್ತೆಗಳೇ ಈ ರೀತಿಯಿದ್ದರೆ ಇನ್ನು ಗ್ರಾಮೀಣ ಪ್ರದೇಶದ ರಸ್ತೆಗಳ ಪರಿಸ್ಥಿತಿ ಊಹೆ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಯಾವುದೇ ರಸ್ತೆ ಅಭಿವೃದ್ಧಿಪಡಿಸುವಾಗ ಮಳೆ ನೀರು ಸರಾಗವಾಗಿ ಚರಂಡಿ ಮೂಲಕ ಮೂಲ ಕಾಲುವೆಗೆ ಹರಿಯಬೇಕು. ಆದರೆ ಇಂಜಿನಿಯರ್ ಬೇಜವಾಬ್ದಾರಿಯಿಂದ ಬೇಕಾ ಬಿಟ್ಟಿ ಚರಂಡಿ ವ್ಯವಸ್ಥೆಯೇ ರಸ್ತೆಗಳ ಅವೈಜ್ಞಾನಿಕತೆ ಹಾಗೂ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ. ರಸ್ತೆಯ ಗುಂಡಿ, ಅವ್ಯವಸ್ಥೆಯಿಂದ ವಾಹನ ಸವಾರರು ಮೃತಪಟ್ಟು ಅಥವಾ ಅಂಗವಿಕಲರಾದರೆ ಸುಪ್ರೀಂಕೋರ್ಟ್ ಆದೇಶದಂತೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಆಸ್ತಿ ಹರಾಜು ಹಾಕಿ ಪರಿಹಾರ ನೀಡುವ ಕಾನೂನಿಗೆ ಜೀವ ತುಂಬಿದರೆ ಅವ್ಯವಸ್ಥೆಯಿಂದ ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಹಳೆಯ ರಸ್ತೆಗೆ ಹೊಸ ತೇಪೆ ನೆಪದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜನರ ತೆರಿಗೆ ಹಣವನ್ನು ಕಳಪೆ ಕಾಮಗಾರಿ ಮಾಡುವ ಮುಖಾಂತರ ಹಗಲು ದರೋಡೆ ಮಾಡಿ ತೇಪೆ ಹಾಕಿದ ಒಂದು ವಾರಕ್ಕೆ ಮತ್ತೆ ಅದೇ ಸ್ಥಿತಿಗೆ ರಸ್ತೆಗಳು ಬರುತ್ತಿರುವುದು ವಿಪರ್ಯಾಸ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಪತ್ರಿಕಾ ಮಾಧ್ಯಮ ಮುಖಾಂತರ 2 ದಿನದಲ್ಲಿ ಮುಕ್ತಿ ನೀಡಿ ಸಮಸ್ಯೆ ಬಗೆಹರಿಸುತ್ತೇನೆಂಬ ಹೇಳಿಕೆ ಬೆನ್ನಲ್ಲೇ ಗುತ್ತಿಗೆದಾರರು ಮಾಡಿದ 40% ಆರೋಪಕ್ಕೆ ಉತ್ತರ ನೀಡದೆ ಜಿಲ್ಲೆಯಿಂದ ನಾಪತ್ತೆಯಾಗಿರುವ ಉಸ್ತುವಾರಿ ಸಚಿವರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ವಾಹನ ಸವಾರರ ಪರದಾಟ:


ನಗರದ ರಸ್ತೆಗಳು ಹದಗೆಟ್ಟಿರುವುದರಿಂದ ನಗರ ವಾಸಿಗಳು ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುತ್ತಿದ್ದರೆ ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ರಸ್ತೆ ಹಾಳಾಗಿ ಹಳ್ಳಕೊಳ್ಳಗಳಿಂದ ದೊಡ್ಡ ದೊಡ್ಡ ಕಂದಕಗಳು ಸೃಷ್ಠಿಯಾಗಿ ಮಳೆ ಬಿದ್ದರೆ ರಸ್ತೆ ಹಾಗೂ ಹಳ್ಳಕ್ಕೆ ವ್ಯತ್ಯಾಸ ತಿಳಿಯದೆ ಅಪಘಾತಗಳಾಗಿ ಮೃತಪಟ್ಟಿರುವ ಜೊತೆಗೆ ಕೈ ಕಾಲುಗಳು ಕಳೆದುಕೊಂಡಿರುವ ಉದಾಹರಣೆಗಳು ಕಣ್ಣ ಮುಂದೆ ಇದ್ದರೂ ಸಮಸ್ಯೆ ಮಾತ್ರ ಗಂಭೀರವಾಗಿ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಜಿನಿಯರ್ ಬರುವುದೇ ಅಪರೂಪ:

ಹದಗೆಟ್ಟಿರುವ ರಸ್ತೆಗಳ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ಕರೆ ಮಾಡಿದರೆ ಬೇಜವಾಬ್ದಾರಿ ಉತ್ತರ ನೀಡುವ ಜೊತೆಗೆ ವಿಧಾನಸೌಧದಿಂದ ಇಲಾಖೆಯ ಗುಮಾಸ್ತನವರೆಗೂ ಕಮೀಷನ್ ನೀಡಿ ಉಳಿದ ಹಣದಲ್ಲಿ ರಸ್ತೆ ಕಾಮಗಾರಿ ಮಾಡಿದರೆ ಹದಗೆಡದೆ ಸಿಂಗಪೂರ್ ರಸ್ತೆಯಾಗುತ್ತದೆಯೇ ಎಂದು ಭ್ರಷ್ಟಾಚಾರದ ಬಗ್ಗೆ ಅವರೇ ಹೇಳಿಕೊಳ್ಳುತ್ತಾರೆ.
ಇನ್ನು ಕಾಮಗಾರಿ ಪ್ರಾರಂಭ ಮಾಡಲು ಗುದ್ದಲಿಪೂಜೆ ಮಾಡಿ ನಾಪತ್ತೆಯಾಗುವ ಜನಪ್ರತಿನಿಧಿಗಳು ಉದ್ಘಾಟನೆಗೆ ತಾ ಮುಂದು ನಾ ಮುಂದು ಎಂದು ಬರುತ್ತಾರೆ. ಅದರ ಜೊತೆಗೆ ಹಂತ ಹಂತದ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಕ್ಯೂ.ಸಿ. ಅಧಿಕಾರಿಗಳು ಕಚೇರಿಯಿಂದಲೇ 10% ಕಮೀಷನ್ ಪಡೆದು ಕಳಪೆಯಾಗಿದ್ದರೂ ಗುಣಮಟ್ಟದ ಪ್ರಮಾಣಪತ್ರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ವಾರದ ಒಳಗೆ ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸದೇ ಇದ್ದರೆ ಬುಡ್ಡಿ ದೀಪಗಳೊಂದಿಗೆ ಎಲ್ಲಾ ಶಾಸಕರ ಮನೆ ಮುಂದೆ ಸಾವಿನ ಹಲಗೆ ಚಳುವಳಿ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಂಜಿನಿಯರ್ ಅವರು, ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ಜೊತೆಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರಸ್ತೆಗಳ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಿಭಾಗೀಯ ಕಾರ್ಯದರ್ಶಿ ಫಾರೂಖ್ ಪಾಷ, ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ವಿಶ್ವ, ವಿಜಯ್‍ಪಾಲ್, ನಗರ ಘಟಕದ ಅದ್ಯಕ್ಷ ಅದಿಲ್ ಪಾಷ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ಗೋವಿಂದಪ್ಪ, ಚಂದ್ರಪ್ಪ, ಗಿರೀಶ್, ಪುತ್ತೇರಿ ರಾಜು, ಚಂದ್ರಪ್ಪ ಶೈಲಾ, ರಾಧ, ಚೌಡಮ್ಮ. ಮುಂತಾದವರಿದ್ದರು.

ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ಯೂತ್‌ ರೆಡ್‌ ಕ್ರಾಸ್‌” ಘಟಕ ಉದ್ಭಾಟನೆ

ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ರೆಡ್‌ ಕ್ರಾಸ್‌ ಸಂಸ್ಥೆ ಕುಂದಾಪುರ ಇವರಿಂದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಯೂತ್‌ ರೆಡ್‌ ಕ್ರಾಸ್‌ ಘಟಕವನ್ನು ಕುಂದಾಪುರ ರೆಡ್‌ ಕ್ರಾಸ್‌ ಸಂಸ್ಥೆ ಅಧ್ಯಕ್ಬರಾದ ಶ್ರೀ ಜಯಕರ ಶೆಟ್ಟಿ ಉದ್ಭಾ, ಟಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರಿ ರಾಮಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಶ್ರೀ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶ್ರೀ ಶಿವರಾಮ ಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾದ ಶ್ರೀ “ಮುತ್ತಯ್ಯ ಶೆಟ್ಟಿ, ಶ್ರೀ ಗಣೇಶ ಆಚಾರ್ಯ, ಡಾ.ಸೋನಿ, ಶ್ರೀ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.    ಯೂತ್‌ ರೆಡ್‌ ಕ್ರಾಸ್‌ನ ಅಧ್ಯಕ್ಷ ಶ್ರೀ ಕಾರ್ತಿಕ್‌, ಕಾರ್ಯದರ್ಶಿ ಶ್ರೀ ಪವನ್‌ ಅಧಿಕಾರವನ್ನು ಸ್ವೀಕರಿಸಿದರು. ಯೂತ್‌ ರೆಡ್‌ ಕ್ರಾಸ್‌ನ ಎಲ್ಲಾ ಸದಸ್ಯರಿಗೆ, ಕಾರ್ಯಕಾರಿಣಿ ಸದಸ್ಯರಾದ ಶ್ರೀ ದಿನಕರ ಆರ್‌.ಶೆಟ್ಟಿ ಪ್ರತಿಜ್ಞಾ ವಿಧಿ ಬೋದಿಸಿದರು. ಯೂತ್‌ ರೆಡ್‌ ಕ್ರಾಸ್‌ ಸಂಚಾಲಕ ಉಪನ್ಯಾಸಕರಾದ ಶ್ರೀ ಶಂಕರ ನಾಯ್ಕ್‌ ಸ್ವಾಗತಿಸಿದರೆ ಸಹಸಂಚಾಲಕ ಉಪನ್ಯಾಸಕರಾದ ಶ್ರೀ ಕಿರಣಕುಮಾರ್‌ ವಂದಿಸಿದರು. ಉಪನ್ಯಾಸಕರಾದ ಕಾಳಾವರ ಶ್ರೀ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸೆ.12ರೊಳಗೆ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ
ವಿಧಾನಪರಿಷತ್ ಸದಸ್ಯರು,ಸಂಘಟನೆ ಪದಾಧಿಕಾರಿಗಳ ಸಭೆ-ಡಾ.ವೈ.ಎ.ಎನ್ ಭರವಸೆ

ಕೋಲಾರ:- ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ವಿಧಾನ ಮಂಡಳದ ಅಧಿವೇಶನ ಆರಂಭವಾಗುವ ಸೆ.12 ರೊಳಗೆ ದೈಹಿಕ ಶಿಕ್ಷಕರ ಸಂಘದ ರಾಜ್ಯಪದಾಧಿಕಾರಿಗಳ ಸಮ್ಮುಖದಲ್ಲಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ವಿಧಾನಪರಿಷತ್ ಸದಸ್ಯರ ಸಭೆ ನಡೆಸಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ಮುಂಭಾಗ ರಾಜ್ಯ ದೈಹಿಕ ಶಿಕ್ಷಕರ ಸಂಘದಿಂದ ವೃಂದ ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಜಾರಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್ ನೇತೃತ್ವದಲ್ಲಿ ನಗರ ಹೊರವಲಯದ ಜಿಲ್ಲಾಡಳಿತ ಭವನ ಎದುರು ಮನವಿ ನೀಡಿದ ಸಂದರ್ಭದಲ್ಲಿ ಶಿಕ್ಷಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ವೈ.ಎ.ಎನ್, ದೈಹಿಕ ಶಿಕ್ಷಕರ ಬೇಡಿಕೆ ವಿಚಾರವಾಗಿ ನೂರಕ್ಕೆ ನೂರರಷ್ಟು ನಿಮ್ಮ ಕಡೆ ನಾನಿದ್ದೇನೆ, ಕಳೆದ 20 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದೇನೆ. ಸುರೇಶ್ ಕುಮಾರ್ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಾನೇ ಅವರನ್ನು ವೈದ್ಯನಾಥನ್ ಅವರ ಮನೆಗೆ ಕರೆದುಕೊಂಡು ಹೋಗಿ, ಭೇಟಿ ಮಾಡಿಸಿ, ಸಲಹೆ ಕೊಡಿಸಿ ದೈಹಿಕ ಶಿಕ್ಷಣವನ್ನು ಯಾವ ರೀತಿ ಗಟ್ಟಿಗೊಳಿಸಬೇಕು. ದೈಹಿಕ ಶಿಕ್ಷಣದ ಸಮರ್ಪಕ ಬದಲಾವಣೆ ತರುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದನ್ನು ಚರ್ಚೆ ಮಾಡಿದ್ದೆ. ವೈದ್ಯನಾಥನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡಬೇಕು ಎಂದು ಒತ್ತಾಯ ಮಾಡುತ್ತಿರುವುದೇ ನಾವು ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಾದ ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಯೋಗಾಥಾನ್ ಹಾಗೂ ಯೋಗ ದಿವಸ್ ಇವೆಲ್ಲಾ ದೈಹಿಕ ಶಿಕ್ಷಣದ ಮೇಲೆ ಒಳಪಟ್ಟಿದೆ. ಈ ಯೋಜನೆಯೆಲ್ಲ ಯಶಸ್ವಿಯಾಗಲು ಕಾರಣಕರ್ತರೇ ದೈಹಿಕ ಶಿಕ್ಷಕರು. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇರಲೇಬೇಕು. ಮಕ್ಕಳ ಸಂಖ್ಯೆ ಕಡಿಮೆ ಇದೆ ನೂರು ಸಂಖ್ಯೆಇದ್ದರೆ ಮಾತ್ರ ದೈಹಿಕ ಶಿಕ್ಷಕರು ಇರಬೇಕು ಈ ರೀತಿ ಆದೇಶಗಳು ಸರಿ ಹೋಗುವುದಿಲ್ಲ. ಎಷ್ಟೇ ಸಂಖ್ಯೆ ಮಕ್ಕಳಿದ್ದರೂ ದೈಹಿಕ ಶಿಕ್ಷಣ ಪ್ರತಿ ಮಕ್ಕಳಿಗೂ ಮುಖ್ಯವೆಂದರು.
ದೈಹಿಕ ಶಿಕ್ಷಕರನ್ನು ಹೆಡ್ ಮಾಸ್ಟರ್ ಮಾಡಿಸಿ, ಆ ಸ್ಥಾನದಲ್ಲಿ ಕೂರಿಸಬೇಕು. ಈಗಾಗಲೇ ಪ್ರಭಾರ ವ್ಯವಸ್ಥೆ ಮಾಡಿಕೊಟ್ಟಿದೆ. ನಿಮ್ಮ ಸಂಘಗಳು ಇತರೆ ವಿಷಯಗಳ ಗೊಂದಲದಿಂದ ಹಿಂದೆ ಉಳಿದಿದ್ದೇವೆ. ಪ್ರಭಾರವನ್ನು ಕೊಡಬಾರದು ಎಂಬ ಡಿಪಿಐಯವರು ಮೊದಲು ಆದೇಶವನ್ನು ವಾಪಸ್ಸು ಪಡೆಯುವಂತೆ ಗಲಾಟೆ ಮಾಡಿಸಿ ಮುಂದುವರಿಸಲಾಗಿದೆ. ಹೆಡ್ ಮಾಸ್ಟರ್ ಪ್ರಕ್ರಿಯೆಯನ್ನು ಪ್ರತಿಪಾದಿಸಿ, ಪಿಯು ಕಾಲೇಜಿನ ಉಪನ್ಯಾಸಕರ 120 ಹುದ್ದೆಗಳನ್ನು ತುಂಬಿಸುವುದು, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರಮೋಷನ್ ಪ್ರಕ್ರಿಯೆಯನ್ನು ಸರ್ಕಾರದ ಮೇಲೆ ಒತ್ತಡ ತಂದು ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸೆ.12 ರಿಂದ ಸದನ ಆರಂಭವಾಗುತ್ತದೆ, ಅಷ್ಟರೊಳಗೆ ದೈಹಿಕ ಶಿಕ್ಷಕರ ರಾಜ್ಯಮಟ್ಟದ ಪದಾಧಿಕಾರಿಗಳನ್ನು ಸೇರಿಸಿ, ಎಲ್ಲಾ ಎಂಎಲ್‍ಸಿಗಳನ್ನು ಕರೆಸಿ, ಶಿಕ್ಷಣ ಸಚಿವರನ್ನು ಆಹ್ವಾನಿಸಿ, ಒಂದು ಮುಕ್ತ ಸಭೆಯನ್ನು ಆಯೋಜನೆ ಮಾಡುತ್ತೇನೆ. ಆ ಸಭೆಯಲ್ಲಿ ನೀವೆಲ್ಲರೂ ಮಾತನಾಡುವ ಅವಕಾಶವನ್ನು ನೀಡಲಾಗುತ್ತದೆ ನೀವು ಮುಕ್ತವಾಗಿ ನಿಮ್ಮ ಕಷ್ಟ ನೋವುಗಳನ್ನು ಅಲ್ಲಿ ಹೇಳಿಕೊಳ್ಳಬಹುದು ಎಂದು ನುಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಬಿಇಒ ಕನ್ನಯ್ಯ, ಸಂಘಟನೆ ಮುಖಂಡರಾದ ವೆಂಕಟೇಶಪ್ಪ, ನಾಗರಾಜ್, ಮಂಜುನಾಥ್,ಅಬ್ದುಲ್ ಮಾನ್ಸರ್, ವಿನೋದ್ ಬಾಬು, ಸಂತೋಷ್, ಶ್ರೀನಿವಾಸ್, ಡಾ.ಶ್ರೀನಿವಾಸ್, ನಾರಾಯಣಸ್ವಾಮಿ, ನಾಗರಾಜ್ ವೆಂಕಟಸ್ವಾಮಿ, ಶಶಿಕಲಾ, ಅಂಬಿಕಾ,ಲೀಲಾ ಮತ್ತಿತರರಿದ್ದರು.

ಕೈಗಾರಿಕಾ ವಲಯ ಸ್ಥಾಪನೆಗೆ ಶಾಸಕಿ ರೂಪಕಲಾ ನಿರಂತರ ಪ್ರಯತ್ನ:ಮುಖ್ಯಮಂತ್ರಿ ಬೇಟಿ: ಕೆ.ಜಿ.ಎಫ್ ನಿರುದ್ಯೋಗ ಸಮಸ್ಯೆ ಮನವರಿಕೆ

ಕೋಲಾರ,ಸೆ.9: ಕೆ.ಜಿ.ಎಫ್‍ನಲ್ಲಿ ಬೆಮೆಲ್ ವಶದಿಂದ 967 ಎಕರೆ ಬಳಕೆಯಾಗದ ಭೂಮಿಯನ್ನು ಉಪಯೋಗಿಸಿಕೊಂಡು ಕೈಗಾರಿಕಾ ವಲಯ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲೇಬೇಕಂಬ ಹಠ ತೊಟ್ಟಿರುವ ಶಾಸಕಿ ರೂಪಕಲಾ ಶಶಿಧರ್ ನಿರಂತರವಾಗಿ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.
ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ರೂಪಕಲಾ ಕೆ.ಜಿ.ಎಫ್‍ನ ಕೈಗಾರಿಕಾ ಹಬ್ ಸ್ಥಾಪನೆ ವಿಚಾರವು ಇನ್ನು ಕಾರ್ಯಕತಗೊಳ್ಳದೆ ಇರುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು.
ಈ ಸಂಬಂಧ ಲಿಖಿತ ಮನವಿಯನ್ನು ಸಹ ಸಲ್ಲಿಸಿದ ಅವರು ಕೆ.ಜಿ.ಎಫ್‍ನ ಶೋಷಿತ ಸಮುದಾಯಗಳ ಸಾವಿರಾರು ನಿರುದ್ಯೋಗಿಗಳ ಪಾಲಿಗೆ ಆಶಾಕಿರಣವಾಗಿ ಕೆ.ಜಿ.ಎಫ್ ಕೈಗಾರಿಕಾ ವಲಯ ಸ್ಥಾಪನೆಗೆ ಶೀಘ್ರವಾಗಿ ಒತ್ತು ನೀಡುವಂತೆ ಕೋರಿದರು.
1968 ರಲ್ಲಿ ಬೆಮೆಲ್‍ಗೆ ಕೈಗಾರಿಕಾ ಉದ್ದೇಶಕ್ಕಾಗಿ ನೀಡಲಾಗಿದ್ದ 2000 ಎಕರೆ ಭೂಮಿಯ ಪೈಕಿ 973 ಎಕರೆಯನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು, 20 ವರ್ಷಗಳಿಂದ ಈ ಸಂಬಂಧ ನಿರಂತರ ಪ್ರಯತ್ನ ನಡೆಸಿ ಅನುಪಯುಕ್ತವಾಗಿರುವ ಈ ಭೂಮಿಯನ್ನು ಕೂಡಲೇ ರಾಜ್ಯ ಸರ್ಕಾರ ವಶಕ್ಕೆ ಪಡೆದುಕೊಳ್ಳಬೇಕಾಗಿದೆ.
ಕಂದಾಯ ಇಲಾಖೆ ಸುಪರ್ದಿಗೆ ಹಸ್ತಾಂತರಿಸಿರುವ ಈ ಭೂಮಿಯನ್ನು ಕೈಗಾರಿಕಾ ಇಲಾಖೆಗೆ ವರ್ಗಾಯಿಸಿ ಕೈಗಾರಿಕಾ ವಲಯವಾಗಿ ರೂಪಿಸುವಂತೆ ಹಿಂದಿನ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಈಗಿನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಗಮನ ಸೆಳೆದಿದ್ದು, ಇಬ್ಬರೂ ಸಹ ಕೆ.ಜಿ.ಎಫ್‍ಗೆ ಆಗಮಿಸಿ ಸಕಾರಾತ್ಮಕ ಪ್ರತಿಕ್ರಿಯೆ ತೋರಿದ್ದರು.
ಒಂದು ವರ್ಷ ಕಳೆದರೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ. 973 ಎಕರೆ ಭೂಮಿಗೆ ನಯಾಪೈಸೆ ಹಣ ವೆಚ್ಚ ಮಾಡುವ ಅಗತ್ಯವಿಲ್ಲ. ಇದನ್ನು ಕೈಗಾರಿಕಾ ವಲಯವಾಗಿ ರೂಪಿಸಿದರೆ ಸರ್ಕಾರಕ್ಕೆ ನಿರಾಯಾಸವಾಗಿ 1000 ಕೋಟಿ ಆದಾಯ ಬರುತ್ತದೆ ಅಲ್ಲದೆ ಕೆ.ಜಿ.ಎಫ್‍ನಿಂದ ಪ್ರತಿನಿತ್ಯ ಕೆಲಸ ಹುಡುಕಿಕೊಂಡು ಹೋಗುವ ಸವಿರಾರು ಯುವಕ ಯುವತಿಯರಿಗೆ ಹಾಗೂ ಕೋಲಾರ ಜಿಲ್ಲೆಯ ಯುವ ಜನರಿಗೆ ಉದ್ಯೋಗ ಅವಕಾಶ ದೊರಕಿಸಲು ಸಾಧ್ಯವಾಗುತ್ತದೆ ಎಂದು ರೂಪಕಲಾ ಶಶಿಧರ್ ಮನವರಿಕೆ ಮಾಡಿಕೊಟ್ಟರು.
ಕೈಗಾರಿಕಾ ವಲಯ ಸ್ಥಾಪನೆ ವಿಷಯದಲ್ಲಿ ಕಂದಾಯ ಮತ್ತು ಕೈಗಾರಿಕಾ ಇಲಾಖೆಗಳ ನಡುವಣ ಪ್ರಕ್ರಿಯೆಯಲ್ಲಿ ವಿಳಂಭಕ್ಕೆ ಕಾರಣ ಗೊತ್ತಾಗುತ್ತಿಲ್ಲ.
ಆದ್ದರಿಂದ ತಾವು ಮಧ್ಯ ಪ್ರವೇಶಿಸಿ ಎರಡೂ ಇಲಾಖೆಗಳ ಸಮನ್ವಯ ರೂಪಿಸಲು ಕೈಗಾರಿಕಾ ಹಬ್ ಸ್ಥಾಪಿಸುವ ಮೂಲಕ ಜಾಗತಿಕ ವಲಯಗಳು ಕೆ.ಜಿ.ಎಫ್‍ಗೆ ಆಗಮಿಸುವಂತಾಗಬೇಕೆಂದು ಕೋರಿದರು.
ರೂಪಶಶಿಧರ್ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕ ಪ್ರತಿಕ್ರಿಯೆ ತೋರಿದರು. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.