ಜಾನುವಾರುಗಳಿಗೆ ಚರ್ಮ ಗಂಟು ರೋಗ ನಿಯಂತ್ರಣ ಮಾಡುವಲ್ಲಿ ವಿಪಲವಾಗಿರುವ ಪಶು ಇಲಾಖೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಸಂಘ ಅಗ್ರಹ

ಕೋಲಾರ, ಸೆ.26: ಜಿಲ್ಲಾದ್ಯಾಂತ ಜಾನುವಾರುಗಳಿಗೆ ಮಾರಕವಾಗಿರುವ ಚರ್ಮ ಗಂಟು ರೋಗ ನಿಯಂತ್ರಣ ಮಾಡುವಲ್ಲಿ ವಿಪಲವಾಗಿರುವ ಪಶು ಇಲಾಖೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಸಂಘದಿಂದ ಹಾಲಿನೊಂದಿಗೆ ಹೋರಾಟ ಮಾಡಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ನೀಡಿ ಅಗ್ರಹಿಸಲಾಯಿತು. ಹಸುವಿನಿಂದ ಹಾಲು ಕರೆದು ಲಕ್ಷಾಂತರ ರೈತ
ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮವನ್ನು ರಕ್ಷಣೆ ಮಾಡಿ ಎಂದು ಹಾಲುನೀಡುತ್ತೇವೆ. ಹಸುವನ್ನು ಉಳಿಸಿಕೊಟ್ಟು ಸ್ವಾಭಿಮಾನದ ಬದುಕನ್ನು ಕಲ್ಪಿಸಿ ಎಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾನ್ಯರನ್ನು ಒತ್ತಾಯ ಮಾಡಿದರು. ಗ್ರಾಮೀಣ ಪ್ರದೇಶದ ಪಶು ವೈದ್ಯ ಸೇವೆ ಮಾಡಬೇಕಾದ ಪಶು ಇಲಾಖೆಯಲ್ಲಿ ಸಿಬ್ಬಂದು ಕೊರತೆ ಜೊತೆಗೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ವಿಪಲವಾಗಿರುವುದ್ದಾರೆ ಅವ್ಯವಸ್ಥೆಯ ವಿರುದ್ದ ಆರೋಪ ಮಾಡಿದರು. ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪದಲ್ಲಿ
ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗ ನಿಯಂತ್ರಣ ಮಾಡುವಲ್ಲಿ ಪಶು ವೈದ್ಯರು ವಿಪಲವಾಗಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಔಷಧಿ ಇಲ್ಲದ ಕಾರಣ ಗುಣಮಟ್ಟದ ಚಿಕಿತ್ಸೆ ದೊರಯದೆ ರೋಗ
ನಿಯಂತ್ರಣಕ್ಕೆ ಬಾರದೆ ಕಣ್ಣುಮುಂದೆಯೇ ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿರುವುದರಿಂದ ಕುಟುಂಬಕ್ಕೆ ಆಸರೆಯಾಗಿದ್ದ ಜೀವ ಕಳೆದುಕೊಂಡ ಕಣ್ಣೀರಿನಲ್ಲಿ ಹೈನುಗಾರಿಕೆ ಇದ್ದರೂ ಸಹಕರಿಸದ ಇಲಾಖೆಯ ವಿರುದ್ದ
ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಗಡಿಭಾಗಗಳಲ್ಲಿ ಕಾಣಿಸಿಕೊಂಡಿರುವ ರೋಗಕ್ಕೆ ಚಿಕಿತ್ಸೆ ನೀಡಬೇಕಾದ ಪಶು ಇಲಾಖೆ ಕಚೇರಿಗಳಲ್ಲಿ ಕುರ್ಚಿಗಳು ಬಿಟ್ಟು ಯಾವುದೇ ಅಧಿಕಾರಿಗಳಿಲ್ಲದೆ ಪಶು ಇಲಾಖೆಗೆ ಬರುವ ರೈತಾಪಿ ವರ್ಗಕ್ಕೆ ಸ್ಪಂದಿಸದ ಪಶು ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯಿಂದ ಜಾನುವಾರುಗಳನ್ನು ಉಳಿಸಿಕೊಳ್ಳಲು ಖಾಸಗಿ ವೈದ್ಯರು ಇಲ್ಲವೇ ಗರ್ಭಧಾರಣೆ ಮಾಡುವ ಖಾಸಗಿ ವ್ಯಕ್ತಿಗಳನ್ನು ಅವಲಂಭಿಸಿ ಚಿಕಿತ್ಸೆ ಕೊಡಿಸಿದರೂ ರೋಗ ನಿಯಂತ್ರಣಕ್ಕೆ ಬಾರದೆ ರೈತರು ದಿಕ್ಕುತೋಚದೆ ತಲೆ ಮೇಲೆ ಕೈ ಹೊತ್ತು ಪಶು

ಚಿಕಿತ್ಸೆಗಾಗಿ ಕಾತುರದಿಂದ ಕಾಯುತ್ತಿದ್ದಾರೆಂದು ದೂರು ನೀಡಿದರು. ಜಿಲ್ಲಾದ್ಯಾಂತ ಮುಂಗಾರು ಮಳೆ ಆರ್ಭಟಕ್ಕೆ
ತತ್ತರಿಸಿರುವ ರೈತರಿಗೆ ಹಾಗೂ ಜಾನುವಾರುಗಳಿಗೆ ಬಾದಿಸುತ್ತಿರುವ ರೋಗಗಳ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಉಸ್ತುವಾರಿ ಸಚಿವರು ಇದ್ದು ಇಲ್ಲದಂತಾಗಿದ್ದಾರೆ. ನೆಪಮಾತ್ರಕ್ಕೆ ಸಿಡಿಲಿನಂತೆ ಕೆ.ಡಿ.ಪಿ ಸಭೆಯಲ್ಲಿ ಅಬ್ಬರಿಸಿ ನಾಪತ್ತೆಯಾಗುತ್ತಿದ್ದಾರೆಂದು ಉಸ್ತುವಾರಿ ಸಚಿವರ ವಿರುದ್ದ ಕಿಡಿ ಕಾರಿದರು. 24 ಗಂಟೆಯಲ್ಲಿ ಜಿಲ್ಲಾದ್ಯಾಂತ ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗ ನಿಯಂತ್ರಣಕ್ಕೆ ವಿಶೇಷ ವೈದ್ಯರ ತಂಡ ರಚನೆ ಮಾಡಿ ಅಗತ್ಯವಿರುವ ಔಷಧಿಗಳನ್ನು ಪೂರೈಕೆ ಮಾಡಿ ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕೆಂದು ಮನವಿ ನೀಡಿ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ರವರು ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗದ ಬಗ್ಗೆ ವರದಿ ತರಿಸಿಕೊಂಡು
ರೋಗ ನಿಯಂತ್ರಣಕ್ಕೆ ಅವಶ್ಯಕತೆಯಿರುವ ಔಷಧಿ ವಿತರಣೆ ಮಾಡುವ ಭರವಸೆಯನ್ನು ನೀಡಿದರು.ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಮುಖಂಡ ಕೋಟೆ ಶ್ರೀನಿವಾಸ್, ತೆರ್ನಹಳ್ಳಿ ಆಂಜಿನಪ್ಪ, ಫಾರೂಖ್ಪಾ ಷ, ಬಂಗಾರಿ ಮಂಜು, ರಾಜೇಶ್, ಸುನೀಲ್‍ ಕುಮಾರ್, ಗುರುಮೂರ್ತಿ, ಗೀರೀಶ್,ನಳಿನಿ.ವಿ,ಆಧಿಲ್ ಪಾಷ, ಮುಂತಾದವರಿದ್ದರು.

ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ಒಕ್ಸಿಜನ್ ಕಾನ್ಸಂಟ್ರೆಟರ್ ಕೊಡುಗೆ

ಕುಂಭಾಶಿ ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ “ಒಕ್ಸಿಜನ್ ಕಾನ್ಸಂಟ್ರೆಟರ್” ಹಸ್ತಾಂತರಿಸಲಾಯಿತು.
ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ,ಮಾಜಿ ಅಧ್ಯಕ್ಷರುಗಳಾದ ಶಾಂತರಾಮ ಪ್ರಭು, ಡಾ. ವಿಶ್ವೇಶ್ವರ್ ಹಾಗೂ ಚಿತ್ರಕೂಟದ ಡಾ. ರಾಜೇಶ್ ಬಾಯರಿ, ಡಾ. ಅನುಲೇಖಾ ಬಾಯರಿ ಉಪಸ್ಥಿತರಿದ್ದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ತರಬೇತಿ ಶಿಬಿರ


ಶಿರ್ವ: ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಯೋಗ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು.ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗಗುರುಗಳಾದ ಶ್ರೀ ರಾಧಾಕೃಷ್ಣ ಪ್ರಭು ಅವರು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಯುತ ಯುವಜನರನ್ನು ರೂಪಿಸಲು ಯೋಗ ಮತ್ತು ಕ್ರೀಡಾ ಕಡ್ಡಾಯವಾಗಿ ಶಿಕ್ಷಣದಲ್ಲಿ ಭಾಗವಾಗಿದೆ. ಈ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಪಡೆದು ಮುಂದೆ ಇತರರಿಗೆ ಮಾದರಿಯಾಗಿ ಸಮಾಜಸೇವೆಯನ್ನು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಗುರುಗಳಾದ ಶ್ರೀ ಅನಂತ ರಾಯ ಶೆಣೈ, ಯೋಗ ಮತ್ತು ಫಿಟ್ನೆಸ್ ಸೆಲ್ ನಿರ್ದೇಶಕ ಶ್ರೀ ಜೆಫ್ ಸನ್ನಿ ಡಿಸೋಜಾ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಅಧ್ಯಾಪಕ ವೃಂದ,ಆಡಳಿತ ಸಿಬ್ಬಂದಿ, ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಅನುಕ್ ನಾಯಕ ಸಹಕರಿಸಿದರು.ಕು. ರಕ್ಷ ಮತ್ತು ಬಳಗ ಪ್ರಾರ್ಥಿಸಿ,ಕು. ಜಿಯಾ ಸಿ ಪೂಜಾರಿ ವಂದಿಸಿದರು., ಕು. ಸನಿಯಾ ಶೇಕ್ ಸ್ವಾಗತಿಸಿ, ಕು. ತರನಂ ಕಾರ್ಯಕ್ರಮ ನಿರೂಪಿಸಿದರು.

ಯೂತ್ ಗೇಮ್ ಇಂಟರ್ ನೇಶನಲ್ ಸಿರೀಸ್ 2022ನ ತ್ರೋ ಬಾಲ್ ನಲ್ಲಿ ಸುಜಾತ ಕೆ ಎನ್.ಗೋಪಾಲ್ ಗೆ ಚಿನ್ನದ ಪದಕ

ಇತ್ತೀಚೆಗೆ ನೇಪಾಳ ದೇಶದ ಪೊಕ್ರ ದಲ್ಲಿ ಆಯೋಜಿಸಲಾದ ಯೂತ್ ಗೇಮ್ ಇಂಟರ್ ನೇಶನಲ್ ಸಿರೀಸ್ 2022ನ ತ್ರೋ ಬಾಲ್ ಪಂದ್ಯಾಟದಲ್ಲಿ ಭಾರತ ತಂಡದ ನಾಯಕಿಯಾಗಿ ಚಿನ್ನದ ಪದಕ ಪಡೆದ ಸುಜಾತ ಕೆ ಎನ್.ಗೋಪಾಲ್ . ಬಸ್ರೂರು ಶಾರದಾ ಕಾಲೇಜಿನ ಮಾಜಿ ಚಾಂಪಿಯನ್ ಹಾಗೂ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ವಿದ್ಯಾರ್ಥಿನಿ ಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು,ಮೊಗವೀರ ಮಹಿಳಾ ಮಹಾಜನ ಸಂಘದ ಸದಸ್ಯರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಕಳೆದ ವರ್ಷದಂತೆ ಸುಲಭವಾಗಿರದು ಪರಿಶ್ರಮದಿಂದ ಓದಿದರೆ ಮಾತ್ರವೇ ಯಶಸ್ಸು – ನಾಗೇಂದ್ರಪ್ರಸಾದ್

ಕೋಲಾರ : – ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಹಿಂದಿನ ವರ್ಷದಷ್ಟು ಸುಲಭವಾಗಿರುವುದಿಲ್ಲ , ನೀವು ಈಗಿನಿಂದಲೇ ಪರಿಶ್ರಮ ಹಾಕಿ ಓದಿದರೆ ಮಾತ್ರವೇ ಈ ಬಾರಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರಿತು ಕಲಿಕೆ ಮುಂದುವರೆಸಿ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಕ್ಕಳಿಗೆ ಕಿವಿಮಾತು ಹೇಳಿದರು . ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ದಿಢೀರ್‌ ಭೇಟಿ ನೀಡಿದ್ದ ಅವರು ಶಾಲೆಯಲ್ಲಿ ನಡೆಯುತ್ತಿದ್ದ ಎಸ್ಸೆಸ್ಸೆಲ್ಸಿ ಅರ್ಧವಾರ್ಷಿಕ ಪರೀಕ್ಷೆ ವೀಕ್ಷಿಸಿದ ನಂತರ ಮಕ್ಕಳೊಂದಿಗೆ ಮಾತನಾಡಿದರು . ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ , ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ , ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರ ಎಂದರು .
ಉತ್ತಮ ಬರವಣಿಗೆ ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿದೆ , ವಿದ್ಯಾರ್ಥಿಗಳು ಬರವಣಿಗೆ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಪಠ್ಯದಲ್ಲಿರುವುದನ್ನೇ ಬರೆದು ಅಭ್ಯಾಸ ಮಾಡಿ , ಬರವಣಿಗೆ ಉತ್ತಮವಾಗಿದ್ದರೆ ಮಾತ್ರ ಶೇ .೧೦೦ ಅಂಕ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು . ಎಸೆಸೆಲಿ ಪ್ರಶ್ನೆ ಪತ್ರಿಕೆಯಲ್ಲಿ ಈ ಬಾರಿ ಕಠಿಣ ಪ್ರಶ್ನೆಗಳ ಪ್ರಮಾಣ ಹೆಚ್ಚಾಗಲಿದೆ . ಕಳೆದಬಾರಿಯಷ್ಟು ಸುಲಭವಂತಗೂ ಅಲ್ಲ , ಶ್ರದ್ಧೆ ವಹಿಸಿ ಓದಿ , ನಿಮ್ಮ ದೈನಂದಿನ ಕಲಿಕೆಗಾಗಿ ನೀವೇ ವೇಳಾಪಟ್ಟ ಸಿದ್ಧಪಡಿಸಿಕೊಳ್ಳಿ , ಅದರಂತೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು . ಫಲಿತಾಂಶ ಉತ್ತಮಪಡಿಸುವುದರ ಜತೆಗೆ ಇದೀಗ ಕೋವಿಡ್‌ನಿಂದಾದ ಕಲಿಕಾ ಹಿನ್ನಡೆಯನ್ನು ಸರಿಪಡಿಸುವ ಹೊಣೆಯೂ ಶಿಕ್ಷಕರ ಮೇಲಿದೆ , ಅದಕ್ಕಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು . ಶಿಕ್ಷಕರು ಕಲಿಕೆಯಲ್ಲಿ ಪ್ರಾಯೋಗಿಕ ಕಲಿಕೋಪಕರಣ ಬಳಸಲು ಸೂಚಿಸಿದ ಅವರು , ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಿ ಎಂದು ಸೂಚಿಸಿದರು . ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್‌ , ಗ್ರಂಥಾಲಯ , ವಿಜ್ಞಾನ ಪ್ರಯೋಗಾಲಯ ಮತ್ತಿತರ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಸಿದ್ದೇಶ್ವರಿ , ಶಿಕ್ಷಕರಾದ ಎಂ.ಆರ್‌.ಗೋಪಾಲಕೃಷ್ಣ , ಭವಾನಿ , ಶ್ವೇತಾ , ಸುಗುಣಾ , ಲೀಲಾ , ವೆಂಕಟರೆಡ್ಡಿ , ಫರೀದಾ , ಶ್ರೀನಿವಾಸಲು , ಚಂದ್ರಶೇಖರ್ ಮತ್ತಿತರರಿದ್ದರು .

ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್‌ ೨ ನೇ ಸ್ಟೇಜ್‌ಗೆ – ಬ್ಯಾಲಹಳ್ಳಿ ಗೋವಿಂದಗೌಡ ೩ ನೇಹಂತ ತಲುಪಿ ಸರ್ವನಾಶವಾಗೋ ಮುನ್ನಾ ಎಚ್ಚರವಹಿಸಿ – ಆಡಳಿತ ಮಂಡಳಿಗೆ ತಾಕೀತು

ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್‌ ೨ ನೇ ಸ್ಟೇಜ್‌ಗೆ – ಬ್ಯಾಲಹಳ್ಳಿ ಗೋವಿಂದಗೌಡ ೩ ನೇಹಂತ ತಲುಪಿ ಸರ್ವನಾಶವಾಗೋ ಮುನ್ನಾ ಎಚ್ಚರವಹಿಸಿ – ಆಡಳಿತ ಮಂಡಳಿಗೆ ತಾಕೀತುಕೋಲಾರ : – ತಾಲ್ಲೂಕಿನ ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್‌ ೨ ನೇ ಹಂತ ತಲುಪಿದೆ , ಮೂರನೇ ಹಂತ ಮುಟ್ಟಿ ಸರ್ವನಾಶವಾಗುವ ಮುನ್ನಾ ಆಗಿರುವ ತಪ್ಪುಗಳನ್ನು ಸರಿಪಡಿಸಿ ಸಂಘಕ್ಕೆ ಜೀವ ತುಂಬಿ ಸರಿದಾರಿಗೆ ತನ್ನಿ ಎಂದು ಆಡಳಿತ ಮಂಡಳಿ ನಿರ್ದೇಶಕರಿಗೆ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು . ತಾಲೂಕಿನ ವಡಗೂರು ಗ್ರಾಮದಲ್ಲಿ ನಡೆದ ಹುತ್ತೂರು ಹೋಬಳಿ ರೇಷ್ಮೆ ಬೆಳಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು , ಹಿಂದೆ ಮಾಡಿರುವ ತಪ್ಪುಗಳಿಂದಾಗಿ ಈ ಭಾಗದ ರೈತರು , ಮಹಿಳೆಯರಿಗೆ ಅನ್ಯಾಯವಾಗಿದೆ ಎಂದರು .

ಹಿಂದೆ ಕಾರ್ಯನಿರ್ವಹಿಸಿದ್ದ ಕಾರ್ಯದರ್ಶಿ ವಿಜಯಕುಮಾರ್‌ರ ಭ್ರಷ್ಟಾಚಾರದ ಕುರಿತು ಆಡಳಿತ ಮಂಡಳಿ ಗಮನಹರಿಸಬೇಕಿತ್ತು , ಆದರೆ ಆಡಳಿತ ಮಂಡಳಿ ನಿದ್ರೆಯಲ್ಲಿತ್ತು , ತಪ್ಪು ಗಳು ಆಗಿವೆ ಅವುಗಳನ್ನು ಹೇಳಿಕೊಂಡು ಹೋದರೆ ಪ್ರಯೋಜನವಿಲ್ಲ ತಪ್ಪಗಳಿಂದಲ್ಲೇ ಸೊಸೈಟಿ ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ ಸಾಲ ಪಡೆದ ರೈತರ ಮನೆ ಬಾಗಿಲಿಗೆ ಹೋಗಿ ಮರು ಪಾವತಿ ಮಾಡುವಂತೆ ಮನವೊಲಿಸುವ ಕೆಲಸವನ್ನು ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿ ಮಾಡಬೇಕಾಗಿತ್ತು ಎಂದರು . ಸಹಕಾರಿ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರೆ ವಸೂಲಿ ಮಾಡುವುದು ಕಷ್ಟ ರೈತರ ಮೇಲೆ ದೂರು ದಾಖಲಿಸಲು ಸಾಧ್ಯವಿಲ್ಲ ಮನವೊಲಿಸಬೇಕು ಎಂದ ಅವರು , ಅವಿಭಜಿತ ಜಿಲ್ಲೆಯಲ್ಲೇ ಹುತ್ತೂರು ಸೊಸೈಟಿ ಅತಿ ದೊಡ್ಡ ಸೊಸೈಟಿ , ಹೆಚ್ಚು ವಿಸ್ತಾರ ಹೊಂದಿದೆ . ಇಲ್ಲಿ ಕನಿಷ್ಟ ೫೦ ಕೋಟಿ ಸಾಲ ನೀಡಬೇಕಾಗಿತ್ತು ಆದರೆ ಸಾಧ್ಯವಾಗಿಲ್ಲ . ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು , ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದಿದ್ದರೆ ಮತ್ತು ಸೊಸೈಟಿಯ ಸಿಇಒ ಕಾರ್ಯವೈಖರಿಯನ್ನು ಗಮನಿಸದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದರು .

ಸಾಲ ವಸೂಲಾತಿ ಅಭಿಯಾನ ಮಾಡಿ

ಸೊಸೈಟಿ ಆಡಳಿತ ಮಂಡಳಿ ಜವಾಬ್ದಾರಿ ಅರಿತು ಮುನ್ನಡೆಯಬೇಕು , ರೈತರಿಂದ ಬಾಕಿ ಇರುವ ಸಾಲವನ್ನು ವಸೂಲಿ ಮಾಡಲು ಬದ್ಧತೆ ತೋರಬೇಕು , ರೈತರ ಮನೆಬಾಗಿಲಿಗೆ ತೆರಳಿ ಒತ್ತಡ ಹಾಕಿದರೆ ಸಾಲ ಕಟ್ಟುತ್ತಾರೆ , ರೈತರೇನು ಮೋಸಗಾರರಲ್ಲ ಎಂದು ತಿಳಿಸಿದರು . ನೀವು ದಾಖಲೆಗಳ ಸಮರ್ಪಕ ನಿರ್ವಹಣೆ ಮಾಡಿದರೆ ಖಂಡಿತಾ ಡಿಸಿಸಿ ಬ್ಯಾಂಕ್ ವತಿಯಿಂದ ಮರುಸಾಲ ನೀಡುತ್ತೇವೆ ಹುತ್ತೂರು ಹೋಬಳಿಯಲ್ಲಿ ಕನಿಷ್ಠ ೫೦ ಕೋಟಿ ಸಾಲ ನೀಡಿ , ಈ ಭಾಗದ ರೈತರು , ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಆಶಯ ನಮಗೂ ಇದೆ ಎಂದರು . ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ , ಯಲವಾರ ಸೊಣ್ಣೆಗೌಡ , ಆಡಳಿತ ಮಂಡಳಿ ಇರುವುದು ಅಲಂಕಾರಕ್ಕಾಗಿ ಅಲ್ಲ , ನಿಮ್ಮಲ್ಲೂ ಬದ್ಧತೆ ಇರಬೇಕು , ಸೊಸೈಟಿಯ ಬೆಳವಣಿಗೆ ಗಮನಿಸುತ್ತಿರಬೇಕು , ಯಾರೋ ಮಾಡಿದ ತಪ್ಪಿನಿಂದ ರೈತರು , ಮಹಿಳೆಯರಿಗೆ ಶಿಕ್ಷೆಯಾಗಿದೆ , ಎಲ್ಲಾ ಕಡೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ . ಈ ಸೊಸೈಟಿ ವ್ಯಾಪ್ತಿಯ ಮಹಿಳೆಯರು , ರೈತರಿಗೆ ಮಾತನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು .
ಸೊಸೈಟಿ ಅಧ್ಯಕ್ಷ ವಡಗೂರು ರಾಮು ಮಾತನಾಡಿ , ನಮ್ಮ ಆಡಳಿತ ಮಂಡಳಿ ಬಂದ ನಂತರ ೧.೮೩ ಕೋಟಿ ರೂ ಸಾಲ ನೀಡಿದ್ದೇವೆ ಹಿಂದಿನ ಕಾರ್ಯದರ್ಶಿ ವಿಜಯಕುಮಾರ್ ಮಾಡಿದ ತಪ್ಪಿಗೆ ಈ ಸೊಸೈಟಿ ಈ ಸ್ಥಿತಿಗೆ ಬಂದಿದೆ . ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗತ್ತೇವೆ , ಅದಕ್ಕಾಗಿ ಸಂಕಲ್ಪ ಮಾಡಿದ್ದೇವೆ ಎಂದರು ಷೇರುದಾರಾದ ವಡಗೂರು ನಾಗರಾಜ್ ಮತ್ತಿತರರು ಮಾತನಾಡಿ ಹುತ್ತೂರು ಹೋಬಳಿಯಲ್ಲಿ ಸುಮಾರು ೫೨ ಹಳ್ಳಿಗಳು ಇದ್ದು ಪಂಚಾಯತಿಗೊಂದು ಸಹಕಾರ ಸಂಘ ಪ್ರಾರಂಭಿಸಲು ಒತ್ತಾಯಿಸಿದರು . ಇದಕ್ಕೆ ಸರ್ವಾನುಮತದ ಅಂಗೀಕಾರ ದೊರೆಯಿತು . ಒಟ್ಟಾರೆ ಸರ್ವಸದಸ್ಯರ ಸಭೆಯಲ್ಲಿ ಗದ್ದಲವಾಗುವ ಮುನ್ಸೂಚನೆ ಇತ್ತು , ಆಡಳಿತ ಮಂಡಳಿ ಹಾಗೂ ಷೇರುದಾರರ ಮಧ್ಯೆ ಉದ್ವಿಗ್ನ ವಾತಾವರಣವಿದ್ದರೂ ಯಾವುದೇ ಗಲಾಟೆ , ಮಾತಿನ ಚಕಮಕಿಗೆ ಅವಕಾಶವಿಲ್ಲದಂತೆ ಸಭೆಯನ್ನು ಯಶಸ್ವಿಯಾಗಿ ಮುಗಿಸಲಾಯಿತು . ವಡಗೂರು ಸೊಸೈಟಿ ಉಪಾಧ್ಯಕ್ಷ ಅಂಬರೀಶ್ , ನಿದೇರ್ಶಕರಾದ ಚಂದ್ರಶೇಖರ್ , ರಾಜೇಂದ್ರಪ್ರಸಾದ್ , ರಮೇಶ್‌ ಕುಮಾರ್‌ , ಕೆ.ರಮೇಶ್ , ಶ್ರೀನಿವಾಸಪ್ಪನಾರಾಯಣಸ್ವಾಮಿ , ಕೃಷ್ಣಮೂರ್ತಿ , ಚಂದ್ರಶೇಖರ್‌ , ಅಮರಾವತಿ , ನಾರಾಯಣಮ್ಮ ,ಕಾರ್ಯನಿರ್ವಾಹಣಾಧಿಕಾರಿ ವೈ.ವಿ ನಾಗರಾಜ್ , ಹಿರಿಯ ಸಹಕಾರಿ ಅಬ್ಬಣಿ ಶಂಕರ್ , ಅಬ್ಬಣಿ ಶಿವಪ್ಪ , ವಿಟ್ಲಪನಹಳ್ಳಿ ವೆಂಕಟೇಶ್ ಮುಂತಾದವರಿದ್ದರು

ಜನರು ಆರೋಗ್ಯ ತಪಾಸಣೆಗೆ ಒಳಗಾಗುವುದರ ಮೂಲಕ ಸಂಭವನೀಯ ಅನಾರೋಗ್ಯದಿಂದ ಮುಕ್ತರಾಗಬೇಕು:ಡಾ. ವೈ.ವಿ.ವೆಂಕಟಾಚಲ

ಶ್ರೀನಿವಾಸಪುರ: ಜನರು ಆರೋಗ್ಯ ತಪಾಸಣೆಗೆ ಒಳಗಾಗುವುದರ ಮೂಲಕ ಸಂಭವನೀಯ ಅನಾರೋಗ್ಯದಿಂದ ಮುಕ್ತರಾಗಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಎಎಪಿ ಮುಖಂಡ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಶನಿವಾರ ತಾಲ್ಲೂಕು ಎಎಪಿ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆ ಹಾಗೂ ನಿರ್ಲಕ್ಷ್ಯದ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಬಡವರ ಆರೋಗ್ಯ ಹದಗೆಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣರು ಕೃಷಿ ಚಟುವಟಿಕೆ ಒತ್ತಡದಲ್ಲಿ ವೈಯಕ್ತಿಕ ಆರೋಗ್ಯದ ಕಡೆ ಅಗತ್ಯ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವರು ವಾರದ ಸಂತೆಗೆ ಕಡ್ಡಾಯವಾಗಿ ಖರೀದಿಗೆ ಬರುತ್ತಾರೆ. ಅವರ ಹಿತದೃಷ್ಟಿಯಿಂದ ತಾಲ್ಲೂಕಿನ ಪ್ರತಿ ಸಂತೆಯಲ್ಲೂ ಎಎಪಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಪ್ರತಿ ಸಂತೆಯಲ್ಲೂ ನೂರಾರು ಜನರು ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಶಿಬಿರದಲ್ಲಿ ಆರೋಗ್ಯ ಸಿಬ್ಬಂದಿ ವಿವಿಧ ಪರೀಕ್ಷೆಗಳನ್ನು ನಡೆಸಿ, ಆಯಾ ವ್ಯಕ್ತಿಯ ಆರೋಗ್ಯದ ಬಗ್ಗೆ ತಿಳಿಸುತ್ತಾರೆ. ತಜ್ಞ ವೈದ್ಯರು ಪರೀಕ್ಷಿಸಿ ಆರೋಗ್ಯ ಸಲಹೆ ನೀಡುತ್ತಾರೆ. ಅದರಂತೆ ನಡೆದುಕೊಂಡರೆ ಅವರ ಆರೋಗ್ಯ ಸುಧಾರಿಸುತ್ತದೆ. ಇದು ಎಎಪಿ ಉಚಿತ ಸೇವೆಯಾಗಿರುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ವೆಂಕಟೇಶ್ವರ ನರ್ಸಿಂಗ್ ಹೋಂ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರು 300ಕ್ಕೂ ಹೆಚ್ಚು ವ್ಯಕ್ತಗಳ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆ ನೀಡಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 22ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ 22ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮವು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ವೇದಿಕೆಯಲ್ಲಿ ಜರಗಿತು.
   ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರು, ಉದ್ಯಮಿಗಳಾದ ಎಸ್.ಕೆ.ಸಾಲ್ಯಾನ್, ಚೆಂಡೆ ತರಬೇತುದಾರರಾದ ರಾಘವೇಂದ್ರ ಪಂಜಿಮಾರು, ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ಅಂತಿಮ ಪರೀಕ್ಷೆಯಲ್ಲಿ 621 ಅಂಕ ಪಡೆದು ಕನ್ನಡ ಮಾಧ್ಯಮ ವಿಭಾಗದಲ್ಲಿ ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನ ತಂದು ಕೊಟ್ಟ ನಿಟ್ಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿ ನಿಶ್ಮಿತ್ ಬೋಳ ಹಾಗೂ 608 ಅಂಕ ಪಡೆದು ನಿಟ್ಟೆ ವಿದ್ಯಾಸಂಸ್ಥೆಗೆ ನಾಲ್ಕನೆ ಸ್ಥಾನ ತಂದು ಕೊಟ್ಟ ಸ್ನೇಹಾ ಬೋಳ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಬೆಳ್ಮಣ್ಣು ಕೊಟ್ಟಿಂಜೆ ದಿ. ವಾಸುದೇವ ಆಚಾರ್ಯ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ನಂದಳಿಕೆ ಪ್ರಶಾಂತ್ ಪೂಜಾರಿ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಿಡಬ್ಲ್ಯು ಕಂಟ್ರಾಕ್ಟರ್ ಅರುಣ್ ಕುಮಾರ್ ನಿಟ್ಟೆ, ಉದ್ಯಮಿ ಬೋಳ ಸೋಮಶೇಖರ್ ಶೆಟ್ಟಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ವೀಣೇಶ್ ಅಮೀನ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬೋಳ ರಘುವೀರ್ ಶೆಟ್ಟಿ, ಕಾರ್ಯದರ್ಶಿ ಅಬ್ಬನಡ್ಕ ಸತೀಶ್ ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಉದಯ ಅಂಚನ್, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಮೊದಲಾದವರಿದ್ದರು.

ಕೇಂದ್ರ ಸರ್ಕಾರವು ಹಣವಂತರಿಗೆ ಒಂದು ನೀತಿ , ಬಡವರಿಗೆ ಒಂದು ನೀತಿಯನ್ನು ಅನುಸರಿಸುತ್ತಿದೆ : ಜಿ.ಸಿ. ಬಯ್ಯಾರೆಡ್ಡಿ

ಶ್ರೀನಿವಾಸಪುರ : ಕೇಂದ್ರ ಸರ್ಕಾರವು ಹಣವಂತರಿಗೆ ಒಂದು ನೀತಿ , ಬಡವರಿಗೆ ಒಂದು ನೀತಿಯನ್ನು ಅನುಸರಿಸುತ್ತಿದ್ದು, ಇದರಿಂದಾಗಿ ಜನಸಾಮಾನ್ಯರು ಕೇಂದ್ರ ಸರ್ಕಾರದ ದ್ವಂದ ನೀತಿಗಳಿಂದ ತತ್ತರಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ವ್ಯಕ್ತಡಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರೈತ ಸಂಘದ ಜಿಲ್ಲಾ ಸಮ್ಮೇಳನದ ನಿರ್ಣಯಗಳ ಬಿಡುಗಡೆಗಾಗಿ ನಡೆದ ಪತ್ರಿಕಾಗೋಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರಕ್ಕೆ ರೈತ ಬಗ್ಗೆ ಕಾಳಜಿ ಇಲ್ಲ. ಅದೋನಿ ಆದಾಯ ವರ್ಷಕ್ಕೆ 11ಲಕ್ಷ ಕೋಟಿ, ಅಂಬಾನಿ ಆದಾಯ ವರ್ಷಕ್ಕೆ 9ಲಕ್ಷ ಕೋಟಿ . ಬ್ಯಾಂಕುಗಳ ಮೂಲಕ ಇವರುಗಳು ಕೋಟಿ , ಕೋಟಿಗಳಷ್ಟು ಸಾಲ ಪಡೆಯುತ್ತಾರೆ . ಕೋಟಿಗಟ್ಟಲೇ ಸಾಲ ಪಡೆದವರ ಸಾಲ ಮನ್ನಾ ಮಾಡಿಸಿ, ಕೇಂದ್ರ ಸರ್ಕಾರವು ಅವರನ್ನ ವಿದೇಶಕ್ಕೂ ಕಳುಹಿಸುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಆದರೆ ನಮ್ಮ ರೈತರು ಅಲ್ಪಸ್ವಲ್ಪ ಸಾಲ ಪಡೆದ ಹಣವನ್ನು ಮನ್ನ ಮಾಡದೆ, ಮನೆ ಮುಂದೆ ತಮಟೆ ಭಾರಿಸುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು? ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ಬಗ್ಗೆ ಹಾಗೂ ರೈತರ ಬೇಡಿಕೆ ಈಡೇರಲು, ರೈತ ಚಳುವಳಿಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಈ ಸಭೆಯಲ್ಲಿ ಕಾರ್ಪೊರೇಟ್ ಮತ್ತು ಬಂಡವಾಳಗಾರರ ಪರವಾಗಿರುವ ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆಗಳ ಮತ್ತು ರೈತ ವಿರೋಧಿ ಕೃಷಿ ಕಾಯ್ದೆಗಳ ವಾಪಸ್ಸಿಗಾಗಿ ಒತ್ತಾಯಿಸಿ ನಿರ್ಣಯ, ಮಾವು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ನಿರ್ಣಯವನ್ನು ಪ್ರಾಂತ ರೈತ ಸಂಘವು ಕೈಗೊಂಡಲಾಯಿತು ಎಂದು ಮಾಹಿತಿ ನೀಡಿದರು .
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ ಮಾತನಾಡಿ ಉಳುವವನಿಗೆ ಭೂಮಿ ಕಾಯ್ದೆ ಅಡಿಯಲ್ಲಿ ರೈತರಿಗೆ ಭೂಮಿ ನೀಡುವ ವ್ಯವಸ್ಥೆ ಆಗಬೇಕು. ಖಾಸಿಗಿ ಕಂಪನಿಗಳು ಈ ದೇಶದ ಕೃಷಿಯನ್ನು ಭೂಮಿಯನ್ನು ಲೂಟಿ ಹೊಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 3.40 ಲಕ್ಷ ಜನ ರೈತರಿದ್ದು, 2ಲಕ್ಷ ಜನ ರೈತರು ಮಾತ್ರ ವ್ಯವಸಾಯ ಮಾಡುತ್ತಿದ್ದು, ಸರ್ಕಾರದಿಂದ ಬರುವ ಸೌಲಭ್ಯಗಳು ಸಮಪರ್ಕವಾಗಿ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಪಿ.ಆರ್.ಎಸ್ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ರೈತ ಮುಖಂಡ ಬಿ.ವಿ.ಶಿವಾರೆಡ್ಡಿ, ಡಾ|| ವೆಂಕಟಾಚಲ, ಎಸ್.ಸಿ. ಮುರಳಿನಾಥ್, ಎಂ.ಎಸ್. ಕೋಟೇಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಾತಕೋಟೆ ನವೀನ್ ಕುಮಾರ್ ಇದ್ದರು.