ಫಲಾನುಭವಿಗಳನ್ನು ಪಾರದರ್ಶಕವಾಗಿ ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಎತ್ತುವುದರ ಮೂಲಕ ಆಯ್ಕೆ ಮಾಡಲಾಗುವುದು :ಎಂ.ಶ್ರೀನಿವಾಸನ್

ಶ್ರೀನಿವಾಸಪುರ: ಫಲಾನುಭವಿಗಳನ್ನು ಪಾರದರ್ಶಕವಾಗಿ ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಎತ್ತುವುದರ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಾಲ್ಲೂಕು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ಹೇಳಿದರು.
ಪಟ್ಟಣದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ನಿಗದಿಪಡಿಸಿದ ಯೂನಿಟ್‍ಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಾಗ ಆಯ್ಕೆ ಕಷ್ಟವಾಗುತ್ತದೆ. ಅಧಿಕಾರಿಗಳು ಆಯ್ಕೆ ಮಾಡಿದರೆ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸರ್ಕಾರದ ನಿಯಮಾನುಸಾರ ಯಾವುದೇ ಯೋಜನೆಯಡಿ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಎನ್‍ಎಚ್‍ಎಂ ಯೋಜನೆಯಡಿ ಅಣಬೆ ಬೇಸಾಯ, ವೈಯಕ್ತಿಕ ಕೃಷಿ ಹೊಂಡ, ಹಸಿರು ಮನೆ, ಶೇಡ್ ನೆಟ್ ಹೌಸ್, ಹಣ್ಣು ಮಾಗಿಸುವ ಘಟಕ, ಪ್ಯಾಕ್ ಹೌಸ್ ಗೆ ಸಂಬಂಧಿಸಿದ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ಎ.ಬೈರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಶುಪಾಲನಾ ಇಲಾಖೆ ಸಹಾಯಕ ನಿದೇರ್ಶಕ ಡಾ. ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಈಶ್ವರ್, ಸಮಾಜ ಕಲ್ಯಾಣಾಧಿಕಾರಿ ರಾಜೀವ್, ಬಿಸಿಎಂ ಅಧಿಕಾರಿ ರವಣಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಮಂಜುನಾಥ್, ಎಂ.ಎಸ್.ರಾಜೇಶ್, ಹರೀಶ್ ಇದ್ದರು.

ಶ್ರೀನಿವಾಸಪುರ ಪುರಸಭೆ ಸರ್ವ ಸದಸ್ಯರ ಸಭೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಪ್ರಾರಂಭವಾಗದೆ ಗೊಂದಲ

ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭೆ ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಪ್ರಾರಂಭವಾಗದೆ ಗೊಂದಲ ಏರ್ಪಟ್ಟಿತ್ತು.
ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದ್ದರೂ ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್ ಮತ್ತು ಆಡಳಿತ ಪಕ್ಷದ ಸದಸ್ಯರು ಬಂದಿರಲಿಲ್ಲ. ಆದರೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಹಾಗೂ ವಿರೋಧ ಪಕ್ಷದ ಸದಸ್ಯರು ಹಾಜರಿದ್ದರು. ಸಮಯ 11.30 ತ್ತಾದರೂ ಆಡಳಿತ ಪಕ್ಷದ ಸದಸ್ಯರು ಬರಲಿಲ್ಲ. ಆದರೆ ಅನಾರೋಗ್ಯದಿಂದಾಗಿ ಸಭೆಯನ್ನು ಮಧ್ಯಾಹ್ನ 12.30ಕ್ಕೆ ಮುಂದೂಡಿರುವುದಾಗಿ ಅಧ್ಯಕ್ಷೆ ಮುಖ್ಯಾಧಿಕಾರಿ ಎಂ.ಜಯರಾಂ ಅವರ ಮೊಬೈಲ್‍ಗೆ ಸಂದೇಶ ಕಳುಹಿಸಿದರು.
ಇದರಿಂದ ಕೆಂಡಮಂಡಲವಾದ ವಿರೋಧ ಪಕ್ಷದ ಸದಸ್ಯರು ಸಭೆ ರದ್ದುಪಡಿಸುವಂತೆ ಮುಖ್ಯಾಧಿಕಾರಿ ಜಯರಾಂ ಅವರನ್ನು ಒತ್ತಾಯಿಸಿದರು. ಆದರೆ ಅವರು ಅಸಹಾಯಕತೆ ವ್ಯಕ್ತಪಡಿಸಿದಾಗ ಎದ್ದು ಸಭೆಯಿಂದ ಹೊರ ನಡೆದರು.
ಮಧ್ಯಾಹ್ನದ ಹೊತ್ತಿಗೆ ಅಧ್ಯಕ್ಷಕರು ಆಡಳಿತ ಪಕ್ಷದ ಸದಸ್ಯರೊಂದಿಗೆ ಬಂದು ಆಸೀನರಾದರು. ಉಪಾಧ್ಯಕ್ಷರು ಹಾಗೂ ವಿರೋಧ ಪಕ್ಷದ ಸದಸ್ಯರು ಮತ್ತೆ ಸಭೆಗೆ ಬಂದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಸಿ ತಂದಿದ್ದ ರೂ.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪಟ್ಟಿ ಓದುತ್ತಿದಂತೆ, ರೂ.3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಈಜುಕೊಳ ಕಾಮಗಾರಿಗೆ ವಿರೋಧ ಪಕ್ಷದ ಸದಸ್ಯರಿಂದ ವಿರೋಧ ವ್ಯಕ್ತವಾಯಿತು.
ಆದರೆ ಆಡಳಿತ ಪಕ್ಷದ ಸದಸ್ಯರು ಆಗಲೇ ಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಎರಡೂ ಕಡೆಯ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೈ ಕೈ ಮಿಲಾಯಿಸುವ ಹಂತ ಮುಟ್ಟಿತು. ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲು ಒಪ್ಪಿಗೆ ಸೂಚಿಸಿ ಸಭೆಯಿಂದ ಎದ್ದು ಹೊರನಡೆದರು. ಪೊಲೀಸರು ಮಧ್ಯ ಪ್ರವೇಶಿಸಿಸಿ, ಸದಸ್ಯರನ್ನು ಹೊರಗೆ ಕಳುಹಿಸಿದರು.
ಸದಸ್ಯರಾದ ಬಿ.ವಿ.ರೆಡ್ಡಿ, ಮುನಿರಾಜು, ಜಯಣ್ಣ, ರೆಡ್ಡಪ್ಪ, ಶೇಕ್ ಷಫಿವುಲ್ಲಾ, ರಮೇಶ್, ರಸೂಲ್ ಖಾನ್, ಆನಂದ್, ಭಾಸ್ಕರ್, ಸಂಜಯ್ ಸಿಂಗ್, ಅನೀಸ್ ಅಹ್ಮದ್, ತಜ್‍ಮಲ್, ನಾಗರಾಜ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಕಂದಾಯ ನಿರೀಕ್ಷಕರಾದ ಶಂಕರ್, ವಿ.ನಾಗರಾಜ್, ಶಾಸ್ತ್ರಿ ಮತ್ತಿತರರು ಇದ್ದರು.

ರೋಜರಿ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಲಿ. ವತಿಯಿಂದ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ರವರಿಗೆ ಅಭಿನಂದನೆ

ಕುಂದಾಫುರ: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧವಾಗಿ,ಆಯ್ಕೆಯಾಗಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿ., ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅವರನ್ನು ರೋಜರಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿ. ಕುಂದಾಪುರ ಪತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರೋಜರಿ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಲಿ. ಅಧ್ಯಕ್ಷರಾದ ಜಾನ್ಸನ್‌ ಡಿಅಲ್ಮೇಡಾ, ಉಪಾಧ್ಯಕ್ಷರಾದ ಕಿರಣ್‌ ಮೆಲ್ವಿನ್‌ ಲೋಬೊ ಪಡುಕೋಣೆ, ನಿರ್ದೇಶಕ ವಿಲ್ಸನ್‌ ಡಿಸೋಜಾ ಶಿರ್ವ, ಸಂತೋಷ್‌ ಒಜ್ವಲ್ಡ್ ಡಿಸಿಲ್ವಾ ಕಾರ್ಕಳ, ಮುಖ್ಯ ಕಾರ್ಯನಿರ್ವಹಣಾಧಿಕಾರ (ಪ್ರಭಾರ) ಮೇಬಲ್‌ ಡಿ’ಆಲ್ಮೇಡಾ ಉಪಸ್ಥಿತರಿದ್ದರು.

ಕರ್ಕುಂಜೆಯಲ್ಲಿ “ಸದಾಶಿವ ಪ್ರಭು” ರಿಗೆ ಅಭಿನಂದನೆ


ಕುಂದಾಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿ, ಉಡುಪಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದ ಸದಾಶಿವ ಪ್ರಭು ಅವರನ್ನು ಕೇಂದ್ರ ಸರಕಾರ, ಐ. ಎ. ಎಸ್. ಹುದ್ದೆಗೆ ಪದೋನ್ನತಿ ಪ್ರದಾನಿಸಿರುವುದಕ್ಕೆ ಅವರನ್ನು ಕುಂದಾಪುರ ತಾಲೂಕಿನ ಕರ್ಕುಂಜೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಆರ್. ಆರ್. ಎನ್. ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭದ ಅಧ್ಯಕ್ಷತೆಯನ್ನು ಕರ್ಕಿ ಶ್ರೀಕೃಷ್ಣ ಪೈಪ್ ಇಂಡಸ್ಟ್ರೀಸ್ ಮಾಲಕ ಎನ್. ಭಾಸ್ಕರ ನಾಯಕ್ ವಹಿಸಿದ್ದರು.
ಉದ್ಯಮಿಗಳಾದ ಪಿ. ಗೋಪಾಲಕೃಷ್ಣ ಕಾಮತ್ ಸಿದ್ದಾಪುರ, ಸತೀಶ್ ಕಿಣಿ ಬೆಳ್ವೆ, ಕುಂದಾಪುರ ವಿಠಲ ನೇತ್ರಾಲಯದ ನೇತ್ರ ತಜ್ಞ ಡಾ. ಕೆ. ಶ್ರೀನಾಥ್ ಕಾಮತ್, ಸದಾಶಿವ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಿದರು.
ಉದ್ಯಮಿ ವೆಂಕಟೇಶ ಕಿಣಿ ಬೈಂದೂರು, ಸಾಹಿತಿ, ಜಾದೂಗಾರ ಓಂ ಗಣೇಶ ಉಪ್ಪುಂದ ಸದಾಶಿವ ಪ್ರಭು ಅವರ ಸೇವಾಗುಣ, ಕರ್ತವ್ಯ ನಿಷ್ಠೆ ಬಗ್ಗೆ ಕೊಂಡಾಡಿದರು.
ಸದಾಶಿವ ಪ್ರಭು-ಗೀತಾ ದಂಪತಿಯನ್ನು ಕುಂದಾಪುರ, ಬೈಂದೂರ ತಾಲೂಕಿನಿಂದ ಆಗಮಿಸಿದ ಗಣ್ಯರು ಅಭಿನಂದಿಸಿದರು.
ಸದಾಶಿವ ಪ್ರಭು ಅವರು ಮಾತನಾಡಿ “ಸರಕಾರದ ಅಧಿಕಾರಿಯಾಗಿ ಸಾರ್ವಜನಿಕ ಸೇವೆಯಲ್ಲಿ ಎಷ್ಟೋ ಸಮಸ್ಯೆ, ನೋವು ಅನುಭವಿಸಿದರೂ ಜನರ ಪ್ರೀತಿ, ಗೌರವ ಕಂಡಾಗ ಅದೆಲ್ಲ ಮರೆತು ಸಾರ್ಥಕತೆ ಮೂಡುತ್ತದೆ. ತೃಪ್ತಿ ಉಂಟಾಗುತ್ತದೆ. ಎನ್. ನಾರಾಯಣ ನಾಯಕ್, ಎನ್. ಭಾಸ್ಕರ ನಾಯಕ್ ಅವರ ನೇತೃತ್ವದಲ್ಲಿ ಹಲವು ಗಣ್ಯ ಮಹನೀಯರು ಕರ್ಕುಂಜೆಗೆ ಕರೆಸಿ ಗೌರವ ನೀಡಿರುವುದು ಜೀವನದ ಸ್ಮರಣೀಯ ದಿನ ಆಗಿರುತ್ತದೆ” ಎಂದರು.
ಎನ್. ನಾರಾಯಣ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯು. ಎಸ್. ಶೆಣೈ ನಿರೂಪಿಸಿದರು.

ಅಕ್ಟೋಬರ್ 1 ರಂದು “ಕೊಡ್ಗಿ ನೆನಪು”


ಕರ್ನಾಟಕ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಬೈಂದೂರು ಕ್ಷೇತ್ರದ ಶಾಸಕರಾಗಿ, ಸಹಕಾರಿ ಧುರೀಣರಾಗಿ, ಹೈನುಗಾರಿಕೆ, ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಪ್ರಗತಿ ಪರ ಕಾರ್ಯಗಳಿಂದ ಜನಪ್ರಿಯರಾಗಿದ್ದ ದಿ. ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿಯವರ ಜನ್ಮದಿನ ಅಕ್ಟೋಬರ್ 1 ರಂದು “ಕೊಡ್ಗಿ ನೆನಪು” ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯ ಎ. ಜಿ. ಕೊಡ್ಗಿ ಬಯಲು ರಂಗ ಮಂಟಪದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯುವ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಸಚಿವರಾದ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಪ್ರಧಾನ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಕೆ. ಜಯಪ್ರಕಾಶ ಹೆಗ್ಡೆ, ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್., ಅಮಾಸೆಬೈಲು ಗ್ರಾ. ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಲ್. ಎಚ್. ಮಂಜುನಾಥ್, “ಕೊಡ್ಗಿ ನೆನಪು” ನುಡಿ ಬೆಳಕು ನೀಡಲಿದ್ದಾರೆ.
ಎ. ಜಿ. ಕೊಡ್ಗಿ ಅಭಿಮಾನಿ ಬಳಗ ಹಾಗೂ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ (ರಿ.) ಈ ಕಾರ್ಯಕ್ರಮ ಸಂಯೋಜಿಸಿದ್ದು ಸಾರ್ವಜನಿಕರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸ್ವಾಗತಿಸಿದ್ದಾರೆ.

ಪೆರಂಪಳ್ಳಿಯಲ್ಲಿ ಕಥೊಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ ಮತ್ತು ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಉಡುಪಿ: ಕಥೊಲಿಕ್ ಸಭಾ ಪೆರಂಪಳ್ಳಿ ಘಟಕದಿಂದ ಪ್ರತಿಭಾ ಪುರಸ್ಕಾರ ಮತ್ತು ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಪೆರಂಪಳ್ಳಿ ಚರ್ಚಿನ ಧರ್ಮಗುರು ಹಾಗೂ ಪೆರಂಪಳ್ಳಿ ಕಥೊಲಿಕ್ ಸಭಾ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ  ವಂ|ಅನಿಲ್ ಡಿಸೋಜಾ ಬಹುಮಾನ ವಿತರಣೆ ಮಾಡಿ ಸಂದೇಶ ನೀಡಿದರು. ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಒಲಿವರ್ ಡಿಸೋಜಾ, ಕಾರ್ಯದರ್ಶಿ ಆಲ್ಬಿನ್ ಡಿಸೋಜಾ ಕೂಡ ಬಹುಮಾನಗಳನ್ನು ವಿತರಿಸಿದರು.  ಭಾಷಣ ಸ್ಪರ್ಧೆಯ ನಾಲ್ಕು ವಿಭಾಗಗಳಿದ್ದು, ಇದರಲ್ಲಿ 36 ಮಂದಿ ಭಾಗವಹಿಸಿದ್ದು, 13 ಮಂದಿ ಮಕ್ಕಳು ಬಹುಮಾನವನ್ನು ಪಡೆದುಕೊಂಡರು. 5 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ರಫಾಯೆಲ್ ಡಿಸೋಜಾ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು, ಖಚಾಂಚಿ ಮೆಲಿಟಾ ಡಿಸೋಜಾ ಇವರು ಧನ್ಯವಾದಗಳನ್ನು ಸಮರ್ಪಿಸಿದರು.

ಬಾರ್ಕೂರಿನಲ್ಲಿ ಭಾಗ್ಯವಂತ ಪಾದ್ರೆ ಪಿಯೊರ ಹಬ್ಬ

ಬಾರ್ಕೂರು: ಭಾಗ್ಯವಂತ ಪಾದ್ರೆ ಪಿಯೊರ ವಾರ್ಷಿಕ ಹಬ್ಬವನ್ನು ಪ್ರಥಮವಾಗಿ ಇದೇ ಸಪ್ಟೆಂಬರ್ 23 ರಂದು ಬಾರ್ಕೂರು ಸಂತ ಪೀಟರ್ ಇಗರ್ಜಿಯಲ್ಲಿ ಆಚರಣೆ ಆರಂಭಗೊಂಡಿತು.

ಬೆಂಗಳೂರಿನ ಕಾಪುಚಿನ್ ಧರ್ಮಗುರುಗಳಾದ ಫಾ| ನವೀನ್ ಡಿಸೋಜಾ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಸಂದೇಶವನ್ನು ನೀಡಿದರು. ಬಲಿದಾನದ ತರುವಾಯ ಪಾದ್ರೆ ಪಿಯೊರ ಅವಶೇಷ (ಭಾಗವೊಂದನ್ನು) ಮೆರವಣಿಗೆಯನ್ನು ಮಾಡಲಾಯಿತು. ಕಾರ್ಕಳ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ರೆಕ್ಟರ್ ವಂ|ಫಾ| ಆಲ್ಬನ್ ಡಿಸೋಜಾರು ನವಿಕ್ರತ ಮಾಡಿದ ಚಾಪೆಲ್ ಮತ್ತು ಪಾದ್ರೆ ಪಿಯೊರ ಎರಡು ಪ್ರತಿಮೆಗಳನ್ನು (ಪ್ರತಿಕೃತಿಗಳು) ಆಶಿರ್ವಾದಿಸಿ, ಪಾದ್ರೆ ಪಿಯೊರ ಅವಶೇಷವನ್ನು ಚಾಪೆಲ್ ನಲ್ಲಿ ಪ್ರತಿಷ್ಠಾಪನೆಯನ್ನು ಮಾಡಿದರು.

ಚರ್ಚ್ ಉಪಾಧ್ಯಕ್ಷರಾದ ಹೆರಾಲ್ಡ್ ಡಿಸೋಜಾ, ಕಾರ್ಯದರ್ಶಿ ವಿವೆಟ್ ಲುವಿಸ್, ಸರ್ವ ಆಯೊಗಾಂಚೊ ಸಂಯೋಜಕ ಎರಿಕ್ ಸೋನ್ಸ್, ಕೊನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಜಸ್ಮಿತಾ ಕ್ರಾಸ್ತಾ ಮತ್ತು ಎಲ್ಲಾ ವಾಳೆಯ ಗುರಿಕಾರರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಚರ್ಚ್ ಮತ್ತು ವಿವಿಧ ಇಗರ್ಜಿಗಳಿಂದ ಪಾದ್ರೆ ಪಿಯೊರ ಭಕ್ತಾಧಿಗಳು ಈ ಸಂಭ್ರಮದಲ್ಲಿ ಹಾಜರಿದ್ದರು

     

ಮಾವು ಸ್ಪೇಷಲ್ ಸಿಂಪರಣೆಯ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆ

ಶ್ರೀನಿವಾಸಪುರ; ತಾಲೂಕಿನ ಬೂರುಗಾನಹಳ್ಳಿ ಗ್ರಾಮದಲ್ಲಿ ಶ್ರೀ ಮಂಜುನಾಥರವರ ತೋಟದಲ್ಲಿ ವಿಸ್ತರಣ ಶಿಕ್ಷಣ ಘಟಕ (ಕೋಲಾರ), ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ರವರ ವತಿಯಿಂದ ಮಾವು ಬೆಳೆಯಲ್ಲಿ ಸೆಪ್ಟೆಬಂರ್ 26 ಸೋಮುವಾರದಂದು ಮಾವು ಸ್ಪೇಷಲ್ ಸಿಂಪರಣೆಯ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂಧರ್ಭದಲ್ಲಿ ವಿಸ್ತರಣ ಶಿಕ್ಷಣ ಘಟಕ (ಕೋಲಾರ), ಶ್ರೀಮತಿ ಸಿಂಧು ಕೆ ವಿಜ್ಞಾನಿಗಳು (ತೋಟಗಾರಿಕೆ) ಮತ್ತು ಡಾ. ದೀಲಿಪ್. ಎಸ್, ವಿಜ್ಞಾನಿಗಳು (ಕೃಷಿ ವಿಸ್ತರಣಾ) ರವರು ಮಾವು ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು.

ರೋಗನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕರವಾಗಿ ಬೆಳೆದು ಅಧಿಕ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಮತೋಲನ ಪೋಷಕಾಂಶಗಳನ್ನು ಒದಗಿಸುವುದು ಅವಶ್ಯ. ಆದರೆ ಕೆಲವೇ ರೈತರು ಲಘು ಪೋಷಕಾಂಶಗಳ ಮಹತ್ವವನ್ನರಿತು ಬಳಸುತ್ತಿದ್ದಾರೆ. ಆದ್ದರಿಂದ ಗುಣಮಟ್ಟದ ಬೆಳೆ ಹಾಗೂ ಹೆಚ್ಚಿನ ಇಳುವರಿಗಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಅಂಗವಾಗಿ ಮಾವು ಬೆಳೆಯ ಎಲೆಗಳಿಗೆ ಸಿಂಪಡಿಸಬಹುದಾದ ಮಾವು ಸ್ಪೇಷಲ್ ಅತ್ಯಂತ ಉಪಯುಕ್ತವಾಗಿದೆ.

ಬಳಕೆಯ ವಿಧಾನ

75 ಗ್ರಾಂ, ಮಾವು ಸ್ಪೇಷಲ್ + 1 ಶ್ಯಾಂಪೂ ಸ್ಯಾಚೆಟ್ + 2 ನಿಂಬೆಹಣ್ಣಿನ ರಸವನ್ನು 15 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡುವುದರಿಂದ ಹಣ್ಣಿನ ಗುಣಮಟ್ಟ ಮತ್ತು ಇಳುವರಿ ಹೆಚ್ಚಿಸಬಹುದು. ಸಿಂಪರಣೆಯು ಆಗಸ್ಟ್-ಸೆಪ್ಟೆಬಂರ್‍ನಲ್ಲಿ ಪ್ರಾರಂಭಗೊಂಡು, ಪ್ರತಿ 2 ತಿಂಗಳಿಗೊಮ್ಮೆ ಬೆಳೆ ಕಟಾವು ಮಾಡುವತನಕ ಸಿಂಪರಣೆನ್ನು ಮಾಡಬಹುದು.

ಸಮಾಜದ ಸ್ವಸ್ಥ್ಯ ಹಾಗೂ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುತ್ತಿರುವ ಜಾನ್ಸನ್ ಕುಂದರ್ ಹಾಗೂ ಆತನ ಸಹಚರರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಒತ್ತಾಯ

ಕೋಲಾರ : ಸಮಾಜದ ಸ್ವಸ್ಥ್ಯ ಹಾಗೂ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುತ್ತಿರುವ ಜಾನ್ಸನ್ ಕುಂದರ್ ಹಾಗೂ ಆತನ ಸಹಚರರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕ್ರೈಸ್ತ ಪಾದರಿಗಳು ಹಾಗೂ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಮೆಥೋಡಿಸ್ಟ್ ದೇವಾಲಯಗಳ ಮೇಲ್ವಿಚಾರಕ ರೆ.ಶಾಂತಕುಮಾರ್, ಕ್ರೈಸ್ತ ಸಮುದಾಯ ಸಮಾಜದಲ್ಲಿ ಅಹಿಂಸೆ, ಶಾಂತಿ, ನೆಮ್ಮದಿಯನ್ನು ಬಯಸುವ ಸಮುದಾಯವಾಗಿ ಯಾವುದೇ ಗಲಭೆಗಳಿಗೆ ಕಾರಣವಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಸತತವಾಗಿ ಶ್ರಮಿಸುತ್ತಿದೆ. ಆದರೆ ಕೋಲಾರದ ಇಟಿಸಿಎಂ ಆಸ್ಪತ್ರೆಯಲ್ಲಿ ಈ ಮೊದಲು ಆಡಳಿತಾಧಿಕಾರಿ ಆಗಿದ್ದ ಜಾನ್ಸನ್ ಕುಂದರ್ ಸಮುದಾಯದಲ್ಲಿ ವಿಷ ಬೀಜ ಬಿತ್ತಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಿದರು.
ಇಟಿಸಿಎಂ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಅಕ್ರಮ ಹಾಗೂ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಬಗ್ಗೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಘಟನೆ ಸಂಬಂಧ ಬಾಲಕಿಯರ ಪರ ನಿಂತ ತಮ್ಮ ವಿರುದ್ಧ ದುರುದ್ದೇಶ ಪೂರಕವಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ಆತನ ಸಹಚರ ರೌಡಿಶೀಟರ್ ಜಯದೇವಪ್ರಸನ್ನ ನೇತೃತ್ವದಲ್ಲಿ ಭಾನುವಾರ ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್‍ನಲ್ಲಿ ಪ್ರತಿಭಟನೆ ನಡೆಸಿ ಚರ್ಚ್‍ಗೆ ಬರುವವರಿಗೆ ಅಡ್ಡಿ ಪಡಿಸಿದ್ದಾರೆ.
ಅಲ್ಲದೆ ಸಮುದಾಯದ ಕೆಲವರ ದಿಕ್ಕನ್ನು ಬದಲಿಸಿ ತಪ್ಪು ಅಭಿಪ್ರಾಯ ಉಂಟು ಮಾಡುವ ರೀತಿಯಲ್ಲಿ ಒಳಜಗಳಗಳಿಗೆ ಕಾರಣವಾಗಿ ಸಮಾಜದ ಸ್ವಸ್ಥ್ಯ ಆಳು ಮಾಡುತ್ತಿದ್ದು, ಇದಕ್ಕೆ ರೌಡಿಶೀಟರ್ ಜಯದೇವಪ್ರಸನ್ನ ನೇತೃತ್ವವಹಿಸಿಕೊಂಡು ಸಮುದಾಯದಲ್ಲಿ ಬಿರುಕು ಉಂಟು ಮಾಡುತ್ತಿರುವ ಜಾನ್ಸನ್ ಕುಂದರ್ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಸಮುದಾಯದ ಮುಖಂಡರಾದ ಸದಾನಂದ್ ಹಾಗೂ ಗುರುಪ್ರಸಾದ್ ಮಾತನಾಡಿ, ಕಳೆದ 17 ವರ್ಷಗಳಿಂದ ಇಟಿಸಿಎಂ ಆಸ್ಪತ್ರೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಸಿಕೊಂಡು ಬರುತ್ತಿರುವ ಜಾನ್ಸನ್ ಕುಂದರ್ ವಿರುದ್ದ 8 ವರ್ಷಗಳ ಹಿಂದೆಯೇ ನಾವು ಮೇಲಿನ ಅಧಿಕಾರಿಗಳಿಗೆ ದೂರು ನೀಡಿದ್ದೇವು. ಮೆಥೋಡಿಸ್ಟ್ ದೇವಾಲಯದ ಕೇಂದ್ರ ಆಡಳಿತದಲ್ಲಿ ಆದ ಬದಲಾವಣೆಗಳಿಂದ ಇತ್ತೀಚೆಗೆ ಇದು ಸಾಭೀತಾಗಿದ್ದು, ಆಡಳಿತ ಮಂಡಳಿ ಈತನ ಬಗ್ಗೆ ದೂರು ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡಲು ಬರುವ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವುದು ನಮ್ಮ ಉದ್ದೇಶ ಅದಕ್ಕಾಗಿ ವಿದ್ಯಾರ್ಥಿಗಳು ಮಾಡಿದ ಆರೋಪಕ್ಕೆ ಸ್ಪಂಧಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದವರ ವಿರುದ್ಧ ದೂರು ದಾಖಲಿಸಿ ನಂತರ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಸಮುದಾಯದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು ಕೂಡಲೇ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿ ಕಾನೂನಾತ್ಮಕ ಕ್ರಮದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಯಂತ್, ಮೇಷಕ್, ಜೇಮ್ಸ್, ನಂದಕುಮಾರ್, ಜಯವಂತ್, ವಿಜಯ್ ಕುಮಾರ್, ಸಮುದಾಯ ಮುಖಂಡರಾದ ರೂಪ್ ಕುಮಾರ್, ಗುಣ್‍ಭೂಷಣ್, ಪ್ರಾಂಕ್ಲೀನ್ ಡಿಸೋಜಾ, ಪ್ರಭಾಕರ್, ಜಯಪ್ರಭು, ಡೇವಿಡ್, ರೂಪ್ ಕುಮಾರ್ ಸೇರಿದಂತೆ ಹಲವರು ಇದ್ದರು.