ಕುಂದಾಪುರ ಸೈಂಟ್ ಮೇರಿಸ್ ಸಮೂಹ ಸಂಸ್ಥೆ: ಕೋಟಿ ಕಂಠ ಗಾಯನ


ಕುಂದಾಪುರ:ಇಲ್ಲಿನ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯಾದ ಸೈಂಟ್ ಮೇರಿಸ್ ಪ್ರೌಢಶಾಲೆ, ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ,ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜ್, ಹೋಲಿ ರೋಜರಿ ಆ.ಮಾ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೃಹತ್ ಕೋಟಿ ಕಂಠ ಗಾಯನ ಕಾರ್ಯಕ್ರಮ ಶುಕ್ರವಾರ ಸಂಭ್ರಮದಿಂದ ನಡೆಯಿತು.

ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸಮಾರು 1300 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.


ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ,ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲೆ ರೇಷ್ಮಾ ಫರ್ನಾಂಡೀಸ್, ಸೈಂಟ್ ಮೇರಿಸ್ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್, ಹೋಲಿ ರೋಜರಿ ಆ.ಮಾ.ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಜಾ ಶಾಂತಿ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಗೀತಾ ಸ್ವಾಗತಿಸಿದರು. ಎನ್‍ಸಿಸಿ ಹಿರಿಯ ಅಧಿಕಾರಿ ಭಾಸ್ಕರ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಸ್ಟರ್ ಚೇತನಾ ಸಂಕಲ್ಪವಿಧಿ ಭೋದಿಸಿದರು. ಶಿಕ್ಷಕ ಪ್ರಶಾಂತ್ ಲುಯಿಸ್ ವಂದಿಸಿದರು. ಉಪನ್ಯಾಸಕ ನಾಗರಾಜ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು

ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಸರಕಾರಿ ಅರೋಗ್ಯ ಕಾರ್ಡುಗಳ ನೋಂದಾವಣೆ ಕಾರ್ಯಕ್ರಮ


ಕುಂದಾಪುರ, ಅ.30: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅರೋಗ್ಯ ಕಾರ್ಡ್ ನೋಂದಾವಣೆ ಕಾರ್ಯಕ್ರಮವು ಅ.30 ರಂದು ಕುಂದಾಪುರ ಚರ್ಚ್ ಆವರಣದಲ್ಲಿ ನಡೆಯಿತು. ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯಕರ್ತರು ಸ್ಥಳದಲ್ಲೆ ಒನ್ ಲೈನಿನ ಮೂಲಕ, ಅಭಾ ಕಾರ್ಡ್, ಇ ಶ್ರಮ ಕಾರ್ಡಗಳ ನೋಂದಣಿಯ ಸೇವೆಯನ್ನು ಮಾಡಿದರು. ಇದರ ಉಪಯೋಗವನ್ನು ಹಲವಾರು ಜನರು ಪಡೆದುಕೊಂಡರು. ಬರುವ ನ. ಆದಿತ್ಯವಾರ ನ.6 ರಂದು ಕೂಡ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾನದ ತನಕ ನೋಂದಣಿ ಕಾರ್ಯಗಾರ ನಡೆಯಲಿರುವುದು ಹಾಗೇ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು, ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಗಾರದ ಸಂದರ್ಭದಲ್ಲಿ ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅಭಾ ಕಾರ್ಡ್ ಮತ್ತು ಇ ಶ್ರಮ ಕಾರ್ಡುಗಳ ಪ್ರಯೋಜನ ಮತ್ತು ಈ ಕಾರ್ಡುಗಳನ್ನು ಪಡೆಯಲು ಅವಶ್ಯವಿರುವ ಅಂಶಗಳನು ಕೆಳಗಿನ ಕರಪತ್ರದಲ್ಲಿ ನೀಡಲಾಗಿದೆ.

ದೀಪಾವಳಿಯ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ:ಸತ್ಯನಾರಾಯಣಶಾಸ್ತ್ರಿ

ಶ್ರೀನಿವಾಸಪುರ 1 : ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ ಎಂದು ಮೇಧಾ ಗುರು ಜ್ಯೋತಿರ್ವಿಜ್ಞಾನ ಕೇಂದ್ರದ ಸಂಸ್ಥಾಪಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿನ ಶ್ರೀ ಕಾಶೀವಿಶ್ವೇಶ್ವರ ದೇವಾಲಯದಲ್ಲಿ ಬುಧವಾರ ಬಲಿ ಪಾಡ್ಯಮಿ,ಬಲೀಂದ್ರ ಪೂಜಾ ಅಂಗವಾಗಿ ನಡೆದ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ದಿನ ಲಕ್ಷ್ಮೀ ಪೂಜೆ, ಗೋಪೂಜೆ ಇವುಗಳನ್ನು ಮಾಡಲಾಗುವುದು ಯಾಕೆಂದರೆ, ಬಲಿ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು, ಅದಕ್ಕೆ ಪೂಜೆಗಳನ್ನು ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಗೋವು ಐಶ್ವರ್ಯ ಮತ್ತು ಮೋಕ್ಷಕ್ಕೆ ಪ್ರತೀಕ . ಗೋವನ್ನು ಸವರುವುದರಿಂದ ಎಲ್ಲಾ ಪಾಪಕರ್ಮದಿಂದ ಮುಕ್ತಿ ಸಿಗುತ್ತದೆ ಗೋವಿನ ರಕ್ಷಣೆ ಕೊಡುವುದರಿಂದ , ಗೋಸೇವೆ ಮಾಡುವುದರಿಂದ ,ಗೋವುಗಳಿಗೆ ಹುಲ್ಲುನ್ನು ತಿನ್ನಿಸುವ್ಯದರಿಂದ,ಗೋಪೂಜೆ ಮಾಡುವುದರಿಂದ ಬಡತನ , ತಡ ವಿವಾಹ,ಆರೋಗ್ಯ ಸಮಸ್ಯೆ,ಶತ್ರುತ್ವ,ಪಿತೃ ಶಾಪ,ಶನಿ ದೋಷ ದೂರವಾಗುತ್ತದೆ ಹಾಗೂ ಹಿಂದಿನ ಜನ್ಮ ಮತ್ತು ಈ ಜನ್ಮದಲ್ಲಿ ಮಾಡಿದ ಪಾಪ ಕಾರ್ಯಗಳಿಗೆ ಪರಿಹಾರವಾಗುತ್ತದೆ ಎಂದು ಸ್ಕಂದಪುರಾಣ ಮತ್ತು ಕರ್ಮವಿಪಾಕದಲ್ಲಿ ಹೇಳಲಾಗಿದೆ ಎಂದರು.
ಗೋಪೂಜೆ ಮಾಡುವುದರಿಂದ ಸರ್ವಸಮೃದ್ಧಿಯುಂಟಾಗಿ , ದನಕರುಗಳ ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ ಎಂದು ಹೇಳಿದರು.
ಪ್ರಾಚೀನ ಕಾಲದಲ್ಲಿ ಪ್ರತಿ ಮನೆ-ಮನೆಯಲ್ಲಿಯೂ ಹಟ್ಟಿಯಲ್ಲಿ ಗೋಪೂಜೆ ನಡೆಯುತ್ತಿತ್ತು, ಇಂದೂ ಗೋವಿನ (ಸಂಕ್ರಾತಿ) ಹಬ್ಬದ ಸಮಯದಲ್ಲಿ ಭಾರತದಲ್ಲಿ ಗೋವಿನ ಪೂಜೆ ನಡೆಯುತ್ತಿದೆ ಅಷ್ಟೇ, ಆದರೆ ನಮ್ಮ ದೇಶಕ್ಕೆ ಹಿಂದಿನ ಮಹಿಮೆ ಮತ್ತು ಗೌರವ ಸಿಗಬೇಕಿದ್ದರೆ ನಾವು ಗೋವುಗಳನ್ನು ತಾಯಿಯಂತೆ ರಕ್ಷಿಸಿಬೇಕು.
ಹಾಗೂ ಇತ್ತೀಚಿಗೆ ಗೋವುಗಳನ್ನು ಬಾಧಿಸುತ್ತಿರುವ ಚರ್ಮದ ಗಂಟು ರೋಗದಿಂದಾಗಿ ಗೋವುಗಳು ರೋಗದಿಂದ ಬಳಲುತ್ತಿದ್ದು, ರೈತರು ರೋಗ ನಿರ್ಮೂಲನೆಗಾಗಿ ಪಶುಇಲಾಖೆಯು ಜಾರಿಗೆ ತಂದಿರುವ ಔಷದೋಪಚಾರವನ್ನು ಉಪಯೋಗಿಸುವಂತೆ ತಿಳಿಸಿದರು. ನಾವೆಲ್ಲೂರು ಸೇರಿ ರೋಗ ನಿರ್ಮೂಲನೆಗಾಗಿ ದೇವರನ್ನು ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.
ಗ್ರಾಮದ ಗಂಗಮ್ಮ ಗುಡಿಯಲ್ಲಿ ಗೋ ಪೂಜೆ ನಡೆಯಿತು. ಮುಖಂಡರಾದ ಎಸ್.ಎನ್.ವೇಮನ್ನ, ಎಂ.ಎಸ್.ಮಹೇಶ್ , ರವಿ, ಯಂಡಗುಟ್ಟಪಲ್ಲಿ ನಾಗಾರ್ಜುನ, ಕಂದಾಯ ಇಲಾಖೆಯ ಗ್ರಾಮಸಹಾಯಕ ಆರ್.ವಿ.ಶ್ರೀರಾಮಪ್ಪ ಇದ್ದರು.

ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜನಾಂಗಕ್ಕೆ ಬೇಕಾದವರು :ವೈ.ಎ.ನಾರಾಯಣಸ್ವಾಮಿ

ಶ್ರೀನಿವಾಸಪುರ 1 : ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜನಾಂಗಕ್ಕೆ ಬೇಕಾದವರು ಆದ್ದರಿಂದ ತಾಲ್ಲೂಕಿನ ಎಲ್ಲಾ ಜನಾಂಗದವರು ಪಕ್ಷಾತೀತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕು ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಬಾವಿ ಸಭೆಯಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಗೆ ಮೃತ್ತಿಕೆ ಸಂಗ್ರಹ ಅಭಿಯಾನದ ಬಗ್ಗೆ ಮಾತನಾಡಿದರು.
ಇದೇ ತಿಂಗಳು 29.30 ರಂದು ತಾಲೂಕಿನ 5 ಹೋಬಳಿ ಕೇಂದ್ರಗಳಲ್ಲಿ ರಥವು ಸಂಚರಿಸಿ ಅಲ್ಲಿನ ಮೃತ್ತಿಕೆಯನ್ನು ಸಂಗ್ರಹಕ್ಕಾಗಿ ಬರುತ್ತಿದ್ದು, ಆಯಾ ಆಯಾ ಹೋಬಳಿ ಕೇಂದ್ರದಲ್ಲಿ 50 ಜನ ಮಾತೆಯರು ಪೂರ್ಣಕುಂಭಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸುವ ಕಾರ್ಯಕ್ರವನ್ನು ಸ್ಥಳೀಯ ಅಧಿಕಾರಿಗಳ ಜವಾಬ್ದಾರಿ ವಹಿಸಬೇಕು.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದವರು, ಸ್ಥಳೀಯ ಆಶಾಕಾರ್ಯಕರ್ತೆಯರು, ಅಂಗನವಾಡಿ, ಕಾರ್ಯಕರ್ತೆಯರು, ಎನ್‍ಜಿಓ, ಮಾಜಿಸೈನಿಕರು, ಸಂಘ ಸಂಸ್ಥೆಗಳು ಹಾಗೂ ಪಕ್ಷಾತೀತವಾಗಿ ಜನಪ್ರತಿನಿದಿಗಳ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜಿಲ್ಲೆಯಲ್ಲಿಯೇ ತಾಲ್ಲೂಕಿನ ಕಾರ್ಯಕ್ರಮವು ಮಾದರಿಯಾಗಿರಬೇಕು ಎಂದರು.
ಅಲ್ಲದೆ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮವೊಂದನ್ನ ರೂಪಿಸುವ ಕಾರ್ಯಕ್ರಮವನ್ನು ಸ್ಥಳೀಯ ಅಧಿಕಾರಿಗಳು ಹಮ್ಮಿಕೊಳ್ಳಬೇಕು. ಅಲ್ಲದೆ ಕಾರ್ಯಕ್ರಮಕ್ಕೆ ಹೆಚ್ಚು ಸಾರ್ವಜನಿಕರು ಸೇರುವಂತೆ ಅಗತ್ಯ ಪ್ರಚಾರವನ್ನು ಹಮ್ಮಿಕೊಳ್ಳಬೇಕು. ಈ ಕೆಲಸವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಇಒ, ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು, ಶಿಶುಅಭಿವೃದ್ಧಿ ಯೋಜನಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗುಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ತಹಶೀಲ್ದಾರ್ ಶರೀನಾತಾಜ್, ಇಒ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಮ್, ತಾಲೂಕಿನ ಎಲ್ಲಾ ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಅನ್ಯ ಭಾಷೆಗಳ ಪ್ರಭಾವ ಇರುವ ಗಡಿ ಭಾಗದ ಜನರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಅನ್ಯ ಭಾಷೆಗಳ ಪ್ರಭಾವ ಇರುವ ಗಡಿ ಭಾಗದ ಜನರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತಿ ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡ ಒಂದು ಸುಂದರ ಹಾಗೂ ಶಕ್ತಿಯುತ ಭಾಷೆಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ನಮ್ಮ ಸುಂದರ ಹಾಗೂ ಅರ್ಥಗರ್ಭಿತ ನಾಡಗೀತೆ ನಾಡಿನ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ನಾಡಗೀತೆ ಗಾಯನದ ಮೂಲಕ ಕನ್ನಡ ಕಂಪು ಪಸರಿಸಬೇಕು. ಗೀತೆಯ ಆಶಯಕ್ಕೆ ತಕ್ಕಂತೆ ನಡೆಯಬೇಕು. ಆಗ ಸರ್ವ ಜನಾಂಗದ ಶಾಂತಿಯ ತೋಟ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು. ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಪದಾಧಿಕಾರಿಗಳು ಧ್ವನಿಗೂಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಂಜುನಾಥ್, ಪ್ರಾಂಶುಪಾಲ ಪ್ರಾಣೇಶ್, ಅಧಿಕಾರಿಗಳಾದ ಕೃಷ್ಣಪ್ಪ, ಜಯರಾಂ, ಬಾಬು, ಬಿ.ವಿ.ಮುನಿರೆಡ್ಡಿ, ಎಂ.ಶ್ರೀನಿವಾಸನ್, ಡಾ. ಮಂಜುನಾಥರೆಡ್ಡಿ ಮತ್ತಿತರರು ಇದ್ದರು.
ಕೋಟಿ ಕಂಠ ಗಾಯನ: ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಕೋಟಿ ಕಂಠ ಗಾಯನಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧ್ವನಿಗೂಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ದೀಪಾವಳಿ ದೀಪಾಂಜಲಿ ಕಾರ್ಯಕ್ರಮ


ಕುಂದಾಪುರ, ಅ. 29: ‘ಅಜ್ಞಾನ ಎಂಬುದು ತೊಲಗಿ ಜ್ಞಾನ ಎಂಬ ಜ್ಯೋತಿ ನಮ್ಮಲ್ಲಿ ಬೆಳಗಬೇಕು, ಕೆಟ್ಟದನ್ನು ಬಿಟ್ಟು ಒಳ್ಳೆದನ್ನು ಆರಂಭಿಸಬೇಕು, ದುಷ್ಟತನಕ್ಕೆ ಸೋಲುಂಟಾಗಿ, ಒಳ್ಳೆತನಕ್ಕೆ ಜಯವಾಗಬೇಕು, ಹಿಂದೆ ನಾವೆಲ್ಲ ಎಲ್ಲರೂ ಒಟ್ಟಾಗಿ ದೀಪಾವಳಿ ಆಚರಿಸುತಿದ್ದೇವು, ಸಿಹಿ ತಿಂಡಿಗಳಿಗೆ ಕಾತರಿಸುತ್ತೀದ್ದೆವು, ಯೇಸು ಸ್ವಾಮಿ ಹೇಳಿದ್ದನು, ನಿನ್ನ ದೀಪವನ್ನು ಪೆಟ್ಟಿಗೆಯಲ್ಲಿ ಅವಿತಿಡಬೇಡ, ಎತ್ತರದ ಜಾಗದಲ್ಲಿಟ್ಟು ಎಲ್ಲರೂ ಅದರ ಬೆಳಕು ಸಿಗುವಂಗಾಗಬೇಕೆಂದು, ಹೀಗೆ ನಾವೆಲ್ಲರೂ ಜಗತ್ತಿನ ದೀಪಗಾಬೇಕು” ಎಂದು ಕುಂದಾಪುರ ವಲಯ ಪ್ರಧಾನ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.
ಅವರು ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ದೀಪವಾಳಿ ಪ್ರಯುಕ್ತ ಕುಂದಾಪುರ ಸಂತ ಮೇರಿಸ್ ಶಾಲಾ ಪ್ರಾಂಗಣದಲ್ಲಿ ನಡೆದಲ್ಲಿ ಅ.28 ರಂದು ಭಾವೈಕ್ಯದ ದೀಪಾಂಜಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ ಮಾತನಾಡಿ “ಈ ಬೆಳಕಿನ ಹಬ್ಬ ದ್ವೇಷ ಮೋಸ ಎಂಬ ಕತ್ತಲನ್ನು ಕರಗಿಸಬೇಕು, ಮನ ಕುಲದಲ್ಲಿ ಪ್ರೀತಿ ಮಮತೆಯ ಸಹಬಾಳ್ವೆಯ ಬೆಳಕು ಬೆಳಗಬೇಕು, ಭಾರತ ಒಂದಾಗಲಿ ಐಕ್ಯತೆ ನಮ್ಮ ಮಂತ್ರವಾಗಲಿ, ನಮ್ಮ ನೆಡಿಗೆ ಕತ್ತಲೆಯಿಂದ ಬೆಳಕಿನಡೆ ಸಾಗಲಿ, ಎಲ್ಲಾ ಮನುಷರಲ್ಲಿ ಒಳೆದು ಇದೆ ಕೆಟ್ಟದು ಇದೆ, ಆದರೆ ನಾವು ಕೆಟ್ಟದನ್ನು ಸೋಲಿಸುವಂತರಾಗಬೇಕು, ನಮ್ಮ ವಿಜಯದ ಸಂಕೇತ ಒಳ್ಳೆದಾಗಿರಲಿ, ನಾವೆಲ್ಲಾ ಮಾನವೀಯತೆಯನು ಹಂಚಿಕೊಳ್ಳೋಣ, ನಮ್ಮ ಮನೆ, ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ಪ್ರಪಂಚ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿ ಬರಬೇಕು” ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಪೋಷಕ ಸಮಾಜ ಸೇವಕ ಉದ್ಯಮಿ ಮಂಜೀತ್ ನಾಗರಾಜ್, ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯೊಳಗೆ ಹಣತೆ ಜೊತೆ ಮತ್ತು ಭಾವಚಿತ್ರ ಸ್ಪಧೆಯ ವಿಜೇತರಿಗೆ ಬಹುಮಾನ ನೀಡಿ “ದೀಪಾವಳಿಗೊಂದು ಅರ್ಥವಿದೆ, ಪಟಾಕಿ ಅಂದರೆ ನಮ್ಮೊಳಗಿನ ಕೆಟ್ಟತನ ದುಷ್ಟತನ ಪಟಾಕಿಯಂತೆ ಸಿಡಿದು ಹೋರ ನಡೆಯಬೇಕು, ದೀಪಾವಳಿ ಸಮಯದ ಸಿಹಿತಿಂಡಿಗಳಿಗೂ ಅದರದೇ ಆದ ಅರ್ಥವಿದೆಯೆಂದು’ ಅವರು ತಿಳಿಸಿದರು. ಹಣತೆ ಜೊತೆ ಭಾವಚಿತ್ರದ ಸ್ಪಧೆಯಲ್ಲಿ ನಿಶಾ ಮತ್ತು ಕುಟುಂಬ ಪ್ರಥಮ, ಜಯಶೀಲ ಕೆ. ಮತ್ತು ತಂಡ ದ್ವೀತಿಯ ಮತ್ತು ಜೆ.ಸಿ.ಐ. ಸಿಟಿ ಬೈಂದೂರು ತ್ರತೀಯ ಬಹುಮಾನ ಪಡೆದರು. ಇನ್ನು ಹಲವು ಸಮಾಧಾಕರ ಬಹುಮಾನಗಳು ಮತ್ತು ಕಿರು ಅಟಗಳ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಎಸ್.ಪಿ. ಮ್ಯುಜಿಕಲ್ ಹರೀಶ್ ಕಂಚುಗೋಡು, ದೀಕ್ಷಾ ಬ್ರಹ್ಮವರ, ಸುರಕ್ಷಾ ಕಂಚುಗೋಡು, ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಮನೋರಂಜನಾ ನಿರೂಪಣೆಯನ್ನು ಶ್ರೀಶ ಆಚಾರ್ಯ ನಡೆಸಿಕೊಟ್ಟರು.
ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷೆ ಶಾಂತಿ ಪಿರೇರಾ ಸ್ವಾಗತಿಸಿದರು, ವಿನೋದ್ ಕ್ರಾಸ್ಟೊ, ಡಾ|ಸೋನಿ ಡಿಕೋಸ್ತಾ, ವಿಲ್ಸನ್ ಡಿ ಆಲ್ಮೇಡಾ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು, ಕಾರ್ಯಕ್ರಮದ ಸಂಚಾಲಕ ಅಲ್ಡ್ರಿನ್ ಡಿಸೋಜಾ ನಿರೂಪಿಸಿದರು.

ಖ್ಯಾತ ಕ್ರಿಕೆಟ್ ಕ್ರೀಡಾ ಪಟು ಗಣೇಶ್ ನಾವಡ ನಿಧನ

ಕುಂದಾಪುರ : ಸ್ಥಳೀಯ ರಾಮ ಮಂದಿರ ರಸ್ತೆಯ ನಿವಾಸಿ ಗಣೇಶ್ ನಾವಡ(64 ) ಅವರು ಅಲ್ಪ ಕಾಲದ ಅಸೌಖ್ಯದಿಂದ ದಿ.27.10 22ರ ಗುರುವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಎಸ್.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಾಗಿದ್ದ ಇವರು ಜಿಲ್ಲೆಯ ಹಲವೆಡೆ ಸೇವೆ ಸಲ್ಲಿಸಿದ್ದರು.ರಾಜ್ಯದ ಖ್ಯಾತ ಕ್ರಿಕೆಟ್ ತಂಡ ಚಕ್ರವರ್ತಿ ಯ ಮಾಜಿ ಸ್ಪಿನ್ನರ್ ಆಗಿದ್ದ ಇವರು ಚಕ್ರವರ್ತಿ ತಂಡದ ಯಶಸ್ವಿನಲ್ಲಿ ಗಣನೀಯ ಪಾತ್ರ ವಹಿಸಿದ್ದರು. ಮೃತರು ಪತ್ನಿ,ತಾಯಿ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಗಣೇಶ್ ನಾವಡರು ಸಂತ ಮೇರಿಸ್ ಪ್ರೌಢಶಾಲೆಯ ಮತ್ತು ಭಂಡಾರಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಪ್ರೌಢಶಾಲೆಯಲ್ಲಿರುವಾಗಲೇ ಅವರು ಉತ್ತಮ ಕ್ರಿಕೆಟರ್ ಆಗಿದ್ದರು. ತಾಲೂಕು ಮಟ್ಟದ ಕ್ರಿಕೆಟ್ ಕೂಟದಲ್ಲಿ ನಿರಂತರ ಎರಡು ವರ್ಷ, ಪ್ರಸ್ತೂತ ಜನನುಡಿ ಡಾಟ್ ಕಾಮ್ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಜೊತೆ ಕ್ರಿಕೆಟ್ ನಲ್ಲಿ ಉತ್ತಮ ವೇಗದ ಬೌಲರ್ ಆಗಿ ಆಡಿ ಹೆಸರು ಗಳಿಸಿದ್ದರು. ಮುಂದೆ ಕಾಲೇಜ್ ಜೀವನದಲ್ಲಿ ಕೂಡ ಉತ್ತಮ ಕ್ರಿಕೆಟರ್ ಆಗಿ ಹೆಸರು ಗಳಿಸಿ, ಚಕ್ರವರ್ತಿ ಕ್ಲಬಿಗೆ ಸೇರಿ ಖ್ಯಾತರಾದರು.

ಜನನುಡಿ ಡಾಟ್ ಕಾಮ್ ಸಂಸ್ಥೆ ಗಣೇಶ್ ನಾವಡರ ಕುಟುಂಬಕ್ಕೆ ಸಾಂತ್ವಾನ ಬಯಸುತ್ತದೆ ಮತ್ತುವರ ಆತ್ಮಕ್ಕೆ ಶಾಂತಿ ಕೋರಿ, ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ.

ಹೋಲಿ ರೋಸರಿ ಚರ್ಚ್ ಅಲಂಗಾರ್ ನಲ್ಲಿ ಪ್ರತಿಭಾ ಪುರಸ್ಕಾರ

ರಾಜ್ಯ ಮಟ್ಟದಲ್ಲಿ ಕ್ರೀಡಾ ಗಾಯನ ಮತ್ತು ಅಧ್ಯಯನ ಕ್ಷೇತ್ರದಲ್ಲಿ 7 ಸಾಧಕರು ಮತ್ತು ಎಸ್‌ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದ 28 ಟಾಪರ್‌ಗಳನ್ನು ಸನ್ಮಾನಿಸಲಾಯಿತು.ಚರ್ಚಿನ ಧರ್ಮಗುರು ವಂ| ವಾಲ್ಟರ್ ಡಿಸೋಜಾ 21 ಆಯೋಗಗಳ ಸಂಯೋಜಕ ಶ್ರೀ ರಾಜೇಶ್ ಡಿಸೋಜ, ಪಾಲನ ಮಂಡಳಿ.ಕಾರ್ಯದರ್ಶಿ ಶ್ರೀಮತಿ ಮೇಬಲ್ ಲೋಬೋ ಉಪಸ್ಥಿತರಿದ್ದರು ಶಿಕ್ಷಣ ಆಯೋಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶ್ರೀ ವಿನೋದ್ ಡಿಎಸ್‌ಎ ಸ್ವಾಗತಿಸಿದರು,  ಶ್ರೀ ಗ್ಲಾನಿಶ್ ಮಾರ್ಟಿಸ್ ಮತ್ತು ಕು. ಅಶ್ವಿನಿ ಡಿಸೋಜಾ ಅವರು ಸನ್ಮಾನಿತರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಶ್ರೀ ಎರಿಕ್ ಲೋಬೋ ನಿರೂಪಿಸಿದರು.

ಗುರುಭವನ ನಿರ್ಮಾಣಕ್ಕಾಗಿ 5 ಹಳೆ ಕಟ್ಟಡಗಳ ನೆಲಸಮ ಆರಂಭ
ಶಿಕ್ಷಕರ ಬಹುನಿರೀಕ್ಷಿತ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ-ಕೃಷ್ಣಮೂರ್ತಿ

ಕೋಲಾರ:- ಗುರುಭವನ ನಿರ್ಮಿಸಲು ಉದ್ದೇಶಿಸಿರುವ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಐದು ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವ ಹಿನ್ನಲೆಯಲ್ಲಿ ನೆಲಸಮಗೊಳಿಸಲು ಕ್ರಮ ಕೈಗೊಂಡಿದ್ದು, ಗುರುಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಸಿದ್ದಗೊಳಿಸಲಾಗುತ್ತಿದೆ ಎಂದು ಗುರುಭವನ ಸಮಿತಿ ಅಧ್ಯಕ್ಷರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ನಗರದ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಹಳೆ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ಕಾರ್ಯವನ್ನು ವೀಕ್ಷಿಸಿದ ನಂತರ ಅವರು ಮಾತನಾಡುತ್ತಿದ್ದರು.
ಗುರುಭವನ ನಿರ್ಮಾಣ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಸಂಸದ ಎಸ್.,ಮುನಿಸ್ವಾಮಿ,ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಹಲವು ಶಾಸಕರು ತಮ್ಮ ಶಾಸಕರ ನಿಧಿಯಿಂದ ಅನುದಾನ ನೀಡಲು ಮುಂದೆ ಬಂದಿದ್ದಾರೆ ಎಂದರು.
ಗುರುಭವನಕ್ಕಾಗಿ ಈ ಜಾಗದಲ್ಲಿ ಉತ್ತರ ದಕ್ಷಿಣ 145 ಅಡಿ ಹಾಗೂ ಪೂರ್ವ,ಪಶ್ಚಿಮ-80 ಅಡಿಗಳ ನಿವೇಶನ ವಿಂಗಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅತಿ ಶೀಘ್ರ ಶಿಲಾನ್ಯಾಸ ನಡೆಸುವ ಕುರಿತು ಗುರುಭವನ ಸಮಿತಿ ಪ್ರಯತ್ನ ಮುಂದುವರೆಸಿದೆ ಎಂದರು.
ನೆಲಸಮಗೊಳಿಸುತ್ತಿರುವ ಕಟ್ಟಡದಲ್ಲಿನ ಬಾಗಿಲು, ಕಿಟಕಿಗಳನ್ನು ಅರಣ್ಯ ಇಲಾಖೆ ಬೆಲೆ ನಿಗಧಿ ಮಾಡಿದ ನಂತರ ಹರಾಜು ಹಾಕಲು ಕ್ರಮವಹಿಸುವುದಾಗಿ ತಿಳಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಂತೆ ಕೋಲಾರದಲ್ಲೂ ಅತಿ ಶೀಘ್ರ ಭವನ ನಿರ್ಮಾಣವಾಗಲಿ ಎಂದು ಆಶಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಈ ಸಂಬಂಧ ಮಾಹಿತಿ ನೀಡಿ, ಗುತ್ತಿಗೆದಾರರಾದ ಮಮತಾ ಕೋಂ ಮುನೇಶ್ ಅವರು ಕಟ್ಟಡದ ನೆಲಸಮ ಗುತ್ತಿಗೆ ಪಡೆದಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಈ ಕಾರ್ಯ ಮುಗಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಗುರುಭವನ ನಿರ್ಮಾಣ ಈ ಜಿಲ್ಲೆಯ ಎಲ್ಲಾ ಶಿಕ್ಷಕರ ಆಶಯವಾಗಿದ್ದು, ಈಗಾಗಲೇ ತಡವಾಗಿದೆ, ನಮ್ಮ ಅವಧಿಯಲ್ಲಿ ಗುರುಭವನ ನಿರ್ಮಿಸಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದು, ವಿಧಾನಪರಿಷತ್,ವಿಧಾನಸಭಾ ಸದಸ್ಯರು, ಸಂಸದರ ನಿಧಿ ಸೇರಿದಂತೆ ಹಣ ಕ್ರೋಢೀಕರಿಸಲು ಪ್ರಯತ್ನ ಮುಂದುವರೆಸಿರುವುದಾಗಿ ತಿಳಿಸಿದರು.
ಗುರುಭವನ ಸಮಿತಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಡಯಟ್ ಪ್ರಾಂಶುಪಾಲರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ,ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಸದಸ್ಯರಾಗಿ ಬಿಇಒ ಕನ್ನಯ್ಯ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್,ಶಿಕ್ಷಕರ ಸಂಘದ ಮಹಿಳಾ ಪ್ರತಿನಿಧಿ ಚಾಮುಂಡೇಶ್ವರಿ ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಶಿಕ್ಷಕ ಸಂಘಟನೆಗಳ ಮುಖಂಡರಾದ ಅಪ್ಪೇಗೌಡ, ಎಂ.ನಾಗರಾಜ್, ಶಿವಕುಮಾರ್, ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀರಾಮ್,ಮುಖ್ಯಶಿಕ್ಷಕರ ಸಂಘದ ಖಜಾಂಚಿ ರವಿ, ಟಿ.ಎಲ್.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.