ಕುಂದಾಪುರ:ವಿದುಷಿ ಸುಜಾತ ಗುರವ್ ಗಾಯನ ಕಾರ್ಯಕ್ರಮ

ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಖಂಬದಕೋಣೆ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ವಿದುಷಿ ಶ್ರೀಮತಿ ಸುಜಾತ ಗುರವ್ ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು.
ತಬಲಾದಲ್ಲಿ ಟಿ. ರಂಗ ಪೈ ಮಣಿಪಾಲ, ಹಾರ್ಮೋನಿಯಂನಲ್ಲಿ ಶಶಿಕಿರಣ ಮಣಿಪಾಲ ಸಹಕರಿಸಿದ್ದರು.
ಪ್ರಮೀಳಾ ಕುಂದಾಪುರ ಮಾತನಾಡಿ “ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಹಾಗೂ ಪ್ರಕಾಶ್ ರಾವ್ ಸ್ಮಾರಕವಾಗಿ ಸಂಗೀತ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ” ಎಂದರು.
ಸಂಗೀತ ಭಾರತಿ ಕಾರ್ಯದರ್ಶಿ ಕೆ. ನಾರಾಯಣ ಕಲಾವಿದರನ್ನು ಪರಿಚಯಿಸಿದರು. ಸಂಗೀತ ಭಾರತಿ ಟ್ರಸ್ಟಿಗಳಾದ ಸೀತಾರಾಮ ನಕ್ಕತ್ತಾಯ, ಕೆ. ಶಾಂತಾರಾಮ ಪ್ರಭು, ಡಾ. ಎಚ್. ಆರ್. ಹೆಬ್ಬಾರ್ ಕಲಾವಿದರನ್ನು ಗೌರವಿಸಿದರು. ರೇಖಾ ಕಾರಂತ, ಸುಪ್ರಸನ್ನ ನಕ್ಕತ್ತಾಯ ಉಪಸ್ಥಿತರಿದ್ದರು.ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ, ಕುಂದಾಪುರ ವಲಯ ಮಟ್ಟದ ಕ್ರೀಡಾಕೂಟವು ದಿನಾಂಕ 15 ಮತ್ತು 16ನೇ ನವೆಂಬರ್ 2022ರಲ್ಲಿ ಮದರ್ ತೆರೇಸಾ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ಶಂಕರನಾರಾಯಣದಲ್ಲಿ ನಡೆದ ಆಡೋಟದಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಂಕಿತಾ ವಿ ಶೇಟ್


ಪ್ರೌಢ ಶಾಲಾ ವಿಭಾಗದ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಅಂಕಿತಾ ವಿ ಶೇಟ್ ಪ್ರಥಮ ಸ್ಥಾನ ಗಳಿಸಿ ಕಾರ್ಕಳದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ.

ಸೃಜನ್ ಸದಾಶಿವ ಖಾರ್ವಿ


ಪ್ರಾಥಮಿಕ ಶಾಲಾ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ 7ನೇ ತರಗತಿಯ ಸೃಜನ್ ಸದಾಶಿವ ಖಾರ್ವಿ ಇತನು ಪ್ರಥಮ ಸ್ಥಾನಗಳಿಸಿ ಕಾರ್ಕಳದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾನೆ.

ಮಹಮ್ಮದ್ ಮುನಾವರ್


ಪ್ರಾಥಮಿಕ ಶಾಲಾ ವಿಭಾಗದ ಎತ್ತರ ಜಿಗಿತ ಸ್ಪರ್ಧೆಯಲ್ಲಿ 7ನೇ ತರಗತಿಯ ಮಹಮ್ಮದ್ ಮುನಾವರ್ ಇತನು ಪ್ರಥಮ ಸ್ಥಾನಗಳಿಸಿ ಕಾರ್ಕಳದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾನೆ.

ಆದಿತ್ಯ


ಪ್ರಾಥಮಿಕ ಶಾಲಾ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಹೋಲಿ ರೋಜರಿ ಅಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಆದಿತ್ಯ ಇತನು ದ್ವಿತೀಯ ಸ್ಥಾನ ಗಳಿಸಿರುತ್ತಾನೆ.
ಇವರನ್ನು ಶಾಲಾ ಜಂಟಿ ಕಾರ್ಯದರ್ಶಿಯಾಗಿರುವ ಧರ್ಮಗುರು ಅತೀ ವಂ| ಸ್ಟ್ಯಾನಿ ತಾವ್ರೊ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಜ್ ಶಾಂತಿ ಎ.ಸಿ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ. ಈ ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ತರಬೇತಿ ಗೊಳಿಸಿದ್ದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ  ವಾರ್ಷಿಕ ಕ್ರೀಡಾಕೂಟ

“ಇವತ್ತಿನ ನಮ್ಮ ದೈನಂದಿನ ಜೀವನದಲ್ಲಿ‌ ದೇಹದಂಡನೆ ಕಡಿಮೆಯಾಗಿರುವುದರಿಂದ ವ್ಯವಸ್ಥಿತವಾದ ತರಬೇತಿ ಆಧರಿತ ಕ್ರೀಡೆಯ ಅಗತ್ಯವಿದೆ. ದಿನ ನಿತ್ಯವೂ ಅಲ್ಪ ಸಮಯವನ್ನಾದರೂ ನಾವು ದೇಹಬಲವನ್ನು ಹೆಚ್ಚಿಸುವಂಥ ಕಾರ್ಯಗಳಿಗೆ ನೀಡಬೇಕು” ಎಂದು ಕುಂದಾಪುರ ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯವರಾದ ಶ್ರೀ ಕುಸುಮಾಕರ ಶೆಟ್ಟಿಯವರು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರೂ, ಬೈಂದೂರಿನ ಶಾಸಕರೂ ಆದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು ಶಾರೀರಿಕ ಧೃಢತೆಯ ಮೂಲಕ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ತಿಳಿಸಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸೀತಾರಾಮ್ ನಕ್ಕತ್ತಾಯರವರು ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜತೆ-ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಭಾಂಡ್ಯ, ಸದಸ್ಯರಾದ ಶ್ರೀ ವೈ. ಎಸ್. ಹೆಗ್ಡೆ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿ ಇವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಕ್ರೀಡಾಜ್ಯೋತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ದ್ವಿತೀಯ ಪಿ.ಯು.ಸಿ ಯ ಸುದೀಪ್ ಶೆಟ್ಟಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಧನ್ಯವಾದ ಸಲ್ಲಿಸಿದರು. ರಸಾಯನ ಶಾಸ್ತ್ರ ಪ್ರಾಧ್ಯಾಪಕಿ ಜಾನೀಸ್ ನತಾಶಾ ಡಿಸೋಜಾರವರು ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಪ್ರೇಕ್ಷಣ್ ಹಾಗೂ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಸಮೀಪಾ ಶೆಟ್ಟಿ ಇವರು ಅನುಕ್ರಮವಾಗಿ ಕ್ರೀಡಾಗ್ರೇಸರ‌ ಮತ್ತು ಕ್ರೀಡಾಗ್ರೇಸರೆಯಾಗಿ ಮೂಡಿಬಂದರು. 

ನಕಲಿ ರಸಗೊಬ್ಬರ ಬಿತ್ತನೆ ಬೀಜ ಕೀಟನಾಶಕ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ- ರೈತ ಸಂಘ

ಬಂಗಾರಪೇಟೆ-ನ-17, ನಕಲಿ ರಸಗೊಬ್ಬರ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ನೀಡುವಂತೆ ನ-25 ರಂದು ನಕಲಿ ಔಷಧಿ ಬೆಳೆ ಸಮೇತ ರಾಜ್ಯ ಹೆದ್ದಾರಿ ಹಂಚಾಳ ಗೇಟ್ ಬಂದ್‍ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಭೂಮಿ ತಾಯಿಯ ಮಡಲಿಗೆ ಒಂದು ಬೀಜ ಹಾಕಿದರೆ ಲಕ್ಷಾಂತರ ಬೀಜ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷೆ ಮಾಡಿ 100 ಕಚ್ಚಾವಸ್ತುಗಳಿಂದ ಒಂದು ವಸ್ತುವನ್ನು ತಯಾರು ಮಾಡುವ ಕೈಗಾರಿಕೆಗಳಿಗೆ ಆದ್ಯತೆ ನೀಡಿ ದೇಶದಲ್ಲಿ ಆಹಾರ ಅಭದ್ರತೆ ಸರ್ಕಾರಗಳು ಸೃಷ್ಟಿ ಮಾಡುವ ಮುಖಾಂತರ ಹಸಿವೆಂಬ ಮಹಾಮಾರಿಗೆ ಲಕ್ಷಾಂತರ ಜನ ಸಾಮಾನ್ಯರನ್ನು ಬಲಿ ಕೊಡುವ ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಸರ್ಕಾರ ನಿಷೇದಿತ ಔಷಧಿಗಳನ್ನು ಇಂದು ರಾಜಾರೋಷವಾಗಿ ಅಮೇಜಾನ್, ಪ್ಲಿಪ್‍ಕಾರ್ಟ್, ಬಜಾಜ್, ಮತ್ತಿತರ ಕಂಪನಿಗಳು ಆನ್‍ಲೈನ್ ಮೂಲಕ ರೈತರಿಗೆ ನೇರವಾಗಿ ಮಾರಾಟ ಮಾಡುವ ಮುಖಾಂತರ ರೈತರ ಆರೋಗ್ಯವನ್ನು ಕಸಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಾಪತ್ತೆಯಾಗಿರುವುದಕ್ಕೆ ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಗಲ್ಲಿಗೊಂದು ಔಷಧಿ ಮಾರಾಟ ಮಾಡುವ ಮಳಿಗೆಗಳಿದ್ದು, ಆಂದ್ರ ತಮಿಳುನಾಡು, ಮೂಲದ ಕೆಲವು ದಂದೆಕೋರರು ಆನ್‍ಲೈನ್ ಮೂಲಕ ರೈತರಿಗೆ ಭಯೋ ಔಷಧಿಗಳನ್ನು ಮಾರಾಟ ಮಾಡುವ ಜೊತೆಗೆ ಸ್ಥಳೀಯವಾಗಿ ಕೆಲವರು ಬಯೋಕಂಪನಿಗಳ ಮಾಲೀಕರ ಜೊತೆ ಕೈ ಜೋಡಿಸಿ ಉದ್ಯೋಗ ನೆಪದಲ್ಲಿ ನಕಲಿ ಬಯೋ ಔಷಧಿಗಳನ್ನು ಗುಣಮಟ್ಟದ ಔಷಧಿಗಳ ಜೊತೆಯಲ್ಲಿ ಮಾರಾಟ ಮಾಡುವ ದಂದೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ ನಿಯಂತ್ರಣ ಮಾಡಬೇಕಾದ ಗುಣಮಟ್ಟದ ಪರಿಶೀಲನಾ ಅಧಿಕಾರಿಗಳು ಕಂಪನಿಗಳ ಜೊತೆ ಕೈ ಜೋಡಿಸಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ವ್ಯವಸಾಯ ಮನೆ ಮಕ್ಕಳೆಲ್ಲ ಉಪವಾಸ ಸಾಯ ಎಂಬ ಗಾದೆಯಂತೆ ಕೃಷಿ ಕ್ಷೇತ್ರ ದಿನೇ ದಿನೇ ಶ್ರೀಮಂತವಾಗುತ್ತಿದೆ. ಬೆಳೆಗಳಿಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ಇಲ್ಲದೆ ರೈತರು ಪರದಾಡುತ್ತಿರುವುದನ್ನು ಬಂಡವಾಳ ವಹಿಸಿಕೊಂಡಿರುವ ಕೆಲವು ಕಂಪನಿಗಳು ಗುಣಮಟ್ಟದ ಬಯೋ ಔಷಧಿ ಹೆಸರಿನಲ್ಲಿ ನಕಲಿ ಔಷಧಿಯನ್ನು ತಯಾರು ಮಾಡುವ ದೊಡ್ಡ ದಂದೆಯೇ ಕೋಲಾರ ಜಿಲ್ಲೆಯಲ್ಲಿದೆ. ದಾಖಲೆ ಸಮೇತ ದೂರು ನೀಡಿದರು ಅಧಿಕಾರಿಗಳು ನೆಪಮಾತ್ರಕ್ಕೆ ದಾಳಿ ಮಾಡಿ ಗುಣಮಟ್ಟ ಪರಿಶೀಲನೆ ಮಾಡಲು ಪ್ರಯೋಗಾಲಾಯಕ್ಕೆ ಕಳುಹಿಸಿದ್ದೇವಂದು ಕೈತೊಳೆದುಕೊಳ್ಳುತ್ತಿದ್ದಾರೆಂದು ಕಿರಿಕಾರಿದರು.
ಹಾಲಿವುಡ್ ಬಾಲಿವುಡ್ ಹೆಸರುಗಳನ್ನು ಮೀರುವ ಬಯೋ ಔಷಧಿಗಳು ಅಮೃತ, ಅಟ್ಯಾಕ್, ಪವರ್, ರೂಟ್‍ಕೇರ್, ಲಜೆಂಡ್, ಲಯನ್, ಬಿಲ್ರ್ಲಾ, ಬ್ಲಾಂಕ್, ಹಿಟ್ಲರ್, ಜಿ-5, ಸ್ನೇಕ್ ಮುಂತಾದ ವಿವಿಧ ಹೆಸರುಗಳಲ್ಲಿ ಔಷಧಿಗಳು ರೈತರಿಗೆ ನೀಡುತ್ತಿದ್ದರೂ ಕನಿಷ್ಠ ಪಕ್ಷ ಗಿಡದ ಮೇಲಿರುವ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಹದಗೆಟ್ಟಿದೆ. ರೈತರು ಸಾಲಗಾರರಾಗುತ್ತಿದ್ದರೆ ಕಂಪನಿಗಳು ಅಂಗಡಿ ಮಾಲೀಕರು ಕೋಟ್ಯಾದಿಪತಿಗಳಾಗುತ್ತಿದ್ದಾರೆಂದು ಸಭೆಯಲ್ಲಿ ಕಣ್ಣೀರು ಹಾಕಿದರು.
5 ವರ್ಷಗಳಿಂದ ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಟೆಮೋಟೋ ಕ್ಯಾಪ್ಸಿಕಂ ಆಲೂಗಡ್ಡೆಗೆ ಬಾದಿಸುತ್ತಿರುವ ಚುಕ್ಕಿ ರೋಗ ಅಂಗಮಾರಿ ರೋಜ್ ನಿಯಂತ್ರಣಕ್ಕೆ ಬಾರದೆ ಗುಣಮಟ್ಟದ ಔಷಧಿ ಇಲ್ಲದೆ ರೈತರು ಕೋಟ್ಯಾಂತರ ರೂಪಾಯಿ ಸಾಲದ ಸುಳಿಗೆ ಸಿಲಿಕಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ವಿಜ್ಞಾನಿಗಳನ್ನು ಕರೆಯಿಸಿ ವರದಿ ನೀಡಿ ಕಡೆಯದಾಗಿ ರೈತರದೆ ತಪ್ಪು ಎಂದು ಕಂಪನಿ ಪರ ಸತ್ಯ ಹರಿಚಂದ್ರ ಪ್ರಮಾಣ ಪತ್ರ ನೀಡುತ್ತಾರೆಂದು ಅಸಮದಾನ ವ್ಯಕ್ತಪಡಿಸಿದರು.

ಟೆಮೋಟೋ ಕ್ಯಾಪ್ಸಿಕಂ ಸಮಯದಲ್ಲಿ ಜಿಲ್ಲಾಧ್ಯಂತ 150 ಕೋಟಿ ಔಷಧಿ ವ್ಯವಹಾರ ನಡೆಯುತ್ತಿದೆ. ಆದರೂ ಯವುದೇ ಗುಣಮಟ್ಟವಿಲ್ಲ ಒಟ್ಟಾರೆಯಾಗಿ ರೈತರ ಅಮಾಯಕತನವನ್ನು ಬಂಡವಾಳಗಿಸಿಕೊಂಡು ನಕಲಿ ಬಯೋ ಔಷಧಿಯನ್ನು ಆನ್‍ಲೈನ್ ಮೂಲಕ ರೈತರಿಗೆ ನೇರವಾಗಿ ಮಾರಾಟ ಮಾಡುವ ಜೊತೆಗೆ ಕಂಪನಿಗಳ ಜೊತೆ ಸ್ಥಳೀಯ ಯುವಕರು ಸೇರಿಕೊಂಡು ರೈತರನ್ನು ಯಾಮಾರಿಸುತ್ತಿರುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಗುಣಮಟ್ಟದ ಔಷಧಿ ವಿತರಣೆ ಮಾಡಬೇಕಂದು ಮೇಲ್ಕಂಡ ದಿನಾಂಕದಂದು ಹಂಚಾಳ ಗೇಟ್ ಬಂದ್ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಉಪಾಧ್ಯಕ್ಷ ಚಾಂದ್‍ಪಾಷ, ಮಹ್ಮದ್ ಶೋಹೀಬ್ ಬಾಬಾಜಾನ್, ಆರೀಪ್, ಕದರಿನತ್ತ ಅಪ್ಪೋಜಿರಾವ್, ಕಾಮಸಮುದ್ರ ಮುನಿಕೃಷ್ಣ, ಭೀಮಗಾನಹಳ್ಳಿ ಮುನಿರಾಜು, ವಿಶ್ವ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಐತಂಡಹಳ್ಳಿ ಮುನ್ನ, ಯಲುವಳ್ಳಿ ಪ್ರಭಾಕರ್, ಹನುಮಂತಪ್ಪ, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮಾಸ್ತಿ ವೆಂಕಟೇಶ್, ಮುಂತಾದವರು ಇದ್ದರು.

ಗೌನಿಪಲ್ಲಿ ಸತ್ಯಸಾಯಿ ಪ್ರೌಢಶಾಲಾವರಣದಲ್ಲಿ ಕೆಇಬಿ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಬದಲಾವಣೆಯ ಸಂದರ್ಭ ಅಪಘಾತ, ವಿದ್ಯಾರ್ಥಿಗಳಿಗೆ ತೀವ್ರ ಗಾಯ

ಶ್ರೀನಿವಾಸಪುರ : ಗೌನಿಪಲ್ಲಿ ಸತ್ಯಸಾಯಿ ಪ್ರೌಢಶಾಲಾವರಣದಲ್ಲಿ ಬುಧವಾರ ಶಾಲಾವರಣದಲ್ಲಿ ಇದ್ದ ಕೆಇಬಿ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡುತ್ತಿರುವ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ ವೇಳೆ ಎರಡು ಕಂಬಗಳು ಮುರಿದ ಪರಿಣಾಮ ಶಾಲೆಯ 3 ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಮರಗಳ ಕೊಂಬೆಗಳನ್ನು ಕಡಿಯುತ್ತಿರುವ ವೇಳೆ ಶಾಲೆಯ 7 ನೇತರಗತಿ ವಿದ್ಯಾರ್ಥಿಗಳಾದ ದಿನೇಶ್ , ಭರತ್ , ಚರಣ್ ಗಾಯಗಳಾಗಿವೆ . ಕರಿಪಲ್ಲಿ ಗ್ರಾಮದ ದಿನೇಶ್ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಗೆ ರವಾನಿಸಲಾಗಿದೆ . ಬಚ್ಚಿರೆಡ್ಡಿಗಾರಿಪಲ್ಲಿಯ ಗ್ರಾಮದ ಭರತ್ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು , ಬಚ್ಚಿರೆಡ್ಡಿಗಾರಿಪಲ್ಲಿ ಚರಣ್‌ಗೆ ಕಾಲಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಈ ಘಟನೆಗೆ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರಲ್ಲಿ ಮಾತು ಕೇಳಿಬರುತ್ತಿದೆ . ಸ್ಥಳಕ್ಕೆ ಶ್ರೀನಿವಾಸಪುರ ಎಇಇ ರಾಮತೀರ್ಥ , ಗೌನಿಪಲ್ಲಿ ವಲಯದ ಸರ್ಕಲ್ ಇನ್ಸಪೆಕ್ಟರ್ ಜಯಾನಂದ ಹಾಗೂ ಪಿಎಸ್‌ಐ ಮುನಿರತ್ನ ಸ್ಥಳಕ್ಕೆ ಬೇಟಿ ನೀಡಿ ಘಟನೆಯ ಪರಿಶೀಲಿಸಿದರು . ಗೌನಿಪಲ್ಲಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು , ತನಿಖೆ ನಡೆಸುತ್ತಿದ್ದಾರೆ .

ಜೇಸಿಐ ಬೆಳ್ಮಣ್ಣು : ಜೇಸಿ. ವೀಣೇಶ್ ಅಮೀನ್ ಅವರಿಗೆ ಪೂರ್ವಾಧ್ಯಕ್ಷರುಗಳಿಂದ ಅಭಿನಂದನಾ ಸನ್ಮಾನ


ಅಂತರಾಷ್ಟ್ರೀಯ ಭಾರತೀಯ ಜೇಸಿಐನ ವಲಯ ಹದಿನೈದರ ಪ್ರತಿಷ್ಠಿತ ಘಟಕ ಬೆಳ್ಮಣ್ಣು ಜೇಸಿಐನ 43ನೇ ಪದಗ್ರಹಣ ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷರಾದ ಜೇಸಿ. ವೀಣೇಶ್ ಅಮೀನ್ ಅವರಿಗೆ ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರುಗಳಿಂದ ಅಭಿನಂದನಾ ಸನ್ಮಾನವನ್ನು ಬೆಳ್ಮಣ್ಣು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆಸಲಾಯಿತು.
ಬೆಳ್ಮಣ್ಣು ಜೇಸಿಐನ ನೂತನ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಕರ್ನಾಟಕ ಮೀನುಗಾರಿಕಾ ನಿಗಮ ಮಂಡಳಿಯ ನಿರ್ದೇಶಕರಾದ ಕಟಪಾಡಿ ಗೀತಾಂಜಲಿ ಸುವರ್ಣ, ಮೈಸೂರು ಎಸ್.ಐ.ಆರ್.ಡಿ. ತರಬೇತಿ ಸಂಯೋಜಕರಾದ ಸುಧಾಮಣಿ ಜೇಸಿಐ ವಲಯ 15ರ ನಿಯೋಜಿತ ವಲಯಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ, ಲೇಡಿ ಜೇಸಿ ಸಂಯೋಜಕಿ ಸೌಜನ್ಯ ಸತೀಶ್ ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ ಹಾಗೂ ಪೂರ್ವಾಧ್ಯಕ್ಷರುಗಳು ವೇದಿಕೆಯಲ್ಲಿದ್ದರು.

ಕುಂದಾಪುರ : ಬಿ. ಅಬ್ಬಾಸ್ ಸಾಹೇಬ್ ನಿಧನ

ಕುಂದಾಪುರ: ಸ್ಥಳೀಯ ಕಾನ್ವೆಂಟ್ ರಸ್ತೆಯ ನಿವಾಸಿ ಟ್ರಾನ್ಸ್ ಪೋರ್ಟ್ ಉದ್ಯಮಿ ಬಿ.ಅಬ್ಬಾಸ್ ಸಾಹೇಬ್ ( 73)
ದಿನಾಂಕ 15 11 22ರ ಮಂಗಳವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು.ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಬಿ.ಹಾರೂನ್ ಸಾಹೇಬ್ ಅವರ ಸಹೋದರರಾಗಿರುವ ಇವರು ಪತ್ನಿ,ಓರ್ವ ಪುತ್ರ ಹಾಗೂ ಹಾಗೂ ಮೂವರು ಪುತ್ರಿಯರನ್ನು ಆಗಲಿದ್ದಾರೆ.

ಕುಂದಾಪುರ:ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮದರ್ ವೆರೋನಿಕಾರ ದ್ವಿಶತಮಾನೋತ್ಸವದ ಪುಣ್ಯಸ್ಮರಣೆಯ ಆರಂಭೋತ್ಸವ

ಕುಂದಾಪುರ. ನ.16: ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮದರ್ ವೆರೋನಿಕಾರ ದ್ವಿಶತಮಾನೋತ್ಸವದ ಪುಣ್ಯಸ್ಮರಣೆಯ ಆರಂಭೋತ್ಸ ವನ್ನು ಜಗತ್ತಿನ ಎಲ್ಲಡೆ ಆರಂಭಿಸುವ ಹೊತ್ತಿನಲ್ಲಿ, ಕುಂದಾಪುರ ಸಂತ ಜೋಸೆಫ್ ಕಾರ್ಮೆಲ್ ಸಂಸ್ಥೆಯಲ್ಲಿಯೂ ಇಂದು ಚಾಲನೆ ನೀಡಲಾಯಿತು.

    ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ದಿವ್ಯ ಬಲಿದಾನವನ್ನು ಅರ್ಪಿಸಿ ಆರಂಭೋತ್ಸವಕ್ಕೆ ಚಾಲನೆ ನೀಡಿದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ನೊರೊನ್ಹಾ ಸಹಬಲಿದಾನವನ್ನು ಅರ್ಪಿಸಿದರು.

    ಸಿಸ್ಟರ್ ವೆರೋನಿಕಾ 1823 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ಜನಿಸಿದರು, ಅವರು ಮೂಲತಹ ಶ್ರೀಮಂತ ಮತ್ತು ಅಧಿಕಾರತ್ವದ ಹಾಗೂ ಪ್ರೊಟೆಸ್ಟಂಟ್ ಕುಂಟುಬದಲ್ಲಿ ಹುಟ್ಟಿದ್ದು, ಅವಳಿಗೆ ಹೆತ್ತವರು ಸೋಫಿ ಲೀವ್ಸ್ ಹೆಸರನ್ನು ಇಟ್ಟಿದ್ದರು. ಅವಳಿಗೆ ’ನೀನು ಕಥೊಲಿಕ್ ಪಂಗಡಕ್ಕೆ ಸೇರಬೇಕೆಂದು ದೇವರ” ಇಚ್ಚೆಯನ್ನು ತಿಳಿಸಿದಾಗ ಅವರು ರೋಮನ್ ಕಥೊಲಿಕ್ ಪಂಗಡಕ್ಕೆ ಸೇರಿ 1850 ರ ಫೆಬ್ರವರಿ 2 ರಂದು ಮಾಲ್ಟಾದಲ್ಲಿ ಕ್ಯಾಥೋಲಿಕ್ ಆಗುತ್ತಾಳೆ. ಮುಂದಿನ ವರ್ಷ ಅವಳು ಫ್ರಾನ್ಸ್‌ಗೆ ಹೋಗಿ ಅಲ್ಲಿ ಅವಳು ಸಿಸ್ಟರ್ಸ್ ಆಫ್ ಸೇಂಟ್ ಜೋಸೆಫ್ ಆಫ್ ದಿ ಅಪರೇಶನ್‌ಗೆ ಮೇಳ ಸ್ವೀಕರಿಸುತ್ತಾಳೆ.  ನೊವಿಶಿಯೇಟ್ ಅನ್ನು ಪೂರ್ಣಗೊಳಿಸಿದ ನಂತರ, ಅವರು 14 ಸೆಪ್ಟೆಂಬರ್ 1851 ರಂದು ಸಭೆಯ ಸದಸ್ಯರಾಗಿ ಪ್ರತಿಪಾದಿಸಲ್ಪಟ್ಟು ಮತ್ತು ಸಿಸ್ಟರ್ ಮೇರಿ ವೆರೋನಿಕಾ ಎಂದು ಹೆಸರನ್ನು ಪಡೆಯುತ್ತಾಳೆ.

   1863 ರಲ್ಲಿ ವೆರೋನಿಕಾವನ್ನು ಭಾರತದಲ್ಲಿನ ಸಭೆಯ ಪ್ರತಿಷ್ಠಾನದಲ್ಲಿ ಕಲಿಸಲು ನಿಯೋಜಿಸಲಾಯಿತು, ಬಿಷಪ್ ಮೇರಿ ಆಂಟೋನಿ ಅವರ ಕೋರಿಕೆಯ ಮೇರೆಗೆ ಕಳುಹಿಸಲಾಯಿತು, ಪ್ರಾಥಮಿಕ ಹಂತವಾಗಿ ಅವರು 1860 ರಲ್ಲಿ ಕ್ಯಾಲಿಕಟ್‌ನಲ್ಲಿ (ಈಗ ಕೋಯಿಕ್ಕೋಡ್) ಒಂದು ಮನೆಯನ್ನು ಖರೀದಿಸಿದರು ಮತ್ತು ಅದನ್ನು ಕಾನ್ವೆಂಟ್‌ಗಾಗಿ ಅಳವಡಿಸಿದರು ಮತ್ತು ಜನರ ಕೋರಿಕೆಯ ಮೇರೆಗೆ 1 ಏಪ್ರಿಲ್ 1862 ರಂದು ಸೇಂಟ್ ಜೋಸೆಫ್ ಶಾಲೆ ಎಂದು ಕರೆದರು. ಸ್ವಲ್ಪ ಸಮಯದ ನಂತರ, ಮಂಗಳೂರಿನಲ್ಲಿ 27 ಏಪ್ರಿಲ್ 1862 ರಂದು ಆಗಮಿಸಿದರು ಮತ್ತು ಶಾಲೆಯ ಉಸ್ತುವಾರಿ ವಹಿಸಿಕೊಂಡರು. ಅವರು ಕಾನ್ವೆಂಟ್‌ನ ಮೊದಲ ಸುಪೀರಿಯರ್ ಆಗಿದ್ದರು. ಮುಂದಿನಎರಡು ವರ್ಷಗಳ ಕಾಲ ಮಂಗಳೂರು ಮತ್ತು ಕೋಯಿಕ್ಕೋಡ್‌ನಲ್ಲಿ ಕಲಿಸಿದರು.

   ಬರುವ ವರ್ಷ ಮದರ್ ವೆರೊನಿಕಾರ ದ್ವಿ ಶತಮಾನೋತ್ಸವದ ಪುಣ್ಯಸ್ಮರಣತೋತ್ಸವ. ಇದರ ಆರಂಭೋತ್ಸವದ ಕಾರ್ಯಕ್ರಮದ ಬಲಿದಾನದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ ಮತ್ತು ಇತರ ಧರ್ಮಭಗಿನಿಯರು ಉಪಸ್ಥಿತರಿದ್ದರು.