ಮಾಲೂರು ತಾಲ್ಲೂಕಿನ ಅಗಲಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದಾನಿ ಎಸ್.ಆರ್.ಧರ್ಮೇಶ್ ಸಮವಸ್ತ್ರ ನೀಡಿದರು.

ಶೈಕ್ಷಣಿಕ ಅಭಿವೃದ್ಧಿಗೆ ನೆರವು ನೀಡಿ

ಶ್ರೀನಿವಾಸಪುರ: ದಾನಿಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಸಿಆರ್‍ಪಿ ಸುಬ್ರಮಣಿ ಹೇಳಿದರು.
ಮಾಲೂರು ತಾಲ್ಲೂಕಿನ ಅಗಲಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ತಮ್ಮ ಸಂಬಳದಲ್ಲಿ ಉಳಿಸಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಅವರ ನಡೆ ಸ್ತುತ್ಯಾರ್ಹ ಎಂದು ಹೇಳಿದರು.
ಧರ್ಮೇಶ್ ಮಕ್ಕಳಿಗೆ ಸಮವಸ್ತ್ರ ಮತ್ತಿತರ ಸೌಲಭ್ಯ ವಿತರಿಸಿ ಮಾತನಾಡಿ, ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಮಾನವ ಸೇವೆಯೇ ಮಾಧವ ಸೇವೆ ಎಂಬು ಮಾತಿನಲ್ಲಿ ನಂಬಿಕೆ ಇಟ್ಟಿದ್ದೇನೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಕೊಡುವುದರಲ್ಲಿ ತೃಪ್ತಿ ಕಂಡುಕೊಂಡಿದ್ದೇನೆ. ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಸಿಗುವ ಸಂತೋಷವೇ ಬೇರೆ. ಅಂಥ ಸಂತೋಷಕ್ಕಾಗಿ ಹಾತೊರೆಯುತ್ತೇನೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ವೆಂಕಟೇಶಪ್ಪ, ಸಿಆರ್‍ಪಿ ಅರುಣ್ ಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಅರುಣ್ ಕುಮಾರ್ ಇದ್ದರು.

ಲೇಖಕಿ – ಶಿಕ್ಷಕಿ ಸಮಿತ್ರಾ ಐತಾಳ ನಿಧನ(58)

ಕುಂದಾಪುರದ ಖ್ಯಾತ ಲೇಖಕಿ, ಕುಂದಾಪ್ರ ಕನ್ನಡದಲ್ಲಿ ರೂಪಕ, ನಾಟಕ,ಸಾಹಿತ್ಯರಚನೆ ಮಾಡಿದ ಶಿಕ್ಷಕಿ ಸಮಿತ್ರಾ ಐತಾಳ(58)ಡಿ 1ರಂದು ಸಂಜೆ ನಿಧನರಾದರು.ಇತ್ತೀಚಿನ ತನಕ ಟಿವಿ,ರೆಡಿಯೋ ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿರುವ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದವರು. ಕೆಲವು ದಿನಗಳ ಹಿಂದೆ ಅವರ ಪುಸ್ತಕ ಬಿಡುಗಡೆ,ನಾಟಕ ಪ್ರದರ್ಶನ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು.ಆದರೆ ಅವರ ಅನಾರೋಗ್ಯದ ಕಾರಣ ಮುಂದೂಡಲಾಗಿತ್ತು. ಇವರು ಪತಿ,ಪುತ್ರನನ್ನು ಅಗಲಿದ್ದಾರೆ.

ಲಕ್ಷ್ಮೀಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿ. ವತಿಯಿಂದ ರೈತರಿಗೆ ಕೆಸಿಸಿ ಸಾಲ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ವಿತರಣೆ

ಶ್ರೀನಿವಾಸಪುರ : ಬದುಕು ಒಂದೇ ದಿನದಲ್ಲಿ ಬದಲಾಗುತ್ತದೆ ಎನ್ನಲು ಸಾಧ್ಯವಿಲ್ಲ ಆದರೆ ಒಂದು ಒಳ್ಳೇಯ ನಿರ್ಧಾರ ಬದಕನ್ನೇ ಬದಲಾಯಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನ ದೃಡ ನಿರ್ಧಾರವೇ ಪ್ರೇರಕ ಶಕ್ತಿಯಾಗಿದ್ದು , ಈ ಮಾರ್ಗದಲ್ಲಿ ಗಟ್ಟಿ ಹೆಜ್ಜೆಗಳನ್ನಿಟ್ಟಾಗಲೇ ಯಶಸ್ಸು ದೊರೆಯುತ್ತದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿ. ವತಿಯಿಂದ ರೈತರಿಗೆ ಕೆಸಿಸಿ ಸಾಲ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಬುಧವಾರ 1ಕೋಟಿ 15 ಲಕ್ಷ ಸಾಲದ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಸ್ವಾವಲಂಬಿ ಬದುಕಿಗಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಅಲೆದಾಡಿದರು ಸಾಲವನ್ನು ಪಡೆಯುಲು ಸಾಧ್ಯವಾಗುತ್ತಿಲ್ಲ . ಇದಕ್ಕೆ ಅಪವಾದವೆಂಬತೆ ಹಣ ಕೊರತೆ ನಿವಾರಿಸುವ ಸಲುವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‍ವತಿಯಿಂದ ಅವಳಿ ಜಿಲ್ಲೆಗಳ ನೂರಾರು ಮಹಿಳಾ ಸಂಘಗಳಿಗೆ ಹಾಗು ಬೀದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದ ಸಾಲವನ್ನು ವಿತರಿಸಲಾಗುತ್ತಿದ್ದು ಹಣವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು .
ತಾಲೂಕು ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಸೊಸೈಟಿ ಅಧ್ಯಕ್ಷ ತೂಪಲ್ಲಿ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಜಮೀಲ್‍ಪಾಷ, ನಿರ್ದೇಶಕರಾದ ಮುನಯ್ಯ, ಪೇಪರ್ ವೆಂಕಟೇಶ್, ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜುನಾಥ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ, ಮುಖಂಡ ಟಿ.ವಿ.ನಾರಾಯಣಸ್ವಾಮಿ, ಗ್ರಾ.ಪಂ.ಉಪಾಧ್ಯಕ್ಷೆ ಮಂಗಮ್ಮ ನಡುಪನ್ನ ಇದ್ದರು.
ಪೋಟು 1 : ಲಕ್ಷ್ಮೀಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿ. ವತಿಯಿಂದ ರೈತರಿಗೆ ಕೆಸಿಸಿ ಸಾಲ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ 1ಕೋಟಿ 15 ಲಕ್ಷ ಸಾಲದ ಚೆಕ್‍ಗಳನ್ನು ಶಾಸಕ ಕೆ.ಆರ್.ರಮೇಶ್‍ಕುಮಾರ್ ವಿತರಣೆ ಮಾತನಾಡಿದರು.

ದಳಸನೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೊಡಿಚೆರುವು ಶಿವಾರೆಡ್ಡಿ ಅವಿರೋಧವಾಗಿ ಆಯ್ಕೆ

ಶ್ರೀನಿವಾಸಪುರ 1 : ತಾಲೂಕಿನ ದಳಸನೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೊಡಿಚೆರುವು ಶಿವಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಳಸನೂರು ಗ್ರಾಮಪಂಚಾಯತಿಗೆ ಸಂಬಂದಿಸಿದಂತೆ ಒಟ್ಟು 16 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 11 ಸದಸ್ಯರಿದ್ದು, ಜೆಡಿಎಸ್ ಬೆಂಬಲಿತ 5 ಸದಸ್ಯರು ಇದ್ದಾರೆ. ಈ ಹಿಂದೆ ಇದ್ದ ಉಪಾಧ್ಯಕ್ಷರಾಗಿ ವಿ.ಜಗದೀಶ್ ಕಾರ್ಯನಿರ್ವಹಿಸಿ ರಾಜಿನಾಮೆಯಿಂದ ತೆರವುಗೊಂಡಿದ್ದ ಉಪಾಧ್ಯಕ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಗೆ ಕೊಡಿಚೆರುವು ಶಿವಾರೆಡ್ಡಿ ಏಕೈಕ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರಾಗಿ ಶಿವಾರೆಡ್ಡಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ರೇಷ್ಮೆ ಇಲಾಖೆ ನಿರ್ದೇಶಕ ಕೃಷ್ಣಪ್ಪ ತಿಳಿಸಿದರು.
ರಾಜ್ಯ ಮಾವು ಮಂಡಲಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ ಮಾತನಾಡಿ ಎಲ್ಲಾ ಸದಸ್ಯರು ಒಮ್ಮತದಿಂದ ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸಬೇಕು. ಪಕ್ಷವನ್ನು ಬೆಳಸುವ ನಿಟ್ಟಿನಲ್ಲಿ ಪಂಚಾಯಿತಿಯ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು. ಅಧಿಕಾರ ಬರುವುದು ಎಲ್ಲರ ಹಕ್ಕು ಅದೇ ರೀತಿಯಾಗಿ ಅಧಿಕಾರವನ್ನು ನಿಭಾಯಿಸಿ, ನಿರ್ವಹಿಸುವ ಜವಾಬ್ದಾರಿ ವಹಿಸಬೇಕು. ಪಂಚಾಯಿತಿವತಿಯಂದ ಸಿಗುವಂತಹ ಸೌಲಭ್ಯಗಳನ್ನು ಪಕ್ಷಾತೀತವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರುವಂತೆ ಮಾಡಿ ನಿಮ್ಮ ನಾಯಕತ್ವವನ್ನು ಬೆಳಸಿಕೊಳ್ಳಬೇಕು.
ಸಿಗುವಂತಹ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೇ, ಸಿಗುವಂತಹ ಅಧಿಕಾರವನ್ನು ಸದ್ಭಳಕೆ ಮಾಡಿಕೊಂಡು ನಾಯಕತ್ವವು ನೀವು ಮಾಡುವಂತಹ ಕೆಲಸ ಕಾರ್ಯಗಳ ಮೇಲೆ ಬೆಳೆಯುತ್ತದೆ. ಜನರಿಗೆ ಬೇಕಾದ ಸೌಲಭ್ಯಗಳ ಕಾಲಕಾಲಕ್ಕೆ ನೀಡುವಂತೆ ಸದಸ್ಯರಿಗೆ ಸಲಹೆ ನೀಡಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶ್ರೀನಿವಾಸಪುರ ಪೊಲೀಸರು ಬಂದೊಬಸ್ತು ಮಾಡಿದ್ದರು.
ಪಿಡಿಒ ವಿಜಯಮ್ಮ, ಗ್ರಾ.ಪಂ ಅಧ್ಯಕ್ಷೆ ಸರಸ್ವತಮ್ಮ, ರೈತ ಮುಖಂಡ ವೀರಭದ್ರಸ್ವಾಮಿ, ಮುಖಂಡರಾದ ಆದಿನಾರಾಯಣಶೆಟ್ಟಿ, ಪಾಳ್ಯ ಗೋಪಾಲರೆಡ್ಡಿ, ವೆಂಕಟೇಶ್, ಹರಿ, ವೀರಭದ್ರಗೌಡ ಇದ್ದರು.

“ಹೊಂಗನಸು” ವಿಶೇಷ ಕಾರ್ಯಕ್ರಮ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಜನ ಸಾಮಾನ್ಯರ ಸಂಘ – ಸತೀಶ್ ಪೂಜಾರಿ ಅಬ್ಬನಡ್ಕ

ನಂದಳಿಕೆ : ಪ್ರತಿಯೊಂದು ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸುವವನೇ ನಿಜವಾದ ನಾಯಕ, ನಾಯಕತ್ವ ಕೇವಲ ಒಂದು ಹುದ್ದೆಯಲ್ಲ ಅದೊಂದು ಜವಾಬ್ದಾರಿ. ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯಬಲ್ಲ ಚಾಣಾಕ್ಷನೇ ನಿಜವಾದ ನಾಯಕ. ಪ್ರತಿ ಬಾರಿ ಹೊಸತನದ ಯೋಜನೆ ಹಾಗೂ ಹೊಸ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಬೆಳೆಸಬಲ್ಲ ವ್ಯಕ್ತಿಯೇ ನಿಜವಾದ ನಾಯಕ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಎನ್ನುವುದು ಜನ ಸಾಮಾನ್ಯರ ಸಂಘ ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶಗಳ ತೆರೆದಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಆದಿತ್ಯವಾರ ಜರಗಿದ 23ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ಜರಗಿದ “ಹೊಂಗನಸು” ವಿಶೇಷ ಕಾರ್ಯಕ್ರಮದ ಮೂಲಕ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿಯವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸ್ರಬೈಲು ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಭಜನಾ ಸಮಿತಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಲಲಿತಾ ಆಚಾರ್ಯ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಉಪಾಧ್ಯಕ್ಷೆ ಲೀಲಾ ಪೂಜಾರಿ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್ ಮೊದಲಾದವರಿದ್ದರು. ಕೋಶಾಧಿಕಾರಿ ಅಶ್ವಿನಿ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು.

ರಾಯಲ್ಪಾಡು ಹೋಬಳಿಯ ಕೊರಕೋನಪಲ್ಲಿ,ಜಿಂಕೆಯನ್ನು ನುಂಗಿದ ಬೃಹತ್ ಗಾತ್ರದ ಹೆಬ್ಬಾವಿನಿಂದ ವ್ಯಕ್ತಿಯ ಮೇಲೆ ದಾಳಿ

ರಾಯಲ್ಪಾಡು ಹೋಬಳಿಯ ಕೊರಕೋನಪಲ್ಲಿ ಗ್ರಾಮದ ಸಮೀಪ ಮಂಗಳವಾರ ಜಿಂಕೆಯೊಂದನ್ನ ನುಂಗಿ ಪರದಾಡುತ್ತಿದ್ದ ಸಮಯದಲ್ಲಿ ಬೃಹತ್ ಗಾತ್ರದ ಹೆಬ್ಬಾವುನಿಂದ .ಜಿಂಕೆಯನ್ನು ರಕ್ಷಣೆ ಮಾಡಲು ಮುಂದಾದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಹೆಬ್ಬಾವು. ಸುಮಾರು 20 ಅಡಿ ಉದ್ದದ 50 ಕೆಜಿ ತೂಕದ ಹೆಬ್ಬಾವು. ಹೆಬ್ಬಾವಿನಿಂದ ಜಿಂಕೆ ರಕ್ಷಣೆ ಮಾಡಲು ಪ್ರಯತ್ನಿಸಿದ ಗ್ರಾಮಸ್ಥರು. ದರೆ ಹೆಬ್ಬಾವಿನ ಹೊಟ್ಟೆಯಲ್ಲಿ ಜಿಂಕೆ ಮೃತವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ಪರಿಶೀಲನೆ ಮಾಡಿದರು.

ರಾಜ್ಯದ ಸರ್ವತೋಮು ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಜೆಡಿಎಸ್‍ನ್ನು ಬೆಂಬಲಿಸಬೇಕು : ನಿಖಿಲ್ ಕುಮಾರಸ್ವಾಮಿ

ಶ್ರೀನಿವಾಸಪುರ: ರಾಜ್ಯದ ಸರ್ವತೋಮು ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ್ನು ಬೆಂಬಲಿಸಬೇಕು ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಸ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಆಡಳಿತದಲ್ಲಿ ದೇಶ ಅಥವಾ ರಾಜ್ಯ ಅಭಿವೃದ್ಧಿ ಕಂಡಿಲ್ಲ. ಬಿಜೆಪಿ ಮತೀಯ ಭಾವನೆ ಕೆರಳಿಸುವುದರಲ್ಲಿ ನಿರತವಾಗಿದೆ. ಆಡಳಿತ ನಡೆಸಿದ ಕಾಂಗ್ರೆಸ್ ಮುಖಂಡರು ಮೂರು ತಲೆಮಾರಿಗೆ ಸಾಕಾಗುಷ್ಟು ಸಂಪತ್ತು ಗಳಿಸಿದ್ದಾರೆ. ಈ ಮಾತು ಕಾಂಗ್ರೆಸ್ ಮುಖಂಡರ ಬಾಯಿಂದಲೇ ಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಜೆಡಿಎಸ್ ಅತ್ಯುತ್ತಮ ಪರ್ಯಾಯವಾಗಿದೆ ಎಂದು ಹೇಳಿದರು.

ಕೆರೆಗಳಗೆ ಕೆಸಿ ವ್ಯಾಲಿ ನೀರು ಹರಿಸುವುದರ ಮೂಲಕ ಜನರ ಆರೋಗ್ಯದ ಮೇಲೆ ಬರೆ ಎಳೆಯಲಾಗಿದೆ. ಸಮರ್ಪಕವಾಗಿ ಶುದ್ಧೀಕರಿಸದೆ ಹರಿಸುತ್ತಿರುವ ನೀರಿನಿಂದ ಜನರು ಅಪಾಯಕಾರಿ ಕಾಯಿಲೆಗೆ ತುತ್ತಾಗುವ ಸಂಭವ ಇದೆ ಎಂದು ಹೇಳಿದರು.

ಗಡಿ ಭಾಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿರುವುದು ಸ್ವಾಗತಾರ್ಹ. ಇಲ್ಲಿನ ಜನರ ಕನ್ನಡ ಪ್ರೇಮ ಅನುಕರಣೀಯ. ಆದರೆ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಕನ್ನಡ ಬದುಕಿನ ಭಾಗವಾಗಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ನಾಡು ನುಡಿ ರಕ್ಷಣೆ ಎಲ್ಲರ ಹೊಣೆ. ಅದಕ್ಕೆ ಗಡಿನಾಡು ನಡುನಾಡು ಎಂಬ ಭೇದವಿಲ್ಲ. ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರು. ಆದ್ದರಿಂದ ಇಲ್ಲಿನ ನೆಲ, ಜಲ ಹಾಗೂ ಭಾಷೆ ಬಗ್ಗೆ ಗೌರವ ಭಾವನೆ ಹೊಂದಿರಬೇಕು ಎಂದು ಹೇಳಿದರು.

ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಮುಖಂಡರಾದ ಮಂಜುನಾಥರೆಡ್ಡಿ, ಬಿ.ವೆಂಕಟರೆಡ್ಡಿ, ಎಂ.ಶ್ರೀನಿವಾಸಪ್ಪ, ಜಯಲಕ್ಷ್ಮಿ, ಕೃಷ್ಣಾರೆಡ್ಡಿ, ಅಪ್ಪೂರು ರಾಜು, ಆನಂದಗೌಡ, ಪೂಲ ಶಿವಾರೆಡ್ಡಿ, ಸಿಎಂಆರ್ ಶ್ರೀನಾಥ್, ಸುಧಾಕರ್, ಡಾ. ವಿ.ಎಂ.ರಮೇಶ ಬಾಬು, ಎಸ್.ಆರ್.ಶ್ರೀನಿವಾಸ್, ಸತ್ಯನಾರಾಯಣ, ಕಾರ್ ಬಾಬು, ಇಮ್ರಾನ್ ಪಾಷ, ಎನ್.ಎಂ.ನೂರ್‍ಅಹ್ಮದ್, ನಜ್ಮ ನಜೀರ್, ಜಬೀರ್ ಅಹ್ಮದ್ ಇದ್ದರು.

ಜಿಲ್ಲೆಗೆ ಬಂದಿರುವ ಬೃಹತ್ ಕಂಪನಿಗಳು ತಮ್ಮ ಸಿಎಸ್‍ಆರ್ ನಿಧಿಯಿಂದ
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕಾರ ನೀಡಬೇಕು-ಎಸ್ಪಿ ಡಿ.ದೇವರಾಜ್

ಕೋಲಾರ:- ಜಿಲ್ಲೆಯಲ್ಲಿ ಆರಂಭವಾಗಿರುವ ಬೃಹತ್ ಕಂಪನಿಗಳು ತಮ್ಮ ಸಿಎಸ್‍ಆರ್ ನಿಧಿಯಿಂದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಕೊಡುಗೆ ನೀಡಲು ಮುಂದೆ ಬರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮನವಿ ಮಾಡಿದರು.
ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಗೆ ವಿಸ್ಟ್ರಾನ್ ಕಂಪನಿ ಅಧಿಕಾರಿಗಳ ಮನವೊಲಿಸಿ ಶಾಲೆಗೆ ಕರೆತಂದಿದ್ದ ಎಸ್ಪಿಯವರು ಶಾಲೆ ಆವರಣದಲ್ಲಿ ಕಳೆದ ಬಾರಿ ಬಿದ್ದ ಮಳೆಗೆ ನೆಲಸಮವಾಗಿದ್ದ ಎರಡು ಕೊಠಡಿಗಳನ್ನು ತೋರಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಿಗೆ ಸರ್ಕಾರ ಸೌಲಭ್ಯ ನೀಡುತ್ತಿದೆ ಆದರೆ ಇಂದಿ ಸ್ಪರ್ಧಾತ್ಮಕ ಪೈಪೋಟಿಗೆ ಅನುಗುಣವಾಗಿ ಬಲವರ್ಧನೆಗೆ ದಾನಿಗಳು, ಕಂಪನಿಗಳ ನೆರವು ಅಗತ್ಯವಿದೆ ಎಂದ ಅವರು, ಈ ನಿಟ್ಟಿನಲ್ಲಿ ನರಸಾಪುರ,ವೇಮಗಲ್ ಭಾಗದಲ್ಲಿ ಇರುವ ಕಂಪನಿಗಳು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಮುಂದಾಗಬೇಕು ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸುವ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವುದು ಜವಾಬ್ದಾರಿಯಾಗಿದೆ, ಸರ್ಕಾರ ನೀಡುವ ಸೌಲಭ್ಯಗಳ ಜತೆಗೆ ಕಂಪನಿಗಳು ಸಿಎಸ್‍ಆರ್ ನಿಧಿ ಕೊಡುಗೆಯಾಗಿ ನೀಡಿದರೆ ಶಾಲೆಗಳ ಆಕರ್ಷಣೀಯವಾಗಿ ಮಕ್ಕಳು ಸರ್ಕಾರಿ ಶಾಲೆಗಳತ್ತ ಬರಲು ಸಹಕಾರಿಯಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತ, ಆತಂಕಕಾರಿ ಬೆಳವಣಿಗೆಯಾಗಿದೆ, ಪ್ರತಿಯೊಬ್ಬರಲ್ಲೂ ಕಾನ್ವೆಂಟ್ ವ್ಯಾಮೋಹ ಇದಕ್ಕೆ ಕಾರಣವಾಗಿದೆ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ನೀಡುವ ಮೂಲಕ ಪೋಷಕರ ಮನಸೆಳೆಯಬೇಕಿದೆ ಎಂದ ಅವರು, ಕ್ಯಾಲನೂರು ಕೆಪಿಎಸ್ ಶಾಲೆಯಲ್ಲಿ 426 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದೊಂದು ದೊಡ್ಡ ಶಾಲೆಯಾಗಿದೆ, ಇಲ್ಲಿಗೆ ಸೌಲಭ್ಯಗಳು ಹರಿದುಬರಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ಉನ್ನತ ಸ್ಥಾನದಲ್ಲಿದ್ದಾರೆ, ಜನತೆಗೆ ಸರ್ಕಾರಿ ಶಾಲೆಗಳ ಕುರಿತು ಇರುವ ಕೀಳಿರಿಮೆ ಹೋಗಬೇಕು, ಈ ನಿಟ್ಟಿನಲ್ಲಿ ಶಿಕ್ಷಕರ ಪರಿಶ್ರಮವೂ ಅಗತ್ಯವಿದೆ ಎಂದ ಅವರು, ಇಲ್ಲೇ ನುರಿತ ಶಿಕ್ಷಕರಿದ್ದಾರೆ ಇದನ್ನು ಪೋಷಕರು ಅರಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಸ್ಟ್ರಾನ್ ಕಂಪನಿ ಅಧಿಕಾರಿ ನಾಗರಾಜ್ ಮಾತನಾಡಿ ಕಂಪನಿಯ ಆಡಳಿತವರ್ಗದೊಂದಿಗೆ ಮಾತನಾಡಿ, ಸಿಎಸ್‍ಆರ್ ನಿಧಿಯ ಹಣವನ್ನು ಕ್ಯಾಲನೂರು ಶಾಲೆಗೆ ಒದಗಿಸುವುದಾಗಿ ಭರವಸೆ ನೀಡಿದರು.
ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಪ್ರಾರ್ಥನಾ ಸ್ಥಳಕ್ಕಾಗಿ ಸಿಮೆಂಟ್ ಮೈದಾನ ಮಾಡಿಕೊಡುವ ಬಗ್ಗೆ ಹಾಗೂ ಐಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡವ ಬಗ್ಗೆ ಚರ್ಚಿಸಲಾಯಿತು ಹಾಗೂ ವಿಸ್ಟ್ರೋನ್ ಕಂಪನಿಯ ಸಹಯೋಗದಲ್ಲಿ ನಿರ್ಮಿಸಿ ಕೊಡುವ ಬಗ್ಗೆ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು, ಎಸ್‍ಡಿಎಂಸಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸ್ಪಿ ದೇವರಾಜ್, ಶಾಲೆಗೆ ಇರುವ ಅಗತ್ಯತೆಗಳ ಕುರಿತು ಚರ್ಚಿಸಿ ಇದೆಲ್ಲವನ್ನೂ ವಿಸ್ಟ್ರಾನ್ ಸಿಎಸ್‍ಆರ್ ನಿಧಿಯಲ್ಲಿ ಪೂರೈಸಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಎಸ್ಪಿ ಡಿ.ದೇವರಾಜ್ ಹಾಗೂ ವಿಸ್ಟ್ರನ್ ಕಂಪನಿ ಅಧಿಕಾರಿ ನಾಗರಾಜ್‍ರನ್ನು ಶಾಲೆಯ ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಶಿವರಾಜ್, ಗ್ರಾ.ಪಂ ಅಧ್ಯಕ್ಷೆ ಸಹೀದಾ ಜಂಷೀರ್ ಪಾಷ, ಉಪಾಧ್ಯಕ್ಷ ರತ್ನಮ್ಮ ನಾರಾಯಣಸ್ವಾಮಿ, ಗ್ರಾ.ಪಂ ಸದಸ್ಯ ನವೀನ್, ರಾಜೇಂದ್ರ ಪ್ರಸಾದ್, ಸದಸ್ಯರಾದ ಸುರೇಶ್,ರಮೇಶ್, ಲೋಕೇಶ್, ನವೀನ್, ರಾಜೇಂದ್ರಪ್ರಸಾದ್, ಬಾಬಾ ಸಾಬ್, ಜಂಷೀರ್‍ಪಾಷ, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಮೂರ್ತಿ, ಉಪಾಧ್ಯಕ್ಷ ರಾಮಾಂಜಿನಪ್ಪ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.