

ಶ್ರೀನಿವಾಸಪುರ : ತಾಲೂಕಿನಲ್ಲಿ ಕೆರೆಗಳಿಗೆ ಕೆಸಿ ವ್ಯಾಲಿ ನೀರನ್ನು ಹರಿಸುವ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ವಿವಿಧ ಮುಖಂಡರು ಆಗ್ರಹಿಸಿದ್ದಾರೆ.
ಮಂಗಳವಾರ ಪಟ್ಟಣದ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ರಮೇಶ್ಕುಮಾರ್ ಅಭಿಮಾನಿ ಬಳಗದ ವತಿಯಿಂದ ನೀರಾಗಿ ನಮ್ಮ ಹಕ್ಕು ಕಾರ್ಯಕ್ರಮದಡಿ ಶ್ರೀನಿವಾಸಪುರದಿಂದ ಮುದುವಾಡಿ ಕೆರೆ ಹಾಗೂ ನರಸಾಪುರದ ಲಕ್ಷ್ಮಿಸಾಗರದವರೆಗೆ ಕಾರುಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮಾಜಿ ಶಾಸಕ ಕೆ.ಆರ್. ರಮೇಶ್ಕುಮಾರ್ ಅವರ ಕಾಳಜಿಯಿಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ರೂಪುಗೊಂಡಿವೆ ಎಂದರು.
ಕೆಸಿ ವ್ಯಾಲಿ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ, ನೀರು ಹರಿಸುವಲ್ಲಿ ವಿಳಂಬವಾಗುತ್ತಿರುವುದು ದುರಂತಕರವಾಗಿದೆ ಎಂದು ಅವರು ಹೇಳಿದರು. ಈಗಾಗಲೇ ತಾಲೂಕಿನ ಅನೇಕ ಕೆರೆಗಳು ನೀರಿಲ್ಲದೆ ಬತ್ತಿಹೋಗುತ್ತಿದ್ದು, ತಕ್ಷಣ ಕ್ರಮ ಕೈಗೊಂಡು ನೀರು ಹರಿಸುವಂತೆ ಒತ್ತಾಯಿಸಿದರು.
ಕೋಮುಲ್ ನಿರ್ದೇಶಕ ಕೆ.ಕೆ. ಮಂಜುನಾಥ್ ಮಾತನಾಡಿ, ಸಂಬಂಧಿತ ಅಧಿಕಾರಿಗಳು ಒಂದೂವರೆ ತಿಂಗಳೊಳಗೆ ಕೆರೆಗಳಿಗೆ ನೀರು ಹರಿಸುವ ಭರವಸೆ ನೀಡಿದ್ದು, ಆ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಎಚ್ಚರಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ ಮಾತನಾಡಿ, ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ರೈತರು ಹಾಗೂ ಪ್ರಾಣಿ ಸಂಪತ್ತನ್ನು ಗಮನದಲ್ಲಿಟ್ಟುಕೊಂಡು ಕೆಸಿ ವ್ಯಾಲಿ ನೀರನ್ನು ಜಿಲ್ಲೆಗೆ ತರಲಾಗಿದ್ದು, ಅದನ್ನು ತಾಲೂಕಿನ ಎಲ್ಲಾ ಕೆರೆಗಳಿಗೆ ಹರಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು ಎಂದರು. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಭಿಯಂತರ ವೆಂಕಟರಮಣ, ಕೋಮುಲ್ ನಿರ್ದೇಶಕ ಎನ್. ಹನುಮೇಶ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರೆಡ್ಡಪ್ಪ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ. ಪ್ರಕಾಶ್, ಶ್ರೀನಿವಾಸಪುರ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತ ಮಾಜಿ ಅಧ್ಯಕ್ಷರ ಬೈರಾರೆಡ್ಡಿ, ವಕೀಲ ಮುನಿರಾಜು, ನಾಗದೇನಹಳ್ಳಿ ಸೀತರಾಮರೆಡ್ಡಿ, ಆರ್ಕೆಎಸ್ ಮಂಜುನಾಥರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


