

ಕೋಲಾರ: ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ದೀಪಕ್ ಕುಂದಾಪುರ ಮತ್ತು ವೈಶಾಲಿ ದಂಪತಿಯ ಒಂದುವರೆ ವರ್ಷದ ಮಗಳು ಆದ್ಯ ಕುಂದಾಪುರ ಪ್ರಾಣಿ ಪಕ್ಷಿ, ತರಕಾರಿ, ವಾಹನ ಮುಂತಾದವುಗಳನ್ನು ತ್ವರಿತವಾಗಿ ಗುರುತಿಸಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ `ಐಬಿಆರ್ ಅಚೀವರ್’ ಸಾಧನೆ ಮಾಡಿದ್ದಾಳೆ.
ಆದ್ಯ 30 ಪ್ರಾಣಿ, 31 ತರಕಾರಿ, 15 ಆಕಾರ, 18 ವಾಹನ, 12 ಅಡುಗೆ ವಸ್ತು, ದೇಹದ 12 ಅಂಗಾಂಗ, 17 ಹಕ್ಕಿ, 11 ಹಣ್ಣು, 16 ಇಲೆಕ್ಟಾçನಿಕ್ ಸಾಧನ ಹಾಗೂ ಇತರೆ 33 ವಸ್ತುಗಳನ್ನು ಗುರುತಿಸಿ ಹೇಳಿರುವುದನ್ನು ಮೆಚ್ಚಿಕೊಂಡಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಆದ್ಯಳಿಗೆ ಪ್ರಮಾಣಪತ್ರ ಹಾಗೂ ಪದಕ ನೀಡಿ ಗೌರವಿಸಿದೆ. ಇದಲ್ಲದೆ, 18 ತಿಂಗಳ ಆದ್ಯ 11 ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡಿರುವುದನ್ನೂ ಐಬಿಆರ್ ಪ್ರಶಂಸಿಸಿದೆ. ಆದ್ಯ, ಹಿರಿಯ ಪತ್ರಕರ್ತ ವಿಶ್ವ ಕುಂದಾಪುರ ಮತ್ತು ಶಿಕ್ಷಕಿ ಮಮತಾ ಕುಂದಾಪುರ ಇವರ ಮೊಮ್ಮಗಳು.

