


ಶ್ರೀನಿವಾಸಪುರ, ಜೂನ್ 5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಎಸ್ಎಫ್ಎಸ್ ಶಾಲೆಯ ವತಿಯಿಂದ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಶಾಲಾ ಆವರಣದಿಂದ ಆರಂಭವಾದ ಜಾಥಾವು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಮರಗಳ ಮಹತ್ವ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ಹಸಿರು ವಾತಾವರಣ ನಿರ್ಮಾಣಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಕಾರ್ಯಕ್ರಮದ ಅಂಗವಾಗಿ ಫಾದರ್ ಫ್ಯಾನ್ಸಿ ಯಕ್ಕ ಅವರು ಪರಿಸರ ಪ್ರೇಮಿ ದೀಪ ಆರ್. ಕುಲಕರ್ಣಿ ಅವರಿಗೆ ಗಿಡವನ್ನು ವಿತರಿಸಿ ಸನ್ಮಾನಿಸಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಜಿಲ್ಲು ಫಾದರ್, ಶಿಕ್ಷಕರಾದ ಪುರುಷೋತ್ತಮ, ನಾಗರಾಜ್, ಸುದರ್ಶನ, ಪ್ರವೀಣ್, ಶ್ರೀದೇವಿ, ಗಿರಿಜಾ, ನಾಗಮಣಿ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಸಂದೇಶಗಳನ್ನು ನೀಡಲಾಯಿತು.

