


ಬೆಂಗಳೂರು ಜೂನ್ 5: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ಕರ್ತವ್ಯ (KAAMS) ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜೂನ್ 4ರಂದು ನಡೆದ ಸಚಿವಾಲಯ, ರಾಜ್ಯ ಸರ್ಕಾರದ ಪ್ರತ್ಯೇಕ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆಯಲ್ಲಿ ನೀಡಿದ ಸೂಚನೆಗಳ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಗಳು ಶುಕ್ರವಾರ ಅಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ.
ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS)ಗೆ ಸಂಪರ್ಕಗೊಂಡಿರುವ ಕರ್ತವ್ಯ ಆ್ಯಪ್ನಲ್ಲಿ ಇನ್ನೂ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಾತಿ ದಾಖಲಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಟಿಪ್ಪಣಿಯ ಪ್ರಕಾರ, ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖೆಗಳ ಮುಖ್ಯಸ್ಥರು ಸೇರಿದಂತೆ ರಾಜ್ಯದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕರ್ತವ್ಯ ಆ್ಯಪ್ನಲ್ಲಿ ಚೆಕ್ ಇನ್ ಮಾಡಬೇಕು. ಕಚೇರಿ ಕಾರ್ಯ ಮುಗಿದ ನಂತರ ಚೆಕ್ ಔಟ್ ಮಾಡುವುದನ್ನೂ ಕಡ್ಡಾಯಗೊಳಿಸಲಾಗಿದೆ.
ಇದಲ್ಲದೆ, ಇಲಾಖೆಯ ಮುಖ್ಯಸ್ಥರು ಮತ್ತು ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ ಮೂಲಕ ಕರ್ತವ್ಯ ಡ್ಯಾಶ್ಬೋರ್ಡ್ನಲ್ಲಿ ಸಿಬ್ಬಂದಿಗಳ ಹಾಜರಾತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಶೇಕಡಾ 100ರಷ್ಟು ಅನುಷ್ಠಾನ ಖಚಿತಪಡಿಸಬೇಕೆಂದು ಸೂಚಿಸಲಾಗಿದೆ.
ಕಚೇರಿ ವೇಳೆಯಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಹೊರಾಂಗಣ ಕಾರ್ಯಕ್ಕಾಗಿ ತೆರಳಬೇಕಾದ ಸಂದರ್ಭದಲ್ಲಿ ಆ್ಯಪ್ನಲ್ಲಿರುವ OOD (Out of Office Duty) ಆಯ್ಕೆಯನ್ನು ಬಳಸಿಕೊಂಡು ಸಂಬಂಧಿತ ಮಾಹಿತಿಯನ್ನು ದಾಖಲಿಸಬೇಕಾಗಿದೆ. ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಕರ್ತವ್ಯ ಆ್ಯಪ್ಗೆ ಅಳವಡಿಸಿರುವುದರಿಂದ ಹಾಜರಾತಿ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿದ್ದು, ಸರ್ಕಾರದ ನೌಕರರಲ್ಲಿ ಸಮಯಪಾಲನೆ ಮತ್ತು ಜವಾಬ್ದಾರಿತನ ಹೆಚ್ಚಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಯವರ ಈ ನಿರ್ದೇಶನವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದ್ದು, ಎಲ್ಲಾ ಇಲಾಖೆಗಳು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ.

