

ಶ್ರೀನಿವಾಸಪುರ : ಮಾನವನು ದಿನನಿತ್ಯದ ಜಂಜಾಟಗಳಲ್ಲಿ ತೊಡಗಿರುವುದರಿಂದ ಮಾನಸಿಕವಾಗಿ ಒಂದಿಲ್ಲದೊಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾನೆ. ಎಷ್ಟೇ ಮಾನಸಿಕ ಒತ್ತಡಗಳಿದ್ದರೂ ದೇವಾಲಯಗಳಿಗೆ ಭೇಟಿ ನೀಡಿ ಬಂದರೆ ಮನಸ್ಸಿಗೆ ಶಾಂತಿ ಮತ್ತು ಸಂತಸ ದೊರೆಯುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಗುಂಟಪಲ್ಲಿ ಬಿ.ವಿ. ಶಿವಾರೆಡ್ಡಿ ಹೇಳಿದರು.
ತಾಲೂಕಿನ ಇಲದೋಣಿ ಗ್ರಾಮದಲ್ಲಿ ಓಂ ಶಕ್ತಿ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಮಾತನಾಡಿದ ಅವರು, ಬ್ರಿಟಿಷರ ಆಡಳಿತ ಕಾಲದಲ್ಲಿ ನಮ್ಮ ದೇಶದ ಹಿಂದೂಗಳನ್ನು ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತಿತ್ತು.
ಆ ಸಂದರ್ಭದಲ್ಲಿ ಮತಾಂತರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಇಂತಹ ಇತಿಹಾಸವನ್ನು ಮನನ ಮಾಡಿಕೊಂಡು ಇಂದು ನಾವು ಎಚ್ಚೆತ್ತುಕೊಂಡು ನಮ್ಮ ಧರ್ಮವನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ವಕ್ಫ್ ಬೋರ್ಡ್ ಮೂಲಕ ಹಿಂದೂ ಧರ್ಮದ ದೇವಾಲಯಗಳ ಹಾಗೂ ಸಾಮಾನ್ಯ ರೈತರ ಜಮೀನುಗಳನ್ನು ಕಸಿದುಕೊಳ್ಳಲಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಇದರಿಂದ ರೈತರು ತಮ್ಮ ಜಮೀನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾನೂನು ಬದಲಾವಣೆ ತಂದಿರುವುದು ಶ್ಲಾಘನೀಯ ಎಂದು ಹೇಳಿದರು.
ತಮಿಳುನಾಡು ರಾಜ್ಯದಲ್ಲಿ ಒಂದು ಹೋಬಳಿ ಮಟ್ಟದ ಭೂಮಿಯನ್ನೂ, ಐದು ವರ್ಷಗಳ ಪುರಾತನ ದೇವಾಲಯದ ಭೂಮಿಯನ್ನೂ ವಕ್ಫ್ ಬೋರ್ಡ್ ಕಬಳಿಸಿರುವ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳು ಹಿಂದೂಗಳ ಪರಿಸ್ಥಿತಿ ಯಾವ ರೀತಿಯಲ್ಲಿದೆ ಎಂಬುದನ್ನು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗುಂಡ್ಲಪಲ್ಲಿ, ದಾಸತಿಮ್ಮನಪಲ್ಲಿ ಗ್ರಾಮಗಳ ಓಂ ಶಕ್ತಿ ಮಾಲಾಧಾರಿಗಳು ಭಾಗವಹಿಸಿದ್ದರು. ಮುಖಂಡರಾದ ಗೊರವಿಮಾಕಲಪಲ್ಲಿ ಜಿ. ಶ್ರೀನಿವಾಸ್, ಗೊಲ್ಲಪಲ್ಲಿ ಪ್ರಸನ್ನ, ದಾರ್ಲಹಳ್ಳಿ ಚೌಡರೆಡ್ಡಿ, ಸುಧಾಕರ್, ರಾಮಕೃಷ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

